ನಾನು ಹುಲಿ... ನ್ಯಾಯಾಂಗ ನಿಂದನೆಗೆ ತಲೆ ಕೆಡಿಸಿಕೊಳ್ಳಬೇಡಿ: ತ್ರಿಪುರಾ ಸಿಎಂ ಬಿಪ್ಲಬ್‌ ದೇಬ್‌ ವಿವಾದ

ವಿವಾದಾತ್ಮಕ ಹೇಳಿಕೆಗಳ ಮೂಲಕ ಸುದ್ದಿಯಲ್ಲಿರುವ ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್‌ ಕುಮಾರ್‌ ದೇಬ್‌ ಇದೀಗ, ನ್ಯಾಯಾಂಗ ನಿಂದನೆಗೆ ಹೆದರಬೇಡಿ' ಎಂದು ಹೇಳಿಕೆ ನೀಡಿದ್ದು, ಟೀಕೆಗೆ ಆಹಾರವಾಗಿದೆ.

ನಾನು ಹುಲಿ... ನ್ಯಾಯಾಂಗ ನಿಂದನೆಗೆ ತಲೆ ಕೆಡಿಸಿಕೊಳ್ಳಬೇಡಿ: ತ್ರಿಪುರಾ ಸಿಎಂ ಬಿಪ್ಲಬ್‌ ದೇಬ್‌ ವಿವಾದ
Linkup
ಐಜ್ವಾಲ್‌: ಸದಾ ಒಂದಿಲ್ಲೊಂದು ಹೇಳಿಕೆ ಮೂಲಕ ವಿವಾದ ಉಂಟು ಮಾಡಿ ಸುದ್ದಿಯಲ್ಲಿರುವ ಮುಖ್ಯಮಂತ್ರಿ ಇದೀಗ ಮತ್ತೊಂದು ಮೂಲಕ ಟೀಕೆಗೆ ಗುರಿಯಾಗಿದ್ದಾರೆ. 'ನೈಜ ಹುಲಿ ನಾನು.. ನ್ಯಾಯಾಲಯ ಅಲ್ಲ' ಎಂದು ಅವರು ಹೇಳಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಭಾರೀ ಟೀಕೆ ವ್ಯಕ್ತವಾಗಿದೆ. ಶನಿವಾರ ಅವರು ತ್ರಿಪುರದ ನಾಗರಿಕ ಸೇವಾ ಅಧಿಕಾರಿಗಳೊಂದಿಗೆ ಮಾತನಾಡುವಾಗ ಈ ರೀತಿ ಹೇಳಿದ್ದು, ಸಾಮಾಜಿಕ ತಾಲತಾಣಗಳಲ್ಲಿ ವೈರಲ್‌ ಆಗಿದೆ. ಈ ವಿಡಿಯೋದಲ್ಲಿ ಮುಖ್ಯಮಂತ್ರಿ ದೇಬ್‌, ನಾಗರಿಕ ಸೇವಾ ಅಧಿಕಾರಿಗಳಿಗೆ ಕಿವಿಮಾತು ಹೇಳುತ್ತಲೇ, ನ್ಯಾಯಾಲಯಕ್ಕೆ ಹೆದರಬೇಡಿ ಎಂದು ಹೇಳುವುದು ದಾಖಲಾಗಿದೆ. 'ರಾಜ್ಯದ ಜನರ ಒಳಿತಿಗಾಗಿ ಸದ್ಭಾವನೆಯಿಂದ ನೀವೆಲ್ಲಾ ಕೆಲಸ ಮಾಡಬೇಕು. ಈ ಹಿಂದಿನ ಸರ್ಕಾರದಂತೆ ನೀವು ಕೆಲಸ ಮಾದಬಾರದು. ನ್ಯಾಯಾಂಗ ನಿಂದನೆಯಾದ್ರೂ ಪರವಾಗಿಲ್ಲ' ಎಂದು ಹೇಳಿದ್ದಾರೆ. ' ನ್ಯಾಯಾಂಗ ನಿಂದನೆಯ ಕಾರಣದಿಂದಾಗಿ ಕೆಲಸ ಮಾಡಲು ಆಗುತ್ತಿಲ್ಲ ಎಂದು ಹಲವು ಅಧಿಕಾರಿಗಳು ನನ್ನ ಜತೆ ಸಬೂಬು ಹೇಳುತ್ತಾರೆ. ಅದಕ್ಕೆಲ್ಲಾ ಯಾಕೆ ಹೆದರಬೇಕು? ನ್ಯಾಯಾಲಯ ಅದರ ತೀರ್ಪು ನೀಡುತ್ತದೆ. ಪೊಲೀಸರು ಅದನ್ನು ಪಾಲನೆ ಮಾಡುತ್ತಾರೆ. ಆ ಪೊಲೀಸರು ನನ್ನ ಕೆಳಗೆ ಇದ್ದಾರೆ. ಇದರ ಬಗ್ಗೆ ವ್ಯವಹರಿಸಲು ಅವರಿಗೆ ಬೇಕಾದಷ್ಟು ವಿಧಾನಗಳಿವೆ' ಎಂದು ಬಿಪ್ಲಬ್‌ ಹೇಳಿದ್ದಾರೆ. ಅಲ್ಲದೇ ಅಧಿಕಾರಿಗಳಿಗೆ ಉಪದೇಶ ನೀಡಿರುವ ಅವರು, 'ನ್ಯಾಯಾಲಯವನ್ನು ಹುಲಿಯ ಹಾಗೆ ಭಯ ಪಡಿ' ಎಂದು ಹೇಳಿದ್ದಾರೆ. ಅಲ್ಲದೇ 'ಇಲ್ಲಿ ನಾನೇ ಹುಲಿ. ಜನ ಆಯ್ಕೆ ಮಾಡಿದ ಸರ್ಕಾರದ ಮುಖ್ಯಸ್ಥನಾಗಿ ನಾನು ಇದ್ದೇನೆ. ಜನ ಹೇಳುತ್ತಾರೆ, ಸರ್ಕಾರ ಎಂದರೆ ಜನರಿಂದ ಆಯ್ಕೆಯಾಗಿದ್ದು. ನ್ಯಾಯಾಲಯದಿಂದಲ್ಲ. ನ್ಯಾಯಾಲಯ ಇರುವುದು ಜನರಿಗಾಗಿ. ಜನರೇ ನ್ಯಾಯಾಲಯ ಅಲ್ಲ' ಎಂದು ಹೇಳಿದ್ದಾರೆ. ಅವರ ಈ ಭಾಷಣ ಸಾಮಾಜಿಕ ಜಾಲತಾಣಗಳಲ್ಲಿ ನೇರ ಪ್ರಸಾರ ಕೂಡ ಆಗಿತ್ತು. ಅಂದಹಾಗೆ ಗೃಹ ಖಾತೆ ಕೂಡ ಬಿಪ್ಲಬ್‌ ಅವರ ಬಳಿಯೇ ಇದ್ದು, ಹೀಗಾಗಿ ಈ ಮಾತುಗಳನ್ನು ಆಡಿದ್ದಾರೆ. ಅವರ ಈ ಮಾತಿಗೆ ಟೀಕೆ ವ್ಯಕ್ತವಾಗಿದೆ. ಈ ಹಿಂದೆ ಕೂಡ ಅಸಂಬಂದ್ಧ ಹಾಗೂ ವಿವಾದಾತ್ಮ ಹೇಳಿಕೆ ನೀಡಿದ ಬಿಪ್ಲಬ್‌ ದೇಬ್‌ ಟೀಕೆಗೆ ಗುರಿಯಾಗಿದ್ದರು. 'ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದಿದವರು ನಾಗರಿಕ ಸೇವೆಗೆ ಹೋಗಬಾರದು. ಆದರೆ ಸಿವಿಲ್ ಇಂಜಿನಿಯರಿಂಗ್ ಓದಿದವರು ಈ ವೃತ್ತಿಗೆ ಬಂದರೆ ಒಳಿತು. ಅವರಿಗೆ ಆಡಳಿತ ಮತ್ತು ಸಮಾಜ ಕಟ್ಟುವ ಜ್ಞಾನ ಮತ್ತು ಅನುಭವವಿರುತ್ತದೆ. ಸಿವಿಲ್ ಇಂಜಿನಿಯರ್‌ಗಳು ಐಎಎಸ್ ಅಧಿಕಾರಿಗಳಾದರೆ ನಿರ್ಮಾಣ ಯೋಜನೆಗಳಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಬಹುದು. ಆದರೆ ಮೆಕ್ಯಾನಿಕಲ್ ವಿಭಾಗದಿಂದ ಬಂದವರಿಗೆ ಇದು ಸಾಧ್ಯವಾಗುವುದಿಲ್ಲ' ಎಂದು ಹೇಳಿಕೆ ನೀಡಿದ್ದರು. ಅಲ್ಲದೇ, 'ಜಗತ್ತಿನ ಅತೀ ದೊಡ್ಡ ರಾಜಕೀಯ ಪಕ್ಷವಾಗಿರುವ ಬಿಜೆಪಿಯನ್ನು ಭಾರತದ ಹೊರಗೂ ವಿಸ್ತರಿಸಲು ಉದ್ದೇಶಿಸಲಾಗಿದ್ದು, ನೇಪಾಳ ಹಾಗೂ ಶ್ರೀಲಂಕಾದಲ್ಲಿ ಸರ್ಕಾರ ರಚಿಸಲು ಯೋಜನೆ ಹಾಕಿಕೊಂಡಿದ್ದಾರೆ' ಎಂದು ಹೇಳಿದ್ದರು.