ರಾಜೇಶ್ ಗೌಡ ಅವರನ್ನು ಬಿಡಿಎ ಆಯುಕ್ತ ಹುದ್ದೆಗೆ ನೇಮಕ ಮಾಡಿದ ಆದೇಶ ಹಿಂಪಡೆಯಬೇಕು ಹಾಗೂ ಸೂಕ್ತ ಅರ್ಹತೆಯಿರುವ ಅಧಿಕಾರಿಯನ್ನು ನೇಮಿಸಬೇಕೆಂದು ಕೋರಿ ಅರ್ಜಿದಾರರು ನ.3ರಂದು ಸರಕಾರಕ್ಕೆ ಮನವಿ ಪತ್ರ ನೀಡಿದ್ದಾರೆ. ಅದನ್ನು ಈವರೆಗೂ ಪರಿಗಣಿಸಿಲ್ಲ ಎಂದು ಆಕ್ಷೇಪಿಸಿರುವ ಅರ್ಜಿದಾರರು, ಸೂಕ್ತ ಅರ್ಹತೆ ಹೊಂದಿರದ ಕಾರಣಕ್ಕೆ ಬಿಡಿಎ ಆಯುಕ್ತ ಹುದ್ದೆಗೆ ರಾಜೇಶ್ ಗೌಡ ಅವರನ್ನು ನೇಮಿಸಿ ಸರಕಾರ ಹೊರಡಿಸಿದ ಆದೇಶ ರದ್ದುಪಡಿಸಬೇಕು ಎಂದು ಅರ್ಜಿದಾರರ ಪರ ವಕೀಲರು ನ್ಯಾಯಾಲಯವನ್ನು ಕೋರಿದರು.
ಬೆಂಗಳೂರು: ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ಎಂ.ಬಿ.ರಾಜೇಶ್ ಗೌಡ ನೇಮಕ ಪ್ರಶ್ನಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ಬುಧವಾರ ಬಿಡಿಎ ಮತ್ತು ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.
ವಕೀಲ ಮೋಹನ್ ಕುಮಾರ್ ಸಲ್ಲಿಸಿದ್ದ ಅರ್ಜಿ ಮನವಿ ಆಲಿಸಿದ ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ರಜಾ ಕಾಲದ ವಿಭಾಗೀಯ ಪೀಠ, ರಾಜೇಶ್ ಗೌಡ ಸೇರಿದಂತೆ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ನೀಡಿ ವಿಚಾರಣೆಯನ್ನು ಮುಂದೂಡಿತು. ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಎಕ್ಸ್.ಎಂ.ಜೋಸೆಫ್, ಬೆಂಗಳೂರು ಅಭಿವೃದ್ಧಿ ಕಾಯಿದೆ- 1976ರ ಸೆಕ್ಷನ್ 12ರ ಪ್ರಕಾರ ವಿಭಾಗೀಯ ಆಯುಕ್ತರಿಗಿಂತ ಕಡಿಮೆ ಇರದ ಶ್ರೇಣಿಯ ಅಧಿಕಾರಿಯನ್ನು ಹುದ್ದೆಗೆ ನೇಮಕ ಮಾಡಬೇಕಿದೆ. ಆದರೆ, ವಿಭಾಗೀಯ ಆಯುಕ್ತರಿಗಿಂತ ಕಡಿಮೆ ಶ್ರೇಣಿಯ ಅಧಿಕಾರಿಯಾಗಿರುವ ಎಂ.ಬಿ.ರಾಜೇಶ್ ಗೌಡ ಅವರನ್ನು ಬಿಡಿಎ ಆಯುಕ್ತ ಹುದ್ದೆಗೆ ನೇಮಿಸಿ ಸರಕಾರ 2021ರ ಏ. 30ರಂದು ಆದೇಶಿಸಿದೆ. ಹಾಗಾಗಿ, ಬಿಡಿಎ ಆಯುಕ್ತರ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಲು ರಾಜೇಶ್ ಗೌಡ ಅವರಿಗೆ ಸೂಕ್ತ ಅರ್ಹತೆ ಇಲ್ಲವಾಗಿದೆ. ಅರ್ಹತೆ ಇಲ್ಲದವರನ್ನು ನೇಮಿಸುವುದರಿಂದ ಆಯುಕ್ತರ ಹುದ್ದೆಯ ಕರ್ತವ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ರಾಜೇಶ್ ಗೌಡ ಅವರನ್ನು ಬಿಡಿಎ ಆಯುಕ್ತ ಹುದ್ದೆಗೆ ನೇಮಕ ಮಾಡಿದ ಆದೇಶ ಹಿಂಪಡೆಯಬೇಕು ಹಾಗೂ ಸೂಕ್ತ ಅರ್ಹತೆಯಿರುವ ಅಧಿಕಾರಿಯನ್ನು ನೇಮಿಸಬೇಕೆಂದು ಕೋರಿ ಅರ್ಜಿದಾರರು ನ.3ರಂದು ಸರಕಾರಕ್ಕೆ ಮನವಿ ಪತ್ರ ನೀಡಿದ್ದಾರೆ. ಅದನ್ನು ಈವರೆಗೂ ಪರಿಗಣಿಸಿಲ್ಲ ಎಂದು ಆಕ್ಷೇಪಿಸಿರುವ ಅರ್ಜಿದಾರರು, ಸೂಕ್ತ ಅರ್ಹತೆ ಹೊಂದಿರದ ಕಾರಣಕ್ಕೆ ಬಿಡಿಎ ಆಯುಕ್ತ ಹುದ್ದೆಗೆ ರಾಜೇಶ್ ಗೌಡ ಅವರನ್ನು ನೇಮಿಸಿ ಸರಕಾರ ಹೊರಡಿಸಿದ ಆದೇಶ ರದ್ದುಪಡಿಸಬೇಕು ಎಂದು ನ್ಯಾಯಾಲಯವನ್ನು ಕೋರಿದರು.