ನಾಯಂಡಹಳ್ಳಿ - ಕೆಂಗೇರಿ ನಮ್ಮ ಮೆಟ್ರೋ ವಿಸ್ತರಣಾ ಮಾರ್ಗ ಜುಲೈನಲ್ಲಿ ಕಾರ್ಯಾರಂಭ

ನಾಯಂಡಹಳ್ಳಿ, ರಾಜರಾಜೇಶ್ವರಿ ನಗರ, ಜ್ಞಾನಭಾರತಿಗಳಲ್ಲಿ ಪಾರ್ಕಿಂಗ್ ಸೌಲಭ್ಯ ಕಲ್ಪಿಸಲಾಗಿದೆ. ಕೆಂಗೇರಿ ಬಸ್-ಟರ್ಮಿನಲ್ ನಿಲ್ದಾಣದಲ್ಲಿ ಎರಡು ಅಂತಸ್ತಿನ ಪಾರ್ಕಿಂಗ್ ಸೌಲಭ್ಯ ಕಲ್ಪಿಸಲಾಗಿದೆ.

ನಾಯಂಡಹಳ್ಳಿ - ಕೆಂಗೇರಿ ನಮ್ಮ ಮೆಟ್ರೋ ವಿಸ್ತರಣಾ ಮಾರ್ಗ ಜುಲೈನಲ್ಲಿ ಕಾರ್ಯಾರಂಭ
Linkup
: ಯೋಜನೆಯ ಹಂತ-2ರಲ್ಲಿ ಬರುವ ನಾಯಂಡಹಳ್ಳಿಯಿಂದ ಕೆಂಗೇರಿವರೆಗಿನ ರೀಚ್-2ರ ವಿಸ್ತರಣಾ ಮಾರ್ಗದ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಜುಲೈನಲ್ಲಿ ಪ್ರಯಾಣಿಕರಿಗೆ ಮುಕ್ತವಾಗಲಿದೆ. ಸಿಎಂ ಬಿಎಸ್ ಮಂಗಳವಾರ ಈ ಮಾರ್ಗದ ಪರಿವೀಕ್ಷಣೆ ನಡೆಸಿದರು. ಒಟ್ಟು 7.53 ಕಿ.ಮೀ. ಉದ್ದದ ಈ ವಿಸ್ತರಣಾ ಕಾಮಗಾರಿಗೆ 1,560 ಕೋಟಿ ರೂ. ವೆಚ್ಚ ತಗುಲಿದೆ. ಭೂ-ಸ್ವಾಧೀನಕ್ಕೆ 360 ಕೋಟಿ ರೂ. ವೆಚ್ಚವಾಗಿದೆ. ಈ ಮಾರ್ಗದಿಂದಾಗಿ ಪೂರ್ವ-ಪಶ್ಚಿಮ ಕಾರಿಡಾರ್ ಮಾರ್ಗದ ಉದ್ದ 18.1 ಕಿ.ಮೀ. ಗೆ ಹೆಚ್ಚಳವಾಗಿದೆ. ಇದರಲ್ಲಿ , ರಾಜರಾಜೇಶ್ವರಿ ನಗರ, ಜ್ಞಾನಭಾರತಿ, ಪಟ್ಟಣಗೆರೆ, ಬಸ್-ಟರ್ಮಿನಲ್ ಹಾಗೂ ಕೆಂಗೇರಿ - ಒಟ್ಟು 6 ನಿಲ್ದಾಣಗಳಿವೆ. ಇದರಲ್ಲಿ ನಾಯಂಡಹಳ್ಳಿ, ರಾಜರಾಜೇಶ್ವರಿ ನಗರ, ಜ್ಞಾನಭಾರತಿಗಳಲ್ಲಿ ಪಾರ್ಕಿಂಗ್ ಸೌಲಭ್ಯ ಕಲ್ಪಿಸಲಾಗಿದೆ. ಕೆಂಗೇರಿ ಬಸ್-ಟರ್ಮಿನಲ್ ನಿಲ್ದಾಣದಲ್ಲಿ ಎರಡು ಅಂತಸ್ತಿನ ಪಾರ್ಕಿಂಗ್ ಸೌಲಭ್ಯ ಕಲ್ಪಿಸಲಾಗಿದೆ. ಕೆಂಗೇರಿ ಬಸ್-ಟರ್ಮಿನಲ್ ನಿಲ್ದಾಣ ಹೊರತುಪಡಿಸಿ ಉಳಿದ ಎಲ್ಲ ನಿಲ್ದಾಣಗಳನ್ನು ರಸ್ತೆ ದಾಟಲು ಪಾದಚಾರಿಗಳು ಬಳಸಬಹುದಾಗಿದೆ. ಬೈಯಪ್ಪನಹಳ್ಳಿಯಿಂದ ಕೆಂಗೇರಿಗೆ ಪ್ರಯಾಣಿಸಲು 56 ರೂ. ದರ ನಿಗದಿ ಪಡಿಸಲಾಗಿದೆ. ಮೆಟ್ರೋ ಜಾಲದ ಅತಿ ಉದ್ದದ ಮಾರ್ಗ, ಕೆಂಗೇರಿಯಿಂದ ಸಿಲ್ಕ್ ಇನ್‌ಸ್ಟಿಟ್ಯೂಟ್‌ವರೆಗೆ 60 ರೂಪಾಯಿ ದರವನ್ನು ನಿಗದಿಪಡಿಸಲಾಗಿದೆ. ಈ ವಿಸ್ತರಣೆಯ ಕಾರ್ಯಾಚರಣೆಯಿಂದ ಪ್ರತಿದಿನ ಸರಾಸರಿ 75,000 ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಈ ಮಾರ್ಗದಲ್ಲಿ ಒನ್-ನೇಷನ್-ಒನ್-ಕಾರ್ಡ್ ಯೋಜನೆಯ ಅನುಷ್ಠಾನಕ್ಕೆ ಪೂರಕವಾಗಿ ಆಟೊಮ್ಯಾಟಿಕ್ ಫೇರ್ ಕಲೆಕ್ಷನ್ ವ್ಯವಸ್ಥೆ ಅಳವಡಿಸಲಾಗಿದೆ. ಟ್ರೈನಿನ ಪರೀಕ್ಷಾರ್ಥ ಓಡಾಟವೂ ಪೂರ್ಣವಾಗಿದೆ. ಪ್ರತಿ ನಿಲ್ದಾಣದ ಛಾವಣಿಯಲ್ಲಿ 250 ಕಿಲೋ ವ್ಯಾಟ್ ಸೌರವಿದ್ಯುತ್ ಪ್ಯಾನೆಲ್ ಅಳವಡಿಸಲು ಅವಕಾಶ ಕಲ್ಪಿಸಲಾಗಿದೆ. ಇನ್ನು ಕೆಂಗೇರಿಯಿಂದ ಚಲ್ಲಘಟ್ಟದವರೆಗಿನ ವಿಸ್ತರಣೆ ಕಾಮಗಾರಿಯೂ ಪ್ರಗತಿಯಲ್ಲಿದೆ. ಮಾರ್ಚ್-2022ರ ಅಂತ್ಯದಲ್ಲಿ ಈ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಬೆಂಗಳೂರು ನಗರದ ಸಂಚಾರ ವ್ಯವಸ್ಥೆ ಸುಗಮಗೊಳ್ಳಲು ಹಾಗೂ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಸುಲಭವಾಗಿ ಸಂಚರಿಸಲು ನಮ್ಮ ಮೆಟ್ರೋ ರೈಲು ವರದಾನವಾಗಲಿದೆ. ಈ ಯೋಜನೆ ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಲು ನಮ್ಮ ಸರ್ಕಾರ ಎಲ್ಲಾ ಪ್ರಯತ್ನಗಳನ್ನೂ ಮಾಡುತ್ತಿದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದರು. ಇದೀಗ ಕೇಂದ್ರ ಸರ್ಕಾರ ಕೂಡಾ ಹಂತ-2, 2ಬಿ ಯೋಜನೆಗಳಿಗೆ ಅನುಮೋದನೆ ನೀಡಿದ್ದು, ಕೆಂಪೇಗೌಡ ವಿಮಾನ ನಿಲ್ದಾಣದವರೆಗೂ ನಮ್ಮ ಮೆಟ್ರೋ ರೈಲು ಮಾರ್ಗ ನಿರ್ಮಾಣವಾಗಲಿದೆ ಎಂದು ಸಿಎಂ ತಿಳಿಸಿದರು. ಪ್ರಯಾಣಿಕರ ಅನುಕೂಲ ಹಾಗೂ ಸಮಯದ ಉಳಿತಾಯವಾಗುವುದರೊಂದಿಗೆ, ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳ ಬಳಕೆಗೆ ಉತ್ತೇಜನ ನೀಡಲು ಸಹ ಈ ಯೋಜನೆ ಮಹತ್ವದ ಪಾತ್ರ ವಹಿಸಲಿದೆ ಎಂದು ಸಿಎಂ ಬಣ್ಣಿಸಿದರು. ವಸತಿ ಸಚಿವ ವಿ. ಸೋಮಣ್ಣ, ಕಂದಾಯ ಸಚಿವ ಆರ್. ಅಶೋಕ್, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಶಾಸಕ ಎಸ್. ಮುನಿರತ್ನ ಹಾಗೂ ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ನಮ್ಮ ಮೆಟ್ರೋ ರೈಲು ನಿಗಮ ನಿಯಮಿತ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಸಿಂಗ್ ಅವರು ಉಪಸ್ಥಿತರಿದ್ದರು.