ನೀರಿನ ದರ ಹೆಚ್ಚಳ ಇಲ್ಲ, ಶುಲ್ಕ ಪರಿಷ್ಕರಣೆಯಿಂದ ಹಿಂದೆ ಸರಿದ ಬೆಂಗಳೂರು ಜಲಮಂಡಳಿ

ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗವು ಕೆಲ ದಿನಗಳ ಹಿಂದೆ ವಿದ್ಯುತ್‌ ಶುಲ್ಕ ಪರಿಷ್ಕರಿಸಿತ್ತು. ಬಳಿಕ ಬಿಡಬ್ಲ್ಯುಎಸ್‌ಎಸ್‌ಬಿ ಸಹ ಆರ್ಥಿಕ ಒತ್ತಡ ಉಲ್ಲೇಖಿಸಿ ನೀರಿನ ಶುಲ್ಕ ಪರಿಷ್ಕರಣೆಗೆ ಮುಂದಾಗಿತ್ತು. ಇದೀಗ ಕೋವಿಡ್‌ ಕಾರಣದಿಂದ ಈ ನಿರ್ಧಾರವನ್ನು ಕೈಬಿಟ್ಟಿದೆ.

ನೀರಿನ ದರ ಹೆಚ್ಚಳ ಇಲ್ಲ, ಶುಲ್ಕ ಪರಿಷ್ಕರಣೆಯಿಂದ ಹಿಂದೆ ಸರಿದ ಬೆಂಗಳೂರು ಜಲಮಂಡಳಿ
Linkup
ಬೆಂಗಳೂರು: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್‌ಎಸ್‌ಬಿ) ಸದ್ಯಕ್ಕೆ ನೀರಿನ ಶುಲ್ಕ ಹೆಚ್ಚಳ ಮಾಡುವ ನಿರ್ಧಾರದಿಂದ ಹಿಂದೆ ಸರಿದಿದೆ. ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗವು ಕಳೆದ ತಿಂಗಳು ವಿದ್ಯುತ್‌ ಶುಲ್ಕ ಪರಿಷ್ಕರಿಸಿದ ನಂತರ ಬಿಡಬ್ಲ್ಯುಎಸ್‌ಎಸ್‌ಬಿ ಸಹ ಆರ್ಥಿಕ ಒತ್ತಡ ಉಲ್ಲೇಖಿಸಿ ನೀರಿನ ಶುಲ್ಕ ಪರಿಷ್ಕರಣೆಗೆ ಮುಂದಾಗಿತ್ತು. ಕೋವಿಡ್‌ ಕಾರಣದಿಂದ ಈ ನಿರ್ಧಾರವನ್ನು ಕೈಬಿಟ್ಟಿದೆ. 2014ರ ನಂತರ ನೀರಿನ ಶುಲ್ಕ ಪರಿಷ್ಕರಣೆ ಆಗಿಲ್ಲ. 2014ರಲ್ಲಿ ಶೇ.20 ರಷ್ಟು ಶುಲ್ಕ ಹೆಚ್ಚಿಸಲಾಗಿತ್ತು. ನೀರನ್ನು ಪಂಪ್‌ ಮಾಡಲು, ಶುದ್ಧೀಕರಿಸಲು, ನೀರು ಸರಬರಾಜು ಮಾಡಲು ವಿದ್ಯುತ್‌ ಅಗತ್ಯ ಇರುವ ಹಿನ್ನೆಲೆಯಲ್ಲಿ ವಿದ್ಯುತ್‌ ಶುಲ್ಕ ಏರಿಕೆಯೂ ಇಲಾಖೆಗೆ ಹೊರೆಯಾಗಿ ಪರಿಣಮಿಸಿದೆ. ಮಂಡಳಿಯು ಗ್ರಾಹಕರಿಂದ ಪ್ರತಿ ತಿಂಗಳು ಅಂದಾಜು 120 ಕೋಟಿ ರೂ. ಸಂಗ್ರಹಿಸುತ್ತದೆ. ಈ ಮೊತ್ತದಲ್ಲಿ 30 ಕೋಟಿ ರೂ. ಕಾರ್ಯಾಚರಣೆಯ ವೆಚ್ಚಗಳಿಗೆ ಮತ್ತು 12 ಕೋಟಿ ರೂ. ವೇತನ ಪಾವತಿಸಲು ಹೋಗುತ್ತದೆ. ವಾರ್ಷಿಕ ಆದಾಯದಲ್ಲಿ ಶೇ.66 ವಿದ್ಯುತ್‌ ಬಿಲ್‌ ಪಾವತಿಗೆ ಬೇಕಾಗುತ್ತಿದೆ. ಹೀಗಾಗಿ ಇತರೆ ವೆಚ್ಚಗಳನ್ನು ಸರಿದೂಗಿಸುವುದು ಕಷ್ಟವಾಗುತ್ತಿದೆ. ಕೋವಿಡ್‌ ಸಾಂಕ್ರಾಮಿಕದ ಜತೆಗೆ ವಿದ್ಯುತ್‌ ಶುಲ್ಕ ಹೆಚ್ಚಳ ಕೂಡ ಮಂಡಳಿಯ ಆದಾಯಕ್ಕೆ ಹೊಡೆತ ನೀಡಿದೆ. ವಿದ್ಯುತ್‌ ಶುಲ್ಕ ಎಷ್ಟು ಹೆಚ್ಚಳ ? ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗ ಇತ್ತೀಚೆಗೆ ಹೊರಡಿಸಿದ ವಿದ್ಯುತ್‌ ದರ ಪರಿಷ್ಕರಿಸಿದ ಆದೇಶದಲ್ಲಿ, ನೀರು ಸರಬರಾಜಿನ ಎಲ್‌ಟಿ ಲೈನ್‌ ಶುಲ್ಕ ಹೆಚ್ಚಿಸಿದೆ. ನೀರು ಸರಬರಾಜು ಘಟಕ ಸ್ಥಾಪನೆ ಮತ್ತು ಪೂರೈಕೆಗೆ ಬಳಸುವ ಎಲ್‌ಟಿ ವಿದ್ಯುತ್‌ ಸರಬರಾಜಿನ ಶುಲ್ಕ ಪ್ರತಿ ಯೂನಿಟ್‌ಗೆ 10 ಪೈಸೆ ಹೆಚ್ಚಿಸಿದೆ. ಯೂನಿಟ್‌ಗೆ 4.85 ದರದಿಂದ 4.95 ಗೆ ಹೆಚ್ಚಿಸಲಾಗಿದೆ. ಅದೇ ರೀತಿ ಎಚ್‌ಟಿ ನೀರು ಸರಬರಾಜು ದರವನ್ನು ಪ್ರತಿ ಯೂನಿಟ್‌ಗೆ 10 ಪೈಸೆ ಹೆಚ್ಚಿಸಿ ಪ್ರತಿ ಯೂನಿಟ್‌ಗೆ5.45 ರಿಂದ 5.55 ಕ್ಕೆ ಹೆಚ್ಚಿಸಿದೆ. ಪ್ರಸ್ತುತ ಶುಲ್ಕ ಲೀಟರ್‌ - ಶುಲ್ಕ (ರೂ.) 0-8000 - 7 ರೂ. 8 -25000 - 11 ರೂ. 25001-50000 - 26 ರೂ. 50001 ನಂತರ - 45 ರೂ. ಪ್ರಸಕ್ತ ಹಣಕಾಸು ವರ್ಷದಲ್ಲಿವಿದ್ಯುತ್‌ ಸರಬರಾಜು ಕಂಪನಿಗಳು ಸರಾಸರಿ 30 ಪೈಸೆ ದರ ಹೆಚ್ಚಿಸಿದ್ದರ ಪರಿಣಾಮ ಮಂಡಳಿಗೆ ಆರ್ಥಿಕ ಹೊರೆಯಾಗಿದೆ. ಇದರ ಹೊರತಾಗಿಯೂ ಸಾಮಾನ್ಯ ಮತ್ತು ಬಡ ಕುಟುಂಬಗಳ ದೃಷ್ಟಿಯಿಂದ ಶುಲ್ಕ ಹೆಚ್ಚಿಸಿಲ್ಲ ಎಂದು ಬಿಡಬ್ಲ್ಯುಎಸ್‌ಎಸ್‌ಬಿ ಅಧ್ಯಕ್ಷ ಎನ್‌ ಜಯರಾಮ್‌ ಹೇಳಿದ್ದಾರೆ.