ಅದಾನಿ ಸಾಮ್ರಾಜ್ಯದಲ್ಲಿ ಕಂಪನ, ಮೂರೇ ದಿನದಲ್ಲಿ 66,000 ಕೋಟಿ ರೂ. ಕಳೆದುಕೊಂಡ ಗೌತಮ್‌ ಅದಾನಿ!

ಮಾಧ್ಯಮ ವರದಿಗಳ ಬಳಿಕ ಅದಾನಿ ಗ್ರೂಪ್‌ ಆಸ್ತಿ ಒಂದೇ ಸಮನೆ ನೀರಿನಂತೆ ಕರಗುತ್ತಿದ್ದು, ಪರಿಣಾಮ ಕಳೆದ ಮೂರು ದಿನಗಳಲ್ಲಿ ಸ್ವತಃ ಗೌತಮ್‌ ಅದಾನಿ ಆಸ್ತಿಯಲ್ಲಿ 66,700 ಕೋಟಿ ರೂಪಾಯಿ ಕುಸಿತ ದಾಖಲಾಗಿದೆ.

ಅದಾನಿ ಸಾಮ್ರಾಜ್ಯದಲ್ಲಿ ಕಂಪನ, ಮೂರೇ ದಿನದಲ್ಲಿ 66,000 ಕೋಟಿ ರೂ. ಕಳೆದುಕೊಂಡ ಗೌತಮ್‌ ಅದಾನಿ!
Linkup
ಹೊಸದಿಲ್ಲಿ: ಜಾಗತಿಕ ಸಿರಿವಂತರ ಪಟ್ಟಿಯಲ್ಲಿ ನಾಗಾಲೋಟದಲ್ಲಿ ಮುನ್ನುಗ್ಗುತ್ತಿದ್ದ ಗೌತಮ್‌ ಅದಾನಿಯ ಅಶ್ವಮೇಧಕ್ಕೆ ಮೂಗುದಾರ ಬಿದ್ದಿದೆ. ಮಾಧ್ಯಮ ವರದಿಗಳ ಬಳಿಕ ಅವರ ಕಂಪನಿಯ ಆಸ್ತಿ ಒಂದೇ ಸಮನೆ ನೀರಿನಂತೆ ಕರಗುತ್ತಿದ್ದು, ಪರಿಣಾಮ ಕಳೆದ ಮೂರು ದಿನಗಳಲ್ಲಿ ಸ್ವತಃ ಅದಾನಿ ಆಸ್ತಿಯಲ್ಲಿ 9 ಬಿಲಿಯನ್‌ ಡಾಲರ್‌ (66,700 ಕೋಟಿ ರೂ.) ಕುಸಿತ ಕಂಡಿದೆ. ಈ ವಾರದಲ್ಲಿ ವಿಶ್ವದಲ್ಲಿಯೇ ಅತೀ ಹೆಚ್ಚು ನಷ್ಟ ಅನುಭವಿಸಿದ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ಸದ್ಯ ಅವರ ಆಸ್ತಿ ಬುಧವಾರದ ಅಂತ್ಯಕ್ಕೆ 67.6 ಬಿಲಿಯನ್‌ ಡಾಲರ್‌ಗೆ ಇಳಿಕೆಯಾಗಿದೆ. ಗುರುವಾರವೂ ಅವರ ಕಂಪನಿಗಳ ಷೇರುಗಳು ಮತ್ತಷ್ಟು ಕುಸಿದಿದ್ದು, ಇದರಿಂದ ಅವರ ಆಸ್ತಿ ಇನ್ನೂ ಕುಸಿತ ಕಂಡಿದೆ. ಕೆಲವೇ ದಿನಗಳ ಹಿಂದೆ ಅದಾನಿ ಆಸ್ತಿ ಭಾರಿ ವೇಗದಲ್ಲಿ ಬೆಳೆಯುತ್ತಿತ್ತು ಮತ್ತು ಇನ್ನೇನು ಏಷ್ಯಾದ ಅತೀ ಶ್ರೀಮಂತ ಮುಕೇಶ್‌ ಅಂಬಾನಿಯನ್ನೇ ಹಿಂದಿಕ್ಕುವ ಹಾದಿಯಲ್ಲಿದ್ದರು. ಆದರೆ ಯಾವಾಗ ಎಕನಾಮಿಕ್‌ ಟೈಮ್ಸ್‌, ಅದಾನಿ ಕಂಪನಿಯಲ್ಲಿ ಹಣ ಹೂಡಿದ್ದ ಮೂರು ಹೂಡಿಕೆ ನಿಧಿಗಳನ್ನು ಸ್ಥಗಿತಗೊಳಿಸಿದ ಎಂಬ ವರದಿ ಹೊರಬಿತ್ತೋ ಅಲ್ಲಿಂದ ಈ ಕುಸಿತ ಆರಂಭವಾಯಿತು. ಸೋಮವಾರವೇ ಈ ವರದಿಗಳು ಶುದ್ಧ ಸುಳ್ಳು ಎಂದು ಸ್ಪಷ್ಟನೆ ನೀಡಿದರೂ, ಕಂಪನಿಯ ಷೇರುಗಳ ಕುಸಿತ ಮಾತ್ರ ಮುಂದುವರಿದಿದೆ. ಈ ವಾರದಲ್ಲಿ ಅದಾನಿ ಗ್ರೀನ್‌ ಎನರ್ಜಿ ಷೇರುಗಳು ಶೇ. 7.7ರಷ್ಟು ಕುಸಿತ ಕಂಡಿವೆ. ಅದಾನಿ ಪೋರ್ಟ್‌ & ಸ್ಪೆಷಲ್‌ ಎಕನಾಮಿಕ್‌ ಝೋನ್‌ ಲಿ. ಬರೋಬ್ಬರಿ ಶೇ. 23 ರಷ್ಟು, ಅದಾನಿ ಪವರ್‌, ಅದಾನಿ ಟೋಟಲ್‌ ಗ್ಯಾಸ್‌ ಲಿ., ಅದಾನಿ ಟ್ರಾನ್ಸ್‌ಮಿಷನ್‌ ಲಿ. ಷೇರುಗಳು ಶೇ. 18ರಷ್ಟು ಇಳಿಕೆ ಕಂಡಿದ್ದರೆ, ಅದಾನಿ ಮೂಲ ಕಂಪನಿ ಅದಾನಿ ಎಂಟರ್‌ಪ್ರೈಸಸ್‌ ಷೇರು ಮೌಲ್ಯ ಶೇ. 15ರಷ್ಟು ಇಳಿಕೆಯಾಗಿದೆ. ಕಳೆದ ಕೆಲವು ವರ್ಷಗಳಿಂದ ಅದಾನಿ ಗ್ರೂಪ್‌ನ ಕಂಪನಿಗಳ ಷೇರುಗಳು ಭಾರಿ ಏರಿಕೆ ಕಾಣುತ್ತಿದ್ದವು. ಅದರಲ್ಲೂ 2020ರಿಂದ ಈ ವೇಗ ರಾಕೆಟ್‌ ವೇಗ ಪಡೆದುಕೊಂಡಿತ್ತು. ಅದೀಗ ಅಷ್ಟೇ ವೇಗದಲ್ಲಿ ಕೆಳಕ್ಕಿಳಿದಿದೆ.