ಕೆಂಪುಕೋಟೆ ಹಿಂಸಾಚಾರದ ಆರೋಪಿ ಅಪಘಾತದಲ್ಲಿ ನಿಧನ: ಯಾರಿದು ದೀಪ್ ಸಿಧು?

2021ರ ಜನವರಿಯಲ್ಲಿ ಗಣರಾಜ್ಯೋತ್ಸವ ದಿನದಂದು ದಿಲ್ಲಿಯ ಕೆಂಪುಕೋಟೆಯಲ್ಲಿ ನಡೆದ ಹಿಂಸಾಚಾರ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ನಟ ದೀಪ್ ಸಿಧು ರಸ್ತೆ ಅಪಘಾತದಲ್ಲಿ ಮಂಗಳವಾರ ಮೃತಪಟ್ಟಿದ್ದಾರೆ. ಕೃಷಿ ಕಾಯ್ದೆಗಳ ವಿರುದ್ಧದ ರೈತರ ಪ್ರತಿಭಟನೆಯನ್ನು ಹಿಂಸಾಚಾರಕ್ಕೆ ತಿರುಗಿಸಿದ ಆರೋಪ ಇವರ ಮೇಲಿತ್ತು. ಯಾರಿದು ದೀಪ್ ಸಿಧು?

ಕೆಂಪುಕೋಟೆ ಹಿಂಸಾಚಾರದ ಆರೋಪಿ ಅಪಘಾತದಲ್ಲಿ ನಿಧನ: ಯಾರಿದು ದೀಪ್ ಸಿಧು?
Linkup
ಹೊಸದಿಲ್ಲಿ: ಕಳೆದ ವರ್ಷದ ಜನವರಿಯಲ್ಲಿ ಗಣರಾಜ್ಯೋತ್ಸವ ದಿನಾಚರಣೆಯಂದು ನಡೆದ ಹಿಂಸಾಚಾರದ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿದ್ದ ನಟ ಅವರು ರಸ್ತೆ ಅಪಘಾತದಲ್ಲಿ ಮಂಗಳವಾರ ಮೃತಪಟ್ಟಿದ್ದಾರೆ. ದಿಲ್ಲಿಯನ್ನು ಹಾದು ಹೋಗುವ ಕುಂಡ್ಲಿ- ಮನೇಸರ್- ಪಲ್ವಾಲ್ (ಕೆಎಂಪಿ) ಎಕ್ಸ್‌ಪ್ರೆಸ್‌ವೇನಲ್ಲಿ ಈ ಅಪಘಾತ ಸಂಭವಿಸಿದೆ. ಬಿಳಿ ಮಹೀಂದ್ರಾ ಸ್ಕಾರ್ಪಿಯೋ ವಾಹನವು ಟ್ರೈಲರ್ ಟ್ರಕ್‌ನ ಹಿಂಬದಿಗೆ ಅಪ್ಪಳಿಸಿದೆ. ಎಸ್‌ಯುವಿಯ ಚಾಲಕನ ಭಾಗವು ಸಂಪೂರ್ಣ ನಜ್ಜುಗುಜ್ಜಾಗಿದೆ. ದೀಪ್ ಸಿಧು ಅವರು ದಿಲ್ಲಿಯಿಂದ ಪಂಜಾಬ್‌ನ ಭಟಿಂಡಾಕ್ಕೆ ಎಸ್‌ಯುವಿಯಲ್ಲಿ ಪ್ರಯಾಣಿಸುತ್ತಿದ್ದರು. ಮಂಗಳವಾರ ರಾತ್ರಿ 9.30ರ ಸುಮಾರಿಗೆ ಟ್ರೈಲರ್ ಟ್ರಕ್‌ಗೆ ವೇಗವಾಗಿ ಅಪ್ಪಳಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿಧು ಅವರನ್ನು ಆಸ್ಪತ್ರೆಗೆ ಕರೆತರುವಾಗಲೇ ಮೃತಪಟ್ಟಿದ್ದರು ಎಂದು ವೈದ್ಯರು ಘೋಷಿಸಿದ್ದಾರೆ. ತಮ್ಮ ಆಪ್ತ ಸ್ನೇಹಿತೆ ರೀನಾ ರೈ ಜತೆಗೆ ಸಿಧು ಪ್ರಯಾಣಿಸುತ್ತಿದ್ದರು. ರೀನಾ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ಯಾರಿದು ದೀಪ್ ಸಿಧು?ಪಂಜಾಬಿ ಮತ್ತು ಹಿಂದಿ ನಟರಾಗಿದ್ದ ದೀಪ್ ಸಿಧು, ಈ ಹಿಂಸಾಚಾರ ಪ್ರಕರಣಗಳಿಂದಾಗಿ ಬೆಳಕಿಗೆ ಬಂದಿದ್ದರು. 1984ರ ಏಪ್ರಿಲ್ 2ರಂದು ಪಂಜಾಬ್‌ನ ಮುಖ್ತಾರ್ ಸಾಹಿಬ್ ಜಿಲ್ಲೆಯಲ್ಲಿ ಜನಿಸಿದ್ದ ಸಿಧುಗೆ 37 ವರ್ಷ ವಯಸ್ಸಾಗಿತ್ತು. ಕಾನೂನು ಪದವೀಧರರಾಗಿದ್ದ ಅವರು, ರೂಪದರ್ಶಿಯಾಗಿ ವೃತ್ತಿ ಜೀವನ ಆರಂಭಿಸಿದ್ದರು. 2015ರಲ್ಲಿ ಧರ್ಮೇಂದ್ರ ನಿರ್ಮಾಣದ ರಮ್ತಾ ಜೋಗಿ ಚಿತ್ರದಲ್ಲಿ ಮೊದಲ ಬಾರಿಗೆ ನಟಿಸಿದ್ದರು. ಎಂಟು ಪಂಜಾಬಿ ಸಿನಿಮಾಗಳಲ್ಲಿ ಬಣ್ಣಹಚ್ಚಿದ್ದರು. 2018ರಲ್ಲಿ 'ಜೋರಾ 10 ನಂಬರಿಯಾ' ಚಿತ್ರದಲ್ಲಿ ಗ್ಯಾಂಗ್‌ಸ್ಟರ್ ಪಾತ್ರ ನಿರ್ವಹಿಸಿದ ಬಳಿಕ ಜನಪ್ರಿಯತೆ ಪಡೆದಿದ್ದರು. ಈ ಚಿತ್ರದ ಎರಡನೇ ಭಾಗದಲ್ಲಿಯೂ ಅವರು ನಟಿಸಿದ್ದರು. ಆದರೆ ಕೋವಿಡ್ ಲಾಕ್‌ಡೌನ್ ಜಾರಿಯಾಗಿದ್ದರಿಂದ ಈ ಚಿತ್ರ ಸೋತಿತ್ತು. ಕೃಷಿ ಕಾಯ್ದೆಗಳ ವಿರುದ್ಧದ ರೈತರ ಪ್ರತಿಭಟನೆ ವೇಳೆ ಗಣರಾಜ್ಯೋತ್ಸವದಂದು ರೈತರು ಕೆಂಪು ಕೋಟೆಗೆ ಟ್ರ್ಯಾಕ್ಟರ್ ಮೆರವಣಿಗೆ ನಡೆಸಿದ್ದರು. ಆಗ ಭಾರಿ ಹಿಂಸಾಚಾರ ನಡೆದಿತ್ತು. ಪೊಲೀಸರ ಮೇಲೆ ಹಲ್ಲೆಗಳು ನಡೆದಿದ್ದವು. ಕೆಂಪುಕೋಟೆಯಲ್ಲಿ ತ್ರಿವರ್ಣ ಧ್ವಜ ಇಳಿಸಿ ಸಿಖ್ ಸಂಘಟನೆ ಧ್ವಜ ಹಾರಿಸಿದ್ದು ವಿವಾದ ಸೃಷ್ಟಿಸಿತ್ತು. ಈ ಹಿಂಸಾಚಾರದಲ್ಲಿ ದೀಪ್ ಸಿಧು ಭಾಗಿಯಾಗಿದ್ದು ವಿಡಿಯೋಗಳಲ್ಲಿ ಕಾಣಿಸಿತ್ತು. ಹೀಗಾಗಿ ಅವರನ್ನು ದಿಲ್ಲಿ ಪೊಲೀಸರು ಬಂಧಿಸಿದ್ದರು. ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಇಂಗ್ಲಿಷ್‌ನಲ್ಲಿ ಅವರು ಮಾತನಾಡುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. 2021ರಲ್ಲಿ ನಡೆದ ಗಣರಾಜ್ಯೋತ್ಸವ ಹಿಂಸಾಚಾರದಲ್ಲಿ ದೀಪ್ ಸಿಧು ಪ್ರಮುಖ ಸಂಚುಕೋರ ಎಂದು ಆರೋಪಿಸಲಾಗಿತ್ತು. ಕೆಂಪು ಕೋಟೆಯಲ್ಲಿ ಕೋಲಾಹಲ ಹೆಚ್ಚಿಸಲು ದೀಪ್ ಸಿಧು ಕಾರಣ ಎಂದು ಕೂಡ ಪೊಲೀಸರು ಆರೋಪಿಸಿದ್ದರು. 2021ರ ಫೆ. 9ರಂದು ಸಿಧು ಬಂಧನವಾಗಿತ್ತು. 70 ದಿನಗಳ ಪೊಲೀಸ್ ವಶದ ಬಳಿಕ ಏಪ್ರಿಲ್ 17ರಂದು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಬಿಡುಗಡೆಯಾದ ಬೆನ್ನಲ್ಲೇ ಮತ್ತೆ ಬಂಧಿಸಲಾಗಿತ್ತು. ಪೊಲೀಸರು ವಿಚಾರಣೆಗೆ ಕರೆದಾಗ ಬರಬೇಕು ಎಂಬ ಷರತ್ತಿನೊಂದಿಗೆ ದಿಲ್ಲಿ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು. 2021ರ ಮೇ ತಿಂಗಳಲ್ಲಿ ಕೆಂಪು ಕೋಟೆ ಹಿಂಸಾಚಾರ ಪ್ರಕರಣದಲ್ಲಿ ದಿಲ್ಲಿ ಪೊಲೀಸರು ದೀಪ್ ಸಿಧು ವಿರುದ್ಧ 3,000 ಪುಟಗಳ ಆರೋಪಪಟ್ಟಿ ಸಲ್ಲಿಸಿದ್ದರು. 2019ರ ಲೋಕಸಭೆ ಚುನಾವಣೆಯಲ್ಲಿ ನಟ ಸನ್ನಿ ಡಿಯೋಲ್ ಪರ ಸಿಧು ಪ್ರಚಾರ ನಡೆಸಿದ್ದರು. ಆದರೆ ಸನ್ನಿ ಡಿಯೋಲ್ ಅವರು ಸಿಧು ಅವರಿಂದ ನಂತರ ಅಂತರ ಕಾಯ್ದುಕೊಂಡಿದ್ದರು. ದಲಿತ ಸಮುದಾಯದ ಭಾವನೆಗಳಿಗೆ ನೋವು ಉಂಟುಮಾಡಿದ ಆರೋಪದಡಿ ಸಿಧು ವಿರುದ್ಧ 2021ರ ಅಕ್ಟೋಬರ್‌ನಲ್ಲಿ ಜಲಂಧರ್ ಪೊಲೀಸರು ಎಸ್‌ಸಿ/ ಎಸ್‌ಟಿ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದರು. ಹತ್ಯೆಗೊಳಗಾದ ಖಲಿಸ್ತಾನಿ ಮುಖಂಡ ಜರ್ನೈಲ್ ಸಿಂಗ್ ಭಿಂಡ್ರನ್ವಾಲೆಯ ಹೇಳಿಕೆಗಳನ್ನು ಸಿಧು ಬಹಿರಂಗವಾಗಿ ಉಲ್ಲೇಖಿಸುತ್ತಿದ್ದರು. ರಾಜ್ಯಗಳ ಒಕ್ಕೂಟ ಹಕ್ಕುಗಳ ಪರ ಹೋರಾಡಲು 'ವಾರಿಸ್ ಪಂಜಾಬ್ ದೆ' ಎಂಬ ಸಂಘಟನೆಯನ್ನೂ 2021ರ ಸೆಪ್ಟೆಂಬರ್‌ನಲ್ಲಿ ಸ್ಥಾಪಿಸಿದ್ದರು. ಸಿಎಂ ಚನ್ನಿ ಶೋಕದೀಪ್ ಸಿಧು ನಿಧನಕ್ಕೆ ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಸಂತಾಪ ವ್ಯಕ್ತಪಡಿಸಿದ್ದಾರೆ. "ಖ್ಯಾತ ನಟ ಮತ್ತು ಸಾಮಾಜಿಕ ಕಾರ್ಯಕರ್ತ ದೀಪ್ ಸಿಧು ಅವರ ದುರದೃಷ್ಟಕರ ಸಾವಿನ ಬಗ್ಗೆ ಕೇಳಿ ತೀವ್ರ ದುಃಖವಾಗಿದೆ. ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ನನ್ನ ಪ್ರಾರ್ಥನೆ ಮತ್ತು ಸಾಂತ್ವನಗಳು" ಎಂದು ಟ್ವೀಟ್ ಮಾಡಿದ್ದಾರೆ.