ಮಹಿಳಾ ನರ್ಸ್‌ ಬೇಕೆಂದು ಹಠ ಹಿಡಿದು ಆಸ್ಪತ್ರೆ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ನಾಲ್ವರು ದುರುಳರು!

ಡ್ರೆಸ್ಸಿಂಗ್‌ ಮಾಡುವ ತನಕ ಸುಮ್ಮನಿರುವಂತೆ ಹೇಳಿದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಮಹಿಳಾ ನರ್ಸ್‌ಗಳನ್ನು ಕರೆಸಿ ಡ್ರೆಸ್ಸಿಂಗ್‌ ಮಾಡಿಸಿ ಎಂದು ಬೆದರಿಸಿದ್ದರು. ಆರೋಪಿಗಳ ಕಾಲು, ಕೈಯಿಂದ ರಕ್ತ ಸೋರುತ್ತಿದ್ದರೂ ಪುರುಷ ನರ್ಸ್‌ಗಳ ಕೈಯಿಂದ ಡ್ರೆಸ್ಸಿಂಗ್‌ ಮಾಡಿಸಿಕೊಳ್ಳುವುದಿಲ್ಲ ಎಂದು ಹಠ ಹಿಡಿದಿದ್ದರು. ಲೇಡಿ ನರ್ಸ್‌ಗಳಿದ್ದರೆ ಮಾತ್ರ ಬ್ಯಾಂಡೇಜ್‌ ಹಾಕಿ ಎಂದು ಗಲಾಟೆ ಮಾಡಿದ್ದಾರೆ.

ಮಹಿಳಾ ನರ್ಸ್‌ ಬೇಕೆಂದು ಹಠ ಹಿಡಿದು ಆಸ್ಪತ್ರೆ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ನಾಲ್ವರು ದುರುಳರು!
Linkup
ಬೆಂಗಳೂರು: ರಸ್ತೆ ಅಪಘಾತದಲ್ಲಿ ಗಾಯಗೊಂಡು ರಕ್ತ ಸೋರುತ್ತಿದ್ದರೂ ತಮಗೆ ಬ್ಯಾಂಡೇಜ್‌ ಹಾಕಲು ಮಹಿಳಾ ನರ್ಸ್‌ ಬರಬೇಕೆಂದು ಹಠ ಹಿಡಿದು ಖಾಸಗಿ ಆಸ್ಪತ್ರೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ನಾಲ್ವರ ವಿರುದ್ಧ ಬೈಯ್ಯಪ್ಪನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಗ್ಗದಾಸಪುರದ ಖಾಸಗಿ ಆಸ್ಪತ್ರೆಯ ನರ್ಸ್‌ ಪ್ರಸಾದ್‌ ಬೈಯ್ಯಪ್ಪನಹಳ್ಳಿಯ ನಿವಾಸಿಗಳಾದ ಹೇಮಂತ್‌, ಕಿರಣ್‌ ಕುಮಾರ್‌, ವಿನೋದ್‌, ಚಂದ್ರು ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ನಡೆದ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ ಆಗಿದ್ದ ಪ್ರಸಾದ್‌, ಆಪರೇಷನ್‌ ಥಿಯೇಟರ್‌ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಆರೋಪಿಗಳಾದ ಕಿರಣ್‌ ಮತ್ತು ಹೇಮಂತ್‌ ರಸ್ತೆ ಅಪಘಾತದಲ್ಲಿ ಗಾಯಗೊಂಡು ಜೂ.2ರಂದು ಸಂಜೆ 4.15ರಲ್ಲಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿದ್ದರು. ನರ್ಸ್‌ಗಳಾದ ಪ್ರಸಾದ್‌ ಹಾಗೂ ಪ್ರಶಾಂತ್‌ ಗಾಯಾಳುಗಳಿಗೆ ಡ್ರೆಸ್ಸಿಂಗ್‌ ಮಾಡುತ್ತಿದ್ದಾಗ ಅದಕ್ಕೆ ಅವರು ಸಹಕರಿಸಿರಲಿಲ್ಲ. ಡ್ರೆಸ್ಸಿಂಗ್‌ ಮಾಡುವ ತನಕ ಸುಮ್ಮನಿರುವಂತೆ ಹೇಳಿದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಮಹಿಳಾ ನರ್ಸ್‌ಗಳನ್ನು ಕರೆಸಿ ಡ್ರೆಸ್ಸಿಂಗ್‌ ಮಾಡಿಸಿ ಎಂದು ಬೆದರಿಸಿದ್ದರು. ಆರೋಪಿಗಳ ಕಾಲು, ಕೈಯಿಂದ ರಕ್ತ ಸೋರುತ್ತಿದ್ದರೂ ಪುರುಷ ನರ್ಸ್‌ಗಳ ಕೈಯಿಂದ ಡ್ರೆಸ್ಸಿಂಗ್‌ ಮಾಡಿಸಿಕೊಳ್ಳುವುದಿಲ್ಲ ಎಂದು ಹಠ ಹಿಡಿದಿದ್ದರು. ಲೇಡಿ ನರ್ಸ್‌ಗಳಿದ್ದರೆ ಮಾತ್ರ ಬ್ಯಾಂಡೇಜ್‌ ಹಾಕಿ ಎಂದು ಗಲಾಟೆ ಮಾಡಿದ್ದಾರೆ. ನಂತರ ಆರೋಪಿ ಹೇಮಂತ್‌, ನರ್ಸ್‌ ಪ್ರಶಾಂತ್‌ ಮೇಲೆ ಹಲ್ಲೆ ನಡೆಸಿ ಸ್ನೇಹಿತರಿಗೆ ಕರೆ ಮಾಡಿ ಆಸ್ಪತ್ರೆಗೆ ಬರುವಂತೆ ಸೂಚಿಸಿದ್ದ. ಸ್ನೇಹಿತರ ಬಳಿ ಆಸ್ಪತ್ರೆ ಸಿಬ್ಬಂದಿಯೇ ಹಲ್ಲೆ ನಡೆಸುತ್ತಿದ್ದಾರೆ ಎಂದು ಸುಳ್ಳು ಹೇಳಿದ್ದ. ಇದಾದ ಕೆಲ ಹೊತ್ತಲ್ಲೇ ಆಸ್ಪತ್ರೆಗೆ ಬಂದ ಆರೋಪಿ ವಿನೋದ್‌, ಚಂದ್ರು, ಪ್ರಶಾಂತ್‌ ಮೇಲೆ ಹಲ್ಲೆ ನಡೆಸಿದ್ದಾರೆ. ಆರೋಪಿಗಳನ್ನು ತಡೆಯಲು ಬಂದ ಸೆಕ್ಯೂರಿಟಿ ಗಾರ್ಡ್‌ ಮೇಲೂ ಹಲ್ಲೆ ನಡೆಸಿದ್ದಾರೆ. ಕೌಂಟರ್‌ನಲ್ಲಿದ್ದ ಮಹಿಳಾ ಸಿಬ್ಬಂದಿ ಆರೋಪಿಗಳನ್ನು ಈ ಬಗ್ಗೆ ಪ್ರಶ್ನಿಸಿದ್ದಕ್ಕೆ 'ಹೊರಗೆ ಬನ್ನಿ ನಿಮಗೂ ಒಂದು ಗತಿ ಕಾಣಿಸುತ್ತೇವೆ ಎಂದು ಪ್ರಾಣ ಬೆದರಿಕೆ ಹಾಕಿ ಹೋಗಿದ್ದಾರೆ' ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.