ದೀಪಾವಳಿಗೆ ಡಿಜಿಟಲ್‌ ಚಿನ್ನ ಖರೀದಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ವಿವರ

ಡಿಜಿಟಲ್‌ ವಿಧಾನದಲ್ಲಿ ಬಂಗಾರದಲ್ಲಿ ಹೂಡಿಕೆ ಮಾಡಲು ಅವಕಾಶವಿದೆ. 24 ಕ್ಯಾರೆಟ್‌ನ ಶೇ.99.9 ಪರಿಶುದ್ಧ ಚಿನ್ನದಲ್ಲಿ ಹೂಡಿಕೆಗೆ ಅವಕಾಶವಿದ್ದು, ಭೌತಿಕ ಚಿನ್ನದಂತೆ ಸ್ಟೋರೇಜ್‌ ಮಾಡಬೇಕಾದ ಅಗತ್ಯ ಇರುವುದಿಲ್ಲ.

ದೀಪಾವಳಿಗೆ ಡಿಜಿಟಲ್‌ ಚಿನ್ನ ಖರೀದಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ವಿವರ
Linkup
ಬೆಂಗಳೂರು: ಈ ಸಲದ ಹಬ್ಬದ ಅವಧಿಯಲ್ಲಿ ಡಿಜಿಟಲ್‌ ಬಂಗಾರವನ್ನು ಖರೀದಿಸುವ ಯೋಜನೆ ನಿಮ್ಮಲ್ಲಿದೆಯೇ? ಹಾಗಾದರೆ ನಿಮಗೆ ಅಗತ್ಯವಾದ ಸಲಹೆ ಇಲ್ಲಿದೆ. ಏನಿದು ? ಡಿಜಿಟಲ್‌ ವಿಧಾನದಲ್ಲಿ ಬಂಗಾರದಲ್ಲಿ ಹೂಡಿಕೆ ಮಾಡಬಹುದು. 24 ಕ್ಯಾರೆಟ್‌ನ ಶೇ.99.9 ಪರಿಶುದ್ಧ ಚಿನ್ನದಲ್ಲಿ ಹೂಡಿಕೆಗೆ ಅವಕಾಶ ಲಭ್ಯ. ಭೌತಿಕ ಚಿನ್ನದಂತೆ ಸ್ಟೋರೇಜ್‌ ಮಾಡಬೇಕಾದ ಅಗತ್ಯ ಇರುವುದಿಲ್ಲ. ಆನ್‌ಲೈನ್‌ ಮೂಲಕ ಹಣ ಪಾವತಿಸಿ ಚಿನ್ನದ ಡಿಜಿಟಲ್‌ ಇನ್‌ವಾಯ್ಸ್‌ ಪಡೆಯಬಹುದು. ಅಗತ್ಯ ಇದ್ದಾಗ ಭೌತಿಕ ಚಿನ್ನಕ್ಕೆ ಪರಿವರ್ತಿಸಲೂ ಅವಕಾಶ ಇರುತ್ತದೆ. ಗ್ರಾಹಕರು ಮಾರುಕಟ್ಟೆ ದರಕ್ಕೆ ಮಾರಾಟ ಮಾಡಬಹುದು. ಡಿಜಿಟಲ್‌ ಚಿನ್ನ ಖರೀದಿಗೆ ಗರಿಷ್ಠ ಮಿತಿ ಇರುವುದಿಲ್ಲ. ಆದರೆ ಒಂದು ದಿನಕ್ಕೆ ಗರಿಷ್ಠ 2 ಲಕ್ಷ ರೂ. ಮೌಲ್ಯದ ಡಿಜಿಟಲ್‌ ಚಿನ್ನ ಕೊಳ್ಳಬಹುದು. 100 ರೂ.ಗಳಿಂದಲೂ ಡಿಜಿಟಲ್‌ ಚಿನ್ನದಲ್ಲಿ ಹೂಡಿಕೆ ಮಾಡಬಹುದು. ಡಿಜಿಟಲ್‌ ಚಿನ್ನ ಎಲ್ಲಿ ಲಭ್ಯ? ಭಾರತದಲ್ಲಿ ಡಿಜಿಟಲ್‌ ಚಿನ್ನವನ್ನು ಪ್ರಮುಖವಾಗಿ ಮೂರು ಸಂಸ್ಥೆಗಳು ವಿತರಿಸುತ್ತವೆ. ಎಂಎಂಟಿಸಿ ಪಿಎಎಂಪಿ, ಆಗ್ಯುಮೆಂಟ್‌ ಗೋಲ್ಡ್‌ಟೆಕ್‌ ಮತ್ತು ಡಿಜಿಟಲ್‌ ಗೋಲ್ಡ್‌ ಇಂಡಿಯಾ (ಸೇಫ್‌ ಗೋಲ್ಡ್‌) ಸಂಸ್ಥೆಗಳು ಡಿಜಿಟಲ್‌ ಚಿನ್ನವನ್ನು ಮಾರಾಟ ಮಾಡುತ್ತವೆ. ಈ ಸಂಸ್ಥೆಗಳು ಪೇಟಿಎಂ, ಗೂಗಲ್‌ ಪೇ, ಅಮೆಜಾನ್‌ ಪೇ ಮತ್ತು ಫೋನ್‌ಪೇ ಜತೆಗೆ ಒಪ್ಪಂದ ಮಾಡಿಕೊಂಡಿವೆ. ತಾನಿಷ್ಕ್‌, ಸೆನ್‌ಕೊ, ಕಲ್ಯಾಣ್‌ ಜ್ಯುವೆಲರ್ಸ್ ಕೂಡ ಡಿಜಿಟಲ್‌ ಚಿನ್ನವನ್ನು ಮಾರಾಟ ಮಾಡುತ್ತವೆ. ಗ್ರಾಹಕರು ಡಿಜಿಟಲ್‌ ಗೋಲ್ಡ್‌ ಅಕೌಂಟ್‌ಗಳನ್ನು ತೆರೆಯಬಹುದು. ಭೌತಿಕ ಬಂಗಾರಕ್ಕಿಂತ ಹೇಗೆ ಭಿನ್ನ? ಡಿಜಿಟಲ್‌ ಚಿನ್ನಕ್ಕೆ ಶೇ.3ರ ಜಿಎಸ್‌ಟಿ ಹೊರತುಪಡಿಸಿ ಉಳಿದಂತೆ ವೆಚ್ಚವಿರುವುದಿಲ್ಲ. ಸ್ಟೋರೇಜ್‌ ಮತ್ತು ಕಳವಾಗುವ ಭೀತಿ ಇರುವುದಿಲ್ಲ. ಇಟಿಎಫ್‌ ಮತ್ತು ಗೋಲ್ಡ್‌ ಫಂಡ್‌ಗಳಲ್ಲಾದರೆ ಶೇ. 0.5 - 1 ವಾರ್ಷಿಕ ಶುಲ್ಕ ಇರುತ್ತದೆ. ಜತೆಗೆ ಇಲ್ಲಿ ಡಿಮ್ಯಾಟ್‌ ಖಾತೆಯ ಅಗತ್ಯವೂ ಇಲ್ಲ. ಇಟಿಎಫ್‌ಗೆ ಆದರೆ ಡಿಮ್ಯಾಟ್‌ ಬೇಕಾಗುತ್ತದೆ. ಎಷ್ಟು ಸುರಕ್ಷಿತ? ನೀವು ನೇರವಾಗಿ ಡಿಜಿಟಲ್‌ ಚಿನ್ನ ಮಾರಾಟ ಮಾಡುವ ಸಂಸ್ಥೆಯಿಂದ ಅಥವಾ ಅದರ ಪಾಲುದಾರರಿಂದ ಖರೀದಿಸಿದರೂ, ಅವುಗಳು ನೀವು ಖರೀದಿಸಿದ ಚಿನ್ನದ ನಿರ್ವಾಹಕರಾಗಿ ಕಾರ್ಯನಿರ್ವಹಿಸುತ್ತವೆ. ಮಾಲಿಕತ್ವ ನಿಮ್ಮದೇ ಆಗಿರುತ್ತದೆ.