ಚೆನ್ನೈನಲ್ಲಿ ಪ್ರವಾಹ: ‘ಅಮ್ಮಾ ಕ್ಯಾಂಟೀನ್‌’ನಲ್ಲಿ ಉಚಿತ ಆಹಾರ ವಿತರಣೆ - ಸ್ಟಾಲಿನ್‌

ತಮಿಳುನಾಡು ರಾಜಧಾನಿ ಚೆನ್ನೈ ಪ್ರವಾಹದಲ್ಲಿ ಮುಳುಗಿದ್ದು, 'ಅಮ್ಮಾ ಕ್ಯಾಂಟೀನ್‌'ನಲ್ಲಿ ಉಚಿತ ಆಹಾರ ವಿತರಣೆ ಮಾಡುವಂತೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಮಂಗಳವಾರ ಆದೇಶ ಹೊರಡಿಸಿದ್ದಾರೆ.

ಚೆನ್ನೈನಲ್ಲಿ ಪ್ರವಾಹ: ‘ಅಮ್ಮಾ ಕ್ಯಾಂಟೀನ್‌’ನಲ್ಲಿ ಉಚಿತ ಆಹಾರ ವಿತರಣೆ - ಸ್ಟಾಲಿನ್‌
Linkup
ಚೆನ್ನೈ: ತಮಿಳುನಾಡು ರಾಜಧಾನಿ ಪ್ರವಾಹದಲ್ಲಿ ಮುಳುಗಿದ್ದು, ಮಾಜಿ ಸಿಎಂ ಜೆ. ಜಯಲಲಿತಾ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಆರಂಭಿಸಿದ್ದ ''ನಲ್ಲಿ ಉಚಿತ ಆಹಾರ ವಿತರಣೆ ಮಾಡುವಂತೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಆದೇಶ ಹೊರಡಿಸಿದ್ದಾರೆ. ಗ್ರೇಟರ್‌ ಚೆನ್ನೈ ಕಾರ್ಪೊರೇಷನ್‌ ಈ ಕ್ಯಾಂಟೀನ್‌ನನ್ನು ನಿರ್ವಹಣೆ ಮಾಡುತ್ತಿದೆ. ಚೆನ್ನೈನಲ್ಲಿ ಮಳೆ ನಿಲ್ಲುವವರೆಗೂ ಈ ಉಚಿತ ಆಹಾರ ವಿತರಣೆ ಮುಂದುವರಿಯಲಿದೆ ಎಂದು ಸ್ಟಾಲಿನ್‌ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ. ಇದರ ಜತೆಗೆ ಗ್ರೇಟರ್‌ ಚೆನ್ನೈ ಕಾರ್ಪೊರೇಷನ್‌ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮೂರು ಹೊತ್ತೂ ಉಚಿತ ಆಹಾರ ವಿತರಣೆ ಮಾಡಲಿದೆ. ಅಮ್ಮಾ ಕ್ಯಾಂಟೀನ್‌ನಲ್ಲಿ ಸಾಮಾನ್ಯವಾಗಿ ಇಡ್ಲಿ, ಪೊಂಗಲ್‌, ಸಾಂಬಾರ್‌, ಮೊಸರನ್ನ, ಲೆಮನ್‌ ರೈಸ್‌ ಸೇರಿ ಇತರ ಆಹಾರಗಳನ್ನು ವಿತರಣೆ ಮಾಡಲಾಗುತ್ತದೆ. ಭಾರಿ ಮಳೆಯಿಂದ ತಮಿಳುನಾಡು ತತ್ತರಿಸಿದ್ದು, ಇಲ್ಲಿಯವರೆಗೆ ರಾಜ್ಯದಲ್ಲಿ ಮಳೆ ಸಂಬಂಧಿತ ಅವಘಡಗಳಿಂದ ಚೆನ್ನೈ ಮತ್ತು ತಮಿಳುನಾಡಿದ ಇತರ ಭಾಗಗಳಲ್ಲಿ ಐವರು ಸಾವನ್ನಪ್ಪಿದ್ದಾರೆ. ಚೆನ್ನೈ ಮತ್ತು ಹೊರವಲಯ ಚೆಂಗಲ್‌ಪೇಟ್‌, ಕಾಂಚೀಪುರಂ ಮತ್ತು ತಿರುವಳ್ಳೂರ್‌ ಜಿಲ್ಲೆಗಳಲ್ಲಿ ಶನಿವಾರ ಬೆಳಗ್ಗೆಯಿಂದಲೇ ಭಾರಿ ಮಳೆಯಾಗಿದೆ. ಶನಿವಾರ ರಾತ್ರಿಯೂ ಭಾರಿ ಮಳೆಯಾಗಿದ್ದು, ಇದು ಇತ್ತೀಚಿನ ವರ್ಷಗಳಲ್ಲೇ ಸುರಿದ ಭಾರಿ ಮಳೆಯಾಗಿದೆ. ಚೆನ್ನೈ ಕಾರ್ಪೊರೇಷನ್‌ 570 ಎಲೆಕ್ಟ್ರಿಕ್‌ ಪಂಪ್‌ಗಳ ಮೂಲಕ ಪ್ರವಾಹದ ನೀರನ್ನು ಹೊರ ಬಿಡಲು ಶ್ರಮಿಸುತ್ತಿದೆ. ಪರಿಹಾರ ಕಾರ್ಯಗಳು ಭರದಿಂದ ಸಾಗಿದ್ದು, ಪರಿಸ್ಥಿತಿ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಅಮ್ಮಾ ಕ್ಯಾಂಟೀನ್‌ ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ಆಹಾರವನ್ನು ಪೂರೈಸಬೇಕು ಎಂಬ ಉದ್ದೇಶದಿಂದ ಜೆ. ಜಯಲಲಿತಾ ಮುಖ್ಯಮಂತ್ರಿಯಾಗಿದ್ದಾಗ ಅಮ್ಮಾ ಕ್ಯಾಂಟೀನ್‌ನ್ನು ಆರಂಭಿಸಿದ್ದರು. ಇದು ಆರಂಭಗೊಳ್ಳುತ್ತಲೇ ಒಮ್ಮೆಗೆ ಜನಪ್ರಿಯತೆ ಪಡೆದುಕೊಂಡಿತ್ತು. ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಆಹಾರವನ್ನು ಜನಸಾಮಾನ್ಯರಿಗೆ ತಲುಪಿಸಲು ಇದು ಉತ್ತಮ ಮಾರ್ಗ ಎಂದೇ ಪರಿಗಣಿಸಲಾಗಿದೆ. ಇದೇ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಸಿದ್ದರಾಮಯ್ಯ ಸರಕಾರ ಇಂದಿರಾ ಕ್ಯಾಂಟೀನ್‌ ಆರಂಭಿಸಿತ್ತು. ಇದು ಇಂದಿಗೂ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಕೊರೊನಾ ಲಾಕ್‌ಡೌನ್‌ ಸಮಯದಲ್ಲಿ ಉಚಿತ ಆಹಾರ ವಿತರಣೆ ಮೂಲಕ ಲಕ್ಷಾಂತರ ಜನರ ಹಸಿವನ್ನು ಇಂದಿರಾ ಕ್ಯಾಟೀನ್‌ ನೀಗಿಸಿದ್ದನ್ನೂ ಇಲ್ಲಿ ಸ್ಮರಿಸಬಹುದು.