ಬೆಂಗಳೂರು: ಸೊಸೆ ಜತೆ ಜಗಳದಲ್ಲಿ ಅತ್ತೆ ಸಾವು; ವೃದ್ಧೆಯ ಕೊಂದು ರೈಲ್ವೆ ಹಳಿ ಮೇಲೆ ಎಸೆದರು!

ತನ್ನ ಸೊಸೆ ಲತಾ ಪರ ಪುರುಷನೊಂದಿಗೆ ಅನೈತಿಕ ಸಂಬಂಧ ಹೊಂದಿರುವುದಾಗಿ ಸಾರ್ವಜನಿಕವಾಗಿ ದೂಷಿಸುತ್ತಿದ್ದಳು. ಇದರಿಂದ ರೊಚ್ಚಿಗೆದ್ದ ಬಾಲಚಂದ್ರ ಹಾಗೂ ಲತಾ, ಜುಲೈ 19ರಂದು ಲಿಂಗಮ್ಮನನ್ನು ಮನೆಗೆ ಕರೆಯಿಸಿಕೊಂಡು ಕೊಲೆಗೈದಿದ್ದಾರೆ ಎನ್ನಲಾಗಿದೆ.

ಬೆಂಗಳೂರು: ಸೊಸೆ ಜತೆ ಜಗಳದಲ್ಲಿ ಅತ್ತೆ ಸಾವು; ವೃದ್ಧೆಯ ಕೊಂದು ರೈಲ್ವೆ ಹಳಿ ಮೇಲೆ ಎಸೆದರು!
Linkup
ಬೆಂಗಳೂರು: ನಗರದ ಹೊರವಲಯದ ರೈಲ್ವೆ ಹಳಿ ಮೇಲೆ ವೃದ್ಧೆಯೊಬ್ಬರ ಮುಂಡ ಹಾಗೂ ಬಾಗಲಕೋಟೆ ಜಿಲ್ಲೆಯ ಇಳಕಲ್‌ನಲ್ಲಿ ಸರಕು ಸಾಗಣೆ ಲಾರಿಯಲ್ಲಿ ರುಂಡ ಪತ್ತೆಯಾದ ಪ್ರಕರಣವನ್ನು ರೈಲ್ವೆ ಪೊಲೀಸರು ಭೇದಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಎಂ.ಬಿ.ಬಾಲಚಂದ್ರ (42) ಎಂಬಾತನನ್ನು ಬಂಧಿಸಿದ್ದಾರೆ. ಕೊಲೆಯಾದ ವೃದ್ಧೆಯ ಸೊಸೆ ಲತಾ ತಲೆಮರೆಸಿಕೊಂಡಿದ್ದು, ಅವರ ಪತ್ತೆಗೆ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು. ಮಂಡ್ಯ ಜಿಲ್ಲೆಯ ತೂಬಿನಕೆರೆ ಗ್ರಾಮದ ನಿಂಗಮ್ಮ ಕೊಲೆಯಾದ ವೃದ್ಧೆ. ಹಳಿ ಮೇಲೆ ಮುಂಡ, ಲಾರಿಯಲ್ಲಿ ರುಂಡ ಹಾಗೂ ವೃದ್ಧೆ ನಾಪತ್ತೆಯಾದ ಬಗ್ಗೆ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು. ಜಂಟಿಯಾಗಿ ಪೊಲೀಸರು ತನಿಖೆ ನಡೆಸಿ ಪ್ರಕರಣ ಭೇದಿಸಿದ್ದಾರೆ ಎಂದು ರೈಲ್ವೆ ವಿಭಾಗದ ಎಡಿಜಿಪಿ ಭಾಸ್ಕರ್‌ ರಾವ್‌ ಹೇಳಿದರು. ಆರೋಪದಡಿ ಬಂಧಿಸಿರುವ ಬಾಲಚಂದ್ರ, ತುಮಕೂರಿನವನು. ಬೆಂಗಳೂರಿನಲ್ಲಿ ನೆಲೆಸಿ, ಬಿಎಂಟಿಸಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಮೃತ ವೃದ್ಧೆಯ ಸೊಸೆ ಜೊತೆ ಸಲುಗೆ ಹೊಂದಿದ್ದ ಬಾಲಚಂದ್ರ ಆಕೆಯ ಜತೆ ಸೇರಿ ಕೃತ್ಯ ಎಸಗಿದ್ದ. ಆಕೆ ಸದ್ಯ ತಲೆಮರೆಸಿಕೊಂಡಿದ್ದಾಳೆ. ವೃದ್ಧೆ ನಿಂಗಮ್ಮ ಅವರ ಮೊದಲ ಮಗ ತೀರಿಕೊಂಡಿದ್ದು, ಅವರ ಸೊಸೆ ಲತಾ ಬೆಂಗಳೂರಿಗೆ ಬಂದು ವಾಸವಿದ್ದರು. ಪಿಂಚಣಿ ತರಲು ವೃದ್ಧೆ ನಿಂಗಮ್ಮ, ತುಮಕೂರಿನಿಂದ ಬೆಂಗಳೂರಿಗೆ ಇತ್ತೀಚೆಗೆ ಬಂದಿದ್ದರು. ಅದೇ ಸಂದರ್ಭದಲ್ಲೇ ಸೊಸೆ ಜೊತೆ ಜಗಳವಾಗಿತ್ತು. ವೃದ್ಧೆಗೆ ಸೊಸೆ ಹೊಡೆದಿದ್ದರು. ಆಗ ವೃದ್ಧೆ ಮೃತಪಟ್ಟಿದ್ದರು. ನಂತರ, ಆಕೆಯ ಪರಿಚಯಸ್ಥ ಆರೋಪಿ ಬಾಲಚಂದ್ರ ಮೃತದೇಹವನ್ನು ರೈಲ್ವೆ ಹಳಿ ಮೇಲೆ ಎಸೆದಿದ್ದ. ನಂತರ, ರೈಲು ಹರಿದು ಬೇರ್ಪಟ್ಟ ರುಂಡವನ್ನು ನೆಲಮಂಗಲ ಬಳಿ ಲಾರಿಯಲ್ಲಿ ಹಾಕಿದ್ದ. ಅದೇ ಲಾರಿ ಇಳಕಲ್‌ವರೆಗೆ ಹೋಗಿತ್ತು ಎಂದೂ ಭಾಸ್ಕರ್‌ ರಾವ್‌ ಹೇಳಿದರು. ಮನೆಗೆ ಕರೆಸಿಕೊಂಡು ಕೊಲೆ ಮಾಡಿರುವ ಶಂಕೆ ಮಂಡ್ಯದ ತೂಬಿನಕೆರೆಯಲ್ಲಿ ಮಗ ಸತೀಶ್‌ ಜತೆ ಲಿಂಗಮ್ಮ ವಾಸವಾಗಿದ್ದರು. ಇವರ ಮೊದಲ ಮಗನನ್ನು ಆರೋಪಿ ಲತಾ ಮದುವೆಯಾಗಿದ್ದರು. ಕೆಲ ವರ್ಷಗಳ ಹಿಂದೆ ಅನಾರೋಗ್ಯದಿಂದ ಮಗ ಮೃತಪಟ್ಟಿದ್ದ. ಸರಕಾರಿ ಶಾಲೆಯ ನಿವೃತ್ತ ಶಿಕ್ಷಕಿಯಾಗಿದ್ದ ಲಿಂಗಮ್ಮನಿಗೆ ಪಿಂಚಣಿ ಹಣವೇ ಜೀವನಾಧಾರವಾಗಿತ್ತು. ಲತಾ ತನ್ನ ಪತಿ ಸಾವಿನ ಬಳಿಕ ಜೀವನ ನಿರ್ವಹಣೆಗಾಗಿ ಅತ್ತೆ ಲಿಂಗಮ್ಮನ ಬಳಿ 1.50 ಲಕ್ಷ ನೀಡುವಂತೆ ಕೇಳಿದ್ದಳು. ಈ ನಡುವೆ ಲತಾಗೆ ಆರೋಪಿ ಬಾಲಚಂದ್ರನ ಪರಿಚಯವಾಗಿ ಗೆಳೆತನ ಬೆಳೆದಿದೆ. ತನ್ನ ಸೊಸೆ ಲತಾ ಪರ ಪುರುಷನೊಂದಿಗೆ ಅನೈತಿಕ ಸಂಬಂಧ ಹೊಂದಿರುವುದಾಗಿ ಸಾರ್ವಜನಿಕವಾಗಿ ದೂಷಿಸುತ್ತಿದ್ದಳು. ಇದರಿಂದ ರೊಚ್ಚಿಗೆದ್ದ ಬಾಲಚಂದ್ರ ಹಾಗೂ ಲತಾ, ಜುಲೈ 19ರಂದು ಲಿಂಗಮ್ಮನನ್ನು ಮನೆಗೆ ಕರೆಯಿಸಿಕೊಂಡು ಕೊಲೆಗೈದಿದ್ದಾರೆ ಎನ್ನಲಾಗಿದೆ.