'ಬೆಂಗಳೂರು ಮೆಟ್ರೋ ಅವಧಿ ವಿಸ್ತರಿಸಿ': ಬೆಳಗ್ಗೆ 5 ರಿಂದ ರಾತ್ರಿ 11ರವರೆಗೆ ಕಾರ್ಯಾಚರಣೆಗೆ ಒತ್ತಾಯ

ಕೋವಿಡ್‌ ಪೂರ್ವದಂತೆಯೇ ಮುಂಜಾನೆ 5 ಗಂಟೆಯಿಂದ ರಾತ್ರಿ 11ರವರೆಗೆ ಮೆಟ್ರೋ ರೈಲುಗಳನ್ನು ಕಾರ್ಯಾಚರಣೆಗೊಳಿಸಬೇಕೆಂಬುದು ಪ್ರಯಾಣಿಕರ ಒತ್ತಾಯವಾಗಿದೆ. ಏಕೆಂದರೆ ಕೋವಿಡ್‌ ಅಬ್ಬರ ಸಾಕಷ್ಟು ತಗ್ಗಿದ್ದು, ಜನಜೀವನವೂ ಸಹಜ ಸ್ಥಿತಿಗೆ ಮರಳಿದೆ.

'ಬೆಂಗಳೂರು ಮೆಟ್ರೋ ಅವಧಿ ವಿಸ್ತರಿಸಿ': ಬೆಳಗ್ಗೆ 5 ರಿಂದ ರಾತ್ರಿ 11ರವರೆಗೆ ಕಾರ್ಯಾಚರಣೆಗೆ ಒತ್ತಾಯ
Linkup
: ಕೊರೊನಾ ಹಿನ್ನೆಲೆಯಲ್ಲಿ ಅನೇಕ ನಿರ್ಬಂಧಗಳೊಂದಿಗೆ '' ರೈಲು ಸೇವೆ ಕಲ್ಪಿಸುತ್ತಿರುವ ಬಿಎಂಆರ್‌ಸಿಎಲ್‌, ವಾಣಿಜ್ಯ ಸಂಚಾರದ ಅವಧಿಯನ್ನು ವಿಸ್ತರಿಸುತ್ತಿಲ್ಲ. ಇದರಿಂದ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಕೋವಿಡ್‌ ಅಬ್ಬರ ಸಾಕಷ್ಟು ತಗ್ಗಿದ್ದು, ಜನಜೀವನವೂ ಸಹಜ ಸ್ಥಿತಿಗೆ ಮರಳಿದೆ. ಆದರೆ, ಮಹಾನಗರದಲ್ಲಿ ಪ್ರಮುಖ ಸಾರಿಗೆ ಸಾಧನವಾಗಿರುವ ಮೆಟ್ರೋ ರೈಲು ಸೇವೆ ಮಾತ್ರ ರಾತ್ರಿ 9 ಗಂಟೆಗೆ ಕೊನೆಗೊಳ್ಳುತ್ತಿದೆ. ಹೀಗಾಗಿ, ಉದ್ಯೋಗಿಗಳು, ವರ್ತಕರು, ಗ್ರಾಹಕರು ಹಾಗೂ ವಿದ್ಯಾರ್ಥಿಗಳು ಪ್ರಯಾಣಕ್ಕಾಗಿ ವೈಯಕ್ತಿಕ ವಾಹನ, ಬಸ್‌, ಟ್ಯಾಕ್ಸಿ ಅಥವಾ ಆಟೋಗಳನ್ನು ಅವಲಂಬಿಸುವ ಸ್ಥಿತಿ ನಿರ್ಮಾಣವಾಗಿದೆ. ವಿಶೇಷವಾಗಿ ಮೆಜೆಸ್ಟಿಕ್‌, ಚಿಕ್ಕಪೇಟೆ, ಪೀಣ್ಯ, ಎಂ. ಜಿ. ರಸ್ತೆ, ಜಯನಗರ, ರಾಜಾಜಿನಗರ, ಮಲ್ಲೇಶ್ವರ ಸೇರಿದಂತೆ ಇತರೆ ಪ್ರದೇಶಗಳಲ್ಲಿನ ಅಂಗಡಿ-ಮುಂಗಟ್ಟುಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ರಾತ್ರಿ ವೇಳೆ ರೈಲು ಸೇವೆ ಸಿಗದಂತಾಗಿದೆ. ಕೋವಿಡ್‌ ಪೂರ್ವದಂತೆಯೇ ಮುಂಜಾನೆ 5 ಗಂಟೆಯಿಂದ ರಾತ್ರಿ 11ರವರೆಗೆ ಮೆಟ್ರೋ ರೈಲುಗಳನ್ನು ಕಾರ್ಯಾಚರಣೆಗೊಳಿಸಬೇಕೆಂಬುದು ಪ್ರಯಾಣಿಕರ ಒತ್ತಾಯವಾಗಿದೆ. ದಟ್ಟಣೆ ಸಮಯದಲ್ಲಿ 5 ನಿಮಿಷಕ್ಕೆ ಮತ್ತು ಉಳಿದ ಸಮಯದಲ್ಲಿ 15 ನಿಮಿಷಕ್ಕೊಂದು ರೈಲು ಓಡಿಸಲಾಗುತ್ತಿದೆ. ಹೀಗಾಗಿ, ಪ್ರಯಾಣಿಕರು ಸಮರ್ಪಕ ಮೆಟ್ರೋ ಸೌಲಭ್ಯವಿಲ್ಲದೆ ಹೈರಾಣಾಗುವಂತಾಗಿದೆ. ಆದಾಯ ಕೂಡ ಹೆಚ್ಚಾಗಲಿದೆ: ಸದ್ಯ ಬೆಳಗ್ಗೆ 7ರಿಂದ ಸಂಜೆ 9 ಗಂಟೆವರೆಗೆ ರೈಲು ಸಂಚಾರ ಇರುವುದರಿಂದ ಪ್ರತಿದಿನ ಸರಾಸರಿ 1.35 ಲಕ್ಷ ಜನರು ಸಂಚಾರ ಮಾಡುತ್ತಿದ್ದಾರೆ. ಅವಧಿಯನ್ನು ಹೆಚ್ಚು ಮಾಡುವುದರಿಂದ ಪ್ರಯಾಣಿಕರ ಸಂಖ್ಯೆಯ ಹೆಚ್ಚಳದ ಜತೆಗೆ ಸಂಸ್ಥೆಯ ಆದಾಯ ಕೂಡ ಹೆಚ್ಚಾಗಲಿದೆ ಎನ್ನುವುದು ಸಾರ್ವಜನಿಕರ ಒತ್ತಾಯ. ಪೆಟ್ರೋಲ್‌ ದರದಲ್ಲಿ ಕಂಗೆಟ್ಟ ಜನ: ಸದ್ಯ ನೂರರ ಗಡಿ ದಾಟಿರುವ ಪೆಟ್ರೋಲ್‌ ದರಕ್ಕೆ ಜನರು ಕಂಗೆಟ್ಟು ಹೋಗಿದ್ದಾರೆ. ಸ್ವಂತ ವಾಹನ ರಸ್ತೆಗಿಳಿಸಬೇಕಾದರೆ ಒಂದು ಸಾರಿ ಯೋಚನೆ ಮಾಡಬೇಕಾದ ಪರಿಸ್ಥಿತಿ ಇದೆ. ಇದರಿಂದ ಹೆಚ್ಚಿನವರು ಸ್ವಂತ ವಾಹನ ಬದಿಗಿಟ್ಟು ಸಾರ್ವಜನಿಕ ವಾಹನಗಳಿಗೆ ಮೊರೆ ಹೋಗಿದ್ದಾರೆ. ಇದರಿಂದ ಕ್ಷಿಪ್ರ ಗತಿಯಲ್ಲಿ, ಸಮಯಕ್ಕೆ ಸರಿಯಾಗಿ ತಲುಪಲು ಸಹಾಯಕವಾಗಿರುವ ಮೆಟ್ರೋ ರೈಲಿನ ಅವಧಿ ಹೆಚ್ಚಿಸುವುದನ್ನೇ ಬಹಳಷ್ಟು ಜನರು ಚಾತಕ ಪಕ್ಷಿಯ ಹಾಗೆ ಕಾಯುತ್ತಿದ್ದಾರೆ. ಮಳೆಯಿಂದ ದ್ವಿಚಕ್ರ ಸವಾರರು ಪರದಾಟ: ನಗರದಲ್ಲಿ ಕೆಲವು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಇದರಿಂದ ದ್ವಿಚಕ್ರ ಸವಾರರು ಹೈರಾಣಾಗಿ ಹೋಗಿದ್ದಾರೆ. ಸಂಜೆ ವೇಳೆಯಲ್ಲಿಯೇ ಹೆಚ್ಚು ಮಳೆ ಸುರಿಯುತ್ತಿರುವುದರಿಂದ ಬೈಕ್‌ ಓಡಿಸುವುದಕ್ಕೆ ತೊಂದರೆಯಾಗುತ್ತಿದೆ. ಬಹಳಷ್ಟು ಕಡೆ ರಸ್ತೆಗಳು ಹಾಳಾಗಿದ್ದು, ಜೀವ ಕೈಯಲ್ಲಿಟ್ಟುಕೊಂಡು ಸವಾರಿ ಮಾಡಬೇಕಾದ ಸನ್ನಿವೇಶ ಎದುರಾಗಿದೆ. ಮೆಟ್ರೋದಲ್ಲಿ ಹೋಗುವುದರಿಂದ ಈ ಎಲ್ಲಾ ಸಮಸ್ಯೆಯಿಂದ ಪಾರಾಗಬಹುದು ಎನ್ನುವುದು ಬಹಳಷ್ಟು ಜನರ ಬಯಕೆ. ಕ್ರೈಮ್‌ ಹೆಚ್ಚಳ ಏಕಾಂಗಿ ಸಂಚಾರಕ್ಕೆ ಭಯ: ಇನ್ನೊಂದೆಡೆ ನಗರದಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಕೂಡ ಹೆಚ್ಚಾಗಿದ್ದು ಜನರಲ್ಲಿ ಭಯ ಮೂಡಿಸಿದೆ. ಸಂಜೆ ಒಬ್ಬರೇ ಬೈಕ್‌ ಮೇಲೆ ಹೋಗುವುದಕ್ಕೂ ಹೆದರಿಕೊಳ್ಳುತ್ತಿದ್ದಾರೆ. ಅಡ್ಡಗಟ್ಟಿ ಸುಲಿಗೆ ಮಾಡುವ ಭಯವೂ ಇದೆ. ಎಲ್ಲರೂ ಮಾಸ್ಕ್‌ ಹಾಕಿಕೊಳ್ಳುವುದರಿಂದ ಕಂಡು ಹಿಡಿಯುವುದಕ್ಕೂ ಆಗದ ಸನ್ನಿವೇಶವಿದೆ. ಈ ಹಿನ್ನೆಲೆಯಲ್ಲಿ ಮೆಟ್ರೋ ಸೇವೆಯನ್ನು 11 ಗಂಟೆವರೆಗೂ ವಿಸ್ತರಿಸುವುದರಿಂದ ಸಾಕಷ್ಟು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ.