'ಅರ್ಜುನ್ ವೆಡ್ಸ್ ಅಮೃತ' ಖ್ಯಾತಿಯ ತುಳು ಸಿನಿಮಾ ನಿರ್ದೇಶಕ ರಘು ಶೆಟ್ಟಿ ಇನ್ನಿಲ್ಲ

ತುಳು ನಿರ್ದೇಶಕ ರಘು ಶೆಟ್ಟಿ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.

'ಅರ್ಜುನ್ ವೆಡ್ಸ್ ಅಮೃತ' ಖ್ಯಾತಿಯ ತುಳು ಸಿನಿಮಾ ನಿರ್ದೇಶಕ ರಘು ಶೆಟ್ಟಿ ಇನ್ನಿಲ್ಲ
Linkup
ಮಂಗಳೂರು: ತುಳು ನಿರ್ದೇಶಕ ಅವರು ನಿನ್ನೆ (ಏಪ್ರಿಲ್ 17, ಶನಿವಾರ) ಸಂಜೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಅವರಿಗೆ 42 ವರ್ಷ ವಯಸ್ಸಾಗಿತ್ತು. ಮೂಡುಬಿದಿರೆ ಮೂಲದ ರಘು ಶೆಟ್ಟಿ ಪತ್ನಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಈ ಹಿಂದೆ ರಘು ಶೆಟ್ಟಿ ಖಾಸಗಿ ವಾಹಿನಿಯ ಉದ್ಯೋಗದಲ್ಲಿದ್ದರು. ಬಳಿಕ ರಘು ಶೆಟ್ಟಿ ತುಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. 'ಅರ್ಜುನ್ ವೆಡ್ಸ್ ಅಮೃತ' ಎಂಬ ತುಳು ಚಿತ್ರವನ್ನು ರಘು ಶೆಟ್ಟಿ ನಿರ್ದೇಶಿಸಿದ್ದಾರೆ. ಜೊತೆಗೆ ಹೋಟೆಲ್ ಉದ್ಯಮಕ್ಕೂ ರಘು ಶೆಟ್ಟಿ ಕೈ ಹಾಕಿದ್ದರು. ಮೂಡುಬಿದಿರೆಯ ಬಂಟರ ಕುಟುಂಬದಲ್ಲಿ ಸೆಪ್ಟೆಂಬರ್ 1, 1979 ರಂದು ಜನಿಸಿದ ರಘು ಶೆಟ್ಟಿ ಬೆಳೆದಿದ್ದೆಲ್ಲ ಹುಬ್ಬಳ್ಳಿಯಲ್ಲಿ. ಇವರ ತಂದೆ ಉದ್ಯಮಿ. ಮೂಡುಬಿದಿರೆಯ ಮಹಾವೀರ ಕಾಲೇಜ್‌ನಲ್ಲಿ ವ್ಯಾಸಂಗ ಮಾಡಿದ ರಘು ಶೆಟ್ಟಿಗೆ ಸಿನಿಮಾಗಳ ಬಗ್ಗೆ ಅಪಾರ ಆಸಕ್ತಿ ಇತ್ತು. 'ಅರ್ಜುನ್ ವೆಡ್ಸ್ ಅಮೃತ' ಚಿತ್ರದ ಮೂಲಕ ಕೋಸ್ಟಲ್‌ವುಡ್‌ನಲ್ಲಿ ಭಾರೀ ಜನಪ್ರಿಯತೆ ಗಳಿಸಿದ್ದ ರಘು ಶೆಟ್ಟಿ ಕನ್ನಡ ಚಿತ್ರವೊಂದನ್ನು ನಿರ್ದೇಶಿಸಲು ಸಕಲ ತಯಾರಿ ನಡೆಸಿದ್ದರು. ಇದಕ್ಕಾಗಿ ನಟ ಕೋಮಲ್ ಜೊತೆಗೆ ಮಾತುಕತೆಯೂ ನಡೆದಿತ್ತು. ಆದರೆ ಅಷ್ಟರಲ್ಲಿ ಬಾರದ ಲೋಕಕ್ಕೆ ರಘು ಶೆಟ್ಟಿ ಪಯಣಿಸಿದ್ದಾರೆ. ರಘು ಶೆಟ್ಟಿ ನಿಧನಕ್ಕೆ ಕೋಸ್ಟಲ್‌ವುಡ್ ಕಂಬನಿ ಮಿಡಿದಿದೆ.