ಎನ್‌ಕೌಂಟರ್ ಭಯದಿಂದ ಆತ್ಮಹತ್ಯೆ?: ಅತ್ಯಾಚಾರ ಆರೋಪಿಯ ಶವ ರೈಲ್ವೆ ಹಳಿ ಮೇಲೆ ಪತ್ತೆ

ಪಕ್ಕದ ಮನೆಯ ಆರು ವರ್ಷದ ಬಾಲಕಿಯನ್ನು ಅತ್ಯಾಚಾರ ಮತ್ತು ಕೊಲೆ ಮಾಡಿದ ಪ್ರಕರಣದ ಶಂಕಿತ ಆರೋಪಿ, ಎನ್‌ಕೌಂಟರ್ ಭೀತಿಯಿಂದ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.

ಎನ್‌ಕೌಂಟರ್ ಭಯದಿಂದ ಆತ್ಮಹತ್ಯೆ?: ಅತ್ಯಾಚಾರ ಆರೋಪಿಯ ಶವ ರೈಲ್ವೆ ಹಳಿ ಮೇಲೆ ಪತ್ತೆ
Linkup
ಹೈದರಾಬಾದ್: ರೈಲ್ವೆ ಹಳಿಯೊಂದರ ಮೇಲೆ ವ್ಯಕ್ತಿಯ ಶವವೊಂದು ಗುರುವಾರ ಬೆಳಿಗ್ಗೆ ಪತ್ತೆಯಾಗಿದ್ದು, ಆತ ಮತ್ತು ಪ್ರಕರಣವೊಂದರ ಆರೋಪಿ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಹೈದರಾಬಾದ್‌ನಲ್ಲಿ ಕಳೆದ ವಾರ ಆರು ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ನಡೆದಿತ್ತು. ಆಕೆಯ ಮೃತದೇಹ ಪಲ್ಲಕೊಂಡ ರಾಜು ಎಂಬಾತನ ಮನೆಯ ಒಳಗೆ ಭಾನುವಾರ ಪತ್ತೆಯಾಗಿತ್ತು. ಅಂದಿನಿಂದಲೂ ಆತ ತಲೆಮರೆಸಿಕೊಂಡಿದ್ದು, ಮಾಡಿಕೊಂಡಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ರೈಲ್ವೆ ಹಳಿಯ ಮೇಲೆ ಛಿದ್ರಗೊಂಡ ವ್ಯಕ್ತಿಯ ದೇಹ ಪತ್ತೆಯಾಗಿದೆ. ಆತನ ಗುರುತು ಪತ್ತೆ ಹಚ್ಚುವುದು ಇನ್ನೂ ಸಾಧ್ಯವಾಗಿಲ್ಲ. ಆದರೆ ಅತ್ಯಾಚಾರ-ಕೊಲೆ ಪ್ರಕರಣದ ಶಂಕಿತ ಆರೋಪಿಯ ಕೈಗಳ ಮೇಲೆ ಇದ್ದ ಹಚ್ಚೆ ಗುರುತುಗಳು, ಇದು ಪಲ್ಲಕೊಂಡ ರಾಜು ಇರಬಹುದು ಎಂಬ ಶಂಕೆಗೆ ಎಡೆಮಾಡಿಕೊಟ್ಟಿದೆ. ಆತನ ದೇಹದ ಭಾಗಗಳ ಚಿತ್ರಗಳನ್ನು ತೆಲಂಗಾಣ ಪೊಲೀಸರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. 'ಈ ಮೃತ ವ್ಯಕ್ತಿಯೇ ಅತ್ಯಾಚಾರ ಆರೋಪಿ ಎಂದು ಸಂದೇಹಿಸಲು ನಮಗೆ ಕೆಲವು ಕಾರಣಗಳಿವೆ. ಅವನ ಕೈಗಳ ಮೇಲಿನ ಹಚ್ಚೆ ಗುರುತುಗಳು, ಅವನ ಕೈ ಮೇಲೆ ಇರುವ ಹೆಸರಿನ ಹಚ್ಚೆ, ಅವರ ಕೇಶ ಶೈಲಿ ಇವೆಲ್ಲವೂ ಪೂರಕ ಪುರಾವೆಗಳಂತಿವೆ. ಆತನ ಕೈ ಬೆರಳಿನ ಗುರುತುಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಅದು ಖಚಿತ ವರದಿ ನೀಡುತ್ತದೆ' ಎಂದು ಪೊಲೀಸ್ ಆಯುಕ್ತ ಅಂಜನಿ ಕುಮಾರ್ ತಿಳಿಸಿದ್ದಾರೆ. ಆರೋಪಿಯನ್ನಯ ಪತ್ತೆ ಹಚ್ಚಿ ಎನ್‌ಕೌಂಟರ್‌ನಲ್ಲಿ ಸಾಯಿಸಲಾಗುವುದು ಎಂದು ತೆಲಂಗಾಣ ಸಚಿವ ಮಲ್ಲ ರೆಡ್ಡಿ ಹೇಳಿಕೆ ನೀಡಿದ್ದರು. ಅದಾಗಿ ಎರಡು ದಿನಗಳಲ್ಲಿಯೇ ಈ ಮೃತದೇಹ ಪತ್ತೆಯಾಗಿದೆ. 'ನಾವು ಅತ್ಯಾಚಾರಿ ಮತ್ತು ಕೊಲೆಗಡುಕನನ್ನು ಹಿಡಿಯುತ್ತೇವೆ. ಆತನನ್ನು ಬಂಧಿಸಿದ ಬಳಿಕ ಎನ್‌ಕೌಂಟರ್ ಮಾಡಲಾಗುತ್ತದೆ' ಎಂದು ಅವರು ಮಂಗಳವಾರ ಹೇಳಿದ್ದರು. ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾದ ಬಾಲಕಿಯ ಪಕ್ಕದ ಮನೆಯ, 30 ವರ್ಷದ ಶಂಕಿತ ಆರೋಪಿಯ ಫೋಟೋ ಬಿಡುಗಡೆ ಮಾಡಿದ್ದ ಪೊಲೀಸರು, ಆತನ ಸುಳಿವು ನೀಡಿದವರಿಗೆ 10 ಲಕ್ಷ ರೂ ಬಹುಮಾನ ನೀಡುವುದಾಗಿ ಘೋಷಿಸಿದ್ದರು. ಹೈದರಾಬಾದ್‌ನ ಸಿಂಗರೇನಿ ಕಾಲೋನಿಯ ಮನೆಯಿಂದ ಸೆ. 9ರಂದು ಬಾಲಕಿ ನಾಪತ್ತೆಯಾಗಿದ್ದಳು. ಅದೇ ದಿನ ನೆರೆಮನೆಯಲ್ಲಿ ಅವಳ ಮೃತ ದೇಹ ಪತ್ತೆಯಾಗಿತ್ತು. ಮೃತದೇಹವನ್ನು ಬೆಡ್‌ಶೀಟ್‌ನಲ್ಲಿ ಸುತ್ತಿ ಇಡಲಾಗಿತ್ತು. ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದು, ಕತ್ತು ಹಿಸುಕಿ ಸಾಯಿಸಲಾಗಿದೆ ಎಂಬುದನ್ನು ಮರಣೋತ್ತರ ಪರೀಕ್ಷೆ ವರದಿ ಖಚಿತಪಡಿಸಿತ್ತು. ಅಂದಿನಿಂದಲೇ ರಾಜು ತಲೆಮರೆಸಿಕೊಂಡಿದ್ದ. ಆರೋಪಿಯನ್ನು ಅದೇ ದಿನ ಬಂಧಿಸಲಾಗಿದೆ ಎಂದು ವರದಿಯಾಗಿತ್ತು. ಆದರೆ ಅದು ಸತ್ಯವಲ್ಲ ಎಂದು ಗೊತ್ತಾಗುತ್ತಿದ್ದಂತೆ, ಈ ಭಾಗದಲ್ಲಿ ಬೃಹತ್ ಪ್ರತಿಭಟನೆಗಳು ನಡೆದಿದ್ದವು. ಆರೋಪಿಯನ್ನು ಬಂಧಿಸಿ ಶಿಕ್ಷಿಸುವ ಬದಲು ಎನ್‌ಕೌಂಟರ್ ಮಾಡಬೇಕು ಎಂಬ ಒತ್ತಾಯ ಕೇಳಿಬಂದಿತ್ತು. ಆರೋಪಿಯನ್ನು ಬಂಧಿಸಲಾಗಿದೆ ಎಂದು ಸಚಿವ ಕೆಟಿ ರಾಮರಾವ್ ಕೂಡ ಟ್ವೀಟ್ ಮಾಡಿದ್ದರು. ಆದರೆ ಅದು ತಮಗೆ ಬಂದ ತಪ್ಪು ಮಾಹಿತಿ. ಆರೋಪಿಯ ಪತ್ತೆಗೆ ವ್ಯಾಪಕ ಶೋಧ ನಡೆಸಲಾಗಿದೆ ಎಂದು ಅವರು ಬಳಿಕ ಸ್ಪಷ್ಟನೆ ನೀಡಿದ್ದರು.