ಬೆಂಗಳೂರು: 4 ಸೆಂ.ಮೀ. ವಿಗ್ರಹ ನುಂಗಿದ ಬಾಲಕ, ಹೊರತೆಗೆದ ಮಣಿಪಾಲ್‌ ಆಸ್ಪತ್ರೆ ವೈದ್ಯರ ತಂಡ

ಬಾಲಕನಿಗೆ ಗಂಟಲು, ಎದೆ ಭಾಗದಲ್ಲಿ ತೀವ್ರ ನೋವು ಆಗುತ್ತಿತ್ತು. ಉಗುಳು ನುಂಗಲೂ ಕಷ್ಟ ಆಗುತ್ತಿತ್ತು. ಆರಂಭದಲ್ಲಿ ಎದೆ ಮತ್ತು ಕುತ್ತಿಗೆಯ ಎಕ್ಸ್‌ರೇ ಮಾಡಲಾಯಿತು. ಈ ವೇಳೆ ದೇಹದಲ್ಲಿ ವಿಗ್ರಹ ಇರುವುದು ಖಚಿತವಾಯಿತು.

ಬೆಂಗಳೂರು: 4 ಸೆಂ.ಮೀ. ವಿಗ್ರಹ ನುಂಗಿದ ಬಾಲಕ, ಹೊರತೆಗೆದ ಮಣಿಪಾಲ್‌ ಆಸ್ಪತ್ರೆ ವೈದ್ಯರ ತಂಡ
Linkup
ಬೆಂಗಳೂರು: ಆಟವಾಡುವ ಸಮಯದಲ್ಲಿಆಕಸ್ಮಿಕವಾಗಿ 4 ಸೆಂ.ಮೀ. ಉದ್ದದ ಲೋಹದ ಗಣೇಶ ವಿಗ್ರಹವನ್ನು 3 ವರ್ಷದ ಬಾಲಕ ನುಂಗಿರುವ ಘಟನೆ ನಗರದಲ್ಲಿ ನಡೆದಿದೆ. ಮಣಿಪಾಲ್‌ ವೈದ್ಯರ ತಂಡ ಬಾಲಕನ ಹೊಟ್ಟೆಯಿಂದ ವಿಗ್ರಹ ತೆಗೆದು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ಮನೆಯಲ್ಲಿಆಟವಾಡುವಾಗ ಬಾಲಕ ವಿಗ್ರಹ ನುಂಗಿದ್ದನ್ನು ಗಮನಿಸಿದ್ದ ಪಾಲಕರು, ಕೂಡಲೇ ಹಳೇ ಏರ್‌ಪೋರ್ಟ್‌ ರಸ್ತೆಯ ಮಣಿಪಾಲ್‌ ಆಸ್ಪತ್ರೆಯ ಮಕ್ಕಳ ತುರ್ತುಚಿಕಿತ್ಸೆ ವಿಭಾಗಕ್ಕೆ ಬೆಳಗ್ಗೆ 8.40ರ ವೇಳೆಗೆ ಕರೆತಂದಿದ್ದಾರೆ. ಬಾಲಕನಿಗೆ ಉಗುಳು ನುಂಗುವುದು ಕೂಡ ಕಷ್ಟವಾಗುತ್ತಿತ್ತು. ಲೋಹದ ಗಣೇಶನ ವಿಗ್ರಹ ನುಂಗಿರುವ ವಿಚಾರವನ್ನು ವೈದ್ಯರಿಗೆ ಪಾಲಕರು ತಿಳಿಸಿದರು. ಕೂಡಲೇ ಚಿಕಿತ್ಸೆ ಆರಂಭಿಸಿದ ವೈದ್ಯರು, ಪರಿಶೀಲನೆ ನಡೆಸಿದಾಗ ವಿಗ್ರಹವು ಅನ್ನನಾಳದ ಮೇಲ್ಭಾಗದಲ್ಲಿ ಸಿಕ್ಕಿಕೊಂಡಿರುವುದು ಪತ್ತೆಯಾಗಿದೆ. ಬಾಲಕನಿಗೆ ಗಂಟಲು, ಎದೆ ಭಾಗದಲ್ಲಿ ತೀವ್ರ ನೋವು ಆಗುತ್ತಿತ್ತು. ಉಗುಳು ನುಂಗಲೂ ಕಷ್ಟ ಆಗುತ್ತಿತ್ತು. ಆರಂಭದಲ್ಲಿ ಎದೆ ಮತ್ತು ಕುತ್ತಿಗೆಯ ಎಕ್ಸ್‌ರೇ ಮಾಡಲಾಯಿತು. ಈ ವೇಳೆ ದೇಹದಲ್ಲಿ ವಿಗ್ರಹ ಇರುವುದು ಖಚಿತವಾಯಿತು. ಬಳಿಕ ಎಂಡೋಸ್ಕೋಪಿ ಮೂಲಕ ಕೇವಲ ಒಂದು ತಾಸಿನೊಳಗೆ ಗಣೇಶನ ವಿಗ್ರಹವನ್ನು ವೈದ್ಯರ ತಂಡ ಸುರಕ್ಷಿತವಾಗಿ ಹೊರ ತೆಗೆದು, ಬಾಲಕನ ಜೀವ ಉಳಿಸುವಲ್ಲಿ ಯಶಸ್ವಿಯಾಗಿದೆ. ಈ ಕುರಿತು ಮಾಹಿತಿ ನೀಡಿದ ಮಣಿಪಾಲ್‌ ಆಸ್ಪತ್ರೆಯ ಮಕ್ಕಳ ಶಸ್ತ್ರ ಚಿಕಿತ್ಸಕ ಡಾ. ಕೆ.ಪಿ.ಶ್ರೀಕಾಂತ್‌, ''ಸುರಕ್ಷತೆ ದೃಷ್ಟಿಯಿಂದ ವಿಗ್ರಹವನ್ನು ಅನ್ನನಾಳದಿಂದ ಹೊಟ್ಟೆಗೆ ತಳ್ಳಿ ಅಲ್ಲಿಂದ ಹೊರತೆಗೆಯಲಾಯಿತು. ವಿಗ್ರಹವನ್ನು ನೇರವಾಗಿ ತೆಗೆದರೆ ಅನ್ನನಾಳಕ್ಕೆ ಹಾನಿಯಾಗುತ್ತಿತ್ತು. ಮೊನಚಾದ ಪದಾರ್ಥಗಳನ್ನು ಅನ್ನನಾಳ ಮೂಲಕ ಹೊರ ತೆಗೆಯುವುದು ಸುರಕ್ಷಿತ ಮಾರ್ಗ ಅಲ್ಲ. ಗಂಟಲು ಅತ್ಯಂತ ಸಂಕೀರ್ಣವಾದ ವಿಭಾಗಗಳನ್ನು ಒಳಗೊಂಡಿದೆ. ಅಲ್ಲಿ ಅನ್ನನಾಳ, ಶ್ವಾಸನಾಳ, ರಕ್ತನಾಳ ಇರುತ್ತವೆ. ವಿಗ್ರಹವನ್ನು ಹೊಟ್ಟೆಗೆ ತಳ್ಳಿ, ಅದನ್ನು ಎಂಡೋಸ್ಕೋಪಿ ಮೂಲಕ ಹೊರಕ್ಕೆ ತೆಗೆಯಲಾಯಿತು'' ಎಂದು ತಿಳಿಸಿದರು. ''ನಂತರ ಬಾಲಕನನ್ನು 4 ತಾಸು ನಿಗಾದಲ್ಲಿಇಡಲಾಗಿತ್ತು. ಬಳಿಕ ಆಹಾರ ನೀಡಲಾಯಿತು. ಬಾಲಕ ಸೂಕ್ತವಾಗಿ ಸ್ಪಂದಿಸುತ್ತಿದ್ದು, ಸದ್ಯ ಯಾವುದೇ ಸಮಸ್ಯೆ ಇಲ್ಲ,'' ಎಂದರು. ''ಬಾಲಕನಿಗೆ ಕೂಡಲೇ ವೈದ್ಯಕೀಯ ಚಿಕಿತ್ಸೆ ಸಿಗದಿದ್ದರೆ ಆತನಿಗೆ ಅಪಾಯ ಸಂಭವಿಸುವ ಸಾಧ್ಯತೆ ಇತ್ತು. ಸಾಮಾನ್ಯವಾಗಿ ಯಾವುದಾದರೂ ವಸ್ತುಗಳನ್ನು ಆಕಸ್ಮಿಕವಾಗಿ ನುಂಗಿದಾಗ ಅವುಗಳ ಗಾತ್ರ ದೊಡ್ಡದಾಗಿದ್ದರೆ ಶಸ್ತ್ರತ್ರಚಿಕಿತ್ಸೆಯ ಅಗತ್ಯವಿರುತ್ತದೆ. ಆದರೆ ಬಾಲಕನ ಪ್ರಕರಣ ಭಿನ್ನವಾಗಿದೆ. ಚಿಕ್ಕ ಮಕ್ಕಳಿಂದ ಸಣ್ಣ-ಪುಟ್ಟ ಆಟಿಕೆ ವಸ್ತುಗಳನ್ನು ಪೋಷಕರು ದೂರವಿರಿಸಬೇಕು'' ಎಂದು ಡಾ. ಕೆ.ಪಿ.ಶ್ರೀಕಾಂತ್‌ ಸಲಹೆ ನೀಡಿದ್ದಾರೆ.