ಶಾಲೆಯಿಲ್ಲ, ದೈಹಿಕ ಚಟುವಟಿಕೆಯಿಲ್ಲ.. ಮಕ್ಕಳಲ್ಲಿ ಹೆಚ್ಚುತ್ತಿದೆ ಮೂತ್ರಪಿಂಡ ಸಮಸ್ಯೆ..!

​​ಮಕ್ಕಳಲ್ಲಿ 4 ಹಂತಗಳಲ್ಲಿ ಮೂತ್ರಪಿಂಡ ಸಮಸ್ಯೆ ಕಾಡುತ್ತಿವೆ. ಆರಂಭಿಕ ಹಂತದ ಸಮಸ್ಯೆಗೆ ಔಷಧ ಚಿಕಿತ್ಸೆ ಸಾಕಾಗುತ್ತದೆ. ಅಂತಿಮ ಹಂತದ ಕಾಯಿಲೆಗಳಿಂದ ಕಿಡ್ನಿ ಕಾರ್ಯಕ್ಷಮತೆ ಕಡಿಮೆಯಾಗುತ್ತದೆ. ಈ ಹಂತಕ್ಕೆ ಡಯಾಲಿಸಿಸ್‌ ಆರಂಭಿಸಬೇಕಾಗುತ್ತದೆ.

ಶಾಲೆಯಿಲ್ಲ, ದೈಹಿಕ ಚಟುವಟಿಕೆಯಿಲ್ಲ.. ಮಕ್ಕಳಲ್ಲಿ ಹೆಚ್ಚುತ್ತಿದೆ ಮೂತ್ರಪಿಂಡ ಸಮಸ್ಯೆ..!
Linkup
ನಾಗರಾಜು ಅಶ್ವತ್ಥ್ : ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಕಾಯಿಲೆಗಳಿಗೆ ತುತ್ತಾಗುವ ಮಕ್ಕಳ ಪ್ರಮಾಣ ಏರಿಕೆಯಾಗುತ್ತಿದೆ. ಶಾಲಾ ದೈಹಿಕ ಚಟುವಟಿಕೆಗಳಿಂದ ದೂರವಿದ್ದು, ಸೂಕ್ತ ಪ್ರಮಾಣದ ನೀರು ಸೇವಿಸದ ಮಕ್ಕಳಲ್ಲಿ ಕಿಡ್ನಿಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಳವಾಗುತ್ತಿದ್ದು, ಪ್ರತಿ 100 ಮಕ್ಕಳಲ್ಲಿ 10 ರಿಂದ 15 ಮಂದಿಗೆ ಕಿಡ್ನಿಗೆ ಸಂಬಂಧಿಸಿದ ಸಮಸ್ಯೆಗಳು ಪತ್ತೆಯಾಗುತ್ತಿದೆಯೆಂದು ವೈದ್ಯಕೀಯ ಲೋಕ ಆತಂಕ ವ್ಯಕ್ತಪಡಿಸಿದೆ. ತಾಯಿಯ ಗರ್ಭಾವಸ್ಥೆಯಲ್ಲಿ ತಾಯಿಯ ಪೋಷಣೆ, ಸೇವಿಸುವ ಔಷಧಗಳಿಂದಾಗಿ ಮಗುವಿನ ಮೂತ್ರಪಿಂಡ ರಚನೆ, ಬೆಳವಣಿಗೆ ಸಮಸ್ಯೆಗಳಾಗಿರಬಹುದು. ಈ ರೀತಿ ಗರ್ಭಾವಸ್ಥೆಯಿಂದಲೇ ಸೃಷ್ಟಿಯಾದ ಸಮಸ್ಯೆಗಳೊಂದಿಗೆ, ಸಕಾಲಕ್ಕೆ ನೀರು ಸೇವಿಸದೆ, ಕಲುಷಿತ ನೀರು, ಆಹಾರ ಸೇವನೆಯಿಂದಲೂ ಮೂತ್ರಪಿಂಡಗಳು ಹಾನಿಗೊಳಗಾಗುತ್ತಿವೆ. ಮಕ್ಕಳಲ್ಲಿ 4 ಹಂತಗಳಲ್ಲಿ ಮೂತ್ರಪಿಂಡ ಸಮಸ್ಯೆ ಕಾಡುತ್ತಿವೆ. ಆರಂಭಿಕ ಹಂತದ ಸಮಸ್ಯೆಗೆ ಔಷಧ ಚಿಕಿತ್ಸೆ ಸಾಕಾಗುತ್ತದೆ. ಅಂತಿಮ ಹಂತದ ಕಾಯಿಲೆಗಳಿಂದ ಕಾರ್ಯಕ್ಷಮತೆ ಕಡಿಮೆಯಾಗುತ್ತದೆ. ಈ ಹಂತಕ್ಕೆ ಡಯಾಲಿಸಿಸ್‌ ಆರಂಭಿಸಬೇಕಾಗುತ್ತದೆ. ಮೂತ್ರಪಿಂಡ ವೈಫಲ್ಯತೆ ಕಾಡುತ್ತಿದ್ದರೆ ಹಿಮೋಡಯಾಲಿಸಿಸ್‌ ಅಥವಾ ಪರಿಟೋನಿಯಲ್‌ ಡಯಾಲಿಸಿಸ್‌ ಮಾಡಲಾಗುತ್ತದೆ. ಶಾಶ್ವತ ಮೂತ್ರಪಿಂಡ ವೈಫಲ್ಯವಿದ್ದರೆ ಮೂತ್ರಪಿಂಡ ಕಸಿ ಮಾಡಲಾಗುತ್ತದೆ. ಬೆಂಗಳೂರಿನ ಮೂತ್ರಪಿಂಡ ತಜ್ಞರ ಪ್ರಕಾರ ಸರಾಸರಿ ಪ್ರತಿ ಆಸ್ಪತ್ರೆಯಲ್ಲಿ 100 ಮೂತ್ರಪಿಂಡಕ್ಕೆ ಸಂಬಂಧಿಸಿದ ಚಿಕಿತ್ಸೆಗೆ ದಾಖಲಾಗುತ್ತಿದ್ದಾರೆ. ಸೇಂಟ್‌ ಜಾನ್ಸ್‌ ವೈದ್ಯಕೀಯ ಕಾಲೇಜೊಂದರಲ್ಲೇ 2 ದಶಕದಲ್ಲಿ 90 ಮಕ್ಕಳಲ್ಲಿ ಶಾಶ್ವತ ಮೂತ್ರಪಿಂಡ ಸಮಸ್ಯೆ ವರದಿಯಾಗಿದ್ದು, ಮೂತ್ರಪಿಂಡ ಕಸಿ ಮಾಡಲಾಗಿದೆ. ಜತೆಗೆ, ವರ್ಷಕ್ಕೆ ಕನಿಷ್ಠ 50 ಮಕ್ಕಳು ಡಯಾಲಿಸಿಸ್‌, 40 ಮಕ್ಕಳು ಪರಿಟೋನಿಯಲ್‌ ಡಯಾಲಿಸಿಸ್‌ ಚಿಕಿತ್ಸೆಗೊಳಗಾಗುತ್ತಿದ್ದಾರೆ ಎಂದು ಮಕ್ಕಳ ಮೂತ್ರಪಿಂಡ ಶಾಸ್ತ್ರಜ್ಞೆ ಡಾ. ನಿವೇದಿತಾ ಕಾಮತ್‌ ತಿಳಿಸಿದ್ದಾರೆ. ವಿಜ್ಞಾನ ಲೋಕದ ಕರೆಗಂಟೆ: ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಕಲುಷಿತ ನೀರನ್ನು ಸೇವಿಸುತ್ತಿರುವ ಮಕ್ಕಳ ಕಿಡ್ನಿಗಳು ವೈಫಲ್ಯಗೊಳ್ಳುತ್ತಿರುವುದು ಕಂಡುಬಂದಿದೆ. ರಾಜಧಾನಿ ಬೆಂಗಳೂರಿನ ವರ್ತೂರು ಕೆಎ ಸಮೀಪ ಭಾರತೀಯ ವಿಜ್ಞಾನ ಸಂಸ್ಥೆಯಿಂದ ನಡೆದ ಸಮೀಕ್ಷೆಯಲ್ಲಿ ಮಕ್ಕಳ ಮೂತ್ರಪಿಂಡ ವೈಫಲ್ಯಗೊಂಡಿರುವ ಸತ್ಯ ಬೆಳಕಿಗೆ ಬಂದಿದೆ. 3 ರಿಂದ 5 ವರ್ಷದೊಳಗಿನ ಮಕ್ಕಳ ಮೂತ್ರಪಿಂಡದ ಸಮಸ್ಯೆಗಳನ್ನು ಎದುರಿಸುತ್ತಿರುವ ಬಗ್ಗೆ ಐಐಎಸ್‌ಸಿ ತನ್ನ ವರದಿಯಲ್ಲಿ ಪ್ರಕಟಿಸಿದೆ. ಈ ಬಗ್ಗೆ ವಿಕ ದೊಂದಿಗೆ ಮಾತನಾಡಿರುವ ಹಿರಿಯ ವಿಜ್ಞಾನಿ ಡಾ. ಟಿ. ವಿ. ರಾಮಚಂದ್ರ 'ಕೈಗಾರೀಕರಣದ ನಡುವೆ ಮಕ್ಕಳು ಸೇವಿಸುವ ನೀರಿನ ಬಗ್ಗೆ, ಆಹಾರದ ಬಗ್ಗೆ ಪೋಷಕರು ಹೆಚ್ಚಿನ ಜಾಗರೂಕತೆ ವಹಿಸಬೇಕು. ನೀರಿನಲ್ಲಿನ ಸೀಸದ ಅಂಶಗಳು ಮಕ್ಕಳ ಜೀವಕ್ಕೆ ಕುತ್ತು ತರಬಲ್ಲದು' ಎಂದು ಎಚ್ಚರಿಸಿದ್ದಾರೆ. ಕಿಡ್ನಿ ಸಮಸ್ಯೆಯ ಲಕ್ಷಣಗಳು * ಅತಿ ವಿರಳ, ಅತಿಯಾದ ಮೂತ್ರ ವಿಸರ್ಜನೆ * ಮೂತ್ರದ ಬಣ್ಣ ತಿಳಿಹಳದಿ, ಕೆಂಪು, ಕಪ್ಪು, ಬಿಳಿಯಾಗುವುದು. * ಬೆಳಗ್ಗೆ ಮುಖ, ಮೈಕೈಗಳಲ್ಲಿ ಊತ ಕಾಣಿಸಿಕೊಂಡು, ಸಂಜೆಗೆ ಕಡಿಮೆಯಾಗುವುದು. ಪರಿಹಾರೋಪಾಯಗಳು * ಮೂತ್ರಪಿಂಡ ಸಮಸ್ಯೆ ಉಲ್ಬಣವಾಗದಿರಲು ತಾಯಿ ಗರ್ಭಿಣಿಯಾಗಿದ್ದಾಗಲೇ ಅಲ್ಟ್ರಾ ಸೌಂಡ್‌ ಸ್ಕ್ಯಾನಿಂಗ್‌ ಮಾಡಿಸುವುದು. * ಅನಿರೀಕ್ಷಿತ ತೂಕದಲ್ಲಿ ಏರಿಳಿತಗಳಾದರೆ ವೈದ್ಯರ ಸಂಪರ್ಕ * ಔಷಧಗಳ ಬಳಸುವ ಮುನ್ನ ವೈದ್ಯರ ಸಲಹೆ ಉತ್ತಮ * ಮಕ್ಕಳಲ್ಲಿ ಕಿಡ್ನಿಗೆ ಸಂಬಂಧಿಸಿದ ಸಮಸ್ಯೆ ಏರ್ಪಡದಂತೆ ಶುದ್ಧ ಆಹಾರ, ನೀರು ಸೇವನೆಗೆ ಆದ್ಯತೆ 'ಮೂತ್ರಪಿಂಡ ಸಮಸ್ಯೆಗಳು ಕೇವಲ ದೊಡ್ಡವರಲ್ಲಿ ಮಾತ್ರವಲ್ಲದೆ ಮಕ್ಕಳಲ್ಲೂ ಕಾಣಿಸಿಕೊಳ್ಳುತ್ತಿದ್ದು, ಪೋಷಕರು ಸಮಸ್ಯೆಗಳು ಆರಂಭಿಕ ಹಂತದಲ್ಲಿರುವಾಗಲೇ ವೈದ್ಯರನ್ನು ಸಂಪರ್ಕಿಸುವುದು ಉತ್ತಮ' ಎನ್ನುತ್ತಾರೆ, ಬೆಂಗಳೂರಿನ ಮಕ್ಕಳ ಮೂತ್ರಪಿಂಡ ಶಾಸ್ತ್ರಜ್ಞೆ ಡಾ. ಅರ್ಪಣಾ ಅಯ್ಯಂಗಾರ್‌.