ಲಸಿಕೆ ಅಭಾವ, ಮುಂಬಯಿನ 26 ಕೊರೊನಾ ಲಸಿಕೆ ಕೇಂದ್ರಗಳು ಬಂದ್‌

ಬುಧವಾರ ಸಂಜೆಯೇ ಸತಾರಾ, ಸಾಂಗ್ಲಿ, ಪನ್ವೇಲ್‌ನಲ್ಲಿ ಲಸಿಕೆ ಅಭಿಯಾನ ನಿಲ್ಲಿಸಲಾಗಿದೆ ಎಂದು ರಾಜ್ಯ ಆರೋಗ್ಯ ಸಚಿವ ರಾಜೇಶ್‌ ಟೋಪೆ ಹೇಳಿದ್ದು, ಪುಣೆಯಲ್ಲೂ 100 ಕೇಂದ್ರಗಳನ್ನು ಬಂದ್‌ ಮಾಡಲಾಗಿದೆ ಎಂದು ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಟ್ಟೀಟ್‌ ಮಾಡಿದ್ದಾರೆ.

ಲಸಿಕೆ ಅಭಾವ, ಮುಂಬಯಿನ 26 ಕೊರೊನಾ ಲಸಿಕೆ ಕೇಂದ್ರಗಳು ಬಂದ್‌
Linkup
ಮುಂಬಯಿ: ನಗರದ 26 ಲಸಿಕೆ ಕೇಂದ್ರಗಳು ಗುರುವಾರ ಬಂದ್‌ ಆಗಿವೆ ಎಂದು ಮಹಾರಾಷ್ಟ್ರ ಸರಕಾರ ಹೇಳಿದೆ. ಕೇಂದ್ರದಿಂದ ಹೆಚ್ಚಿನ ಡೋಸ್‌ ಲಸಿಕೆಯನ್ನು ನಿರೀಕ್ಷಿಸಲಾಗುತ್ತಿದ್ದು, ಈ ಸಂಬಂಧ ಕೇಂದ್ರ ಆರೋಗ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ ಎಂದು ಸರಕಾರ ತಿಳಿಸಿದೆ. ರಾಜ್ಯದಲ್ಲಿ ಕೊರೊನಾ ಲಸಿಕೆಯ ಕೊರತೆ ಉಂಟಾಗಿದ್ದು ನಿನ್ನೆ ಸಂಜೆಯೇ ಸತಾರಾ, ಸಾಂಗ್ಲಿ, ಪನ್ವೇಲ್‌ನಲ್ಲಿ ಲಸಿಕೆ ಅಭಿಯಾನ ನಿಲ್ಲಿಸಲಾಗಿದೆ ಎಂದು ರಾಜ್ಯ ಆರೋಗ್ಯ ಸಚಿವ ರಾಜೇಶ್‌ ಟೋಪೆ ಹೇಳಿದ್ದಾರೆ. ಪುಣೆಯಲ್ಲೂ ಲಸಿಕೆ ಅಭಾವದಿಂದ 100 ಕೇಂದ್ರಗಳನ್ನು ಬಂದ್‌ ಮಾಡಲಾಗಿದೆ ಎಂದು ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಟ್ಟೀಟ್‌ ಮಾಡಿದ್ದಾರೆ. "ಕೇಂದ್ರ ಸರಕಾರ ಯಾಕೆ ಮಹಾರಾಷ್ಟ್ರಕ್ಕೆ ತಾರತಮ್ಯ ಮಾಡುತ್ತಿದೆ?" ಎಂದು ಪ್ರಶ್ನಿಸಿರುವ ರಾಜೇಶ್‌ ಟೊಪೆ, ರಾಜ್ಯಕ್ಕೆ ವಾರಕ್ಕೆ 40 ಲಕ್ಷ ಡೋಸ್‌ ಲಸಿಕೆಗಳು ಹಾಗೂ ತಿಂಗಳಿಗೆ 1.6 ಕೋಟಿ ಡೋಸ್‌ ಲಸಿಕೆ ಬೇಕು ಎಂದು ಹೇಳಿದ್ದಾರೆ. "ಮಹಾರಾಷ್ಟ್ರದಲ್ಲಿ ಗುಜರಾತ್‌ಗಿಂತ ದುಪ್ಪಟ್ಟು ಜನರಿದ್ದಾರೆ. ಆದರೆ ಗುಜರಾತ್‌ಗೂ 1 ಕೋಟಿ ಡೋಸ್‌ ಲಸಿಕೆ ನೀಡಲಾಗಿದೆ, ನಮಗೂ 1 ಕೋಟಿ ಡೋಸ್‌ ಲಸಿಕೆ ನೀಡಲಾಗಿದೆ," ಎಂದು ಅವರು ವಿವರಿಸಿದ್ದಾರೆ. ಗುರುವಾರ ಪ್ರಧಾನಿ ಜತೆ ನಡೆದ ಸಭೆಯಲ್ಲಿ ಲಸಿಕೆಯ ಜತೆಗೆ ರೆಮ್‌ಡೆಸಿವಿಯರ್‌ ಪೂರೈಕೆ, ಬೆಲೆ ನಿಯಂತ್ರಣ, ನೆರೆಯ ರಾಜ್ಯಗಳಿಂದ ಆಕ್ಸಿಜನ್‌ ಪೂರೈಕೆ, ವೆಂಟಿಲೇಟರ್‌ ಕಾರ್ಯನಿರ್ವಹಣೆಗೆ ಬೆಂಬಲ ಕೇಳಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. "ಈಗಷ್ಟೆ ಕೇಂದ್ರ ಲಸಿಕೆ ಡೋಸ್‌ ಪ್ರಮಾಣವನ್ನು 7 ಲಕ್ಷದಿಂದ 17 ಲಕ್ಷಕ್ಕೆ ಏರಿಕೆ ಮಾಡಿರುವ ಮಾಹಿತಿ ಸಿಕ್ಕಿತು. ಆದರೆ ಇದು ಕಡಿಮೆಯೇ. ನಮಗೆ ವಾರಕ್ಕೆ 40 ಲಕ್ಷ ಡೋಸ್‌ ಲಸಿಕೆ ಬೇಕು. 17 ಲಕ್ಷ ಡೋಸ್‌ ಸಾಲುವುದಿಲ್ಲ," ಎಂದು ರಾಜೇಶ್‌ ಟೋಪೆ ಹೇಳಿದ್ದಾರೆ. ಆದರೆ ಲಸಿಕೆಯ ಅಭಾವ ಇಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್‌ ಹೇಳಿದ್ದು, ಕೊರೊನಾ ನಿಯಂತ್ರಣದಲ್ಲಿ ವಿಫಲವಾಗಿರುವುದರಿಂದ ಗಮನ ಬೇರೆಡೆ ಸೆಳೆಯಲು ಈ ಆರೋಪ ಮಾಡಲಾಗುತ್ತಿದೆ ಎಂದು ದೂರಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡುರುವ ಟೋಪೆ, "ಇದು ಕೇಂದ್ರ ಮತ್ತು ರಾಜ್ಯ ಹೋರಾಡಬೇಕಾದ ವಿಷಯವಲ್ಲ. ಇದನ್ನು ರಾಜಕೀಯಗೊಳಿಸಲು ನಾವು ಬಯಸುವುದಿಲ್ಲ. ನಾವು ಯಾರನ್ನೂ ದೂಷಿಸಲು ಬಯಸುವುದಿಲ್ಲ," ಎಂದಿದ್ದಾರೆ.