ಕೊರೊನಾ ಇಳಿಮುಖ: ಸರಕಾರಿ ಕೋಟಾದ ಶೇ.30 ರಷ್ಟು ಬೆಡ್ ಖಾಸಗಿ ಆಸ್ಪತ್ರೆಗಳಿಗೆ ವಾಪಸ್
ಕೊರೊನಾ ಇಳಿಮುಖ: ಸರಕಾರಿ ಕೋಟಾದ ಶೇ.30 ರಷ್ಟು ಬೆಡ್ ಖಾಸಗಿ ಆಸ್ಪತ್ರೆಗಳಿಗೆ ವಾಪಸ್
ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಕಡಿಮೆಯಾಗಿರುವುದರಿಂದ ಕೋವಿಡೇತರ ರೋಗಿಗಳ ಚಿಕಿತ್ಸೆಗೆ ಹಾಸಿಗೆಗಳು ಲಭ್ಯವಾಗಲಿ ಎಂದು ಸರಕಾರಿ ಕೋಟಾದ ಹಾಸಿಗೆಗಳನ್ನು ಬಿಟ್ಟುಕೊಡಲಾಗಿದೆ. ಈ ಹಾಸಿಗೆಗಳನ್ನು ಯಾವಾಗ ಬೇಕಾದರೂ ವಾಪಸ್ ತೆಗೆದುಕೊಳ್ಳುವ ಷರತ್ತು ವಿಧಿಸಲಾಗಿದೆ.
: ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗಳಿಂದ ಪಡೆದುಕೊಂಡಿದ್ದ ಸರಕಾರಿ ಕೋಟಾದ ಶೇ.30 ರಷ್ಟು ಹಾಸಿಗೆಗಳನ್ನು ವಾಪಸ್ ಆಸ್ಪತ್ರೆಗಳಿಗೆ ಹಿಂದಿರುಗಿಸಲು ಸರಕಾರ ತೀರ್ಮಾನ ತೆಗೆದುಕೊಂಡಿದೆ.
ಕೊರೊನಾ ರೋಗಿಗಳಿಗೆ ಸರಕಾರಿ ವೆಚ್ಚದಲ್ಲಿ ಚಿಕಿತ್ಸೆ ಒದಗಿಸಲು ರಾಜ್ಯ ಸರಕಾರ ಖಾಸಗಿ ಆಸ್ಪತ್ರೆಗಳ ಶೇ.50ರಷ್ಟು ಬೆಡ್ಗಳನ್ನು ತನ್ನ ಸುಪರ್ದಿಗೆ ಪಡೆದುಕೊಂಡಿತ್ತು. ಆದರೆ ನಗರದಲ್ಲಿ ಸೋಂಕಿನ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗಳಿಗೆ ದಾಖಲಾಗುವ ರೋಗಿಗಳ ಸಂಖ್ಯೆ ತೀರಾ ಇಳಿಮುಖವಾಗಿರುವುದರಿಂದ ಶೇ.30 ರಷ್ಟು ಸಾಮಾನ್ಯ ಹಾಸಿಗೆಗಳು ಹಾಗೂ ಶೇ.20 ರಷ್ಟು ಆಕ್ಸಿಜನ್ ಹಾಸಿಗೆಗಳನ್ನು ವಾಪಸ್ ನೀಡಲು ನಿರ್ಧರಿಸಲಾಗಿದೆ. ಆದರೆ ಐಸಿಯು ಹಾಗೂ ವೆಂಟಿಲೇಟರ್ ಬೆಡ್ಗಳನ್ನು ಸರಕಾರಿ ಕೋಟಾದಲ್ಲೇ ಮುಂದುವರಿಸಲಾಗುತ್ತಿದೆ.
ಖಾಸಗಿ ಆಸ್ಪತ್ರೆಗಳ ಹಾಸಿಗೆ ನಿರ್ವಹಣೆ ಕುರಿತು ವಿಧಾನಸೌಧದಲ್ಲಿ ಅಧಿಕಾರಿಗಳೊಂದಿಗೆ ಖಾಸಗಿ ಆಸ್ಪತ್ರೆಗಳ ಬೆಡ್ ಉಸ್ತುವಾರಿ ಹೊಣೆ ಹೊತ್ತಿರುವ ಕಂದಾಯ ಸಚಿವ ಆರ್.ಅಶೋಕ್ ಬುಧವಾರ ಸಭೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ನಗರದಲ್ಲಿ ಸೋಂಕಿತರ ಸಂಖ್ಯೆ ಇಳಿಮುಖವಾಗಿದೆ. ಪ್ರಸ್ತುತ ದಿನಕ್ಕೆ 200 ಮಂದಿಯಷ್ಟೇ ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ. ಕೋವಿಡೇತರ ರೋಗಿಗಳ ಚಿಕಿತ್ಸೆಗೆ ಹಾಸಿಗೆಗಳು ಅಗತ್ಯ ಇರುವ ಹಿನ್ನೆಲೆಯಲ್ಲಿ ಸರಕಾರಿ ಕೋಟಾದ ಹಾಸಿಗೆಗಳಲ್ಲಿ ಶೇ.30ರಷ್ಟನ್ನು ಖಾಸಗಿಯವರಿಗೆ ತಾತ್ಕಾಲಿಕವಾಗಿ ಬಿಟ್ಟು ಕೊಡುತ್ತೇವೆ. ಅಗತ್ಯಬಿದ್ದರೆ ಸರಕಾರ ಕೋಟಾಕ್ಕೆ ಕೊಡಬೇಕು ಎಂದು ಷರತ್ತು ವಿಧಿಸಲಾಗಿದೆ. ಸದ್ಯ ಮೂರನೇ ಅಲೆವರೆಗೆ ಹಾಸಿಗೆಗಳ ಅಗತ್ಯವಿಲ್ಲ. ಒಂದು ವೇಳೆ ಹೆಚ್ಚಿನ ಹಾಸಿಗೆಗಳ ಅಗತ್ಯ ಬಂದರೆ ಸರಕಾರ ಮತ್ತೆ ಯಾವಾಗ ಬೇಕಾದರೂ ಹಿಂದಕ್ಕೆ ಪಡೆಯಲು ಅವಕಾಶವಿದೆ' ಎಂದು ಹೇಳಿದರು.
'ಖಾಸಗಿ ಆಸ್ಪತ್ರೆಗಳಲ್ಲಿರುವ ಶೇ. 50ರಷ್ಟು ಐಸಿಯು ಹಾಗೂ ವೆಂಟಿಲೇಟರ್ ಬೆಡ್ಗಳನ್ನು ಸರಕಾರ ತನ್ನ ಅಧೀನದಲ್ಲೇ ಇಟ್ಟುಕೊಳ್ಳಲಿದೆ. ಸರಕಾರಿ ಆಸ್ಪತ್ರೆ ಹಾಗೂ ಸರಕಾರಿ ಮೆಡಿಕಲ್ ಕಾಲೇಜುಗಳಲ್ಲಿ ಇರುವ ಹಾಸಿಗೆಗಳನ್ನು ಕೋವಿಡ್ ಸೋಂಕಿತರಿಗೆ ಮೀಸಲಿಡಲಾಗುವುದು' ಎಂದು ತಿಳಿಸಿದರು.
ವೈದ್ಯರಿಗೆ ತರಬೇತಿ : ಮೂರನೇ ಅಲೆಯಲ್ಲಿ ಮಕ್ಕಳಿಗೆ ಕೊರೊನಾ ಸೋಂಕು ತಗುಲಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸರಕಾರ ಈಗಿನಿಂದಲೇ ಸಿದ್ಧತೆ ಕೈಗೊಂಡಿದೆ. ಪ್ರಮುಖವಾಗಿ ಮಕ್ಕಳ ಚಿಕಿತ್ಸೆಗೆ ಪ್ರತ್ಯೇಕ ವಾರ್ಡ್ಗಳನ್ನು ವ್ಯವಸ್ಥೆ ಮಾಡುವುದು ಹಾಗೂ ಅಲ್ಲಿ ಮಕ್ಕಳ ತಜ್ಞ ವೈದ್ಯರ ಸೇವೆ ಒದಗಿಸಲು ಸಿದ್ಧತೆ ನಡೆದಿದೆ. ಇದರ ಭಾಗವಾಗಿ ಇತರೆ ವೈದ್ಯರೂ ಮಕ್ಕಳಿಗೆ ಚಿಕಿತ್ಸೆ ನೀಡುವ ಉದ್ದೇಶದಿಂದ ಬೆಂಗಳೂರಿನಲ್ಲಿ ವೈದ್ಯರಿಗೆ ತರಬೇತಿ ಕಾರ್ಯಾಗಾರ ಆರಂಭಿಸಲಾಗಿದೆ. ಇಲ್ಲಿ ಪರಿಣಿತ ಮಕ್ಕಳ ತಜ್ಞರು ಇತರೆ ವೈದ್ಯರಿಗೆ ತರಬೇತಿ ನೀಡಲಿದ್ದಾರೆ. ಇತರೆ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳು ವೈದ್ಯರಿಗೆ ತರಬೇತಿ ಕಾರ್ಯಾಗಾರ ಆಯೋಜಿಸಲಿದ್ದಾರೆ ಎಂದು ಸಚಿವ ಅಶೋಕ್ ತಿಳಿಸಿದರು.
'ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಕಡಿಮೆಯಾಗಿರುವುದರಿಂದ ಕೋವಿಡೇತರ ರೋಗಿಗಳ ಚಿಕಿತ್ಸೆಗೆ ಹಾಸಿಗೆಗಳು ಲಭ್ಯವಾಗಲಿ ಎಂದು ಸರಕಾರಿ ಕೋಟಾದ ಹಾಸಿಗೆಗಳನ್ನು ಬಿಟ್ಟುಕೊಡಲಾಗಿದೆ. ಈ ಹಾಸಿಗೆಗಳನ್ನು ಯಾವಾಗ ಬೇಕಾದರೂ ವಾಪಸ್ ತೆಗೆದುಕೊಳ್ಳುವ ಷರತ್ತು ವಿಧಿಸಲಾಗಿದೆ. ಐಸಿಯು, ವೆಂಟಿಲೇಟರ್ ಬೆಡ್ಗಳನ್ನು ಸರಕಾರದ ಬಳಿಯೇ ಇಟ್ಟುಕೊಳ್ಳಲಾಗಿದೆ' ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.