
ಹೊಸದಿಲ್ಲಿ: ಸರಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಅವರಿಗೆ ಕೇಂದ್ರ ಗೃಹ ಸಚಿವಾಲಯವು ವಿಪತ್ತು ನಿರ್ವಹಣಾ ಕಾಯಿದೆ ಅನ್ವಯ ನೋಟಿಸ್ ನೀಡುವುದರೊಂದಿಗೆ ಕೇಂದ್ರ ಸರಕಾರದ ಜತೆಗಿನ ಸಿಎಂ ಅವರ ಸಂಘರ್ಷ ಮತ್ತೊಂದು ತಿರುವು ಪಡೆದಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಯಾಸ್ ಚಂಡಮಾರುತದಿಂದ ಆದ ಅನಾಹುತದ ಕುರಿತು ಪಶ್ಚಿಮ ಬಂಗಾಳದಲ್ಲಿ ಮೇ 28ರಂದು ನಡೆಸಿದ ಪರಿಶೀಲನಾ ಸಭೆಗೆ ಗೈರುಹಾಜರಾದ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿದೆ. ಪ್ರಧಾನಿಯವರೇ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾಗಿದ್ದು, ಅವರು ಕರೆಯುವ ಸಭೆಗೆ ಅಧಿಕಾರಿಗಳು ಹಾಜರಾಗುವುದು ಕಡ್ಡಾಯವಾಗಿದೆ. ಆದರೆ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜತೆ ಆಲಾಪನ್ ಬಂಡೋಪಾಧ್ಯಾಯ ಸಹ ಸಭೆಗೆ ಗೈರಾಗಿದ್ದರು.
ವಿಪತ್ತು ನಿರ್ವಹಣಾ ಕಾಯಿದೆಯ ಸೆಕ್ಷನ್ 51ರ ಅನ್ವಯ ಬಂಡೋಪಾಧ್ಯಾಯ ಅವರಿಗೆ ನೋಟಿಸ್ ನೀಡಲಾಗಿದ್ದು, ಉತ್ತರ ನೀಡಲು ಗುರುವಾರದವರೆಗೆ ಕಾಲಾವಕಾಶ ನೀಡಲಾಗಿದೆ. ಉತ್ತರ ತೃಪ್ತಿಕರವಾಗಿರದೇ ಇದ್ದರೆ ಮುಂದಿನ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಲಾಗಿದೆ. ಅಂದರೆ ಕ್ರಿಮಿನಲ್ ಎಫ್‌ಐಆರ್ ದಾಖಲಿಸಿ ಕ್ರಮ ಜರುಗಿಸುವ ಸೂಚನೆಯನ್ನು ಕೇಂದ್ರ ಸರಕಾರ ನೀಡಿದೆ.
ಎರಡು ವರ್ಷ ಜೈಲುವಿಪತ್ತು ನಿರ್ವಹಣಾ ಕಾಯಿದೆಯ ಸೆಕ್ಷನ್ 51ರ ಅನ್ವಯ, ನಿಗದಿತ ಸಮಯದೊಳಗೆ ಅಧಿಕಾರಿ ಉತ್ತರ ನೀಡದೇ ಇದ್ದರೆ ಅಥವಾ ಉತ್ತರ ತೃಪ್ತಿಕರವಾಗದೇ ಇದ್ದರೆ ಮೊದಲು ಕ್ರಿಮಿನಲ್ ಎಫ್‌ಐಆರ್ ದಾಖಲಿಸಲಾಗುತ್ತದೆ. ಗರಿಷ್ಠ ಎರಡು ವರ್ಷದವರೆಗೆ ಜೈಲು ಹಾಗೂ ದಂಡ ವಿಧಿಸಲು ಅವಕಾಶವಿದೆ. ಕರ್ತವ್ಯ ನಿರ್ಲಕ್ಷ್ಯ ತೋರಿಸಿ ಜನರ ಜೀವಹಾನಿಗೆ ಕಾರಣರಾದ ಆರೋಪದಲ್ಲಿ ಎಫ್‌ಐಆರ್ ದಾಖಲಿಸಲಾಗುತ್ತದೆ.