ಪೆಗಾಸಸ್‌ ತನಿಖೆಗೆ ಸುಪ್ರೀಂನಿಂದ ತಜ್ಞರ ಸಮಿತಿ, ಮುಂದಿನ ವಾರ ಮಧ್ಯಂತರ ಆದೇಶ

ಪೆಗಾಸಸ್‌ ವಿವಾದದ ಬಗ್ಗೆ ತನಿಖೆ ನಡೆಸಲು ತಾಂತ್ರಿಕ ತಜ್ಞರ ಸಮಿತಿ ರಚಿಸುವುದಾಗಿ ಸುಪ್ರೀಂ ಕೋರ್ಟ್‌ ಗುರುವಾರ ತಿಳಿಸಿದ್ದು, ಮುಂದಿನ ವಾರವೇ ಮಧ್ಯಂತರ ಆದೇಶವನ್ನೂ ಹೊರಡಿಸುವುದಾಗಿ ಸ್ಪಷ್ಟಪಡಿಸಿದೆ.

ಪೆಗಾಸಸ್‌ ತನಿಖೆಗೆ ಸುಪ್ರೀಂನಿಂದ ತಜ್ಞರ ಸಮಿತಿ, ಮುಂದಿನ ವಾರ ಮಧ್ಯಂತರ ಆದೇಶ
Linkup
ಹೊಸದಿಲ್ಲಿ: ಇಸ್ರೇಲ್‌ ಮೂಲದ 'ಪೆಗಾಸಸ್‌' ತಂತ್ರಾಂಶ ಬಳಸಿ ಭಾರತದ ನೂರಾರು ಗಣ್ಯರ ಮೊಬೈಲ್‌ ನಡೆಸಲಾಗಿದೆ ಎಂಬ ಪ್ರಕರಣದ ಕುರಿತು ತನಿಖೆ ನಡೆಸಲು ತಾಂತ್ರಿಕ ತಜ್ಞರ ಸಮಿತಿ ರಚಿಸುವುದಾಗಿ ಸುಪ್ರೀಂ ಕೋರ್ಟ್‌ ಗುರುವಾರ ತಿಳಿಸಿದೆ. ಹಾಗೆಯೇ ಮಧ್ಯಂತರ ಆದೇಶವನ್ನೂ ಮುಂದಿನ ವಾರವೇ ಹೊರಡಿಸುವುದಾಗಿ ಸ್ಪಷ್ಟಪಡಿಸಿದೆ. ''ನಾವು ಈ ವಾರವೇ ತಜ್ಞರ ಸಮಿತಿ ರಚಿಸಿ ಆದೇಶ ಹೊರಡಿಸಲು ಇಚ್ಛಿಸಿದ್ದೆವು. ಆದರೆ, ತಾಂತ್ರಿಕ ಸಮಿತಿಯಲ್ಲಿರುವ ಕೆಲವು ಸದಸ್ಯರು ವೈಯಕ್ತಿಕ ಕಾರಣಗಳಿಂದಾಗಿ ಸಮಿತಿಯ ಭಾಗವಾಗಲು ಹಿಂದೇಟು ಹಾಕಿದ ಕಾರಣ ಸಮಿತಿ ರಚನೆ ಮುಂದೂಡಲಾಗಿದೆ. ನಾವು ಮುಂದಿನ ವಾರ ಸಮಿತಿ ಅಂತಿಮಗೊಳಿಸುತ್ತೇವೆ,'' ಎಂದು ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ಅವರು ಅರ್ಜಿದಾರರ ಪರ ವಕೀಲರಾದ ಸಿ.ಯು. ಸಿಂಗ್‌ ಅವರಿಗೆ ತಿಳಿಸಿದ್ದಾರೆ. ಮಧ್ಯಂತರ ಆದೇಶ ಪತ್ರಕರ್ತ ಎನ್‌. ರಾಮ್‌, ಶಶಿಕುಮಾರ್‌ ಸಲ್ಲಿಸಿದ ಅರ್ಜಿಗಳ ಕುರಿತ ಮಧ್ಯಂತರ ಆದೇಶವನ್ನು ಸಹ ಮುಂದಿನ ವಾರವೇ ನೀಡುವುದಾಗಿ ಕೋರ್ಟ್‌ ತಿಳಿಸಿದೆ. "ಮುಂದಿನ ವಾರ ಮಧ್ಯಂತರ ಆದೇಶ ಹೊರಡಿಸುತ್ತೇವೆ ಎಂಬುದಾಗಿ ಪತ್ರಕರ್ತರ ಪರ ವಾದ ಮಂಡಿಸಿದ ಕಪಿಲ್‌ ಸಿಬಲ್‌ ಅವರಿಗೆ ತಿಳಿಸಿ," ಎಂದು ಸಿ.ವಿ. ಸಿಂಗ್‌ ಅವರಿಗೆ ಸಿಜೆಐ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಂಗ್‌, ''ನಾನು ಸಿಬಲ್‌ ಅವರಿಗೆ ಮಾಹಿತಿ ನೀಡುತ್ತೇನೆ,'' ಎಂದರು. ಏನಿದು ಪ್ರಕರಣ? ಇಸ್ರೇಲ್‌ನ ಎನ್‌ಎಸ್‌ಒ ಕಂಪನಿಯ ಪೆಗಾಸಸ್‌ ಸ್ಪೈವೇರ್‌ ಬಳಸಿ ಭಾರತದ ರಾಜಕಾರಣಿಗಳು, ಪತ್ರಕರ್ತರು ಸೇರಿ 300 ಜನರ ಮೊಬೈಲ್‌ ಕದ್ದಾಲಿಕೆ ನಡೆಸಲಾಗಿರುವ ಕುರಿತು ಕಳೆದ ಜೂನ್‌ನಲ್ಲಿ ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ ಬಳಿಕ ಪ್ರಕರಣ ದೇಶಾದ್ಯಂತ ಸುದ್ದಿಯಾಗಿದೆ. ಈಗಾಗಲೇ ಸ್ವತಂತ್ರ ತನಿಖೆಯಾಗಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸಿವೆ. ಅಫಿಡವಿಟ್‌ ಜಟಾಪಟಿ ಇನ್ನು ಪೆಗಾಸಸ್‌ ಬಳಕೆ ಕುರಿತು ಅಫಿಡವಿಟ್‌ ಸಲ್ಲಿಕೆ ವಿಚಾರದಲ್ಲಿ ಕೇಂದ್ರ ಸರಕಾರ ಹಾಗೂ ಸುಪ್ರೀಂ ಕೋರ್ಟ್‌ ಮಧ್ಯೆ ಜಟಾಪಟಿ ಏರ್ಪಟ್ಟಿತ್ತು. ಪ್ರಕರಣದ ಕುರಿತು ವಿಸ್ತೃತ ವರದಿ ಸಲ್ಲಿಸಿ ಎಂದು ಕೋರ್ಟ್‌ ಹೇಳಿದರೆ, ದೇಶದ ಭದ್ರತೆ ಹಾಗೂ ಹಿತಾಸಕ್ತಿಯ ವಿಚಾರವಾಗಿರುವುದರಿಂದ ವಿಸ್ತೃತ ಮಾಹಿತಿ ನೀಡಲು ಆಗುವುದಿಲ್ಲ ಎಂದು ಕೇಂದ್ರ ಸರಕಾರ ಪ್ರತಿಕ್ರಿಯಿಸಿತ್ತು. ಇದಕ್ಕೂ ಜಗ್ಗದ ಕೋರ್ಟ್‌, ವಿಸ್ತೃತ ವರದಿ ಬೇಡ, ಬೇಹುಗಾರಿಕೆ ನಡೆದಿದೆಯೋ, ಇಲ್ಲವೋ ಎಂದಷ್ಟೇ ಸ್ಪಷ್ಟಪಡಿಸಿ ಎಂದು ಚಾಟಿ ಬೀಸಿತ್ತು. ಕೇಂದ್ರದಿಂದ ತನಿಖೆ ಇಲ್ಲ ಪೆಗಾಸಸ್‌ ಪ್ರಕರಣದ ಕುರಿತು ತನಿಖೆ ನಡೆಸಲು ಸುಪ್ರೀಂ ಕೋರ್ಟೇ ತಾಂತ್ರಿಕ ತಜ್ಞರ ಸಮಿತಿ ರಚಿಸಲು ತೀರ್ಮಾನಿಸಿರುವುದರಿಂದ ಕೇಂದ್ರ ಸರಕಾರದಿಂದ ತನಿಖೆ ನಡೆಯುವುದಿಲ್ಲ ಎಂದು ತಿಳಿದುಬಂದಿದೆ. ಹಾಗೆಯೇ ಇದು ಕೇಂದ್ರ ಸರಕಾರಕ್ಕೆ ಹಿನ್ನಡೆ ಎಂದೂ ಹೇಳಲಾಗುತ್ತಿದೆ. ''ದೇಶದ ಭದ್ರತೆ ಹಿತಾಸಕ್ತಿಯಿಂದ ವಿಸ್ತೃತ ವರದಿ ನೀಡಲು ಆಗುವುದಿಲ್ಲ. ಕೇಂದ್ರ ಸರಕಾರವೇ ತಜ್ಞರ ಸಮಿತಿ ರಚಿಸಿ, ತನಿಖೆ ನಡೆಸಲು ಸಿದ್ಧ,'' ಎಂದು ಕೋರ್ಟ್‌ಗೆ ಕೇಂದ್ರ ತಿಳಿಸಿತ್ತು. ಆದರೆ, ಸ್ವತಂತ್ರವಾಗಿ ತನಿಖೆಯಾಗಬೇಕು ಎಂಬ ಅರ್ಜಿದಾರರ ಮನವಿಯನ್ನು ಕೋರ್ಟ್‌ ಪುರಸ್ಕರಿಸಿದೆ. ಈವರೆಗೆ ಏನೇನಾಯ್ತು? ಜೂನ್‌ 18: ಪೆಗಾಸಿಸ್‌ ಗೂಢಚರ್ಯೆ ವಿವಾದ ಸ್ಫೋಟ ಜುಲೈ 22: ತನಿಖೆಗಾಗಿ ಎಸ್‌ಐಟಿ ರಚಿಸಲು ಸುಪ್ರೀಂ ಕೋರ್ಟ್‌ಗೆ ವಕೀಲರ ಅರ್ಜಿ ಜುಲೈ 27: ನ್ಯಾಯಾಂಗ ತನಿಖೆಗಾಗಿ ಕೋರ್ಟ್‌ಗೆ ಪತ್ರಕರ್ತರ ಅರ್ಜಿ ಆಗಸ್ಟ್‌ 05: ಎಲ್ಲಅರ್ಜಿಗಳ ವಿಚಾರಣೆ ಆರಂಭಿಸಿದ ಸುಪ್ರೀಂ ಸೆಪ್ಟೆಂಬರ್‌ 13: ವಿಸ್ತೃತ ಅಫಿಡಟವಿಟ್‌ ಸಲ್ಲಿಸಲ್ಲ ಎಂದ ಕೇಂದ್ರ ಸೆಪ್ಟೆಂಬರ್‌ 23: ತಜ್ಞರ ಸಮಿತಿಗೆ ಕೋರ್ಟ್‌ ಆದೇಶ