ಬೆಂಗಳೂರಿನ ಉದ್ಯಾನಗಳಲ್ಲಿ ಸಾವಿರಾರು ವಾಯು ವಿಹಾರಿಗಳ ಬಿಂದಾಸ್ ಸಂಚಾರ..!

ಬೆಂಗಳೂರಿನ ಪ್ರಮುಖ ಉದ್ಯಾನವನಗಳಾದ ಬಸವನಗುಡಿ, ಕೋರಮಂಗಲ, ವಿಲ್ಸನ್‌ ಗಾರ್ಡನ್‌, ಜಯನಗರ, ಎನ್‌ಜಿಇಎಫ್‌ ಬಡಾವಣೆ, ಕುಮಾರಸ್ವಾಮಿ ಬಡಾವಣೆ, ಇಂದಿರಾ ನಗರ ಸೇರಿದಂತೆ ಹಲವು ಉದ್ಯಾನ ವನಗಳ ದ್ವಾರಗಳನ್ನು ತೆಗೆಯಲಾಗಿದೆ.

ಬೆಂಗಳೂರಿನ ಉದ್ಯಾನಗಳಲ್ಲಿ ಸಾವಿರಾರು ವಾಯು ವಿಹಾರಿಗಳ ಬಿಂದಾಸ್ ಸಂಚಾರ..!
Linkup
: ಲಾಕ್‌ಡೌನ್‌ ಸಡಿಲಗೊಳ್ಳುತ್ತಿದ್ದಂತೆಯೇ ಲಾಲ್‌ಬಾಗ್‌, ಕಬ್ಬನ್‌ ಪಾರ್ಕ್ ಸೇರಿದಂತೆ ನಾನಾ ವನಗಳಲ್ಲಿ ವಾಯುವಿಹಾರಕ್ಕೆ ಜನ ಸಾಲುಗಟ್ಟಿ ಬಂದರು. ಏಪ್ರಿಲ್‌ 28ರಿಂದ ಸ್ಥಗಿತವಾಗಿದ್ದ ಪಾರ್ಕ್‌ಗಳಿಗೆ ಸೋಮವಾರದಿಂದ ಬೆಳಗ್ಗೆ 5 ಗಂಟೆಯಿಂದ 10 ಗಂಟೆವರೆಗೂ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು. ನಗರದ ಹೃದಯ ಭಾಗದಲ್ಲಿರುವ ಕಬ್ಬನ್‌ ಪಾರ್ಕ್‌ಗೆ ಒಂದು ಸಾವಿರಕ್ಕೂ ಹೆಚ್ಚು ಜನ ಬಂದಿದ್ದರು. ಇತ್ತ ಲಾಲ್‌ಬಾಗ್‌ಗೆ ಸುಮಾರು 4 ಸಾವಿರಕ್ಕೂ ಹೆಚ್ಚು ಜನ ಏಕಕಾಲಕ್ಕೆ ಆಗಮಿಸಿದ್ದರು. ಇದರಿಂದ ಜನರನ್ನು ನಿಯಂತ್ರಿಸಲು ಇಲಾಖೆಯ ಭದ್ರತಾ ಸಿಬ್ಬಂದಿ ಪರದಾಡಿದರು. ಹಿರಿಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಉದ್ಯಾನವನದಲ್ಲಿ ಬೆಳಗ್ಗೆ 10 ಗಂಟೆವರೆಗೂ ಕಾಲ ಕಳೆದು ಬಳಿಕ ಮನೆಗಳತ್ತ ತೆರಳಿದರು ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕಿ ಜಿ. ಕುಸುಮಾ ಮಾಹಿತಿ ನೀಡಿದರು. 'ಕೆಲವರು ತಾವೇ ಸ್ವಯಂ ಆಗಿ ಸಾಮಾಜಿಕ ಅಂತರ ಕಾಪಾಡಿಕೊಂಡಿದ್ದರು. ಜತೆಗೆ ಮಾಸ್ಕ್‌ ಕೂಡ ಧರಿಸಿದ್ದರು. ಇನ್ನೂ ಕೆಲವರಿಗೆ ನಮ್ಮ ಸಿಬ್ಬಂದಿಯೇ ತಿಳಿ ಹೇಳುತ್ತಿದ್ದರು. ಜನ ಕೂಡ ಇದನ್ನು ಪಾಲಿಸಬೇಕು' ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ನುಡಿದರು. ನಗರದ ಪ್ರಮುಖ ಉದ್ಯಾನವನಗಳಾದ ಬಸವನಗುಡಿ, ಕೋರಮಂಗಲ, ವಿಲ್ಸನ್‌ ಗಾರ್ಡನ್‌, ಜಯನಗರ, ಎನ್‌ಜಿಇಎಫ್‌ ಬಡಾವಣೆ, ಕುಮಾರಸ್ವಾಮಿ ಬಡಾವಣೆ, ಇಂದಿರಾ ನಗರ ಸೇರಿದಂತೆ ಹಲವು ಉದ್ಯಾನ ವನಗಳ ದ್ವಾರಗಳನ್ನು ತೆಗೆಯುವ ಮುನ್ನವೇ ಜನ ಸಾಲುಗಟ್ಟಿ ನಿಂತಿದ್ದರು.