ಬೆಂಗಳೂರಿನಲ್ಲಿ ಕೋವಿಡ್ ಆರೈಕೆ ಕೇಂದ್ರಗಳು ಖಾಲಿ ಖಾಲಿ..! ಆಕ್ಸಿಜನ್ ಬೆಡ್ ಇದ್ರೂ ಸೋಂಕಿತರು ಬರ್ತಿಲ್ಲ..!

ನಗರದಲ್ಲಿ 15 ಆರೈಕೆ ಕೇಂದ್ರಗಳು ಹಾಗೂ 12 ಹೆರಿಗೆ ಆಸ್ಪತ್ರೆಗಳಲ್ಲಿ ಸೋಂಕಿತರ ಚಿಕಿತ್ಸೆಗಾಗಿ 2,698 ಹಾಸಿಗೆಗಳನ್ನು ಸಜ್ಜಾಗಿ ಇಟ್ಟುಕೊಳ್ಳಲಾಗಿದೆ. ಈ ಪೈಕಿ 719 ಹಾಸಿಗೆಗಳಿಗೆ ಆಮ್ಲಜನಕ ಪೂರೈಕೆ ವ್ಯವಸ್ಥೆ ಮಾಡಲಾಗಿದೆ. ಆದಾಗ್ಯೂ, ಈ ಎಲ್ಲ ಹಾಸಿಗೆಗಳೂ ಭರ್ತಿಯಾಗಿಲ್ಲ.

ಬೆಂಗಳೂರಿನಲ್ಲಿ ಕೋವಿಡ್ ಆರೈಕೆ ಕೇಂದ್ರಗಳು ಖಾಲಿ ಖಾಲಿ..! ಆಕ್ಸಿಜನ್ ಬೆಡ್ ಇದ್ರೂ ಸೋಂಕಿತರು ಬರ್ತಿಲ್ಲ..!
Linkup
ನಾಗಪ್ಪ ನಾಗನಾಯಕನಹಳ್ಳಿ : ಕೋವಿಡ್‌ ಸೋಂಕಿತರಲ್ಲಿ ಸೌಮ್ಯ ರೋಗ ಲಕ್ಷಣವುಳ್ಳವರ ಚಿಕಿತ್ಸೆಗೆ ಸುಮಾರು 2,700ಕ್ಕೂ ಅಧಿಕ ಹಾಸಿಗೆ ಸಾಮರ್ಥ್ಯದ ಕೋವಿಡ್‌ ಆರೈಕೆ ಕೇಂದ್ರಗಳನ್ನು ಬಿಬಿಎಂಪಿ ಆರಂಭಿಸಿದ್ದು, ಹೆಚ್ಚಿನ ಕಡೆ ನೂರಾರು ಹಾಸಿಗೆಗಳು ಖಾಲಿ ಇವೆ. 382 ಆಕ್ಸಿಜನ್‌ ಬೆಡ್‌ ಕೂಡ ಖಾಲಿ ಇರುವುದು ವಿಶೇಷ. ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಐಸಿಯು, ವೆಂಟಿಲೇಟರ್‌, ಆಕ್ಸಿಜನ್‌ ಬೆಡ್‌ ಕೊರತೆ ಹಿನ್ನೆಲೆಯಲ್ಲಿ ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ ಆಮ್ಲಜನಕ ಪೂರೈಕೆ ವ್ಯವಸ್ಥೆಯನ್ನೊಳಗೊಂಡ ಹಾಸಿಗೆಗಳ ಸಂಖ್ಯೆಯನ್ನು ಜಾಸ್ತಿ ಮಾಡಲಾಗಿದೆ. ಪಾಲಿಕೆಯ 12 ಹೆರಿಗೆ ಆಸ್ಪತ್ರೆಗಳನ್ನೂ ಆಕ್ಸಿಜನ್‌ ಪೂರೈಕೆ ಕೇಂದ್ರಗಳನ್ನಾಗಿ ಪರಿವರ್ತಿಸಲಾಗಿದೆ. ಒಟ್ಟು 27 ಆರೈಕೆ ಕೇಂದ್ರಗಳನ್ನು ಅಲ್ಪ ಮತ್ತು ಮಧ್ಯಮ ಪ್ರಮಾಣದ ಸೋಂಕಿನ ಲಕ್ಷಣವುಳ್ಳವರ ಚಿಕಿತ್ಸೆಗೆ ಸಜ್ಜುಗೊಳಿಸಲಾಗಿದೆ. ಇಲ್ಲಿರುವ ಶೇ 20ರಷ್ಟು ಹಾಸಿಗೆಗಳಿಗೆ ಆಕ್ಸಿಜನ್‌ ಪೂರೈಕೆ ಕಲ್ಪಿಸಲಾಗುತ್ತಿದೆ. ಕೋವಿಡ್‌ ಸೋಂಕಿತರ ಪೈಕಿ ಶೇ 80ರಷ್ಟು ಮಂದಿ ಮನೆಯಲ್ಲಿಯೇ ಪ್ರತ್ಯೇಕ ಆರೈಕೆಗೆ ಒಳಗಾಗುತ್ತಿದ್ದಾರೆ. ಹಾಗಾಗಿಯೇ, ಕೋವಿಡ್‌ ಆರೈಕೆ ಕೇಂದ್ರಗಳಿಗೆ ದಾಖಲಾಗುತ್ತಿರುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಆದಾಗ್ಯೂ, ವಿಧಾನಸಭಾ ಕ್ಷೇತ್ರವಾರು ಆರೈಕೆ ಕೇಂದ್ರಗಳನ್ನು ತೆರೆಯಲಾಗುತ್ತಿದ್ದು, ಆಕ್ಸಿಜನ್‌ ಬೆಡ್‌ಗಳ ಅಳವಡಿಕೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಸದ್ಯ ಆರಂಭಿಸಿರುವ 27 ಆರೈಕೆ ಕೇಂದ್ರಗಳ ಪೈಕಿ 14 ಕೇಂದ್ರಗಳಲ್ಲಷ್ಟೇ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ನಗರದಲ್ಲಿ 15 ಆರೈಕೆ ಕೇಂದ್ರಗಳು ಹಾಗೂ 12 ಹೆರಿಗೆ ಆಸ್ಪತ್ರೆಗಳಲ್ಲಿ ಸೋಂಕಿತರ ಚಿಕಿತ್ಸೆಗಾಗಿ 2,698 ಹಾಸಿಗೆಗಳನ್ನು ಸಜ್ಜಾಗಿ ಇಟ್ಟುಕೊಳ್ಳಲಾಗಿದೆ. ಈ ಪೈಕಿ 719 ಹಾಸಿಗೆಗಳಿಗೆ ಆಮ್ಲಜನಕ ಪೂರೈಕೆ ವ್ಯವಸ್ಥೆ ಮಾಡಲಾಗಿದೆ. ಇದರಲ್ಲಿ ಒಟ್ಟು 1,333 ಹಾಸಿಗೆಗಳನ್ನಷ್ಟೇ ಸೋಂಕಿತರ ಚಿಕಿತ್ಸೆಗೆ ಬಳಸಲಾಗುತ್ತಿದೆ. ಆದಾಗ್ಯೂ, ಈ ಎಲ್ಲ ಹಾಸಿಗೆಗಳೂ ಭರ್ತಿಯಾಗಿಲ್ಲ. ಬಿಬಿಎಂಪಿಯ 12 ಹೆರಿಗೆ ಆಸ್ಪತ್ರೆಗಳ ಪೈಕಿ ಡಾ. ಬಾಬು ಜಗಜೀವನ್‌ರಾಂ ನಗರ ಆಸ್ಪತ್ರೆ, ವಿಲ್ಸನ್‌ ಗಾರ್ಡನ್‌ ಹೆರಿಗೆ ಆಸ್ಪತ್ರೆ ಮತ್ತು ಪೊಬ್ಬತ್ತಿ ಹೆರಿಗೆ ಆಸ್ಪತ್ರೆಯಲ್ಲಿ 27 ಆಕ್ಸಿಜನ್‌, 51 ಸಾಮಾನ್ಯ ಹಾಸಿಗೆಗಳನ್ನು ಸೋಂಕಿತರ ಚಿಕಿತ್ಸೆಗೆ ಕಾಯ್ದಿರಿಸಲಾಗಿದೆ. ಈ ಪೈಕಿ 9 ಸಾಮಾನ್ಯ, 3 ಆಕ್ಸಿಜನ್‌ ಬೆಡ್‌ಗಳಷ್ಟೇ ಭರ್ತಿಯಾಗಿವೆ. 24 ಆಕ್ಸಿಜನ್‌ ಸೇರಿ 66 ಹಾಸಿಗೆಗಳು ಖಾಲಿ ಇವೆ. ಹಾಗೆಯೇ ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ 810 ಸಾಮಾನ್ಯ ಮತ್ತು 445 ಆಮ್ಲಜನಕ ಪೂರೈಕೆ ವ್ಯವಸ್ಥೆಯ ಹಾಸಿಗೆಗಳನ್ನು ಅಳವಡಿಸಲಾಗಿದೆ. ಇದರಲ್ಲಿ 528 ಸಾಮಾನ್ಯ, 87 ಆಕ್ಸಿಜನ್‌ ಬೆಡ್‌ಗಳಲ್ಲಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ 640 ಹಾಸಿಗೆಗಳು ಲಭ್ಯ ಇವೆ. ಮನೆ ಆರೈಕೆಯಲ್ಲಿರುವವರ ಮೇಲಿಲ್ಲ ನಿಗಾ: ನಗರದಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆಯು ತೀವ್ರಗತಿಯಲ್ಲಿ ಏರಿಕೆಯಾಗುತ್ತಿದ್ದು, ಆಸ್ಪತ್ರೆಗಳಲ್ಲಾಗುತ್ತಿರುವ ಸಾವು-ನೋವಿನ ಭೀತಿಯಿಂದಾಗಿ ಬಹುತೇಕರು ಹೋಮ್‌ ಐಸೋಲೇಷನ್‌ನಲ್ಲಿರಲು ಒಲವು ತೋರುತ್ತಿದ್ದಾರೆ. ಮನೆಯಲ್ಲಿಯೇ ಪ್ರತ್ಯೇಕ ಆರೈಕೆ ಪಡೆಯಲು ಪ್ರತ್ಯೇಕ ಶೌಚಾಲಯ, ಕೊಠಡಿ ಇರಬೇಕು. ಪಾಲಿಕೆಯಿಂದ ನಿಯೋಜಿಸಲ್ಪಟ್ಟ ವೈದ್ಯಕೀಯ ಸಿಬ್ಬಂದಿಯು ಸೋಂಕಿತರ ಮನೆಗೆ ಭೇಟಿ ನೀಡಿ, ಪ್ರತ್ಯೇಕ ಕೊಠಡಿಗೆ ಹೊಂದಿಕೊಂಡಂತೆ ಶೌಚಾಲಯ ಸೌಲಭ್ಯ ಹೊಂದಿದ್ದರೆ ಮಾತ್ರ ಹೋಮ್‌ ಐಸೋಲೇಷನ್‌ಗೆ ಅನುಮತಿ ನೀಡಬೇಕು. ಆದರೆ, ಈ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ. ಪ್ರತ್ಯೇಕ ಕೊಠಡಿ, ಶೌಚಾಲಯವಿಲ್ಲದಿದ್ದರೂ ಸೋಂಕಿತರು ಮನೆಯಲ್ಲಿಯೇ ಪ್ರತ್ಯೇಕ ಆರೈಕೆಗೆ ಒಳಗಾಗುತ್ತಿದ್ದಾರೆ. ಇವರು ಕುಟುಂಬದವರೊಂದಿಗೆ ಬೆರೆಯುವುದರಿಂದ ಸೋಂಕು ಹರಡುತ್ತಿದೆ. ಹೋಮ್‌ ಐಸೋಲೇಷನ್‌ನಲ್ಲಿರುವವರ ಮೇಲೆ ನಿಗಾ ಇಡುವ ವ್ಯವಸ್ಥೆಯೂ ಇಲ್ಲ. ವೈದ್ಯಕೀಯ ಸಲಹೆ-ಸೂಚನೆಯೂ ಸಿಗುತ್ತಿಲ್ಲ. ಅಲ್ಲದೆ, ಕೈಗಳಿಗೆ ಸೀಲು ಹಾಕುತ್ತಲೂ ಇಲ್ಲ. ಹೀಗಾಗಿ, ಸೋಂಕಿತರು ಮನೆಯಿಂದ ಹೊರಬಂದು ಓಡಾಡುವುದು ಮುಂದುವರಿದಿದೆ. ಇದುವೇ ಸೋಂಕು ಹೆಚ್ಚಳಕ್ಕೆ ಕಾರಣ ಎನ್ನಲಾಗಿದೆ.