ಬೆಂಗಳೂರು: ಕೊರೊನಾ ಎರಡನೇ ಅಲೆಯಲ್ಲಿ ಸೋಂಕಿನಿಂದ ಚೇತರಿಸಿಕೊಂಡಿರುವವರ ಮೇಲೆ ಇದೀಗ ಬ್ಲಾಕ್ ಫಂಗಸ್ (ಮ್ಯುಕೋರ್ ಮೈಕೋಸಿಸ್)ನ ಹಾವಳಿ ಪ್ರಕರಣಗಳು ಹೆಚ್ಚಾಗುತ್ತಿವೆ. ದೆಹಲಿಯಲ್ಲಿ ಹೆಚ್ಚಾಗಿ ಕಂಡು ಬಂದಿದ್ದ ಈ ಫಂಗಸ್ ಸೋಂಕು ಈಗ ನಗರದಲ್ಲೂ ಕೊರೊನಾ ಮಹಾಮಾರಿಯಿಂದ ಚೇತರಿಸಿಕೊಂಡಿರುವವರ ಮೇಲೆ ತನ್ನ ಪ್ರಭಾವ ತೋರಿಸುತ್ತಿದೆ.
ಕಳೆದ ಎರಡು ವಾರಗಳಲ್ಲಿ ಟ್ರಸ್ಟ್ವೆಲ್ ಆಸ್ಪತ್ರೆಯಲ್ಲಿ 38 ಜನರಿಗೆ ಈ ಬ್ಲಾಕ್ ಫಂಗಸ್ ಸೋಂಕಿಗೆ ಚಿಕಿತ್ಸೆ ನೀಡಲಾಗಿದೆ. ಸೋಂಕಿತರಿಗೆ ವಿಶೇಷ ಆರೈಕೆ ನೀಡುವ ಉದ್ದೇಶದಿಂದ ಟ್ರಸ್ಟ್ವೆಲ್ ಆಸ್ಪತ್ರೆಯಲ್ಲಿ ವಿಶೇಷ ವಿಭಾಗವನ್ನು ಪ್ರಾರಂಭಿಸಲಾಗಿದೆ.
ಈ ಫಂಗಸ್ ಸೋಂಕು ಬಹು ಬೇಗ ಬೇರೆಯವರಿಗೆ ಹರಡುತ್ತದೆ. ಅದರಲ್ಲೂ ಇದಕ್ಕೆ ಚಿಕಿತ್ಸೆ ನೀಡುವ ವೈದ್ಯರಿಗೂ ಸೋಂಕಿನ ಭೀತಿ ತಪ್ಪಿದ್ದಲ್ಲ. ಈ ಹಿನ್ನೆಲೆಯಲ್ಲಿ ಇದರ ಚಿಕಿತ್ಸೆಗಾಗಿ ಟ್ರಸ್ಟ್ವೆಲ್ ಆಸ್ಪತ್ರೆಯಲ್ಲಿ ವಿಶೇಷ ವಿಭಾಗವನ್ನು ರಚಿಸಲಾಗಿದೆ. ಈ ತಂಡದಲ್ಲಿ ಇಎನ್ಟಿ ವಿಭಾಗದ ನಿರ್ದೇಶಕರಾದ ಡಾ. ದೀಪಕ್ ಹಲ್ದೀಪುರ್, ನ್ಯೂರೋ ಸೈನ್ಸಸ್ ವಿಭಾಗದ ನಿರ್ದೇಶಕ ಡಾ. ಎಚ್.ವಿ. ಮಧುಸೂಧನ್, ನೇತ್ರ ತಜ್ಞರಾದ ಡಾ. ಪ್ರೀತಿ ಕಾಳೆ, ತಜ್ಞರಾದ ಡಾ. ಆದಿತ್ಯ ಮೂರ್ತಿ ಮತ್ತಿತರರಿದ್ದಾರೆ.
ಬ್ಲ್ಯಾಕ್ ಫಂಗಸ್ಗೆ ಉಚಿತ ಚಿಕಿತ್ಸೆ ಘೋಷಿಸಿದ
ಕೋವಿಡ್ನಿಂದ ಚೇತರಿಸಿಕೊಂಡವರ ಮೇಲೆ ಪ್ರಾಣಕ್ಕೆ ಕುತ್ತು ತರುವ (ಮ್ಯುಕೋರ್ ಮೈಕೋಸಿಸ್) ದಾಳಿ ಇಡುವ ಪ್ರಕರಣಗಳು ಹೆಚ್ಚುತ್ತಿದ್ದು, ಇದರ ಚಿಕಿತ್ಸೆಗೆ ಮಹಾರಾಷ್ಟ್ರ ವಿಶೇಷ ಕಾಳಜಿ ವಹಿಸಿದೆ. ಬ್ಲ್ಯಾಕ್ ಫಂಗಸ್ನಿಂದ ಬಳಲುತ್ತಿರುವ ರೋಗಿಗಳಿಗೆ ರಾಜ್ಯದ ವೈದ್ಯಕೀಯ ವಿಮಾ ಯೋಜನೆಯಡಿ ಉಚಿತ ಚಿಕಿತ್ಸೆ ನೀಡಲು ಮಹಾರಾಷ್ಟ್ರ ಸರಕಾರ ನಿರ್ಧರಿಸಿದೆ.
ರೋಗ ನಿರೋಧಕ ಶಕ್ತಿ ಕಳೆದುಕೊಂಡವರನ್ನು ಇದು ತೀವ್ರವಾಗಿ ಬಾಧಿಸುತ್ತದೆ. ವಿದರ್ಭ, ಉತ್ತರ ಮಹಾರಾಷ್ಟ್ರದಲ್ಲಿ ಕೋವಿಡ್ನಿಂದ ಚೇತರಿಸಿಕೊಂಡವರಲ್ಲಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಇದಕ್ಕೆ ಸೂಕ್ತ ಸಮಯಕ್ಕೆ ಚಿಕಿತ್ಸೆ ಪಡೆಯುವುದು ಉತ್ತಮ. ನಿರ್ಲಕ್ಷಿಸಿದರೆ ದೃಷ್ಟಿ ಕಳೆದುಕೊಳ್ಳುವುದು ಇಲ್ಲವೇ ನಾನಾ ರೀತಿಯಲ್ಲಿ ದೇಹಕ್ಕೆ ತೊಂದರೆಯಾಗಿ ಜೀವ ಹೋಗುವ ಸಾಧ್ಯತೆ ಹೆಚ್ಚಿರುತ್ತದೆ. ಚಿಕಿತ್ಸಾ ವೆಚ್ಚ ತುಸು ದುಬಾರಿಯಾಗಿರುವ ಕಾರಣ ಮಹಾರಾಷ್ಟ್ರ ಸರಕಾರವು ಉಚಿತವಾಗಿ ಚಿಕಿತ್ಸೆ ನೀಡಲು ಮುಂದಾಗಿದೆ.
‘‘ಇದೊಂದು ಮಾರಾಣಾಂತಿಕ ಕಾಯಿಲೆಯಾಗಿದ್ದು, ಜನರ ಆರೋಗ್ಯ ರಕ್ಷಣೆಯ ಹಿನ್ನೆಲೆಯಲ್ಲಿ ಸರಕಾರ ಉಚಿತ ಚಿಕಿತ್ಸೆಗೆ ಮುಂದಾಗಿದೆ. ಮಹಾತ್ಮ ಪುಲೆ ಜನ ಆರೋಗ್ಯ ಯೋಜನೆಯಡಿ 1 ಸಾವಿರ ಆಸ್ಪತ್ರೆಗಳಿದ್ದು, ಇಲ್ಲಿ ಬ್ಲ್ಯಾಕ್ ಫಂಗಸ್ಗೆ ಉಚಿತ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುವುದು. ಇದಲ್ಲದೇ ಚಿಕಿತ್ಸಾ ವಿಧಾನದಲ್ಲಿಬಳಸಲಾಗುವ ಆ್ಯಂಪೊಟೆರಿಸಿನ್-ಬಿ ಇಂಜೆಕ್ಷನ್ ಬೆಲೆ ಇಳಿಕೆಗೂ ಕ್ರಮ ಕೈಗೊಳ್ಳುವ ಚಿಂತನೆಗಳು ನಡೆದಿವೆ,’’ ಎಂದು ಆರೋಗ್ಯ ಸಚಿವ ರಾಜೇಶ್ ತೋಪೆ ತಿಳಿಸಿದ್ದಾರೆ.
ಒಂದು ಇಂಜೆಕ್ಷನ್ ಬಾಟಲ್ನ ದರ 5 ರಿಂದ 8 ಸಾವಿರ ರೂ. ಇದೆ. ಇನ್ನು 4 ರಿಂದ 12 ವಾರ ರೋಗಿ ನಾನಾ ಔಷಧಗಳನ್ನು ಸೇವಿಸಬೇಕಾಗಿದ್ದು, ದಿನದ ವೆಚ್ಚವೇ ಸರಿ ಸುಮಾರು 60 ರಿಂದ 80 ಸಾವಿರ ರೂ. ಇರುತ್ತದೆ ಎನ್ನುತ್ತಾರೆ ತಜ್ಞ ವೈದ್ಯರು. ಲಾಕ್ಡೌನ್ ಹಾಗೂ ಕೊರೊನಾ ಸಂಕಷ್ಟದಿಂದ ತತ್ತರಿಸಿರುವ ಜನರು ಬ್ಲ್ಯಾಕ್ ಫಂಗಸ್ ರೋಗಕ್ಕೆ ತುತ್ತಾದರೆ ಅವರ ಬದುಕು ಇನ್ನೂ ಶೋಚನೀಯವಾಗುತ್ತದೆ. ಹಾಗಾಗಿ ಸರಕಾರವೇ ಉಚಿತ ಚಿಕಿತ್ಸೆಗೆ ಮುಂದಾಗಿರುವುದು ಉತ್ತಮ ಬೆಳವಣಿಗೆಯಾಗಿದೆ ಎನ್ನುತ್ತಾರೆ ತಜ್ಞರು. ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಬಳಸಲಾಗುವ ಇಂಜೆಕ್ಷನ್ ಹಾಗೂ ಔಷಧಗಳ ಸಂಗ್ರಹದಲ್ಲಿಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ರಾಜ್ಯ ಸರಕಾರ ತಿಳಿಸಿದೆ.
ಫ್ಯಾಬಿಫ್ಲೂ ಅತಿ ಹೆಚ್ಚು ಮಾರಾಟ
ಕೊರೊನಾ ಸೋಂಕಿತರ ಚಿಕಿತ್ಸೆಯಲ್ಲಿ ಬಳಸಲಾಗುವ ಫ್ಯಾಬಿಫ್ಲೂ(ಫ್ಯಾವಿಪಿರವಿರ್) ಮಾತ್ರೆ ಭರ್ಜರಿಯಾಗಿ ಮಾರಾಟವಾಗಿದ್ದು, ಇದರ ಉತ್ಪಾದಕ ಕಂಪನಿ ಮುಂಬಯಿ ಮೂಲದ ಗ್ಲೆನ್ಮಾರ್ಕ್ ಏಪ್ರಿಲ್ನಲ್ಲಿ ಭಾರಿ ವಹಿವಾಟು ನಡೆಸಿದೆ. ಸೋಂಕಿತರಿಗೆ ಫ್ಯಾಬಿಫ್ಲೂ ಮಾತ್ರೆ ಜತೆಗೆ ಜಿಂಕೋವಿಟ್, ಡೊಲೊ-650 ಹಾಗೂ ಇನ್ನೂ ಕೆಲವು ಮಾತ್ರೆಗಳನ್ನು ನೀಡಲಾಗುತ್ತದೆ. ಸಾಮಾನ್ಯವಾಗಿ ದೇಶೀಯ ಔಷಧ ಮಾರುಕಟ್ಟೆಯಲ್ಲಿ ಮಧುಮೇಹ ಸಂಬಂಧಿ ಮಾತ್ರೆಗಳಿಗೆ ಹೆಚ್ಚಿನ ಬೇಡಿಕೆ ಇತ್ತು. ಆದರೆ ಕೊರೊನಾ ಸಾಂಕ್ರಾಮಿಕ ಎದುರಾದ ನಂತರ ಕಳೆದೊಂದು ವರ್ಷದಲ್ಲಿ ಫ್ಯಾಬಿಫ್ಲೂಗೆ ಭಾರಿ ಬೇಡಿಕೆ ಬಂದಿದೆ. ಕಳೆದ ಏಪ್ರಿಲ್ ತಿಂಗಳೊಂದರಲ್ಲಿಯೇ 352 ಕೋಟಿ ರೂ. ಮೌಲ್ಯದ ಈ ಮಾತ್ರೆಗಳು ಮಾರಾಟವಾಗಿವೆ.