ಆರ್ಯನ್‌ ಡ್ರಗ್ಸ್‌ ಕೇಸ್‌: ಸಿಬಿಐ ತನಿಖೆಗೆ ಕೋರಿ ಸುಪ್ರೀಂ ಕೋರ್ಟ್‌ಗೆ ಪಿಐಎಲ್‌

ಬಾಲಿವುಡ್‌ ನಟ ಶಾರುಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ ಅವರನ್ನು ಆವರಿಸಿರುವ ಮಾದಕ ದ್ರವ್ಯ ಸೇವನೆ ಹಗರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು ಕೋರಿ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

ಆರ್ಯನ್‌ ಡ್ರಗ್ಸ್‌ ಕೇಸ್‌: ಸಿಬಿಐ ತನಿಖೆಗೆ ಕೋರಿ ಸುಪ್ರೀಂ ಕೋರ್ಟ್‌ಗೆ ಪಿಐಎಲ್‌
Linkup
ಹೊಸದಿಲ್ಲಿ: ಬಾಲಿವುಡ್‌ ನಟ ಶಾರುಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ ಅವರನ್ನು ಆವರಿಸಿರುವ ಮಾದಕ ದ್ರವ್ಯ ಸೇವನೆ ಹಗರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು ಕೋರಿ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಸಲ್ಲಿಸಲಾಗಿದೆ. ಅಕ್ಟೋಬರ್‌ 3ರಂದು ಐಷಾರಾಮಿ ಹಡಗಿನಲ್ಲಿ ರೇವ್‌ ಪಾರ್ಟಿ ನಡೆಸುತ್ತಿದ್ದ ವೇಳೆ ಆರ್ಯನ್‌ ಖಾನ್‌, ರಾಷ್ಟ್ರೀಯ ಮಾದಕ ದ್ರವ್ಯ ನಿಯಂತ್ರಣ ದಳ (ಎನ್‌ಸಿಬಿ)ಗೆ ಸಿಕ್ಕಿ ಬಿದ್ದಿದ್ದರು. ಆತನ ಗೆಳೆಯ- ಗೆಳತಿಯರು ಸೇರಿ ಹತ್ತಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿತ್ತು. ವಾರ ಕಾಲದ ಕಸ್ಟಡಿ ವಿಚಾರಣೆ ಬಳಿಕ ಆರ್ಥರ್‌ ರೋಡ್‌ ಜೈಲ್‌ ಸೇರಿದ್ದ ಆರ್ಯನ್‌ಗೆ 25 ದಿನಗಳ ಬಳಿಕ ಹೈಕೋರ್ಟ್‌ ಜಾಮೀನು ನೀಡಿತ್ತು. ಈ ಪ್ರಕರಣ ರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿತ್ತು. ಎನ್‌ಸಿಬಿ ಅಧಿಕಾರಿಗಳ ವಿರುದ್ಧವೇ ವಸೂಲಿ ಆರೋಪ ಕೇಳಿ ಬಂದಿತ್ತು. ''ಪ್ರಕರಣದಲ್ಲಿ ಪ್ರಭಾವಿಗಳ ಮಕ್ಕಳು ಪಾಲ್ಗೊಂಡಿದ್ದರಿಂದ ತನಿಖೆ ಸರಿಯಾದ ರೀತಿಯಲ್ಲಿ ನಡೆಯುತ್ತಿಲ್ಲ. ಪ್ರಭಾವಿಗಳ ಹಸ್ತಕ್ಷೇಪ ಹೆಚ್ಚಿದೆ. ಆದ್ದರಿಂದ ಸಿಬಿಐ ತನಿಖೆಗೆ ಒಪ್ಪಿಸುವುದು ಸೂಕ್ತ,'' ಎಂದು ಅರ್ಜಿದಾರರಾಗಿರುವ ವಕೀಲ ಎಂ.ಎಲ್‌.ಶರ್ಮಾ ಕೋರ್ಟ್‌ಗೆ ಮನವಿ ಮಾಡಿದ್ದಾರೆ. ''ಇಂತಹ ಪ್ರಕರಣಗಳಲ್ಲಿ ಸಾಕ್ಷಿಗಳ ಮೇಲೆ ತೀವ್ರ ಒತ್ತಡ ಸೃಷ್ಟಿಯಾಗುತ್ತದೆ. ಅವರಿಗೆ ಸರಿಯಾದ ರಕ್ಷಣೆ ಒದಗಿಸುವ ಅಗತ್ಯ ಇದೆ. ವಿವಿಧ ವರದಿಗಳು ಕೂಡ ಇದನ್ನೇ ಶಿಫಾರಸು ಮಾಡಿವೆ. ಈ ದಿಸೆಯಲ್ಲಿ ಕೇಂದ್ರ ಗೃಹ ಸಚಿವಾಲಯ 'ಸಾಕ್ಷಿ ರಕ್ಷಣಾ ಯೋಜನೆ' ರೂಪಿಸುವ ತುರ್ತಿದೆ,'' ಎಂದು ಪಿಐಎಲ್‌ ಪ್ರತಿಪಾದಿಸಿದೆ. ''ಪ್ರಕರಣ ತನಿಖೆ ನಡೆಸುತ್ತಿರುವ ಎನ್‌ಸಿಬಿ ವಲಯ ನಿರ್ದೇಶಕ ಸಮೀರ್‌ ವಾಂಖೆಡೆ ವಿರುದ್ಧ ಮಹಾರಾಷ್ಟ್ರ ಸಚಿವ ನವಾಬ್‌ ಮಲಿಕ್‌ ಹಲವು ಗಂಭೀರ ಆರೋಪ ಮಾಡಿದ್ದಾರೆ. ಭ್ರಷ್ಟಾಚಾರ ಆರೋಪವೂ ಅವರ ಪ್ರಾಮಾಣಿಕತೆ ಬಗ್ಗೆ ಸಂಶಯಿಸುವಂತೆ ಮಾಡಿದೆ. ನಡೆಸಿದರೆ ಮಾತ್ರ ಪ್ರಕರಣಕ್ಕೆ ನ್ಯಾಯ ಒದಗಿಸಲು ಸಾಧ್ಯ,'' ಎಂದು ಶರ್ಮಾ ಮನವಿ ಮಾಡಿದ್ದಾರೆ. ವಾಂಖೆಡೆ ವಿರುದ್ಧದ ಆರೋಪ: ಪುನರುಚ್ಚರಿಸಿದ ನವಾಬ್‌ ಮಲಿಕ್‌ ಮುಂಬಯಿ: ''ಎನ್‌ಸಿಬಿ ತನಿಖಾಧಿಕಾರಿ ಸಮೀರ್‌ ವಾಂಖೆಡೆ ಮೂಲತಃ ಮುಸ್ಲಿಂ ಆಗಿದ್ದು, ಸರಕಾರಿ ಉದ್ಯೋಗ ಗಿಟ್ಟಿಸುವುದಕ್ಕಾಗಿಯೇ ತಾನು ಹಿಂದೂ ಎಂದು ಹೇಳಿಕೊಂಡು ಫೋರ್ಜರಿ ಮೂಲಕ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದು ವಂಚನೆ ಎಸಗಿದ್ದಾರೆ. ಈ ಹೇಳಿಕೆಗೆ ನಾನು ಈಗಲೂ ಬದ್ಧನಾಗಿದ್ದೇನೆ,'' ಎಂದು ಮಹಾರಾಷ್ಟ್ರದ ಸಚಿವ, ಎನ್‌ಸಿಪಿ ಮುಖಂಡ ನವಾಬ್‌ ಮಲಿಕ್‌ ಭಾನುವಾರ ಪುನರುಚ್ಚರಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಮಲಿಕ್‌, ''ನಾನು ಜಾತಿ ಅಥವಾ ಧರ್ಮದ ವಿರುದ್ಧ ಹೋರಾಟ ನಡೆಸಿಲ್ಲ. ಉನ್ನತ ಅಧಿಕಾರಿಯೊಬ್ಬರು ಬೋಗಸ್‌ ಜಾತಿ ಪ್ರಮಾಣ ಪತ್ರ ತೋರಿಸಿ ಸರಕಾರಿ ಕೆಲಸ ಗಿಟ್ಟಿಸಿದ್ದನ್ನು ಮಾತ್ರ ಪ್ರಶ್ನೆ ಮಾಡುತ್ತಿದ್ದೇನೆ. ಇದು ಗಂಭೀರ ಪ್ರಕರಣ,'' ಎಂದರು. ''ಸಮೀರ್‌ ವಾಂಖೆಡೆ 2015ರಿಂದಲೇ ಪೋರ್ಜರಿ ಶುರು ಮಾಡಿದರು. ತಮ್ಮ ಧರ್ಮ, ಜಾತಿ ಬದಲಾಯಿಸುವ ಕೆಲಸವನ್ನು ಆ ವರ್ಷದಿಂದಲೇ ಆರಂಭಿಸಿದ್ದರು. ಕೆಲಸಕ್ಕೆ ಸೇರಿದ ಮೇಲೆ ಅವರು ಬಾಲಿವುಡ್‌ ನಟ-ನಟಿಯರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಮೂಲಕ ಪ್ರಚಾರಕ್ಕೆ ಬಂದರು. ಅದು ಅವರಿಗೆ ಖಯಾಲಿಯಾಯಿತು. ಬಾಲಿವುಡ್‌ನ ಗಣ್ಯರ ಮನೆಗಳಲ್ಲಿ ಡ್ರಗ್ಸ್‌ ಅಡಗಿಸಿ ಇಡಲು ಅವರು ತಮ್ಮದೇ ಆದ ಸೇನೆಯೊಂದನ್ನು ಹೊಂದಿದ್ದಾರೆ,'' ಎಂದೂ ಮಲಿಕ್‌ ಆರೋಪಿಸಿದರು. ಐಷಾರಾಮಿ ಹಡಗಿನ ಮೇಲೆ ವಾಂಖೆಡೆ ದಾಳಿ ನಡೆಸಿದ ತರುವಾಯ ಮಲಿಕ್‌ ಅವರ ವಿರುದ್ಧ ಒಂದೊಂದೇ ಆರೋಪಗಳನ್ನು ತೂರಿಬಿಟ್ಟು ವಾಗ್ದಾಳಿ ನಡೆಸುತ್ತ ಬಂದಿದ್ದಾರೆ. ''ರೇವ್‌ ಪಾರ್ಟಿ ಮೇಲಿನ ದಾಳಿಯೇ ಬೋಗಸ್‌. ತಮಗೆ ಬೇಕಾದವರನ್ನು ಬಿಟ್ಟು, ಬಾಲಿವುಡ್‌ ನಟರನ್ನು ಟಾರ್ಗೆಟ್‌ ಮಾಡಿಕೊಂಡು ಹತ್ತಿಕ್ಕಲಾಗುತ್ತಿದೆ,'' ಎಂದಿದ್ದರು.