ಕಾಮಗಾರಿಗಳ ಮೇಲೆ ಇಂಧನ, ಕಚ್ಚಾವಸ್ತು ದರ ಏರಿಕೆ ಎಫೆಕ್ಟ್; ಅರ್ಧಕ್ಕೆ ನಿಂತ ನೂರಾರು ಸರ್ಕಾರಿ ಯೋಜನೆಗಳು!

ಕೇಂದ್ರ ಸರಕಾರ ಇತ್ತೀಚೆಗೆ ಲೋಹದ ಮೇಲಿನ ಜಿಎಸ್‌ಟಿ ದರವನ್ನೂ ಹೆಚ್ಚಿಸಿದೆ. ಸರಕಾರಿ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರ ಮೇಲೆ ಇದರಿಂದಾಗಿ ಹೆಚ್ಚುವರಿ ಹೊರೆ ಬಿದ್ದಿದೆ. ಪೆಟ್ರೋಲ್‌, ಡೀಸೆಲ್‌ ದರ ಏರಿಕೆ ಮಧ್ಯೆಯೇ ಸಿಮೆಂಟ್‌, ಕಬ್ಬಿಣ, ಜಲ್ಲಿ ಸೇರಿದಂತೆ ನಿರ್ಮಾಣ ಕಾಮಗಾರಿಗೆ ಬಳಸುವ ಎಲ್ಲ ಪರಿಕರಗಳ ಬೆಲೆ ಗಗನಮುಖಿಯಾಗಿದೆ. ನಷ್ಟದಿಂದ ಪಾರಾಗಲು ಬಹುತೇಕ ಗುತ್ತಿಗೆದಾರರು ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. ಈ ಬೆಳವಣಿಗೆಯಿಂದ ಅಭಿವೃದ್ಧಿ ಕಾಮಗಾರಿಗಳ ಮೇಲೆ ತೀವ್ರ ಪರಿಣಾಮ ಬೀರಿದೆ.

ಕಾಮಗಾರಿಗಳ ಮೇಲೆ ಇಂಧನ, ಕಚ್ಚಾವಸ್ತು ದರ ಏರಿಕೆ ಎಫೆಕ್ಟ್; ಅರ್ಧಕ್ಕೆ ನಿಂತ ನೂರಾರು ಸರ್ಕಾರಿ ಯೋಜನೆಗಳು!
Linkup
ಶಿವಾನಂದ ಹಿರೇಮಠ ಬೆಂಗಳೂರು: ಪೆಟ್ರೋಲ್‌, ಡೀಸೆಲ್‌ ದರ ಏರಿಕೆ ಮಧ್ಯೆಯೇ ಸಿಮೆಂಟ್‌, ಕಬ್ಬಿಣ, ಜಲ್ಲಿ ಸೇರಿದಂತೆ ನಿರ್ಮಾಣ ಕಾಮಗಾರಿಗೆ ಬಳಸುವ ಎಲ್ಲ ಪರಿಕರಗಳ ಬೆಲೆ ಗಗನಮುಖಿಯಾಗಿದೆ. ಕೇಂದ್ರ ಸರಕಾರ ಇತ್ತೀಚೆಗೆ ಲೋಹದ ಮೇಲಿನ ಜಿಎಸ್‌ಟಿ ದರವನ್ನೂ ಹೆಚ್ಚಿಸಿದೆ. ಸರಕಾರಿ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರ ಮೇಲೆ ಇದರಿಂದಾಗಿ ಹೆಚ್ಚುವರಿ ಹೊರೆ ಬಿದ್ದಿದೆ. ನಷ್ಟದಿಂದ ಪಾರಾಗಲು ಬಹುತೇಕ ಗುತ್ತಿಗೆದಾರರು ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. ಈ ಬೆಳವಣಿಗೆಯಿಂದ ಅಭಿವೃದ್ಧಿ ಕಾಮಗಾರಿಗಳ ಮೇಲೆ ತೀವ್ರ ಪರಿಣಾಮ ಬೀರಿದೆ. ಕೋವಿಡ್‌ ಮೊದಲ ಲಾಕ್‌ಡೌನ್‌ ಬಳಿಕ ನಿರ್ಮಾಣ ಸಾಮಗ್ರಿಗಳ ಬೆಲೆ ಶೇ. 30ರಿಂದ 40ರಷ್ಟು ಏರಿಕೆಯಾಗಿದೆ. ಈ ಭಾರ ತಾಳಲಾರದೆ ಗುತ್ತಿಗೆದಾರರು ಟೆಂಡರ್‌ ದರ ಪರಿಷ್ಕರಣೆ ಮಾಡಿಕೊಡುವಂತೆ ಕಾಮಗಾರಿಯ ಮೇಲುಸ್ತುವಾರಿ ನೋಡಿಕೊಳ್ಳುತ್ತಿರುವ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ. ನಿರ್ಮಾಣ ಕಾಮಗಾರಿಯ ಅಗತ್ಯ ಸಾಮಗ್ರಿಗಳ ಹಾಗೂ ಷೆಡ್ಯೂಲ್ಡ್‌ ದರ ಪಟ್ಟಿ(ಎಸ್‌ಆರ್‌)ಯನ್ನು ರಾಜ್ಯ ಸರಕಾರ ಪರಿಷ್ಕರಿಸದ ಹಿನ್ನೆಲೆಯಲ್ಲಿ ಗುತ್ತಿಗೆದಾರರು ಕಂಗಾಲಾಗುವಂತಾಗಿದೆ. ಸಾಮಗ್ರಿಗಳ ದರ ಏರಿಕೆಯಿಂದ ಗುತ್ತಿಗೆದಾರರಿಗೆ ಈಗಾಗಲೇ ಆಗಿರುವ ಟೆಂಡರ್‌ ಅನ್ವಯ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಸಾವಿರಾರು ಕೋಟಿ ರೂ. ಮೊತ್ತದ ಪ್ಯಾಕೇಜ್‌ ಕಾಮಗಾರಿಗಳ ಟೆಂಡರ್‌ಗಳಲ್ಲಿ ಈ ಸಮಸ್ಯೆ ಉಲ್ಬಣಿಸುವುದಿಲ್ಲ. ಇದರಲ್ಲಿ ಟೆಂಡರ್‌ ನಿಯಮದಂತೆ ಪ್ರತಿ ವರ್ಷ ಟೆಂಡರ್‌ ದರ ಪರಿಷ್ಕರಣೆ ನಿಯಮವಿದೆ. ಆದರೆ ಇತರ ಮೊತ್ತದ ಕಾಮಗಾರಿಗಳಲ್ಲಿ ಸಂಕಟ ಎದುರಾಗಿದೆ. ಏಕರೂಪ ದರ ನಿಗದಿಗೆ ಆಗ್ರಹಕಳೆದೆರಡು ವರ್ಷಗಳಿಂದ ರಾಜ್ಯ ಸರಕಾರ ಎಸ್‌ಆರ್‌ (ಶೆಡ್ಯೂಲ್‌ ದರಪಟ್ಟಿ) ದರ ಪರಿಷ್ಕರಿಸಿಲ್ಲ. ಬೆಲೆ ಏರಿಕೆಯಿಂದಾಗಿ ಹಳೆಯ ಎಸ್‌ಆರ್‌ ದರ ಪಟ್ಟಿ ಅನ್ವಯ ಕೆಲಸ ಮಾಡಲು ಗುತ್ತಿಗೆದಾರರಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಅಭಿವೃದ್ಧಿ ಕುಂಠಿತಗೊಂಡಿದೆ. ಪ್ರತಿಯೊಂದು ಇಲಾಖೆಗಳಿಗೂ ಎಸ್‌ಆರ್‌ ದರ ಪ್ರತ್ಯೇಕವಾಗಿರುತ್ತದೆ. ಸಣ್ಣ ನೀರಾವರಿ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆಯಲ್ಲಿ 2018-19ನೇ ಸಾಲಿನ ದರಪಟ್ಟಿಯೇ ಜಾರಿ ಇದೆ. ಗ್ರಾಮೀಣ ಕುಡಿಯುವ ನೀರು ಪೂರೈಕೆ ಇಲಾಖೆಯ ಕಳೆದ ಸಾಲಿನ ದರಪಟ್ಟಿ ಅನ್ವಯ ಟೆಂಡರ್‌ ಕರೆಯಲಾಗುತ್ತಿದೆ. ಇದರ ಹೊರತಾಗಿಯೂ ಇಲಾಖೆಗಳ ಅಡಿಯಲ್ಲಿ ಬರುವ ವಿವಿಧ ವಿಭಾಗಗಳಿಗೂ ಪ್ರತ್ಯೇಕ ದರ ಇರುವುದು ಆಡಳಿತ ಯಂತ್ರಕ್ಕೆ ತಲೆನೋವಾಗಿ ಪರಿಣಮಿಸಿದೆ. ಹೀಗಾಗಿ ರಾಜ್ಯಾದ್ಯಂತ ಒಂದೇ ಎಸ್‌ಆರ್‌ ದರ ರೂಪಿಸುವಂತೆಯೂ ಗುತ್ತಿಗೆದಾರರು ಆಗ್ರಹಿಸಿದ್ದಾರೆ. ಪ್ರಾಧಿಕಾರ ರಚನೆ ಮಾಡಲಿಮಹಾರಾಷ್ಟ್ರ ಹಾಗೂ ತೆಲಂಗಾಣದಲ್ಲಿ ನಿರ್ಮಾಣ ಸಾಮಗ್ರಿಗಳ ಬೆಲೆ ಏರಿಕೆ ಇಲ್ಲವೇ ಇಳಿಕೆಯಾದರೆ ಅದನ್ನು ನಿಯಂತ್ರಿಸಲು ಪ್ರಾಧಿಕಾರ ರಚಿಸಲಾಗಿದೆ. ಮಾರುಕಟ್ಟೆಗೆ ಅನುಗುಣವಾಗಿ ಈ ಪ್ರಾಧಿಕಾರ ಕೆಲಸ ಮಾಡುತ್ತದೆ. ಬೆಲೆ ಹೆಚ್ಚಳವಾದರೆ ಗುತ್ತಿಗೆದಾರರಿಗೆ ನೀಡಿರುವ ಮೊತ್ತದಲ್ಲಿ ಏರಿಕೆ ಮಾಡಲಾಗುತ್ತದೆ. ಸಾಮಗ್ರಿಗಳ ಬೆಲೆ ಇಳಿಕೆಯಾದರೆ ಗುತ್ತಿಗೆದಾರರಿಗೆ ನೀಡುವ ಮೊತ್ತದಲ್ಲಿ ಕಡಿತ ಮಾಡಲಾಗುತ್ತದೆ. ಇದರಿಂದ ಗುತ್ತಿಗೆದಾರರಿಗೂ ಹೊರೆ ಬೀಳುವುದಿಲ್ಲ. ಸರಕಾರಕ್ಕೂ ನಷ್ಟವಾಗುವುದಿಲ್ಲ. ಇದೇ ಮಾದರಿಯಲ್ಲಿ ರಾಜ್ಯದಲ್ಲಿಯೂ ನಿರ್ಮಾಣ ಸಾಮಗ್ರಿಗಳ ಬೆಲೆ ನಿಯಂತ್ರಣ ಪ್ರಾಧಿಕಾರ ರಚನೆ ಮಾಡಬೇಕೆಂಬುದು ರಾಜ್ಯ ಗುತ್ತಿಗೆದಾರರ ಸಂಘದ ಆಗ್ರಹ. ಸ್ಥಗಿತವಾದ ಕಾಮಗಾರಿ
  • ಜಿ.ಪಂ, ಗ್ರಾಮಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್‌ ಇಲಾಖೆ, ಸಣ್ಣ ನೀರಾವರಿ, ಲೋಕೋಪಯೋಗಿ, ಬಿಬಿಎಂಪಿ, ಬಿಡಿಎ ಸೇರಿದಂತೆ ಇತರೆ ಇಲಾಖೆಗಳ ವಿವಿಧ ಯೋಜನೆಯಡಿ ಅನುಷ್ಠಾನಗೊಂಡಿರುವ ಅಭಿವೃದ್ಧಿ ಕಾಮಗಾರಿಗಳು.
  • ನಗರ ಮತ್ತು ಗ್ರಾಮೀಣ ರಸ್ತೆ, ಕೂಡು ರಸ್ತೆ, ಸಿಮೆಂಟ್‌ ರಸ್ತೆ, ಸಣ್ಣ-ಮಧ್ಯಮ ಪ್ರಮಾಣದ ಮೇಲ್ಸೇತುವೆ, ಸಂಪರ್ಕ ಸೇತುವೆ, ಒಳಚರಂಡಿ ಸೇರಿ ನಾನಾ ಕಾಮಗಾರಿಗಳು.
  • ಎಸ್‌ಆರ್‌ ದರ ಪರಿಷ್ಕರಣೆ ಆಗದೆ ಹೊಸ ಗುತ್ತಿಗೆ ಪಡೆಯಲೂ ಗುತ್ತಿಗೆದಾರರು ಹಿಂದಡಿ ಇಟ್ಟಿದ್ದಾರೆ.
ಸಮಸ್ಯೆಗಳೇನು?
  • ಕಾಮಗಾರಿ ಕುಂಠಿತ, ಕಳಪೆ, ಅರ್ಧಕ್ಕೇ ಸ್ಥಗಿತ
  • ಗುತ್ತಿಗೆದಾರರಿಗೆ ನಷ್ಟ
  • ಕಾರ್ಮಿಕರ ಕೊರತೆ
  • ಸರಕಾರದ ವಿಧಿಸುವ ದಂಡಕ್ಕೆ ಆಹ್ವಾನ
ಗುತ್ತಿಗೆದಾರರ ಬೇಡಿಕೆಗಳೇನು?
  • ಹಾಲಿ ಕಾಮಗಾರಿಗಳಿಗೆ ಶೇ.10 ಹೆಚ್ಚುವರಿ ಎಸ್‌ಆರ್‌ ದರ ಕೊಡಬೇಕು
  • ಮಹಾರಾಷ್ಟ್ರ ಮಾದರಿಯಂತೆ ಸಾಮಗ್ರಿಗಳ ಬೆಲೆ ನಿಯಂತ್ರಣ ಪ್ರಾಧಿಕಾರ
  • ಗುತ್ತಿಗೆದಾರರ ಲಾಭಾಂಶವನ್ನು ಶೇ. 15ರಷ್ಟು ಹೆಚ್ಚಿಸುವುದು
  • ಕಾರ್ಮಿಕರ ಮೇಲಿನ ಸೆಸ್‌ ಶೇ. 1ರಷ್ಟು ನೀಡುವುದು
  • ಬೆಂಗಳೂರು ನಗರಕ್ಕೆ ಹೆಚ್ಚುವರಿಯಾಗಿ 10% ಏರಿಯಾ ವೇಟೇಜ್‌ ದರ
  • ದರ ಪಟ್ಟಿ ನಿರ್ಮಾಣ ಹಂತದಲ್ಲಿಗುತ್ತಿಗೆದಾರರು ಪಾಲ್ಗೊಳ್ಳುವಿಕೆ