ಪತ್ನಿ ಇಚ್ಛೆಗೆ ವಿರುದ್ಧದ ಲೈಂಗಿಕ ಕ್ರಿಯೆಯೂ 'ಅತ್ಯಾಚಾರ': ವಿಚ್ಛೇದನಕ್ಕೆ ಅರ್ಹ ಎಂದ ಕೇರಳ ಹೈಕೋರ್ಟ್

'ಸಮ್ಮತಿಯ ಲೈಂಗಿಕ ಕ್ರಿಯೆಯು ವೈವಾಹಿಕ ಜೀವನದ ಭಾಗವಾಗಿದೆ. ಹಾಗೆಯೇ, ಪತ್ನಿಯ ದೈಹಿಕ ಹಾಗೂ ಮಾನಸಿಕ ಸ್ಥಿತಿಗೆ ಗೌರವ ಸಲ್ಲಿಸುವುದು ಕೂಡ ಮುಖ್ಯವಾಗುತ್ತದೆ. ಮದುವೆ ನಂತರ ಲೈಂಗಿಕ ಕ್ರಿಯೆ ನಡೆಸಲು ಪತ್ನಿಯ ಸಮ್ಮತಿ ಅತ್ಯಗತ್ಯ' - ನ್ಯಾಯಾಲಯ

ಪತ್ನಿ ಇಚ್ಛೆಗೆ ವಿರುದ್ಧದ ಲೈಂಗಿಕ ಕ್ರಿಯೆಯೂ 'ಅತ್ಯಾಚಾರ': ವಿಚ್ಛೇದನಕ್ಕೆ ಅರ್ಹ ಎಂದ ಕೇರಳ ಹೈಕೋರ್ಟ್
Linkup
ತಿರುವನಂತಪುರಂ (ಕೇರಳ): ಪತ್ನಿಯ ಇಚ್ಛೆಗೆ ವಿರುದ್ಧವಾಗಿ ಆಕೆಯ ಜತೆ ಲೈಂಗಿಕ ಕ್ರಿಯೆ ನಡೆಸುವುದು ಸಹ '' ಎಂದು ಕೇರಳ ಹೈಕೋರ್ಟ್‌ ಹೇಳಿದೆ. ಹಿಂಸೆ ಹಾಗೂ ಲೈಂಗಿಕ ಕಿರುಕುಳ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ವಿಚ್ಛೇದನಕ್ಕಾಗಿ ಸಲ್ಲಿಸಿದ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯ ಪುರಸ್ಕರಿಸಿತ್ತು. ಅದನ್ನು ಪ್ರಶ್ನಿಸಿ ಪತಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ವೇಳೆ ವೈವಾಹಿಕ ಜೀವನದಲ್ಲಿ ಲೈಂಗಿಕ ಸಂಬಂಧವನ್ನು ವಿಶ್ಲೇಷಿಸಿದ ನ್ಯಾಯಪೀಠವು, 'ಪತ್ನಿಯ ಇಚ್ಛೆಗೆ ವಿರುದ್ಧವಾಗಿ ಪತಿಯು ಲೈಂಗಿಕ ಕ್ರಿಯೆ ನಡೆಸಿದರೆ ಅದನ್ನು ಅತ್ಯಾಚಾರ ಎಂದೇ ಹೇಳಲಾಗುತ್ತದೆ. ಇಂತಹ ಕಾರಣದಿಂದ ವಿಚ್ಛೇದನ ಪಡೆಯಲು ಮಹಿಳೆ ಅರ್ಜಿ ಸಲ್ಲಿಸಬಹುದು' ಎಂದು ತಿಳಿಸಿದೆ. 'ಸಮ್ಮತಿಯ ಲೈಂಗಿಕ ಕ್ರಿಯೆಯು ವೈವಾಹಿಕ ಜೀವನದ ಭಾಗವಾಗಿದೆ. ಹಾಗೆಯೇ, ಪತ್ನಿಯ ದೈಹಿಕ ಹಾಗೂ ಮಾನಸಿಕ ಸ್ಥಿತಿಗೆ ಗೌರವ ಸಲ್ಲಿಸುವುದು ಕೂಡ ಮುಖ್ಯವಾಗುತ್ತದೆ. ಮದುವೆ ನಂತರ ಲೈಂಗಿಕ ಕ್ರಿಯೆ ನಡೆಸಲು ಪತ್ನಿಯ ಸಮ್ಮತಿ ಅತ್ಯಗತ್ಯ. ಕಾಮತೃಷೆಗಾಗಿ ಆಕೆಯ ಇಚ್ಛೆಯ ವಿರುದ್ಧ ನಡೆದುಕೊಳ್ಳುವುದು, ಅಸಭ್ಯವಾಗಿ ವರ್ತಿಸುವುದು, ಬಲವಂತ ಮಾಡುವುದು, ಹಿಂಸಿಸುವುದು ಕೂಡ ವೈವಾಹಿಕ ಅತ್ಯಾಚಾರವಾಗಿದೆ' ಎಂದು ಕೋರ್ಟ್‌ ಹೇಳಿದೆ. ಲೈಂಗಿಕ ತೃಪ್ತಿಗಾಗಿ ವಿಕ್ಷಿಪ್ತ ವರ್ತನೆ ಹಾಗೂ ಹಣಕ್ಕಾಗಿ ಪೀಡಿಸಿದ ಹಿನ್ನೆಲೆಯಲ್ಲಿ ಮಹಿಳೆಯು ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಪತಿ ವೈದ್ಯನಾಗಿದ್ದು, ಆ ವೃತ್ತಿ ಮಾಡದೆ ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿದ್ದಾನೆ. ಪತಿಗೆ ತನ್ನ ಕುಟುಂಬಸ್ಥರು 77 ಲಕ್ಷ ರೂ. ನಗದು ಹಾಗೂ ಲಕ್ಷಾಂತರ ರೂ. ಮೌಲ್ಯದ ಬಂಗಾರ ನೀಡಿದ್ದಾರೆ ಎಂದು ಸಹ ಮಹಿಳೆಯು ವಿಚ್ಛೇದನ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಇತ್ತೀಚೆಗಷ್ಟೇ, 'ಲೈಂಗಿಕ ದೌರ್ಜನ್ಯ ಎಸಗುವವರು ಹೆಣ್ಣು ಮಕ್ಕಳ ದೇಹದ ಯಾವುದೇ ಭಾಗಕ್ಕೆ ಗುಪ್ತಾಂಗ ತಾಗಿಸಿ ಲೈಂಗಿಕ ತೃಪ್ತಿಪಟ್ಟದ್ದೇ ಆದಲ್ಲಿ ಅಥವಾ ಅವರ ತೊಡೆಗಳ ನಡುವೆ ಉದ್ರೇಕ ಉಂಟುಮಾಡುವ ರೀತಿಯಲ್ಲಿ ಸ್ಪರ್ಶಿಸಿದಲ್ಲಿ, ಅದು ಕೂಡ ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ಅತ್ಯಾಚಾರ' ಎಂದು ಕೇರಳ ಹೈಕೋರ್ಟ್‌ ತಿಳಿಸಿತ್ತು. ಅಪ್ರಾಪ್ತ ಪತ್ನಿ ಜತೆಗಿನ ಸಂಬಂಧ ರೇಪ್‌ ಅಲ್ಲವೆಂದ ನ್ಯಾಯಾಲಯ: ಪತ್ನಿಯ ವಯಸ್ಸು 15 ವರ್ಷಕ್ಕಿಂತ ಹೆಚ್ಚಿದ್ದರೆ ಆಕೆಯ ಜತೆ ಪತಿ ನಡೆಸುವ ಒಪ್ಪಿತ ಲೈಂಗಿಕ ಕ್ರಿಯೆಯು ಅತ್ಯಾಚಾರ ಆಗುವುದಿಲ್ಲ ಎಂದು ಅಲಹಾಬಾದ್‌ ಹೈಕೋರ್ಟ್‌ ಶುಕ್ರವಾರ ತೀರ್ಪು ನೀಡಿದೆ. ಅಲ್ಲದೆ, ಅಪ್ರಾಪ್ತೆಯ ವಯಸ್ಕ ಪತಿಗೆ ಇದೇ ಆಧಾರದಲ್ಲಿ ಜಾಮೀನು ಮಂಜೂರು ಮಾಡಿದೆ. ಮೊರಾದಾಬಾದ್‌ ಜಿಲ್ಲೆಯ ಭೋಜ್ಪುರ ಠಾಣೆಯಲ್ಲಿ ಅಪ್ರಾಪ್ತೆಯು ಪತಿ ವಿರುದ್ಧ ಲೈಂಗಿಕ ದೌರ್ಜನ್ಯ, ವರದಕ್ಷಿಣೆ, ಹಲ್ಲೆ ಪ್ರಕರಣದ ದೂರು ದಾಖಲಿಸಿದ್ದರು. ಜಾಮೀನು ಕೋರಿ ಆರೋಪಿಯು ಹೈಕೋರ್ಟ್‌ ಮೊರೆ ಹೋಗಿದ್ದರು. 'ಅತ್ಯಾಚಾರಿಗಳಿಗೆ ಶಿಕ್ಷೆಯನ್ನು ವ್ಯಾಖ್ಯಾನಿಸುವ ಭಾರತೀಯ ದಂಡ ಸಂಹಿತೆಯ 375ನೇ ವಿಧಿಗೆ 2013ರಲ್ಲಿ ತಿದ್ದುಪಡಿ ತರಲಾಗಿದೆ. ಅದರಲ್ಲಿ, ವಯಸ್ಕ ಪತಿಯು ತನ್ನ ಸ್ವಂತ ಪತ್ನಿ ಜತೆಗೆ ನಡೆಸುವ ಲೈಂಗಿಕ ಕ್ರಿಯೆಯು, ಪತ್ನಿ 15 ವರ್ಷದ ಒಳಗಿನವಳು ಅಲ್ಲದೇ ಇದ್ದರೆ, ಅದು ಅತ್ಯಾಚಾರವಾಗುವುದಿಲ್ಲ ಎಂಬುದಾಗಿ ತಿದ್ದುಪಡಿಯಲ್ಲಿ ವ್ಯಾಖ್ಯಾನಿಸಲಾಗಿದೆ' ಎಂಬುದನ್ನು ಜಡ್ಜ್‌ ತೀರ್ಪಿನಲ್ಲಿ ಉಲ್ಲೇಖಿಸಿದರು.