![](https://vijaykarnataka.com/photo/82063301/photo-82063301.jpg)
ಬೆಂಗಳೂರು: ಪುಟ್ಟೇನಹಳ್ಳಿ ಡಬಲ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಪ್ರಕರಣದ ಆರೋಪಿಯ ಕಾಲಿಗೆ ಗುಂಡು ಹಾರಿಸಿ ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಸಿಲಿಕಾನ್ ಸಿಟಿಯನ್ನು ಬೆಚ್ಚಿಬೀಳಿಸಿದ್ದ ಕೊಲೆ ಪ್ರಕರಣದ ಆರೋಪಿಯನ್ನು ಬಂಧಿಸಿದ್ದಾರೆ. ಕೊಲೆ ಆರೋಪಿ ಮಂಜುನಾಥ್ ಅಲಿಯಾಸ್ ಅಂಬಾರಿ ಮೇಲೆ ಪುಟ್ಟೇನಹಳ್ಳಿ ಸೂಪರ್ ಕಾಪ್ ಕಿಶೋರ್ ಗುಂಡುಹಾರಿಸಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಈಗ ಯಾವ ಪ್ರಕರಣದಲ್ಲಿ ಗುಂಡೇಟು? ಮಂಜುನಾಥ್ ಅಲಿಯಾಸ್ ಅಂಬಾರಿ ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಗಳಲ್ಲಿ 10ಕ್ಕೂ ಹೆಚ್ಚು ಕೇಸ್ಗಳಿವೆ. ಆದರೆ ಇತ್ತೀಚೆಗೆ ಮಂಜುನಾಥ್ ಮನೆಯಲ್ಲಿದ್ದ ಹಣ ಮೊಬೈಲ್, ಚಿನ್ನಾಭರಣವನ್ನು ದೋಚುವ ಸಲುವಾಗಿ ಇಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿದ್ದ. ಏಪ್ರಿಲ್ 7ರ ರಾತ್ರಿ ಜೆಪಿ ನಗರದ 7ನೇ ಹಂತದಲ್ಲಿನ ಮನೆಯಲ್ಲಿ ಮಮತಾ ಬಸು ಮತ್ತು ದೇವ ಬ್ರಥಾ ಅವರ ಮೇಲೆ ಹಲ್ಲೆ ನಡೆಸಿದ್ದ ಮಂಜುನಾಥ್ ಅವರಿಬ್ಬರನ್ನು ಬರ್ಬರವಾಗಿ ಕೊಲೆ ಮಾಡಿದ್ದ.
ನಂತರ ಅಲ್ಲಿಂದ ಹಣ ದೋಚಿ ಪರಾರಿಯಾಗಿದ್ದ. ಇದೀಗ ಇರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆತನನ್ನು ಬಂಧಿಸಲು ಪೊಲೀಸರು ಮುಂದಾಗಿದ್ದಾರೆ. ಈ ವೇಳೆ ಆತ ಪೊಲೀಸರ ಮೇಲೆ ದಾಳಿ ನಡೆಸಲು ಮುಂದಾಗಿದ್ದಾನೆ. ಈ ಹಿನ್ನೆಲೆ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ.
ಮರ್ಡರ್ ಆದವರು ಯಾರು?
ದೇವ ಬ್ರಥಾ ಒಡಿಶಾ ಮೂಲದವರಾಗಿದ್ದು, ಇವರಿಗೆ ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಕೆಲಸ ದೊರೆದಿತ್ತು. ಈ ವೇಳೆ ಈತ ಉಳಿದುಕೊಳ್ಳಲು ಬೆಂಗಳೂರಿನಲ್ಲಿ ಈಗಾಗಲೇ ವಾಸವಾಗಿರುವ ಮಮತಾ ಬಸು ಎಂಬವರ ಮನೆಗೆ ಬಂದಿದ್ದ. ಮಮತಾ ಬಸು ಅವರ ಪುತ್ರನ ಗೆಳೆಯ ದೇವ ಬ್ರಥಾ ಆಗಿರುವ ಹಿನ್ನೆಲೆ ಮಮತಾ ಅವರು ತಮ್ಮ ಮನೆಯಲ್ಲಿ ವಾಸ್ತವ್ಯದ ವ್ಯವಸ್ಥೆ ಮಾಡಿದ್ದರು. ಆದರೆ ಒಂದು ದಿನ ಅಂದರೆ ಏ. 7 ರಂದು ಸಿಗರೇಟು ಸೇದಲು ಚಿಲ್ಲರೆ ಅಂಗಡಿ ಸಮೀಪ ಹೋಗಿದ್ದ ದೇವಾಮೃತ್ ಮೆಹ್ರಾ ಅಂಗಡಿಗೆ ಗೂಗಲ್ ಪೇ ಮಾಡಲು ಪ್ರಯತ್ನಿಸಿದ್ದ.
ಆದರೆ, ತಾಂತ್ರಿಕ ದೋಷದಿಂದ ಹಣವನ್ನು ಚಿಲ್ಲರೆ ಅಂಗಡಿಗೆ ಕೊಡಲು ಸಾಧ್ಯವಾಗಿಲ್ಲ. ಪಕ್ಕದಲ್ಲಿಯೇ ಇದ್ದ ಡಕಾಯಿತ ಮಂಜುನಾಥ್ 12 ರೂ. ಪಾವತಿಸಿದ್ದ. ಇದಕ್ಕೆ ದೇವಾಮೃತ್ ಮೆಹ್ರಾ ಮುಗಳು ನಗೆಯಿಂದ ಥ್ಯಾಂಕ್ಯೂ ಅಂತ ಹೇಳಿದ್ದ. ಈ ಪಾತಕಿ 12 ರೂ. ಪಾವತಿಸುವ ಹಿಂದೆ ಕಿರಾತಕ ಪ್ಲಾನ್ ರೂಪಿಸಿದ್ದ. ದೇವ್ ಕೈಯಲ್ಲಿ ದುಬಾರಿ ಮೌಲ್ಯದ ಮೊಬೈಲ್ ಇತ್ತು. ಈತನ ಮೊಬೈಲ್ ಎಗರಿಸುವ ಪ್ಲಾನ್ ಮಾಡಿದ್ದ. ಕೊತ್ತನೂರು ದಿಣ್ಣೆಯಲ್ಲಿಯೇ ವಾಸವಾಗಿದ್ದ ಪಾತಕಿ ಮಂಜುನಾಥ್, ದೇವಾಮೃತ್ ಮೆಹ್ರಾನನ್ನು ಹಿಂಬಾಲಿಸಿಕೊಂಡೇ ಮನೆಗೆ ಹೋಗಿದ್ದ.
ಡೂಪ್ಲೆಕ್ಸ್ ಮನೆ ನೋಡಿದಾಗ, ಮಹಿಳೆಯೊಬ್ಬಳು ಕಂಡಿದ್ದಳು. ಆಕೆ ಕೊರಳಿನಲ್ಲಿ ಚಿನ್ನದ ಸರ ಮತ್ತು ಕಿವಿಯೋಲೆ ನೋಡಿದ್ದ. ಈತ ಶ್ರೀಮಂತ ಮನೆತನವನಿದ್ದು, ದರೋಡೆ ಮಾಡಬೇಕು ಅಂತ ಕಿರಾತಕ ಅವತ್ತೇ ಪ್ಲಾನ್ ರೂಪಿಸಿದ್ದ. ಸ್ವಲ್ಪ ದಿನ ಬಿಟ್ಟು ರಾತ್ರಿ ದರಡೋಡೆ ನಡೆಸಲು ಮಂಜುನಾಥ್ ದೇವ್ ಮನೆ ಬಳಿ ಹೋಗಿದ್ದಾನೆ. ಈ ವೇಳೆ ದೇವ್‌ಗೆ ಎಚ್ಚರವಾಗಿದೆ. ಇದನ್ನು ಕಂಡ ಮಂಜುನಾಥ್ ಕೂಡಲೇ ತನ್ನ ಬಳಿ ಇದ್ದ ಚಾಕುವಿನಿಂದ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಆತನ ಬಳಿಯಿದ್ದ ನಗದು , ಎಟಿಎಂ ಕಾರ್ಡ್, ಮೊಬೈಲ್ ಕದ್ದಿದ್ದಾನೆ.
ನಂತರ ಕೊಠಡಿಯಲ್ಲಿ ಮಲಗಿದ್ದ ಮಮತಾ ಬಸು ತಂಗಿದ್ದಲ್ಲಿ ತೆರಳಿ ಅವರನ್ನು ಕತ್ತು ಸೀಳಿ ಹತ್ಯೆ ಮಾಡಿ ಚಿನ್ನಾಭರಣ ದೋಚಿ ಎಸ್ಕೇಪ್ ಆಗಿದ್ದ. ಕೊಲೆ ಮಾಡಿದ ಬಳಿಕ ಮನೆಗೆ ಹಾಕಿದ್ದ ಸಿಸಿಟಿವಿಯ ಡಿವಿಆರ್‌ನ್ನು ಕದ್ದಿದ್ದಾನೆ. ಯಾರಿಗೂ ಅನುಮಾನ ಬಾರದಂತೆ ರಕ್ತದ ಬಟ್ಟೆಯನ್ನು ಅಲ್ಲೇ ಬಿಸಾಡಿ ದೇವಾಮೃತ್ ಮೆಹ್ರಾ ಧರಿಸಿದ್ದ ಬಟ್ಟೆಯನ್ನು ಹಾಕಿಕೊಂಡು ಕದ್ದ ಬೈಕ್‌ನಲ್ಲಿ ಪರಾರಿಯಾಗಿದ್ದಾನೆ. ಯಾವ ಕ್ಲೂ ಬಿಡದೇ ಮಂಜುನಾಥ್ ಅಲ್ಲಿಂದ ಪರಾರಿಯಾಗಿದ್ದಾನೆ. ಏ. 8 ರಂದು ಬೆಳಗ್ಗೆ ಜೋಡಿ ಇಡೀ ಬೆಂಗಳೂರನ್ನು ಬೆಚ್ಚಿ ಬೀಳಿಸಿತ್ತು.