ನಾಗಪ್ಪ ನಾಗನಾಯಕನಹಳ್ಳಿ,
ಬೆಂಗಳೂರು: ಕೋವಿಡ್ ಅಲೆಗಳಿಂದ ತತ್ತರಿಸಿ ಹೋಗಿದ್ದ ಕೈಗಾರಿಕೆಗಳು ಚೇತರಿಕೆಯ ಹಾದಿಯಲ್ಲಿರುವಾಗಲೇ ಕಚ್ಚಾ ವಸ್ತುಗಳ ಬೆಲೆ ಏರಿಕೆಯು ಸುನಾಮಿಯಂತೆ ಅಪ್ಪಳಿಸಿದೆ. ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳು ಮುಚ್ಚುವ ಸ್ಥಿತಿ ತಲುಪಿದ್ದು, ವೆಂಟಿಲೇಟರ್ ಮೂಲಕ ಉಸಿರಾಡುತ್ತಿವೆ.
ಏಷ್ಯಾದ ಅತಿ ದೊಡ್ಡ ಕೈಗಾರಿಕಾ ಪ್ರದೇಶಗಳಲ್ಲಿ ಒಂದಾಗಿರುವ ಪೀಣ್ಯ, ಬೊಮ್ಮಸಂದ್ರ, ಬೊಮ್ಮನಹಳ್ಳಿ, ಜಿಗಣಿ, ವೀರಸಂದ್ರ, ರಾಜಾಜಿನಗರ, ಎಲೆಕ್ಟ್ರಾನಿಕ್ ಸಿಟಿ, ಕಾಮಾಕ್ಷಿಪಾಳ್ಯ, ಸುಂಕದಕಟ್ಟೆ, ಗಣಪತಿಪುರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸಾವಿರಾರು ಕಾರ್ಖಾನೆಗಳಿವೆ. ಕೊರೊನಾ, ಆರ್ಥಿಕ ಹಿಂಜರಿತದಿಂದ ಕಂಗೆಟ್ಟು ಹೋಗಿದ್ದ ಉದ್ಯಮಿಗಳಿಗೆ ಗಗನಮುಖಿಯಾಗಿರುವ ಕಚ್ಚಾ ವಸ್ತುಗಳ ದರವು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಪೀಣ್ಯದಲ್ಲಿರುವ 10 ಸಾವಿರಕ್ಕೂ ಅಧಿಕ ಕೈಗಾರಿಕೆಗಳು ಅಕ್ಷರಶಃ ಬಾಗಿಲು ಮುಚ್ಚುವ ಹಂತಕ್ಕೆ ಬಂದು ನಿಂತಿವೆ. ವಹಿವಾಟಿನಲ್ಲಿ ಭಾರಿ ಕುಸಿತವಾಗಿದ್ದು ಬ್ಯಾಂಕ್ ಸಾಲ, ಬಡ್ಡಿ ಪಾವತಿ, ಕಾರ್ಮಿಕರಿಗೆ ಸಂಬಳ ನೀಡಲಾಗದ ಸ್ಥಿತಿ ತಲುಪಿವೆ. ಲಕ್ಷಾಂತರ ಮಂದಿ ಕಾರ್ಮಿಕರು ಉದ್ಯೋಗ ಕಳೆದುಕೊಂಡಿದ್ದಾರೆ.
ಶೇ 30ರಷ್ಟು ಕೈಗಾರಿಕೆಗಳಿಗೆ ಬೀಗ
ಸುಮಾರು 40 ಚದರ ಕಿ.ಮೀ ವಿಸ್ತೀರ್ಣದ ಕೈಗಾರಿಕಾ ಪ್ರದೇಶದಲ್ಲಿ ಸಿದ್ಧ ಉಡುಪು ಕಾರ್ಖಾನೆಗಳನ್ನು ಹೊರತುಪಡಿಸಿ, ಯಂತ್ರಗಳ ಬಿಡಿಭಾಗ ತಯಾರಿಕೆಯ ಸುಮಾರು 10 ಸಾವಿರ ಕೈಗಾರಿಕೆಗಳಿವೆ. ಸಣ್ಣ ಮೊಳೆಯಿಂದ ಹಿಡಿದು ವಿಮಾನದ ಬಿಡಿ ಭಾಗಗಳನ್ನು ಉತ್ಪಾದಿಸುವ ಕಾರ್ಖಾನೆಗಳೂ ಇವೆ.
ಆಟೊಮೊಬೈಲ್, ಪ್ಯಾಕೇಜಿಂಗ್, ಪೌಡರ್ ಕೋಟಿಂಗ್, ಫ್ಯಾಬ್ರಿಕೇಷನ್, ಎಲೆಕ್ಟ್ರೋ ಪ್ಲೇಟಿಂಗ್, ಸಿಎನ್‌ಸಿ ಮೆಷಿನ್ ಜಾಬ್‌ವರ್ಕ್, ಮೆಷಿನ್ ಟೂಲ್ ಕಾಂಪೊನೆಂಟ್ ಸಪ್ಲೆಯರ್ಸ್, ವಿದ್ಯುತ್ ಟ್ರಾನ್ಸ್‌ಫಾರ್ಮರ್ ಬಿಡಿಭಾಗ ತಯಾರಿಸುವ ಕೈಗಾರಿಕೆಗಳೂ ಇಲ್ಲಿವೆ. ಕಳೆದ ಒಂದೂವರೆ ವರ್ಷದಿಂದ ಕಚ್ಚಾ ವಸ್ತುಗಳ ಬೆಲೆಯು ಪ್ರತಿ ತಿಂಗಳೂ ಹೆಚ್ಚಾಗುತ್ತಾ ಬಂದಿದೆ. ಉಕ್ಕು ಸೇರಿದಂತೆ ಹಲವು ವಸ್ತುಗಳ ದರವು 200-300 ಪಟ್ಟು ಜಾಸ್ತಿಯಾಗಿದೆ. ಪರಿಣಾಮ, ಕೈಗಾರಿಕೋದ್ಯಮಿಗಳು ತಮ್ಮ ಗ್ರಾಹಕ ಕಂಪೆನಿಗಳೊಂದಿಗೆ ಮಾಡಿಕೊಂಡ ಒಪ್ಪಂದದ ದರದಲ್ಲಿ ಬಿಡಿಭಾಗಗಳನ್ನು ಪೂರೈಸಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿಯೇ, ಕೋವಿಡ್ ಬಳಿಕ ಶೇ 30ರಷ್ಟು ಕಾರ್ಖಾನೆಗಳು ಬಾಗಿಲು ಮುಚ್ಚಿವೆ. ಕೊರೊನಾ ಅಪ್ಪಳಿಸಿದಾಗಿನಿಂದ ಇಲ್ಲಿಯವರೆಗೆ ಶೇ 40ರಷ್ಟು ಕೈಗಾರಿಕೆಗಳಿಗೆ ಬೀಗ ಬಿದ್ದಿದೆ.
ಬೀದಿಗೆ ಬೀಳುತ್ತಿರುವ ಕಾರ್ಮಿಕರು
ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಸುಮಾರು 12 ಲಕ್ಷ ಕಾರ್ಮಿಕರು ಈ ಕಾರ್ಖಾನೆಗಳನ್ನು ನೆಚ್ಚಿಕೊಂಡು ಬದುಕಿನ ಬಂಡಿ ದೂಡುತ್ತಿದ್ದಾರೆ. ಇದರಲ್ಲಿ 4 ಲಕ್ಷಕ್ಕಿಂತ ಹೆಚ್ಚು ಮಹಿಳಾ ಉದ್ಯೋಗಿಗಳಿದ್ದಾರೆ. ಉದ್ಯೋಗ ಅರಸಿ ಬರುವ ಕಾರ್ಮಿಕರಿಗೆ ಈ ಕೈಗಾರಿಕೆಗಳು ಅನ್ನದ ಬಟ್ಟಲು ಎನಿಸಿವೆ. ಆದರೆ, ಕಚ್ಚಾ ವಸ್ತುಗಳ ದರ ಹೆಚ್ಚಳದಿಂದ ಹಲವು ಸಣ್ಣಪುಟ್ಟ ಕೈಗಾರಿಕೆಗಳು ನಷ್ಟದ ಭೀತಿಯಿಂದ ಉತ್ಪಾದನಾ ಪ್ರಮಾಣವನ್ನು ತಗ್ಗಿಸಿವೆ. ಪರಿಣಾಮ, ಸಾವಿರಾರು ಕಾರ್ಮಿಕರು ಕೆಲಸ ಕಳೆದುಕೊಳ್ಳುವಂತಾಗಿದೆ. ಈ ಮೊದಲು ಮಧ್ಯಮ ಮತ್ತು ಬೃಹತ್ ಕೈಗಾರಿಕೆಗಳಲ್ಲಿನ ಕಾರ್ಮಿಕರು ಮೂರು ಪಾಳಿಗಳಲ್ಲಿ ಕೆಲಸ ಮಾಡುತ್ತಿದ್ದರು. ಈಗ ಒಂದೇ ಒಂದು ಪಾಳಿಯಲ್ಲಿ ಕೆಲಸ ಮಾಡುವಂತಾಗಿದೆ.
ಸದಾ ಚಟುವಟಿಕೆಯಿಂದ ಕೂಡಿರುವ ಕೈಗಾರಿಕಾ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿಯಿಂದ ಹಿಡಿದು ಮಾಲೀಕರವರೆಗೆ ಎಲ್ಲರ ಮುಖದಲ್ಲೂ ಸಂಕಟದ ಛಾಯೆ ಎದ್ದು ಕಾಣುತ್ತಿದೆ. ಸಾವು-ಬದುಕಿನ ನಡುವೆ ಸೆಣಸಾಡುತ್ತಾ ಚೇತರಿಕೆ ಹಾದಿಯಲ್ಲಿದ್ದ ಕೈಗಾರಿಕೆಗಳ ಉಸಿರು ನಿಂತು ಹೋಗುವ ಆತಂಕ ಎದುರಾಗಿದೆ.
ಇಲ್ಲಿಯವರೆಗಿನ ಉದ್ಯಮ ವೃತ್ತಿಯಲ್ಲಿ ಕಂಡು ಕೇಳರಿಯದಷ್ಟು ಕಚ್ಚಾ ವಸ್ತುಗಳ ಬೆಲೆ ಹೆಚ್ಚಳವಾಗಿದೆ. ಕಳೆದ ಒಂದೂವರೆ ವರ್ಷದಲ್ಲಿ ದರವು ಮೂರು ಪಟ್ಟು ಜಾಸ್ತಿಯಾಗಿದೆ. ಕೇಂದ್ರ ಸರಕಾರವು ಆಮದು ಸುಂಕವನ್ನು ಜಾಸ್ತಿ ಮಾಡಿದ ಬಳಿಕ ಚೀನಾದಿಂದ ಉಕ್ಕು ಪೂರೈಕೆಯಾಗುವುದು ನಿಂತಿದೆ. ಸ್ವದೇಶಿ ಕಂಪನಿಗಳು ವಿದೇಶಗಳಿಗೆ ಉಕ್ಕು ರಫ್ತು ಮಾಡುತ್ತಿದ್ದು, ಇಲ್ಲಿ ದರ ಹೆಚ್ಚಿಸಿವೆ. ಹೀಗಾಗಿಯೇ, ಉಕ್ಕು ಕಂಪನಿಗಳ ಲಾಭಾಂಶವು 300-400 ಪಟ್ಟು ಜಾಸ್ತಿಯಾಗಿದೆ ಎಂದು ಉದ್ಯಮಿಯೊಬ್ಬರು ಆಕ್ರೋಶ ಹೊರಹಾಕಿದರು.
ಕಚ್ಚಾ ವಸ್ತುಗಳ ಮೇಲಿನ ರಫ್ತು ಸುಂಕ ಇಳಿಸಿ, ದೇಶಾದ್ಯಂತ ಏಕ ರೀತಿಯ ದರ ನಿಗದಿಪಡಿಸಬೇಕು. ಉಕ್ಕು ಮತ್ತು ಇತರೆ ವಸ್ತುಗಳ ಬೆಲೆಗಳನ್ನು ತಕ್ಷಣವೇ ಇಳಿಕೆ ಮಾಡಬೇಕು. ಇಂಧನ ದರವನ್ನೂ ಕಡಿಮೆ ಮಾಡಬೇಕು. ರಫ್ತು ಪ್ರಮಾಣಕ್ಕೆ ಮಿತಿ ಹೇರಬೇಕು. ಇಲ್ಲವಾದಲ್ಲಿ ಬಹುತೇಕ ಕೈಗಾರಿಕೆಗಳು ಮುಚ್ಚಿ ಹೋಗಲಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರತಿಕ್ರಿಯೆಗಳು
''ಬೃಹತ್ ಕಂಪನಿಗಳೊಂದಿಗೆ ದೀರ್ಘಾವಧಿ ಒಪ್ಪಂದ ಮಾಡಿಕೊಂಡು ಬಿಡಿಭಾಗಗಳನ್ನು ಪೂರೈಸಲಾಗುತ್ತಿದೆ. ಕಚ್ಚಾ ವಸ್ತುಗಳ ಬೆಲೆ ಹೆಚ್ಚಳದಿಂದ ಉತ್ಪಾದನಾ ವೆಚ್ಚದಲ್ಲಿ ಏರಿಕೆಯಾಗಿದೆ. ಹೀಗಾಗಿ, ಒಪ್ಪಂದದ ದರದಲ್ಲಿ ಬಿಡಿಭಾಗಗಳನ್ನು ಸರಬರಾಜು ಮಾಡಲಾಗುತ್ತಿಲ್ಲ. ಹಲವು ಸಣ್ಣ ಕೈಗಾರಿಕೆಗಳು ಉತ್ಪಾದನೆ ತಗ್ಗಿಸಿವೆ. ಕೇಂದ್ರ ಸರಕಾರವು ಕಚ್ಚಾ ವಸ್ತುಗಳ ರಫ್ತಿಗೆ ಮಿತಿ ಹೇರಬೇಕು. ಈರುಳ್ಳಿ ದರ ಜಾಸ್ತಿಯಾದಾಗ ರಫ್ತು ನಿಷೇಧಿಸುವ ಸರಕಾರ, ಉಕ್ಕಿನ ಬೆಲೆ ಹೆಚ್ಚಾದಾಗ ಏಕೆ ರಫ್ತು ಮಾಡುವುದಕ್ಕೆ ನಿಷೇಧ ಹೇರುತ್ತಿಲ್ಲ,''
ಡಿ.ಟಿ.ವೆಂಕಟೇಶ್, ಮಾಜಿ ಅಧ್ಯಕ್ಷ, ಪೀಣ್ಯ ಕೈಗಾರಿಕಾ ಸಂಘ
''ಕೋವಿಡ್‌ನಿಂದ ಚೇತರಿಸಿಕೊಂಡಿದ್ದ ಕಾರ್ಖಾನೆಗಳು ಕಚ್ಚಾ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿವೆ. ಇಂಧನ ದರ ಹೆಚ್ಚಳದಿಂದ ಸಾಗಣೆ ವೆಚ್ಚವು ಶೇ 300ರಷ್ಟು ಏರಿಕೆಯಾಗಿದೆ. ಈ ಮೊದಲು ಚೀನಾದಿಂದ ಸರಕು ತುಂಬಿಕೊಂಡು ಬರುತ್ತಿದ್ದ 20 ಅಡಿ ಉದ್ದದ ಕಂಟೈನರ್‌ಗೆ 1 ಲಕ್ಷ ಬಾಡಿಗೆ ನೀಡಲಾಗುತ್ತಿತ್ತು. ಈಗ 5 ಲಕ್ಷಕ್ಕೆ ಏರಿದೆ. ಉಕ್ಕು ತಯಾರಿಕಾ ಕಂಪೆನಿಗಳೆಲ್ಲವೂ ಒಂದಾಗಿ ಬೇಡಿಕೆ ಸೃಷ್ಟಿಸಿ, ಬೆಲೆ ಹೆಚ್ಚಿಸಿವೆ. ಕಚ್ಚಾ ವಸ್ತುಗಳ ಬೆಲೆಯಲ್ಲಿ ಇಳಿಕೆಯಾಗದಿದ್ದಲ್ಲಿ ನೂರಾರು ಕೈಗಾರಿಕೆಗಳು ಬಾಗಿಲು ಮುಚ್ಚುವ ಸ್ಥಿತಿ ತಲುಪಲಿವೆ,''
ಎ.ಪ್ರಸಾದ್, ಅಧ್ಯಕ್ಷ, ಬೊಮ್ಮಸಂದ್ರ ಕೈಗಾರಿಕಾ ಸಂಘ
''ಕಚ್ಚಾ ವಸ್ತುಗಳ ಬೆಲೆ ಏರಿಕೆಯಿಂದ ಉತ್ಪಾದನೆ ಕಡಿಮೆ ಮಾಡಲಾಗಿದೆ. ಖರೀದಿ ಆದೇಶ (ಪಿಒ) ನೀಡಿರುವ ಕಂಪನಿಗಳಿಗೆ ನಿಗದಿತ ದರದಲ್ಲಿ ಬಿಡಿ ಭಾಗಗಳನ್ನು ಸರಬರಾಜು ಮಾಡಲಾಗುತ್ತಿಲ್ಲ. ಇದರಿಂದ ಆ ಕಂಪನಿಗಳು ಕಾರ್ಖಾನೆಗಳನ್ನು ಕಪ್ಪು ಪಟ್ಟಿಗೆ ಸೇರಿಸುತ್ತಿವೆ. ಇದರಿಂದ ಹಲವು ಕಾರ್ಖಾನೆಗಳ ಮಾಲೀಕರು ಬ್ಯಾಂಕ್ ಸಾಲ, ಬಡ್ಡಿ ಮರುಪಾವತಿ, ಕಾರ್ಮಿಕರಿಗೆ ವೇತನ ನೀಡಲಾಗದೆ ಸಂಕಷ್ಟಕ್ಕೆ ಸಿಲುಕಿ ಹಾಕಿಕೊಂಡಿದ್ದಾರೆ. ಕೇಂದ್ರ ಸರಕಾರ ಕೂಡಲೇ ಆಮದು ಸುಂಕವನ್ನು ತಗ್ಗಿಸಬೇಕು. ''.
ಬಿ.ಮುರಳಿಕೃಷ್ಣ, ಅಧ್ಯಕ್ಷ, ಪೀಣ್ಯ ಕೈಗಾರಿಕಾ ಸಂಘ
ಕಚ್ಚಾ ವಸ್ತುಗಳ ದರ ವಿವರ (ಕೆ.ಜಿ ಗೆ)
ಕಚ್ಚಾ ವಸ್ತುಗಳು- 2020ರ ಏಪ್ರಿಲ್‌ನಲ್ಲಿದ್ದ ದರ -ಅ. 2021ರ ದರ -ದರ ವ್ಯತ್ಯಾಸ -ವ್ಯತ್ಯಾಸದ ಪ್ರಮಾಣ (ಶೇಕಡವಾರು)
ಮೈಲ್ಡ್ ಸ್ಟೀಲ್ ಪ್ಲೇಟ್ -45 -82- 37- 82.22
ಅಲ್ಯೂಮಿನಿಯಂ ಅಲಾಯ್- 106 -270- 164- 154.72
ತಾಮ್ರ -355 -779- 424- 119.44
ಇಎನ್ 8ಡಿ ರಾಡ್- 42- 74 -32- 76.19
ಸಿಆರ್‌ಸಿಎ ಶೀಟ್ -49.50 -97- 47.50 -95.96
ಪಿಗ್ ಐರನ್ -32- 44- 12- 37.50
ಎಂಎಸ್ ಸ್ಕ್ರಾಪ್- 22 -40- 18 -81.82
ಎಸ್‌ಎಸ್ 304 ಗ್ರೇಡ್- 220 -300- 80- 36.36
ಕ್ರಾಫ್ಟ್ ಪೇಪರ್ (ಪ್ಯಾಕಿಂಗ್ ಗ್ರೇಡ್) -20- 42 -22- 110
ಎಂಜಿನಿಯರಿಂಗ್ ಪ್ಲಾಸ್ಟಿಕ್ 70 140 70 100