ಮನೆ, ಫ್ಲ್ಯಾಟ್‌ ಖರೀದಿದಾರರ ಹಿತಾಸಕ್ತಿಗೆ ಒತ್ತು; ಏಕರೂಪದ ಒಪ್ಪಂದಕ್ಕೆ ಸುಪ್ರೀಂ ಕೋರ್ಟ್‌ ಒಲವು

ಮನೆ ಅಥವಾ ಫ್ಲ್ಯಾಟ್‌ಗಳನ್ನು ಕೊಳ್ಳುವ ಗ್ರಾಹಕರ ಹಿತ ರಕ್ಷಣೆಗಾಗಿ, ಬಿಲ್ಡರ್‌ - ಖರೀದಿದಾರರು ಹಾಗೂ ಏಜೆಂಟ್‌-ಖರೀದಿದಾರರ ನಡುವೆ ಏಕರೂಪದ ಮಾದರಿ ಒಪ್ಪಂದ ಅಗತ್ಯ ಎಂದು ಸುಪ್ರೀಂ ಕೋರ್ಟ್‌ ಹೇಳಿದ್ದು, ಈ ಸಂಬಂಧ ಕೇಂದ್ರ ಸರಕಾರಕ್ಕೆ ನೋಟಿಸ್‌ ಜಾರಿಗೊಳಿಸಿದೆ.

ಮನೆ, ಫ್ಲ್ಯಾಟ್‌ ಖರೀದಿದಾರರ ಹಿತಾಸಕ್ತಿಗೆ ಒತ್ತು; ಏಕರೂಪದ ಒಪ್ಪಂದಕ್ಕೆ ಸುಪ್ರೀಂ ಕೋರ್ಟ್‌ ಒಲವು
Linkup
ಹೊಸದಿಲ್ಲಿ: ಮನೆ ಅಥವಾ ಫ್ಲ್ಯಾಟ್‌ಗಳನ್ನು ಕೊಳ್ಳುವ ಗ್ರಾಹಕರ ಹಿತ ರಕ್ಷಣೆಗಾಗಿ ಬಿಲ್ಡರ್‌ ಮತ್ತು ಖರೀದಿದಾರರು ಹಾಗೂ ಏಜೆಂಟ್‌-ಖರೀದಿದಾರರ ನಡುವೆ ಏಕರೂಪದ ಮಾದರಿ ಒಪ್ಪಂದ ಅಗತ್ಯ ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಪ್ರತಿಪಾದಿಸಿದೆ. ಈ ಸಂಬಂಧ ಕೇಂದ್ರ ಸರಕಾರಕ್ಕೆ ನೋಟಿಸ್‌ ಜಾರಿಗೊಳಿಸಿದೆ. ''ಮನೆ ಅಥವಾ ಫ್ಲ್ಯಾಟ್‌ ಖರೀದಿಸುವವರನ್ನು ಬಿಲ್ಡರ್‌ಗಳು ಶೋಷಿಸುವುದನ್ನು ತಪ್ಪಿಸಲು ಇಂಥ ಏಕರೂಪದ ಒಪ್ಪಂದ ಸಹಕಾರಿ. ಲಕ್ಷಾಂತರ ಮನೆ ಖರೀದಿದಾರರ ಹಿತಾಸಕ್ತಿ ರಕ್ಷಣೆಗೆ ಕೇಂದ್ರ ಸರಕಾರ ಏಕರೂಪದ ಬಿಲ್ಡರ್‌ - ಖರೀದಿದಾರ ಒಪ್ಪಂದಕ್ಕೆ ಕಾನೂನು ರಚಿಸುವುದು ಸೂಕ್ತ. ಸಾಮಾನ್ಯವಾಗಿ ಬಿಲ್ಡರ್‌ಗಳು ಮಾಡುವ ಒಪ್ಪಂದದಲ್ಲಿ ಗ್ರಾಹಕರ ಹಿತಾಸಕ್ತಿ ನೇಪಥ್ಯಕ್ಕೆ ಸರಿದಿರುತ್ತದೆ,'' ಎಂದು ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್‌ ಹೇಳಿದರು. ಗ್ರಾಹಕರ ಹಕ್ಕುಗಳ ರಕ್ಷಣೆಗೆ 2016ರ ರೇರಾ ಕಾಯಿದೆಗೆ ಅನುಗುಣವಾಗಿ, ಬಿಲ್ಡರ್‌, ಏಜೆಂಟ್‌, ಖರೀದಿದಾರರ ನಡುವೆ ಏಕರೂಪದ ಮಾದರಿ ಒಪ್ಪಂದ ರಚಿಸಲು ಕೇಂದ್ರ ಸರಕಾರಕ್ಕೆ ಮಾರ್ಗದರ್ಶನ ನೀಡುವಂತೆ ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. ವಕೀಲ ಹಾಗೂ ಬಿಜೆಪಿ ನಾಯಕರಾದ ಅಶ್ವಿನಿ ಉಪಾಧ್ಯಾಯ ಅವರು "ಮಾದರಿ ಬಿಲ್ಡರ್‌ - ಖರೀದಿದಾರ ಒಪ್ಪಂದ' ಮತ್ತು ಮಾದರಿ ಏಜೆಂಟ್‌-ಖರೀದಿದಾರ ಒಪ್ಪಂದ'ವನ್ನು ಜಾರಿಗೊಳಿಸಲು ಎಲ್ಲ ರಾಜ್ಯಗಳಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಪಿಐಎಲ್‌ ಸಲ್ಲಿಸಿದ್ದರು. ಈ ಮೂಲಕ ಗ್ರಾಹಕರಿಗೆ ಆಗುತ್ತಿರುವ ಮಾನಸಿಕ, ದೈಹಿಕ ಮತ್ತು ಹಣಕಾಸು ಹಾನಿಯನ್ನು ತಪ್ಪಿಸಬೇಕು," ಎಂದು ಮನವಿ ಮಾಡಿದ್ದರು. ವಸತಿ ಸಚಿವಾಲಯವು ಈ ಹಿಂದೆ ವಸತಿ ಯೋಜನೆಗಳಿಗೆ ಮಾದರಿ ಬಿಲ್ಡರ್‌ - ಖರೀದಿದಾರ ಒಪ್ಪಂದವನ್ನು ಕೈಗೊಂಡಿತ್ತು. ಆದರೆ ಯಾವುದೇ ರಾಜ್ಯ ಇದನ್ನು ಪಾಲಿಸಿರಲಿಲ್ಲ. ಮಾದರಿ ಒಪ್ಪಂದವು ಖರೀದಿದಾರರ ಹಿತರಕ್ಷಣೆ, ವಿಳಂಬಿತ ಪಾವತಿಗೆ ಬಡ್ಡಿ ದರ, ಮನೆಯ ಸ್ವಾಧೀನ ವಿಳಂಬಕ್ಕೆ ಪರಿಹಾರ ಇತ್ಯಾದಿ ಅಂಶಗಳನ್ನು ಒಳಗೊಂಡಿತ್ತು. ಬಿಲ್ಡರ್‌ಗಳು, ಪ್ರಮೊಟರ್ಸ್ ಮತ್ತು ಏಜೆಂಟರು ಏಕಪಕ್ಷೀಯ ಒಪ್ಪಂದಗಳ ಮೂಲಕ ಗ್ರಾಹಕರ ಶೋಷಣೆ ನಡೆಸುತ್ತಾರೆ. ವಸತಿಯ ಹಸ್ತಾಂತರದಲ್ಲಿ ಭಾರಿ ವಿಳಂಬದ ನಂತರ ಗ್ರಾಹಕರು ದೂರು ಸಲ್ಲಿಸಿದರೂ ಪೊಲೀಸರು ಎಫ್‌ಐಆರ್‌ ದಾಖಲಿಸದ ನಿದರ್ಶನಗಳು ಹಲವಾರು ಇವೆ. ಬಿಲ್ಡರ್‌ಗಳು ಪದೇ ಪದೆ ವಸತಿ ಹಸ್ತಾಂತರದ ದಿನಾಂಕವನ್ನು ಮುಂದೂಡುತ್ತಲೇ ಹೋಗುತ್ತಾರೆ. ಇದು ಏಕಪಕ್ಷೀಯ ಹಾಗೂ ಅಕ್ರಮವಾಗಿದೆ. ಇದೆಲ್ಲವೂ ಕ್ರಮಿನಲ್‌ ವಂಚನೆ, ವಿಶ್ವಾಸ ನಷ್ಟ, ಅಪ್ರಾಮಾಣಿಕತೆ, ಅಪಾರದರ್ಶಕತೆಯ ವ್ಯವಹಾರವಾಗುತ್ತದೆ ಎಂದು ಅರ್ಜಿದಾರರು ವಿವರಿಸಿದ್ದರು. ದೇಶಾದ್ಯಂತ ಹಲವಾರು ಡೆವಲಪರ್‌ಗಳು ರಿಯಾಲ್ಟಿ ಯೋಜನೆಯ ಬಿಡುಗಡೆಗೆ ಮುನ್ನ ನಾನಾ ಆಫರ್‌ಗನ್ನು ಮುಂದಿಡುತ್ತಾರೆ. ಆದರೆ ಸಂಬಂಧಿಸಿದ ಪ್ರಾಧಿಕಾರಗಳಿಂದ ಮತ್ತು ನಿಯಂತ್ರಕಗಳಿಂದ ಅಗತ್ಯ ಪರವಾನಗಿಗಳನ್ನೂ ಪಡೆದಿರುವುದಿಲ್ಲ. ಇದನ್ನು ''ಸಾಫ್ಟ್‌ ಲಾಂಚ್‌' ಅಥವಾ ''ಪ್ರಿ-ಲಾಂಚ್‌' ಎನ್ನಲಾಗುತ್ತದೆ. ಇದು ಕಾನೂನು ಬಾಹಿರವಾಗಿದ್ದರೂ, ಇದುವರೆಗೆ ಒಬ್ಬನೇ ಒಬ್ಬ ಬಿಲ್ಡರ್‌ ವಿರುದ್ಧ ಕಾನೂನು ಕ್ರಮ ಜರುಗಿಸಿದ ನಿದರ್ಶನವಿಲ್ಲ ಎಂದು ಅರ್ಜಿದಾರರು ಹೇಳಿದ್ದಾರೆ. ಬಿಗ್‌ ಬಿಲಿಯನ್‌ ಡೇಸ್‌ ಶುರು ಬೆಂಗಳೂರು: ಫ್ಲಿಪ್‌ಕಾರ್ಟ್‌ನ ವಾರ್ಷಿಕ ವಿಶೇಷ ವ್ಯಾಪಾರ ಮೇಳವಾದ ಬಿಗ್‌ ಬಿಲಿಯನ್‌ ಡೇಸ್‌ ಆರಂಭವಾಗಿದ್ದು, ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದು ಸಂಸ್ಥೆ ತಿಳಿಸಿದೆ. ಗ್ರಾಹಕರು ಉತ್ಸಾಹದಲ್ಲಿ ಭಾಗವಹಿಸುತ್ತಿದ್ದು, 124 ಹೊಸ ನಗರ ಮತ್ತು ಪಟ್ಟಣಗಳಿಗೆ ನೆಟ್‌ವರ್ಕ್ ವಿಸ್ತರಣೆಯಾಗಿದೆ. ಕಟ್ಟಕಡೆಯ ಗ್ರಾಹಕರಿಗೂ ಉತ್ಪನ್ನಗಳನ್ನು ತಲುಪಿಸುವ ಸಲುವಾಗಿ 1 ಲಕ್ಷಕ್ಕೂ ಹೆಚ್ಚು ಕಿರಾಣಾ ಅಂಗಡಿಗಳನ್ನು ನೆಟ್‌ವರ್ಕ್‌ಗೆ ಸೇರ್ಪಡೆಗೊಳಿಸಲಾಗಿದೆ. ಪಟನಾ, ಲಖನೌ, ವೈಜಾಗ್‌ನಲ್ಲಿ ಗ್ರಾಹಕರಿಂದ ಬೇಡಿಕೆ ಹೆಚ್ಚಳವಾಗಿದೆ. ಮೊಬೈಲ್‌, ಎಲೆಕ್ಟ್ರಾನಿಕ್ಸ್‌, ಲೈಫ್‌ಸ್ಟೈಲ್‌ ಇತ್ಯಾದಿ ವಲಯದಲ್ಲಿ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಳವಾಗಿದೆ ಎಂದು ಕಂಪನಿಯ ಉಪಾಧ್ಯಕ್ಷ ನಂದಿತಾ ಸಿನ್ಹಾ ತಿಳಿಸಿದ್ದಾರೆ.