ಎಲ್‌ಐಸಿ ಐಪಿಒದಲ್ಲಿ ವಿದೇಶಿ ಹೂಡಿಕೆಗೂ ಅವಕಾಶ, ಎಫ್‌ಡಿಐ ನೀತಿಯಲ್ಲಿ ಬದಲಾವಣೆ ಸಾಧ್ಯತೆ

ಭಾರತೀಯ ಜೀವ ವಿಮಾ ನಿಗಮದ ಆರಂಭಿಕ ಷೇರು ಬಿಡುಗಡೆ ಹಾದಿಯನ್ನು ಸುಗಮಗೊಳಿಸುವ ಸಲುವಾಗಿ ವಿದೇಶಿ ನೇರ ಹೂಡಿಕೆಯ ನೀತಿಗಳಲ್ಲಿ ಬದಲಾವಣೆ ತರಲು, ಡಿಪಿಐಐಟಿ ಶೀಘ್ರದಲ್ಲಿಯೇ ಕೇಂದ್ರ ಸಚಿವ ಸಂಪುಟದ ಅನುಮೋದನೆಯನ್ನು ನಿರೀಕ್ಷಿಸಿದೆ.

ಎಲ್‌ಐಸಿ ಐಪಿಒದಲ್ಲಿ ವಿದೇಶಿ ಹೂಡಿಕೆಗೂ ಅವಕಾಶ, ಎಫ್‌ಡಿಐ ನೀತಿಯಲ್ಲಿ ಬದಲಾವಣೆ ಸಾಧ್ಯತೆ
Linkup
ಹೊಸದಿಲ್ಲಿ: ಭಾರತೀಯ ಜೀವ ವಿಮಾ ನಿಗಮದ () ಆರಂಭಿಕ ಷೇರು ಬಿಡುಗಡೆಯ () ಹಾದಿಯನ್ನು ಸುಗಮಗೊಳಿಸುವ ಸಲುವಾಗಿ ವಿದೇಶಿ ನೇರ ಹೂಡಿಕೆಯ ನೀತಿಗಳಲ್ಲಿ ಬದಲಾವಣೆ ತರಲು, ಕೈಗಾರಿಕಾ ಮತ್ತು ಆಂತರಿಕ ವ್ಯಾಪಾರ ಅಭಿವೃದ್ಧಿ ಇಲಾಖೆಯು (ಡಿಪಿಐಐಟಿ) ಶೀಘ್ರದಲ್ಲಿಯೇ ಕೇಂದ್ರ ಸಚಿವ ಸಂಪುಟದ ಅನುಮೋದನೆಯನ್ನು ನಿರೀಕ್ಷಿಸಿದೆ. ಹಣಕಾಸು ಇಲಾಖೆ, ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆ ಈ ಬಗ್ಗೆ ಚರ್ಚಿಸಿವೆ. ಕೈಗಾರಿಕಾ ಮತ್ತು ಆಂತರಿಕ ವ್ಯಾಪಾರ ಅಭಿವೃದ್ಧಿ ಇಲಾಖೆಯು ಈ ಸಂಬಂಧ ಸಂಪುಟ ಟಿಪ್ಪಣಿಯನ್ನು ರಚಿಸುತ್ತಿದೆ ಎಂದು ಕೈಗಾರಿಕಾ ಕಾರ್ಯದರ್ಶಿ ಅನುರಾಗ್‌ ಜೈನ್‌ ಅವರು ತಿಳಿಸಿದ್ದಾರೆ. ಕೇಂದ್ರ ಸಚಿವ ಸಂಪುಟವು ಕಳೆದ ವರ್ಷ ಜುಲೈನಲ್ಲಿ ಎಲ್‌ಐಸಿಯ ಆರಂಭಿಕ ಷೇರು ಬಿಡುಗಡೆಗೆ ಅನುಮತಿಯನ್ನು ನೀಡಿತ್ತು. ಇದು ಭಾರತೀಯ ಷೇರು ಮಾರುಕಟ್ಟೆಯಲ್ಲಿಯೇ ಇದುವರೆಗಿನ ಅತಿ ದೊಡ್ಡ ಐಪಿಒ ಎನ್ನಿಸಲಿದೆ. ಸುಮಾರು 1 ಲಕ್ಷ ಕೋಟಿ ರೂ.ಗಳ ಬೃಹತ್‌ ಗಾತ್ರದ ಐಪಿಒ ಅನ್ನು ಅಂದಾಜಿಸಲಾಗಿದೆ. ಎಫ್‌ಡಿಐ ನೀತಿ ಬದಲು ಏಕೆ? ಪ್ರಸ್ತುತ ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ನೀತಿಯ ಪ್ರಕಾರ ವಿಮೆ ವಲಯದಲ್ಲಿ ಆಟೋ ಮ್ಯಾಟಿಕ್‌ ಮಾರ್ಗದಲ್ಲಿ ಶೇ. 74ರಷ್ಟು ವಿದೇಶಿ ಹೂಡಿಕೆಗೆ ಅವಕಾಶ ಇದೆ. ಆದರೆ ಇದು ಎಲ್‌ಐಸಿಗೆ ಅನ್ವಯವಾಗುವುದಿಲ್ಲ. ಏಕೆಂದರೆ ದೇಶದಲ್ಲಿ ಎಲ್‌ಐಸಿಗೆ ಪ್ರತ್ಯೇಕ ಎಲ್‌ಐಸಿ ಕಾಯಿದೆ ಇದೆ. ಎಲ್‌ಐಸಿ ಕಾಯಿದೆಯು ವಿದೇಶಿ ಬಂಡವಾಳ ಹೂಡಿಕೆಯನ್ನು ಪ್ರಸ್ತಾಪಿಸಿಲ್ಲ. ಹಾಗೂ ಕೇಂದ್ರ ಸರಕಾರ ಹೊರತುಪಡಿಸಿ ಬೇರೆ ಯಾವುದೇ ಹೂಡಿಕೆದಾರರ ಗರಿಷ್ಠ ಷೇರು ಪಾಲು ಮಿತಿಯು ಶೇ. 5 ಮಾತ್ರ ಆಗಿದೆ. ಇದಕ್ಕೂ ಮಿಗಿಲಾಗಿ ಸೆಬಿಯು ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಮತ್ತು ಎಫ್‌ಡಿಐಗೆ ಐಪಿಒದಲ್ಲಿ ಅವಕಾಶ ನೀಡುತ್ತದೆ.