
ನಟ ಚಿರಂಜೀವಿ ಸರ್ಜಾ ಮತ್ತು ಸರ್ಜಾ ದಂಪತಿಯ ಮುದ್ದಾದ ಮಗನಿಗೆ ನಾಮಕರಣ ಮಾಡಲಾಗಿದೆ. ಈವರೆಗೂ ಅವನನ್ನು ಜೂನಿಯರ್ ಚಿರು ಎಂದೇ ಕರೆಯಲಾಗುತ್ತಿತ್ತು. 2020ರ ಅಕ್ಟೋಬರ್ 22ರಂದು ಜನಿಸಿದ 'ಜೂ.ಸಿ'ಗೆ ಇಂದು (ಸೆ.3) ಹೆಸರಿಡಲಾಗಿದೆ. ಹೌದು, ಮಗನಿಗೆ 'ರಾಯನ್ ರಾಜ್ ಸರ್ಜಾ' ಎಂದು ಮೇಘನಾ ಹೆಸರಿಟ್ಟಿದ್ದಾರೆ. ವಿಶೇಷವೆಂದರೆ, ಈ ಹೆಸರಿನಲ್ಲಿ ಮೇಘನಾ ಮತ್ತು ಚಿರಂಜೀವಿ ಅವರ ಸರ್‌ನೇಮ್ ಕೂಡ ಇದೆ.
ಕೆಲ ತಿಂಗಳ ಹಿಂದೆ ಮೇಘನಾ ರಾಜ್ ಮನೆಯಲ್ಲಿ ತೊಟ್ಟಿಲು ಶಾಸ್ತ್ರ ಮಾಡಲಾಗಿತ್ತು. ಇದೀಗ ಬೆಂಗಳೂರಿನ ಖಾಸಗಿ ಹೋಟೆಲ್‌ವೊಂದರಲ್ಲಿ ಸರಳವಾಗಿ ನಾಮಕರಣ ಶಾಸ್ತ್ರ ಮಾಡಲಾಗಿದೆ. ರಾಯನ್ ಹುಟ್ಟಿದ ದಿನವೇ, ಅಣ್ಣನ ಮಗನಿಗಾಗಿ ಧ್ರುವ ಸರ್ಜಾ ಒಂದು ಬೆಳ್ಳಿ ತೊಟ್ಟಿಲನ್ನು ಖರೀದಿಸಿದ್ದರು. ಇದೀಗ ಅದನ್ನು ನಾಮಕರಣ ಶಾಸ್ತ್ರದಲ್ಲಿ ಬಳಕೆ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ಧ್ರುವ ಸರ್ಜಾ, ಸೂರಜ್ ಸರ್ಜಾ ಹಾಗೂ ಸರ್ಜಾ ಕುಟುಂಬದ ಸದಸ್ಯರು, ಮೇಘನಾ ರಾಜ್ ಅವರ ಕುಟುಂಬದ ಸದಸ್ಯರು ಭಾಗಿಯಾಗಿದ್ದಾರೆ.
ಇನ್ನು, ಮಗನ ಹೆಸರನ್ನು ವಿಶೇಷ ವಿಡಿಯೋವೊಂದರ ಮೂಲಕ ರಿವೀಲ್ ಮಾಡಿದ್ದಾರೆ ನಟಿ ಮೇಘನಾ. ಆ ವಿಡಿಯೋದಲ್ಲಿ ಚಿರು ಮತ್ತು ಮೇಘನಾ ಅವರ ಮದುವೆಯ ಒಂದಷ್ಟು ಕ್ಲಿಪಿಂಗ್ಸ್, ಸುಂದರ ಕ್ಷಣಗಳ ಫೋಟೋಗಳು ಇವೆ. ಹಾಗೆಯೇ, ಫೋಟೋಗಳು ಮತ್ತು ವಿಡಿಯೋ ತುಣುಕುಗಳು ಕೂಡ ಇವೆ. ಅದರ ಮೂಲಕ ಮಗನ ಹೆಸರನ್ನು ಬಹಿರಂಗಪಡಿಸಿದ್ದಾರೆ ಮೇಘನಾ. ಇಷ್ಟು ದಿನಗಳ ಕಾಲ ರಾಯನ್‌ಗೆ ತಾತ ಸುಂದರ್ ರಾಜ್ ಅವರು ಚಿಂಟೂ ಎಂದು ಕರೆಯುತ್ತಿದ್ದರು. ಹಾಗೆಯೇ, ಧ್ರುವ ಸರ್ಜಾ 'ಶಿಷ್ಯ' ಎನ್ನುತ್ತಿದ್ದರಂತೆ. ಉಳಿದಂತೆ, ಜೂನಿಯರ್ ಸಿ, ಸಿಂಬಾ, ಬರ್ಫಿ, ಚಿರು ಬಚ್ಚಾ, ಮರಿ ಸಿಂಗಾ, ಮಿನಿಮಂ, ಕುಟ್ಟಿ ಪಾಪ, ಚಿರು ಬೇಬಿ, ಮರಿ ಸಿಂಗಾ ಅಂತೆಲ್ಲಾ ರಾಯನ್‌ಗೆ ಕರೆಯಲಾಗುತ್ತಿತ್ತು
ರಾಯನ್‌ಗೆ ಅಕ್ಟೋಬರ್ 22ಕ್ಕೆ ಒಂದು ವರ್ಷ ತುಂಬಲಿದೆ. ಇದೀಗ ವರ್ಷ ತುಂಬುವುದರೊಳಗೆ ನಾಮಕರಣ ಮಾಡಲಾಗಿದೆ. ಅಂದಹಾಗೆ, ಕಳೆದ ವರ್ಷ ಜೂನ್ 7 ರಂದು ಹೃದಯಾಘಾತದಿಂದ ನಟ ಚಿರಂಜೀವಿ ಸರ್ಜಾ ಮೃತಪಟ್ಟರು. ಚಿರು ಸಾವನ್ನಪ್ಪಿದಾಗ ಪತ್ನಿ ಮೇಘನಾ ರಾಜ್ ಐದು ತಿಂಗಳ ಗರ್ಭಿಣಿಯಾಗಿದ್ದರು.