ಮಹಾರಾಷ್ಟ್ರ ವಿಧಾನಸಭೆಯಲ್ಲಿ ಕೋಲಾಹಲ, 1 ವರ್ಷದ ಅವಧಿಗೆ 12 ಬಿಜೆಪಿ ಶಾಸಕರು ಅಮಾನತು

ಮಹಾರಾಷ್ಟ್ರ ವಿಧಾನಸಭೆಯ ಸಭಾಧ್ಯಕ್ಷರನ್ನು ನಿಂದಿಸಿದ್ದಕ್ಕಾಗಿ ಮತ್ತು ಎಳೆದಾಟ ನಡೆಸಿದ್ದಕ್ಕಾಗಿ 12 ಬಿಜೆಪಿ ಶಾಸಕರನ್ನು ಅಮಾನತುಗೊಳಿಸಿ ಸ್ಪೀಕರ್‌ ಭಾಸ್ಕರ್‌ ಜಾಧವ್‌ ಸೋಮವಾರ ಆದೇಶ ಹೊರಡಿಸಿದ್ದಾರೆ.

ಮಹಾರಾಷ್ಟ್ರ ವಿಧಾನಸಭೆಯಲ್ಲಿ ಕೋಲಾಹಲ, 1 ವರ್ಷದ ಅವಧಿಗೆ 12 ಬಿಜೆಪಿ ಶಾಸಕರು ಅಮಾನತು
Linkup
ಮುಂಬಯಿ: ಸ್ಪೀಕರ್‌ ಸ್ಥಾನದಲ್ಲಿದ್ದ ಭಾಸ್ಕರ್‌ ಜಾಧವ್‌ 12 ಶಾಸಕರನ್ನು 1 ವರ್ಷದ ಅವಧಿಗೆ ಸೋಮವಾರ ಅಮಾನತುಗೊಳಿಸಿದ್ದಾರೆ. ಸದನದಲ್ಲಿ ಅನುಚಿತ ವರ್ತನೆ ತೋರಿದ್ದಕ್ಕಾಗಿ ಶಾಸಕರಿಗೆ ಈ ಶಿಕ್ಷೆ ವಿಧಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ವಿರೋಧ ಪಕ್ಷದ ಸದಸ್ಯರು, ಸಭಾಧ್ಯಕ್ಷರು ಕೆಲವು ನಾಯಕರನ್ನು ನಿಂದಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಸಭಾಧ್ಯಕ್ಷರನ್ನು ನಿಂದಿಸಿದ್ದಕ್ಕಾಗಿ ಮತ್ತು ಎಳೆದಾಟ ನಡೆಸಿದ್ದಕ್ಕಾಗಿ 12 ಶಾಸಕರನ್ನು ಅಮಾನತುಗೊಳಿಸುವ ನಿರ್ಣಯವನ್ನು ಸದನದಲ್ಲಿ ತೆಗೆದುಕೊಳ್ಳಲಾಯಿತು. ಅದರಂತೆ ಬಿಜೆಪಿಯ ಶಾಸಕರಾದ ಸಂಜಯ್‌ ಕುಟೆ, ಆಶೀಷ್‌ ಶೆಲಾರ್‌, ಅಭಿಮನ್ಯು ಪವಾರ್‌, ಗಿರೀಶ್‌ ಮಹಾಜನ್‌, ಅತುಲ್‌ ಭಟ್ಕಾಲ್ಕರ್‌, ಪರಾಗ್‌ ಅಲಾವನ್, ಹರೀಶ್‌ ಪಿಂಪಾಲೆ, ರಾಮ್‌ ಸತ್ಪುತೆ, ಯೋಗೇಶ್‌ ಸಾಗರ್‌, ನಾರಾಯಣ್‌ ಕುಚೆ ಮತ್ತು ಕಿರ್ತಿಕುಮಾರ್‌ ಬಂಗ್ಡಿಯಾ ಅವರನ್ನು ಮಾಡಲಾಯಿತು. ಘಟನೆಯ ಬಗ್ಗೆ ವಿವರಿಸಿರುವ ಸಭಾಧ್ಯಕ್ಷ ಜಾಧವ್‌, “ಸದನ ಮುಂದೂಡಿಕೆಯಾಗಿದ್ದಾಗ ವಿರೋಧ ಪಕ್ಷದ ನಾಯಕರು ನನ್ನ ಕ್ಯಾಬಿನ್‌ಗೆ ಬಂದು ವಿರೋಧ ಪಕ್ಷದ ನಾಯಕ ದೇವೇಂದ್ರ ಫಡ್ನವೀಸ್‌ ಹಾಗೂ ಬಿಜೆಪಿ ನಾಯಕ ಚಂದ್ರಕಾಂತ್‌ ಪಾಟೀಲ್‌ ಸಮ್ಮುಖದಲ್ಲಿ ನನ್ನನ್ನು ನಿಂದಿಸಿದರು.” ವಿರೋಧ ಪಕ್ಷದ ಶಾಸಕರೂ ಇದೇ ಆರೋಪವನ್ನು ಭಾಸ್ಕರ್‌ ಜಾಧವ್‌ ವಿರುದ್ಧ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಬಗ್ಗೆ ತನಿಖೆ ನಡೆಸುವಂತೆ ಸಂಸದೀಯ ವ್ಯವಹಾರಗಳ ಸಚಿವರಿಗೆ ಜಾಧವ್‌ ಮನವಿ ಮಾಡಿಕೊಂಡಿದ್ದಾರೆ. “ಈ ಒಂದು ಘಟನೆಯಿಂದ ಸರ್ಕಾರ ಒಂದು ಕಟ್ಟು ಕಥೆಯನ್ನು ಕಟ್ಟಿ ನಮ್ಮ 12 ಶಾಸಕರನ್ನು ಅಮಾನತುಗೊಳಿಸಿದೆ. ನಮ್ಮ ಶಾಸಕರು ಸ್ಪೀಕರ್‌ರನ್ನು ನಿಂದಿಸಲಿಲ್ಲ. ಕೆಲವು ಬಿಸಿ ಬಿಸಿ ವಾದಗಳು ನಡೆದವು. ಆದರೆ ಎಲ್ಲಾ ಶಾಸಕರ ಪರವಾಗಿ ನಮ್ಮ ಹಿರಿಯ ಸದಸ್ಯ ಆಶಿಶ್ ಶೆಲಾರ್ ಅವರು ಸ್ಪೀಕರ್ ಸ್ಥಾನದಲ್ಲಿದ್ದ ಭಾಸ್ಕರ್ ಜಾಧವ್ ಅವರ ಕ್ಷಮೆಯಾಚಿಸಿದರು. ನಂತರ, ನಮ್ಮ ಶಾಸಕರನ್ನು ಅಮಾನತುಗೊಳಿಸುವ ಯೋಜನೆಯನ್ನು ಸರಕಾರ ರೂಪಿಸಿತು. ನಾವು ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ," ಎಂದು ವಿರೋಧ ಪಕ್ಷದ ನಾಯಕ ದೇವೇಂದ್ರ ಫಡ್ನವೀಸ್‌ ಹೇಳಿದ್ದಾರೆ. ಒಬಿಸಿ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷಗಳು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಗದ್ದಲ ಎಬ್ಬಿಸಿದ್ದವು. ಈ ಸಂದರ್ಭದಲ್ಲಿ ತಮಗೆ ಮಾತನಾಡಲು ಸ್ಪೀಕರ್‌ ಸಾಕಷ್ಟು ಕಾಲಾವಕಾಶ ನೀಡಲಿಲ್ಲ ಎಂಬುದು ವಿರೋಧ ಪಕ್ಷಗಳ ದೂರು. ಈ ಹಿನ್ನೆಲೆಯಲ್ಲಿ ಸದನ ಬಹಿಷ್ಕಾರಕ್ಕೆ ಬಿಜೆಪಿ ಕರೆ ನೀಡಿತ್ತು.