ಸಹಕಾರ ಕ್ಷೇತ್ರಕ್ಕೀಗ ಹೊಸ ಸಚಿವಾಲಯ, 2024ರ ಲೋಕಸಭೆ ಚುನಾವಣೆಯ 'ಗೇಮ್‌ ಚೇಂಜರ್‌'?

ಹೊಸ ಸಹಕಾರ ಸಚಿವಾಲಯ ಸ್ಥಾಪಿಸುವ ಮೂಲಕ ಕೇಂದ್ರ ಸರಕಾರ ಗಮನಸೆಳೆದಿದ್ದು, ಸ್ವತಃ ಗೃಹ ಸಚಿವ ಅಮಿತ್‌ ಶಾ ಅವರೇ ಮೊದಲ ಕೇಂದ್ರ ಸಹಕಾರ ಸಚಿವರೂ ಆಗಿದ್ದು, 2024ರ ಲೋಕಸಭೆ ಚುನಾವಣೆಗೂ ಇದಕ್ಕೂ ಸಂಬಂಧ ಇದೆಯೇ ಎಂಬ ಚರ್ಚೆಗೆ ಶುರುವಾಗಿದೆ.

ಸಹಕಾರ ಕ್ಷೇತ್ರಕ್ಕೀಗ ಹೊಸ ಸಚಿವಾಲಯ, 2024ರ ಲೋಕಸಭೆ ಚುನಾವಣೆಯ 'ಗೇಮ್‌ ಚೇಂಜರ್‌'?
Linkup
ಹೊಸದಿಲ್ಲಿ: ಸಹಕಾರ ವಲಯದ ಆಗುಹೋಗುಗಳಿಗೆ ಸ್ಪಂದಿಸಲು ಹೊಸ ಸಚಿವಾಲಯವನ್ನೇ ಸ್ಥಾಪಿಸುವ ಮೂಲಕ ಕೇಂದ್ರ ಸರಕಾರ ಗಮನಸೆಳೆದಿದೆ. ಸ್ವತಃ ಗೃಹ ಸಚಿವ ಅವರೇ ಮೊದಲ ಕೇಂದ್ರ ಸಹಕಾರ ಸಚಿವರೂ ಆಗಿರುವುದು ಕುತೂಹಲಕರ. ಮುಖ್ಯವಾಗಿ 2024ರ ಲೋಕಸಭೆ ಚುನಾವಣೆಗೂ ಇದಕ್ಕೂ ಸಂಬಂಧ ಇದೆಯೇ ಎಂಬ ಚರ್ಚೆಗೆ ಇದು ಕಾರಣವಾಗಿದೆ. ಹೊಸ ಸಚಿವಾಲಯದ ಮೂಲಕ ಸಹಕಾರ ಕ್ಷೇತ್ರವನ್ನು ಬಲಪಡಿಸಿ, ಈಗಾಗಲೇ ಕಾವು ಕಳೆದುಕೊಂಡಿರುವ ಕೃಷಿ ಕಾಯಿದೆ ವಿರೋಧಿ ಪ್ರತಿಭಟನೆಯನ್ನು, ಸಾರ್ವತ್ರಿಕ ಚುನಾವಣೆಗೆ ಮುನ್ನ ಮತ್ತಷ್ಟು ತಣ್ಣಗಾಗಿಸಲು ಈ ನಡೆ ಸಹಕರಿಸುವ ನಿರೀಕ್ಷೆ ಇದೆ. ಹೀಗಾಗಿ ಕಠಿಣ ಗುರಿಗಳನ್ನು ನಿರ್ವಹಿಸುವ ಟಾಸ್ಕ್‌ ಮಾಸ್ಟರ್‌ ಅಮಿತ್‌ ಶಾ ಅವರಿಗೇ ಈ ಜವಾಬ್ದಾರಿ ವಹಿಸಲಾಗಿದೆ. ಸರಕಾರದ ನಿರ್ಧಾರ ನೇರವಾಗಿ 2024ರ ಸಾರ್ವತ್ರಿಕ ಚುನಾವಣೆಯನ್ನು ಗುರಿಯಾಗಿಟ್ಟುಕೊಂಡಿರದಿದ್ದರೂ, ಸಹಕಾರ ವಲಯಕ್ಕೆ ಕಾಯಕಲ್ಪ ನೀಡುವುದು ಮತ್ತು ಭಾರತದ ಗ್ರಾಮೀಣ ಪ್ರದೇಶಗಳಲ್ಲಿನ ರೈತರಿಗೆ ಅನುಕೂಲ ಕಲ್ಪಿಸುವುದರಿಂದ ರಾಜಕೀಯವಾಗಿಯೂ ಪ್ರಯೋಜನ ಇಲ್ಲದಿಲ್ಲ. 2022ರಲ್ಲಿ ಪಂಜಾಬ್‌ ಮತ್ತು ಉತ್ತರಾಖಂಡ್‌ನಲ್ಲಿ ಚುನಾವಣೆ ನಡೆಯಲಿದ್ದು, ಬಿಜೆಪಿ ವಿರುದ್ಧ ಪ್ರತಿಪಕ್ಷಗಳಿಗೆ ಕೃಷಿ ಕಾಯಿದೆ ವಿರುದ್ಧದ ಪ್ರತಿಭಟನೆಯೂ ಒಂದು ಅಸ್ತ್ರವಾಗಿರುವುದನ್ನು ಗಮನಿಸಬಹುದು. "ಹೊಸ ಸಚಿವಾಲಯದ ಸ್ಥಾಪನೆಯಿಂದ ಸಹಕಾರ ಆಂದೋಲನವು ನಿಜಕ್ಕೂ ಜನ ಸಮುದಾಯದ ಬೇರು ಮಟ್ಟದ ತನಕ ತಲುಪಲಿದೆ," ಎಂದು ಕೇಂದ್ರ ತಿಳಿಸಿದೆ. "ಸರಕಾರವು ಸಹಕಾರದಿಂದ ಸಮೃದ್ಧಿ ನೀತಿ ಅಡಿಯಲ್ಲಿ, ಸಹಕಾರ ಸಂಸ್ಥೆಗಳನ್ನೂ ಉತ್ತೇಜಿಸಲಿದ್ದು, ಎಲ್ಲ ಬಗೆಯ ಬೆಂಬಲಗಳನ್ನು ಒದಗಿಸಲಿದೆ. ಸಹಕಾರ ಸಂಸ್ಥೆಗಳಿಗೆ ಉದ್ಯಮ ಸ್ನೇಹಿ ವಾತಾವರಣ ಕಲ್ಪಿಸಲಾಗುವುದು. ಈ ನಿಟ್ಟಿನಲ್ಲಿ ಪ್ರತ್ಯೇಕ ಆಡಳಿತ ವ್ಯವಸ್ಥೆ ಮಾಡಲಾಗುವುದು," ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಈ ವರ್ಷ ಬಜೆಟ್‌ ಭಾಷಣದಲ್ಲಿ ತಿಳಿಸಿದ್ದರು. ''ಸಹಕಾರ ವಲಯವು ದೇಶದ ಆರ್ಥಿಕತೆಗೆ ನಿರ್ಣಾಯಕವಾಗಿದ್ದರೂ, ಇದುವರೆಗೂ ಪ್ರತ್ಯೇಕ ಸಚಿವಾಲಯು ಇಲ್ಲದಿದ್ದುದರಿಂದ ಅನೇಕ ವಿವಾದಗಳು ಇತ್ಯರ್ಥವಾಗದೆ ಉಳಿದಿವೆ. ಇದೀಗ ನೂತನ ಸಚಿವಾಲಯ, ಪ್ರತ್ಯೇಕ ಆಡಳಿತ ವ್ಯವಸ್ಥೆ ಮತ್ತು ನೀತಿಯ ಚೌಕಟ್ಟು ಸಿಗುವುದರಿಂದ ಸಹಕಾರ ವಲಯದಲ್ಲಿ ತೊಡಗಿಸಿಕೊಂಡವರಿಗೆ ನಾನಾ ಅನುಕೂಲಗಳು ದೊರೆಯಲಿವೆ. ಅವರ ಅಹವಾಲುಗಳ ಇತ್ಯರ್ಥ ಹಾಗೂ ಅಭಿವೃದ್ಧಿಗೆ ಹಾದಿ ಸುಗಮವಾಗಲಿದೆ'' ಎನ್ನುತ್ತಾರೆ ಶ್ರೀ ತ್ಯಾಗರಾಜ ಕೋ-ಆಪರೇಟಿವ್‌ ಬ್ಯಾಂಕ್‌ನ ಅಧ್ಯಕ್ಷ ಡಾ. ಎಂ.ಆರ್‌.ವೆಂಕಟೇಶ್‌.