ಅಂಬಾನಿ ಮನೆ ಬಳಿ ಸ್ಫೋಟಕ ಪತ್ತೆ ಪ್ರಕರಣ ಇನ್ನಷ್ಟು ತಿರುವು: ವಾಜೆ ಸಹೋದ್ಯೋಗಿ ರಿಯಾಜ್‌ ಅರೆಸ್ಟ್!

ಉದ್ಯಮಿ ಮುಕೇಶ್‌ ಅಂಬಾನಿ ಮನೆ ಬಳಿ ಸ್ಫೋಟಕಗಳಿದ್ದ ವಾಹನ ಪತ್ತೆಯಾದ ಪ್ರಕರಣ ಮತ್ತಷ್ಟು ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಪೊಲೀಸ್‌ ಅಧಿಕಾರಿ ರಿಯಾಜ್‌ ಕಾಜಿ ಅವರನ್ನು ರಾಷ್ಟ್ರೀಯ ತನಿಖಾ ದಳ ಭಾನುವಾರ ಬಂಧಿಸಿದೆ.

ಅಂಬಾನಿ ಮನೆ ಬಳಿ ಸ್ಫೋಟಕ ಪತ್ತೆ ಪ್ರಕರಣ ಇನ್ನಷ್ಟು ತಿರುವು: ವಾಜೆ ಸಹೋದ್ಯೋಗಿ ರಿಯಾಜ್‌ ಅರೆಸ್ಟ್!
Linkup
ಮುಂಬಯಿ: ಉದ್ಯಮಿ ಮುಕೇಶ್‌ ಅಂಬಾನಿ ಮನೆ ಬಳಿ ಸ್ಫೋಟಕಗಳಿದ್ದ ವಾಹನ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಪೊಲೀಸ್‌ ಅಧಿಕಾರಿ ರಿಯಾಜ್‌ ಕಾಜಿ ಅವರನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಭಾನುವಾರ ಬಂಧಿಸಿದೆ. ನ್ಯಾಯಾಲಯವು ಕಾಜಿ ಅವರನ್ನು ಏ.16ರವರೆಗೆ ಎನ್‌ಐಎ ವಶಕ್ಕೆ ಒಪ್ಪಿಸಿದೆ. ಸದ್ಯ ಬಂಧನದಲ್ಲಿರುವ ಪೊಲೀಸ್‌ ಅಧಿಕಾರಿ ಅವರಿಗೆ ಕಾಜಿ ಆಪ್ತರಾಗಿದ್ದು, ಇಬ್ಬರೂ ಒಟ್ಟಿಗೇ ಕಾರ್ಯನಿರ್ವಹಿಸಿದ್ದರು. ಈ ಪ್ರಕರಣದ ಬಗ್ಗೆ ವಿಚಾರಣೆಗಾಗಿ ಭಾನುವಾರ ಕಾಜಿ ಅವರನ್ನು ಎನ್‌ಐಎ ಅಧಿಕಾರಿಗಳು ಕರೆಸಿದ್ದರು. ವಿಸ್ತೃತ ವಿಚಾರಣೆ ಬಳಿಕ ಅವರನ್ನು ಬಂಧಿಸಲಾಗಿದೆ. ಈ ಹಿಂದೆಯೂ ಕಾಜಿ ಅವರನ್ನು ಎನ್‌ಐಎ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು. ಕಳೆದ ತಿಂಗಳು ಮುಂಬಯಿ ಅಪರಾಧ ವಿಭಾಗದಿಂದ ಕಾಜಿ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಮುಕೇಶ್‌ ಅಂಬಾನಿ ಅವರ ಮನೆ ಬಳಿ ಪತ್ತೆಯಾದ ಸ್ಫೋಟಕಗಳಿದ್ದ ವಾಹನಕ್ಕೆ ನಕಲಿ ನಂಬರ್‌ ಪ್ಲೇಟ್‌ ಪಡೆಯಲು ಸಚಿನ್‌ ವಾಜೆ ಅವರಿಗೆ ಕಾಜಿ ನೆರವಾಗಿದ್ದಾರೆ ಎನ್ನುವುದು ಎನ್‌ಐಎ ಅನುಮಾನ. ವಿಖ್ರೊಲಿ ಪ್ರದೇಶದಲ್ಲಿನಂಬರ್‌ ಪ್ಲೇಟ್‌ಗಳ ಅಳವಡಿಕೆ ಅಂಗಡಿಗೆ ತೆರಳಿ ಮಾಲೀಕನ ಜತೆ ಕಾಜಿ ಮಾತುಕತೆ ನಡೆಸಿದ ಸಿಸಿಟಿವಿ ದೃಶ್ಯಾವಳಿಗಳು ಪೊಲೀಸರ ಮೂಲಕ ಎನ್‌ಐಎ ಕೈಸೇರಿದೆ ಎಂದು ಮೂಲಗಳು ತಿಳಿಸಿವೆ. ಜತೆಗೆ ಠಾಣೆ ನಗರದಲ್ಲಿವಾಜೆ ವಾಸವಿದ್ದ ಹೌಸಿಂಗ್‌ ಕಾಂಪ್ಲೆಕ್ಸ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ಕೂಡ ಕಾಜಿಯೇ ಸಂಗ್ರಹಿಸಿದ್ದಾರೆ ಎನ್ನುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಮಾ. 13ರಂದು ವಾಜೆ ಅವರನ್ನು ಎನ್‌ಐಎ ಬಂಧಿಸಿದೆ. ದೇಶಮುಖ್‌ ಖಾಸಗಿ ಸಿಬ್ಬಂದಿ ವಿಚಾರಣೆ: ಹಫ್ತಾ ವಸೂಲಿ ಆರೋಪದಲ್ಲಿರಾಜೀನಾಮೆ ಸಲ್ಲಿಸಿರುವ ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್‌ ದೇಶಮುಖ್‌ ಅವರ ಖಾಸಗಿ ಸಿಬ್ಬಂದಿಯನ್ನು ಸಿಬಿಐ ಅಧಿಕಾರಿಗಳು ಭಾನುವಾರ ವಿಚಾರಣೆಗೆ ಒಳಪಡಿಸಿದ್ದಾರೆ. ದೇಶಮುಖ್‌ ಅವರ ಆಪ್ತ ಸಹಾಯಕ ಕುಂದನ್‌ ಶಿಂಧೆ, ಖಾಸಗಿ ಕಾರ್ಯದರ್ಶಿ ಸಂಜೀವ್‌ ಪಳಂದೆ ಅವರನ್ನು ಸಿಬಿಐ ವಶಕ್ಕೆ ಪಡೆದು ಸಂತಾಕ್ರೂಜ್‌ನಲ್ಲಿರುವ ಡಿಆರ್‌ಡಿಒ ಅತಿಥಿ ಗೃಹದಲ್ಲಿವಿಚಾರಣೆ ನಡೆಸಿದೆ. ಸಚಿನ್‌ ವಾಜೆ ಮತ್ತಿತರ ಅಧಿಕಾರಿಗಳ ಜಾಲದ ನೆರವಿನಿಂದ ದೇಶ್‌ಮುಖ್‌ ಹಫ್ತಾ ವಸೂಲಿ ನಡೆಸುತ್ತಿದ್ದು, ತಿಂಗಳಿಗೆ 100 ಕೋಟಿ ರೂ. ಸಂಗ್ರಹದ ಗುರಿ ನಿಗದಿಪಡಿಸಿದ್ದಾರೆ ಎಂದು ಮುಂಬಯಿ ಮಾಜಿ ಪೊಲೀಸ್‌ ಆಯಕ್ತ ಪರಮ್‌ ಬೀರ್‌ ಸಿಂಗ್‌ ಆರೋಪಿಸಿದ್ದರು. ಈ ಆರೋಪದ ಪ್ರಾಥಮಿಕ ತನಿಖೆಗೆ ಮುಂಬಯಿ ಹೈಕೋರ್ಟ್‌ ಆದೇಶಿಸಿದ ಬಳಿಕ ಅನಿಲ್‌ ದೇಶ್‌ಮುಖ್‌ ರಾಜೀನಾಮೆ ನೀಡಿದ್ದರು. ಅಂಬಾನಿ ನಿವಾಸದ ಬಳಿ ಸ್ಫೋಟಕ ತುಂಬಿದ ವಾಹನ ಪತ್ತೆ ಪ್ರಕರಣದ ತನಿಖೆಯ ನಿರ್ಲಕ್ಷ್ಯ ಆರೋಪ ಹೊರಿಸಿ ಸಿಂಗ್‌ ಅವರನ್ನು ವರ್ಗ ಮಾಡಲಾಗಿತ್ತು. ಆ ಬಳಿಕ ಅವರು ದೇಶ್‌ಮುಖ್‌ ವಿರುದ್ಧ ಆಪಾದನೆ ಮಾಡಿದ್ದರು. ಹೈಕೋರ್ಟ್‌ ಆದೇಶ ಎತ್ತಿ ಹಿಡಿದಿರುವ ಸುಪ್ರೀಂ ಕೋರ್ಟ್‌, ಅನಿಲ್‌ ದೇಶ್‌ಮುಖ್‌ ಮತ್ತು ಪರಮ್‌ ಬೀರ್‌ ಸಿಂಗ್‌ ಇಬ್ಬರ ವಿರುದ್ಧವೂ ಪ್ರಾಥಮಿಕ ತನಿಖೆ ನಡೆಸುವಂತೆ ಸಿಬಿಐಗೆ ಆದೇಶಿಸಿದೆ.