'ಕಲಾನಿಧಿ-2021' : ಒಂದು ರೂಪಾಯಿ ಪಡೆಯದೆ ಹಾಡು ಹಾಡಲಿರುವ ಸ್ಟಾರ್ ಗಾಯಕರು!

ಸಂಗೀತ ಕ್ಷೇತ್ರದಲ್ಲಿರುವವರಿಗೆ ನೆರವು ನೀಡುವ ಉದ್ದೇಶದಿಂದ ಗಾಯಕ ವಿಜಯ್‌ ಪ್ರಕಾಶ್‌ ಉಸ್ತುವಾರಿಯಲ್ಲಿ ದೇಶದ ಪ್ರಸಿದ್ಧ ಗಾಯಕರು ಸಾಮಾಜಿಕ ಜಾಲತಾಣದಲ್ಲಿ ಮೂರು ದಿನಗಳ ಕಾಲ ಗಾನಸುಧೆ ಹರಿಸಲಿದ್ದಾರೆ.

'ಕಲಾನಿಧಿ-2021' : ಒಂದು ರೂಪಾಯಿ ಪಡೆಯದೆ ಹಾಡು ಹಾಡಲಿರುವ ಸ್ಟಾರ್ ಗಾಯಕರು!
Linkup
ಪದ್ಮಾ ಶಿವಮೊಗ್ಗ ಕೋವಿಡ್‌ ಸಂಕಷ್ಟದಿಂದಾಗಿ ಸಂಗೀತ ಕ್ಷೇತ್ರದ ನೂರಾರು ಕಲಾವಿದರು ಕಾರ್ಯಕ್ರಮ ನೀಡಲು ಸಾಧ್ಯವಾಗದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂಥ ಕಲಾವಿದರಿಗೆ ನಿಧಿ ಸಂಗ್ರಹಿಸಿ ನೆರವು ನೀಡಲು ಸ್ಯಾಂಡಲ್‌ವುಡ್‌ ಗಾಯಕರು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ 'ಕಲಾನಿಧಿ-2021' ಎಂಬ ಹೆಸರಿನಲ್ಲಿ ಎಫ್‌ಬಿ, ಟ್ವಿಟರ್‌ ಮತ್ತು ಯುಟ್ಯೂಬ್‌ ಚಾನೆಲ್‌ಗಳಲ್ಲಿ ಗುರುವಾರದಿಂದ ರಸಸಂಜೆ ಕಾರ್ಯಕ್ರಮ ಆರಂಭವಾಗಿದ್ದು, ಇದು 27ರ ಭಾನುವಾರದವರೆಗೆ ನಡೆಯಲಿದೆ. ಸಂಜೆ 7ರಿಂದ ಪ್ರಸಾರವಾಗುವ ಈ ರಸಸಂಜೆ ಕಾರ್ಯಕ್ರಮದಲ್ಲಿ ಶಾಸ್ತ್ರೀಯ ಗೀತೆ, ಚಿತ್ರಗೀತೆ, ಭಾವಗೀತೆ, ಜನಪದ ಗೀತೆಗಳ ಜತೆಗೆ ವಾದ್ಯ ಸಂಗೀತವೂ ಇರಲಿವೆ. ನಾಳೆ ಗ್ರ್ಯಾಂಡ್‌ ಫಿನಾಲೆ ಸಂಜೆ 4ಕ್ಕೆ ವಿಶೇಷವಾಗಿ ನಡೆಯಲಿದೆ. ಕಲಾನಿಧಿ-2021 ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರವೂ ಬೆಂಬಲ ಸೂಚಿಸಿದ್ದು, ಸಂಗೀತ ಕಲಾವಿದರಿಗೆ ತಲಾ 3 ಸಾವಿರ ರೂ. ನೀಡುವುದಾಗಿ ಭರವಸೆ ನೀಡಿದೆ. ಈ ಕಾರ್ಯಕ್ರಮದಲ್ಲಿ ಗಾಯಕರಾದ ವಿಜಯ್‌ ಪ್ರಕಾಶ್‌, ಗುರುಕಿರಣ್‌, ಶಂಕರ್‌ ಮಹಾದೇವನ್‌, ಹರಿಹರನ್‌, ಕುನಾಲ್‌ ಗಾಂಜಾವಾಲ, ಸೋನು ನಿಗಮ್‌, ರಘು ದೀಕ್ಷಿತ್‌, ಎಂ.ಡಿ. ಪಲ್ಲವಿ, ಸಂಜಿತ್‌ ಹೆಗ್ಡೆ, ಅರ್ಜುನ್‌ ಜನ್ಯ, ರಾಜೇಶ್‌ ಕೃಷ್ಣನ್‌, ವಿದ್ಯಾಭೂಷಣ್‌, ಪುತ್ತೂರು ನರಸಿಂಹ ನಾಯಕ್‌, ಆನೂರು ಅನಂತಕೃಷ್ಣ ಶರ್ಮ, ಅರುಣ್‌ ಕುಮಾರ್‌, ಅನುರಾಧಾ ಭಟ್‌ ಮುಂತಾದ ಸ್ಟಾರ್‌ ಗಾಯಕರು ಹಾಡಲಿದ್ದಾರೆ. ಈ ಬಗ್ಗೆ ಹೇಳಿರುವ ಗಾಯಕ ವಿಜಯ್‌ ಪ್ರಕಾಶ್‌, 'ಈ ಸಂದರ್ಭದಲ್ಲಿ ಕಲಾವಿದ ವರ್ಗವೂ ಬಹಳ ಕಷ್ಟದಲ್ಲಿದೆ. ಕರ್ನಾಟಕದ ಕಲಾವಿದರಿಗೆ ಸಹಾಯ ನೀಡಬೇಕು ಎಂಬ ಉದ್ದೇಶಕ್ಕೆ ಮುಖ್ಯಮಂತ್ರಿಗಳಾದ ಬಿ.ಎಸ್‌. ಯಡಿಯೂರಪ್ಪ, ಉಪಮುಖ್ಯಮಂತ್ರಿ ಸಿ.ಎಸ್‌. ಅಶ್ವತ್ಥ ನಾರಾಯಣ್‌, ಸಂಸದ ತೇಜಸ್ವಿ ಸೂರ್ಯ ಬೆಂಬಲಕ್ಕೆ ನಿಂತಿದ್ದಾರೆ. ಅಲ್ಲದೆ, ಈ ಕಾರ್ಯಕ್ರಮದಲ್ಲಿ ಹಾಡುವಂತೆ ನಾವು ಕರೆ ಮಾಡಿದ ಗಾಯಕರೆಲ್ಲರೂ ಒಂದೇ ಮಾತಿಗೆ ಬರಲು ಒಪ್ಪಿದರು. ಯಾರೊಬ್ಬರೂ ಒಂದು ರೂಪಾಯಿಯನ್ನೂ ಪಡೆಯದೆ ಹಾಡುತ್ತಿದ್ದಾರೆ. ಎಲ್ಲರೂ ಕರ್ನಾಟಕದ ಕಲಾವಿದರಿಗಾಗಿ ನಾವು ಈ ಕಾರ್ಯ ಮಾಡಲೇಬೇಕಿದೆ. ಇದು ಇಂದಿನ ತುರ್ತು, ಇದು ನಮ್ಮ ಕರ್ತವ್ಯ ಎಂದು ಹೇಳಿದರು. ಹಂಸಲೇಖಾ, ಹರಿಹರನ್‌, ಶಂಕರ್‌ ಮಹಾದೇವನ್‌ ಮತ್ತಿತರರು ಬೆಂಬಲ ನೀಡಿದ್ದಾರೆ. ಜತೆಗೆ ಕಲಾವಿದರನ್ನು ಒಂದು ಕಡೆ ಸೇರಿಸಲು ಶ್ರಮಿಸುತ್ತಿರುವ ತಂಡಕ್ಕೆ ಧನ್ಯವಾದ ಹೇಳುತ್ತೇವೆ' ಎಂದಿದ್ದಾರೆ. 'ನಮ್ಮ ಸಂಗೀತ ಪರಿವಾರ ಸಂತೋಷದಿಂದ ಇರಬೇಕು. ನಾವು ಸಂಗ್ರಹಿಸಿದ ನಿಧಿಯು ಕರ್ನಾಟಕದ ಮೂಲೆ ಮೂಲೆಯಲ್ಲಿರುವ ಕಲಾವಿದರೆಲ್ಲರಿಗೂ ತಲುಪಬೇಕು ಎಂಬುದು ನಮ್ಮ ಆಶಯ. ಅದು ಸಿನಿಮಾ ಕ್ಷೇತ್ರದಲ್ಲಿರುವವರು ಆರಾಗಿರಬಹುದು, ಶಾಸ್ತ್ರೀಯ ಸಂಗೀತ, ಜನಪದ ಸಂಗೀತ ಹೀಗೆ ಎಲ್ಲಾ ಪ್ರಕಾರದ ಸಂಗೀತ ಕಲಾವಿದರಿಗೆ ಸಹಾಯ ಮಾಡಬೇಕೆಂದಿದ್ದೇವೆ. ಅದೇ ರೀತಿ ಎಲ್ಲಾ ರೀತಿಯ ಗಾಯನವನ್ನೂ ಈ ಕಾರ್ಯಕ್ರಮದಲ್ಲಿ ಕೇಳಬಹುದು. ಯಾರು ಬೇಕಾದರೂ ಈ ಕಾರ್ಯಕ್ರಮ ನೋಡಬಹುದು. ತಮ್ಮ ಕೈಲಾದ ಸಹಾಯ ಮಾಡಬಹುದು' ಎಂದು ವಿಜಯ್‌ ಪ್ರಕಾಶ್‌ ಹೇಳಿದ್ದಾರೆ. ಈ ರಸಸಂಜೆ ಕಾರ್ಯಕ್ರಮವು ಕಲಾನಿಧಿ ಫೇಸ್‌ಬುಕ್‌ ಖಾತೆ, ಗಾಯಕ ವಿಜಯ್‌ ಪ್ರಕಾಶ್‌, ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ್‌, ಸಂಸದ ತೇಜಸ್ವಿ ಸೂರ್ಯ ಎಫ್‌ಬಿ ಖಾತೆಗಳಲ್ಲಿ ಪ್ರಸಾರವಾಗಲಿದೆ. ನಮ್ಮ ನಾಡಿನ ಜನತೆಯೇ ಕಲಾವಿದರಿಗೆ ಶಕ್ತಿಯಾಗಿ ನಿಂತಿದ್ದಾರೆ. ಅವರು ಎಂದೂ ಕಲಾವಿದರ ಕೈಬಿಟ್ಟಿಲ್ಲ. ಈಗ ನಮ್ಮ ನಾಡಿನ ಜನತೆ ಈ ರಸಸಂಜೆ ಕಾರ್ಯಕ್ರಮ ನೋಡಿ ಕಲಾವಿದರ ಬೆಂಬಲಕ್ಕೆ ನಿಲ್ಲುತ್ತಾರೆ ಎಂಬ ನಂಬಿಕೆ ಇದೆ. ಅದು 5 ರೂಪಾಯಿಯೇ ಇರಬಹುದು, ಜನರು ನೀಡುವ ಈ ದೇಣಿಗೆ ಅವರು ಕಲಾವಿದರಿಗೆ ಮಾಡುವ ಆಶೀರ್ವಾದ, ತೋರುವ ಪ್ರೀತಿ ಎಂದು ನಾವು ಭಾವಿಸುತ್ತೇವೆ ಎಂದು ವಿಜಯ್‌ ಪ್ರಕಾಶ್‌ ಹೇಳಿದ್ದಾರೆ.