ಡೆಲ್ಟಾ ಪ್ಲಸ್ ಹರಡದಂತೆ ಎಚ್ಚರಿಕೆ; ಒಳಚರಂಡಿಯ ಕೊಳಚೆಯಲ್ಲಿ ಒಂದು ಸಾವಿರ ಮಾದರಿ ಸಂಗ್ರಹ!
ಡೆಲ್ಟಾ ಪ್ಲಸ್ ಹರಡದಂತೆ ಎಚ್ಚರಿಕೆ; ಒಳಚರಂಡಿಯ ಕೊಳಚೆಯಲ್ಲಿ ಒಂದು ಸಾವಿರ ಮಾದರಿ ಸಂಗ್ರಹ!
ಬಿಬಿಎಂಪಿಯು ಇದುವರೆಗೆ ಕೋವಿಡ್‌ನ ರೂಪಾಂತರಿ ಪತ್ತೆಗೆ ಗಂಟಲ ದ್ರವದ ಮಾದರಿಗಳನ್ನಷ್ಟೇ ಜಿನೋಮ್ ಸೀಕ್ವೆನ್ಸಿಂಗ್ (ಡಿಎನ್‌ಎ ಜೋಡಣೆಯ ಕ್ರಮ) ಪತ್ತೆ ಪರೀಕ್ಷೆ ನಡೆಸಲಾಗುತ್ತಿತ್ತು. ಈಗ ಒಳಚರಂಡಿಯ ಕೊಳಚೆ ನೀರನ್ನೂ ಪರೀಕ್ಷೆಗೊಳಪಡಿಸಿ, ರೂಪಾಂತರಿ ತಳಿಗಳ ಪತ್ತೆ ಕಾರ್ಯ ಕೈಗೊಂಡಿದೆ. ಆದರೆ, ಈವರೆಗೆ ಪರೀಕ್ಷಾ ಫಲಿತಾಂಶದ ವರದಿ ಬಂದಿಲ್ಲ.
ನಾಗಪ್ಪ ನಾಗನಾಯಕನಹಳ್ಳಿ, ಬೆಂಗಳೂರುಬೆಂಗಳೂರು: ಕೊರೊನಾ ವೈರಾಣುವಿನ ರೂಪಾಂತರಿ ತಳಿಗಳ ಪತ್ತೆಗೆ ಸೋಂಕಿತರ ಗಂಟಲು ದ್ರವದ ಮಾದರಿಗಳನ್ನಷ್ಟೇ ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ಕಳುಹಿಸುತ್ತಿದ್ದ ಬಿಬಿಎಂಪಿ, ಇದೀಗ ಕೊಳಚೆಯನ್ನೂ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸುತ್ತಿದೆ. ಆ ಮೂಲಕ ರೂಪಾಂತರಿ ತಳಿಗಳ ಹರಡುವಿಕೆ ನಿಯಂತ್ರಿಸುವ ನಿಟ್ಟಿನಲ್ಲಿ ಎಚ್ಚರಿಕೆಯ ಹೆಜ್ಜೆಯನ್ನಿಟ್ಟಿದೆ.
ಕೋವಿಡ್ ವೈರಸ್‌ನ ರೂಪಾಂತರ ತಳಿ ಹರಡದಂತೆ ಎಚ್ಚರ ವಹಿಸಲು ಕೇಂದ್ರ ಸರಕಾರ ಸೂಚಿಸಿದೆ. ಹಾಗಾಗಿ, ನಗರದಲ್ಲಿ ಈ ತಳಿ ಹರಡುವುದನ್ನು ತಡೆಯುವ ಸಲುವಾಗಿ ಪಾಲಿಕೆಯು ನಾನಾ ತಂತ್ರಗಳನ್ನು ಅನುಸರಿಸುತ್ತಿದೆ. ಇದರ ಭಾಗವಾಗಿ ಹಲವು ಮನೆಗಳಿಂದ ಒಳಚರಂಡಿ ಕೊಳವೆ ಮಾರ್ಗದ ಮೂಲಕ ಹರಿದು ಬಂದು ಒಂದೆಡೆ ಸೇರುವ ನೀರಿನ ಮಾದರಿಯನ್ನು ಸಂಗ್ರಹ ಮಾಡಿ, ಪರೀಕ್ಷೆಗೆ ರವಾನಿಸಲಾಗುತ್ತಿದೆ.
ಬಿಬಿಎಂಪಿಯು ಇದುವರೆಗೆ ಕೋವಿಡ್‌ನ ರೂಪಾಂತರಿ ಪತ್ತೆಗೆ ಗಂಟಲ ದ್ರವದ ಮಾದರಿಗಳನ್ನಷ್ಟೇ ಜಿನೋಮ್ ಸೀಕ್ವೆನ್ಸಿಂಗ್ (ಡಿಎನ್‌ಎ ಜೋಡಣೆಯ ಕ್ರಮ) ಪತ್ತೆ ಪರೀಕ್ಷೆ ನಡೆಸಲಾಗುತ್ತಿತ್ತು. ಈಗ ಒಳಚರಂಡಿಯ ಕೊಳಚೆ ನೀರನ್ನೂ ಪರೀಕ್ಷೆಗೊಳಪಡಿಸಿ, ರೂಪಾಂತರಿ ತಳಿಗಳ ಪತ್ತೆ ಕಾರ್ಯ ಕೈಗೊಂಡಿದೆ. ಆದರೆ, ಈವರೆಗೆ ಪರೀಕ್ಷಾ ಫಲಿತಾಂಶದ ವರದಿ ಬಂದಿಲ್ಲ.
45 ಕಡೆ ಕೊಳಚೆ ನೀರಿನ ಮಾದರಿ ಸಂಗ್ರಹ
ಆರ್‌ಟಿಪಿಸಿಆರ್ ಮತ್ತು ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗಾಗಿ ಪಾಲಿಕೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿರುವ ಮಾಲಿಕ್ಯೂಲರ್ ಸೊಲ್ಯೂಷನ್ಸ್ ಎಂಬ ಸಂಸ್ಥೆಯು ನಗರದ ನಾನಾ ಪ್ರದೇಶಗಳ 45 ಕಡೆ ಒಳಚರಂಡಿಯ ಕೊಳಚೆ ನೀರಿನ ಒಂದು ಸಾವಿರ ಮಾದರಿಗಳನ್ನು ಸಂಗ್ರಹಿಸಿ, ಪರೀಕ್ಷೆಗೆ ಕೊಂಡೊಯ್ದಿದೆ. ಇದಲ್ಲದೆ, ಜಲಮಂಡಳಿಯ 33 ಕೊಳಚೆ ನೀರಿನ ಸಂಸ್ಕರಣಾ ಘಟಕಗಳಲ್ಲೂ(ಎಸ್‌ಟಿಪಿ) ಮಾದರಿ ಸಂಗ್ರಹಿಸಿ, ಪರೀಕ್ಷೆ ಮಾಡಲು ಉದ್ದೇಶಿಸಲಾಗಿದೆ.
ಕೋವಿಡ್ ಪರೀಕ್ಷೆಗೆ ಯಾರ ಮೇಲೂ ಒತ್ತಡ ಹೇರುವಂತಿಲ್ಲ. ಕೆಲವರು ಸೋಂಕಿನ ಲಕ್ಷಣಗಳಿದ್ದರೂ ಪರೀಕ್ಷೆ ಮಾಡಿಸಿಕೊಳ್ಳುತ್ತಿಲ್ಲ. ಹೀಗಾಗಿಯೇ, ಒಳಚರಂಡಿ ಕೊಳಚೆ ನೀರನ್ನು ಸಂಗ್ರಹಿಸಿ ಪರೀಕ್ಷೆಗೊಳಪಡಿಸಲಾಗುತ್ತಿದೆ. ಒಂದು ಸಾವಿರ ಮನೆಯ ಕೊಳಚೆ ನೀರು ಒಂದು ಕಡೆ ಸೇರುವುದರಿಂದ ಪರೀಕ್ಷೆ ಮಾಡುವುದು ಸುಲಭವಾಗಿದೆ. ಆದರೆ, ಅಷ್ಟೂ ಮನೆಗಳಿಗೆ ತೆರಳಿ ಜನರನ್ನು ಪರೀಕ್ಷೆ ಮಾಡಲಾಗುವುದಿಲ್ಲ. ಹಾಗಾಗಿ, ಈ ವಿಧಾನ ಅನುಸರಿಸಲಾಗುತ್ತಿದೆ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಒಳಚರಂಡಿ ಕೊಳಚೆ ನೀರಿನ ಮಾದರಿಯನ್ನು ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ಒಳಪಡಿಸುವುದರಿಂದ ಕೊರೊನಾ ರೂಪಾಂತರಿ ತಳಿಗಳನ್ನು ಪತ್ತೆ ಮಾಡಿ ನಿಯಂತ್ರಿಸುವುದು ಸುಲಭವಾಗಲಿದೆ. ಅಲ್ಲದೆ, ಯಾವ ಪ್ರದೇಶದಲ್ಲಿ ರೂಪಾಂತರಿಗಳು ಹೆಚ್ಚು ಕಂಡುಬರುತ್ತಿವೆ ಎಂಬುದು ಗೊತ್ತಾಗಲಿದೆ ಎಂದು ಹೇಳಿದರು.
ನಗರದಲ್ಲಿ ಕೊರೊನಾ ಮಹಾಮಾರಿಯ ಅಬ್ಬರ ತಗ್ಗಿದ್ದು, ಮೂರನೇ ಅಲೆಯ ಆತಂಕವೂ ಕಾಡುತ್ತಿಲ್ಲ. ಆದಾಗ್ಯೂ, ಪಾಲಿಕೆಯು ನಿತ್ಯ 20-25 ಮಂದಿಯ ಸೋಂಕಿತರ ಮಾದರಿಗಳನ್ನು ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ಕಳುಹಿಸುತ್ತಿದೆ. ಪ್ರತಿ ವಲಯದಿಂದ ಇಬ್ಬರು, ಕೊಳೆಗೇರಿ ಪ್ರದೇಶಗಳು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಹಾಗೂ ಸೋಂಕಿತ ಮಕ್ಕಳ ಗಂಟಲು ದ್ರವದ ಮಾದರಿಗಳನ್ನು ಪರೀಕ್ಷೆ ಮಾಡಲಾಗುತ್ತಿದೆ. ಆದರೆ, ಯಾವುದೇ ಅಪಾಯಕಾರಿ ರೂಪಾಂತರಿ ತಳಿ ಕಂಡುಬರುತ್ತಿಲ್ಲ. ನಗರದಲ್ಲಿ ಮಕ್ಕಳಲ್ಲಿಸೋಂಕು ಪತ್ತೆ ದರದಲ್ಲಿ ಅಷ್ಟೇನೂ ಏರಿಳಿತವಿಲ್ಲ. ಅದು ಒಂದೇ ಅನುಪಾತದಲ್ಲಿದೆ. 12 ವರ್ಷದವರೆಗಿನ ಶೇ 7.21 ಮತ್ತು 13 ರಿಂದ 18 ವರ್ಷದೊಳಗಿನ ಶೇ 8.21ರಷ್ಟು ಮಕ್ಕಳಲ್ಲಿ ಮಾತ್ರ ಸೋಂಕು ಕಂಡುಬರುತ್ತಿದೆ.
ಜಿನೋಮ್ ಸೀಕ್ವೆನ್ಸಿಂಗ್‌ನಲ್ಲಿ ಪತ್ತೆಯಾದ ತಳಿಗಳುತಳಿ ಸಂಖ್ಯೆ
ಬಿ.1.617.2 (ಡೆಲ್ಟಾ) 340
ಬಿ.1.617.1 (ಕಪ್ಪಾ) 2
ಎವೈ.1 (ಡೆಲ್ಟಾ ಪ್ಲಸ್ ವಂಶಾವಳಿಯ ರೂಪಾಂತರಿ) 0
ಎವೈ.3 (ಡೆಲ್ಟಾ ವಂಶಾವಳಿಯ ರೂಪಾಂತರಿ) 5
ಎವೈ.6 (ಡೆಲ್ಟಾ ವಂಶಾವಳಿಯ ರೂಪಾಂತರಿ) 43
ಎವೈ.4 (ಡೆಲ್ಟಾ ವಂಶಾವಳಿಯ ರೂಪಾಂತರಿ) 9
ಎವೈ.10 (ಡೆಲ್ಟಾ ವಂಶಾವಳಿಯ ರೂಪಾಂತರಿ) 3
ಎವೈ.11 (ಡೆಲ್ಟಾ ವಂಶಾವಳಿಯ ರೂಪಾಂತರಿ) 1
ಎವೈ.12 (ಡೆಲ್ಟಾ ವಂಶಾವಳಿಯ ರೂಪಾಂತರಿ) 17
ಎವೈ.16 (ಡೆಲ್ಟಾ ವಂಶಾವಳಿಯ ರೂಪಾಂತರಿ) 3
ಎವೈ.32 (ಡೆಲ್ಟಾ ವಂಶಾವಳಿಯ ರೂಪಾಂತರಿ) 2
ಇತರೆ ರೂಪಾಂತರಿಗಳು 17
ಮಾದರಿಯಲ್ಲಿ ದೋಷವಿದ್ದುದು 96
ಕೋವಿಡ್ ಸೋಂಕು ಪತ್ತೆ ವಿವರ
ದಿನಾಂಕ 0-12 (ವರ್ಷ) 13-18 (ವರ್ಷದ ಮಕ್ಕಳು)
ಸೆ. 3- 9 -152 -102
ಸೆ. 10- 16- 141- 119
ಸೆ. 17- 23- 135 -124
ಸೆ. 24- 30- 127- 156
ಒಟ್ಟು 555 501