Head Bush: ಧನಂಜಯ ನಟನೆಯ 'ಹೆಡ್ ಬುಷ್‌' ಚಿತ್ರತಂಡದಲ್ಲಿ ಕೇಳಿಬಂತು ದೊಡ್ಡ ಬದಲಾವಣೆ!

ಡಾನ್‌ ಎಂ.ಪಿ. ಜಯರಾಜ್‌ ಪಾತ್ರದಲ್ಲಿ ನಟ ಧನಂಜಯ ಕಾಣಿಸಿಕೊಳ್ಳಲಿರುವ ಚಿತ್ರಕ್ಕೆ ಹೆಡ್ ಬುಷ್ ಎಂದು ಟೈಟಲ್‌ ಇಡಲಾಗಿತ್ತು. ಈ ಚಿತ್ರಕ್ಕಾಗಿ ಸಾಕಷ್ಟು ತಯಾರಿಯನ್ನೂ ಮಾಡಿಕೊಳ್ಳಲಾಗಿದೆ. ಈಗ ಹೊಸದೊಂದು ಬದಲಾವಣೆ ಹೆಡ್ ಬುಷ್‌ ಚಿತ್ರತಂಡದಲ್ಲಿ ಆಗಿದೆ.

Head Bush: ಧನಂಜಯ ನಟನೆಯ 'ಹೆಡ್ ಬುಷ್‌' ಚಿತ್ರತಂಡದಲ್ಲಿ ಕೇಳಿಬಂತು ದೊಡ್ಡ ಬದಲಾವಣೆ!
Linkup
ಹರೀಶ್‌ ಬಸವರಾಜ್‌ ನಟನೆಯ 'ಹೆಡ್‌ ಬುಷ್‌' ಸಿನಿಮಾದ ಚಿತ್ರೀಕರಣ ಆಗಸ್ಟ್‌ 9ರಿಂದ ಆರಂಭವಾಗಲಿದ್ದು, ಅದಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿಯೂ ತಮ್ಮ ಛಾಪು ಮೂಡಿಸುತ್ತಿರುವ ಡಾಲಿ ಧನಂಜಯ ಅವರು ಈ ಸಿನಿಮಾದಲ್ಲಿ ಬೆಂಗಳೂರಿನ ಭೂಗತ ಲೋಕದಲ್ಲಿ ಡಾನ್‌ ಆಗಿದ್ದ ಜಯರಾಜ್‌ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ಶೂನ್ಯ ಎಂಬ ಹೊಸ ಪ್ರತಿಭೆ ನಿರ್ದೇಶನ ಮಾಡುತ್ತಿದ್ದಾರೆ. ವಿಶೇಷವೆಂದರೆ, ಈ ಸಿನಿಮಾಗೆ ಈಗ ಅವರೇ ನಿರ್ಮಾಪಕರು! ಈ ಮೊದಲು ಅಶು ಬೆದ್ರ ಹೆಡ್ ಬುಷ್‌ಗೆ ನಿರ್ಮಾಣ ಮಾಡುತ್ತಿದ್ದರು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರ್ಮಾಣವಾಗಲಿರುವ ಈ ಸಿನಿಮಾವನ್ನು ಅಶು ಬೆದ್ರ ಘೋಷಣೆ ಮಾಡಿದ್ದರು. ಆದರೆ, ಅದರಲ್ಲಿ ಬದಲಾವಣೆ ಆಗಿದೆ. ತಮ್ಮ ಡಾಲಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಡಾಲಿ ಧನಂಜಯ ಅವರೇ ನಿರ್ಮಾಣದ ಹೊಣೆ ಹೊತ್ತುಕೊಂಡಿದ್ದಾರೆ. ತಮ್ಮ ಸ್ನೇಹಿತರು ಮತ್ತು 'ತ್ರಿವಿಕ್ರಮ' ಸಿನಿಮಾದ ನಿರ್ಮಾಪಕ ಸೋಮಣ್ಣ ಜತೆಗೂಡಿ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಧನಂಜಯ ಈಗಾಗಲೇ ತಮ್ಮ ನಿರ್ಮಾಣ ಸಂಸ್ಥೆಯಿಂದ 'ಬಡವ ರಾಸ್ಕಲ್‌' ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಧನಂಜಯ ಅವರು ಈಗಾಗಲೇ ತಮ್ಮ ಬೇರೆ ಬೇರೆ ಸಿನಿಮಾಗಳ ಕಮಿಟ್ಮೆಂಟ್‌ಗಳನ್ನು ಮುಗಿಸಿ 'ಹೆಡ್‌ ಬುಷ್‌' ಸಿನಿಮಾದತ್ತ ತಮ್ಮ ಗಮನ ಕೇಂದ್ರೀಕರಿಸಿದ್ದಾರೆ. ಇದಕ್ಕಾಗಿ ವರ್ಕೌಟ್‌ ಸೇರಿದಂತೆ ಇನ್ನಿತರ ತಯಾರಿಗಳನ್ನು ಮಾಡಿಕೊಳ್ಳುತ್ತಿರುವ ಅವರು ಆಗಸ್ಟ್‌ 9ರಿಂದ ಜಯರಾಜ್‌ ಆಗುತ್ತಿದ್ದಾರೆ. ನಿರ್ದೇಶಕ ಶೂನ್ಯ ಅವರು ಸಹ ಕಥೆಗಾರ ಅಗ್ನಿ ಶ್ರೀಧರ್‌ ಜತೆಗೆ ಸ್ಕ್ರಿಪ್ಟ್‌ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿಯೇ ಈ ಸಿನಿಮಾದ ಮೊದಲ ಹಂತದ ಚಿತ್ರೀಕರಣ ಆರಂಭವಾಗಲಿದ್ದು, ಇದಕ್ಕಾಗಿ ದೊಡ್ಡ ಮಟ್ಟದ ಕಲಾವಿದರ ಆಯ್ಕೆ ನಡೆದಿದೆ. ಅದನ್ನು ಚಿತ್ರತಂಡ ಸದ್ಯದಲ್ಲೇ ರಿವೀಲ್‌ ಮಾಡಲಿದೆ. ಧನಂಜಯ ಹುಟ್ಟುಹಬ್ಬದ ಪ್ರಯುಕ್ತ ಅಂದರೆ, ಆಗಸ್ಟ್‌ 23ಕ್ಕೆ ಈ ಸಿನಿಮಾ ಫಸ್ಟ್‌ ಲುಕ್‌ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್‌ ಮಾಡಿದೆ. ಈ ಸಿನಿಮಾಗೆ ಚರಣ್‌ ರಾಜ್‌ ಸಂಗೀತ ಸಂಯೋಜನೆ ಮಾಡಿದ್ದಾರೆ. ಕಳೆದ ವರ್ಷ ಸ್ವಾತಂತ್ರೋತ್ಸವದ ಪ್ರಯುಕ್ತ ಈ ಸಿನಿಮಾದ ಶೀರ್ಷಿಕೆಯನ್ನು 'ಪವರ್‌ ಸ್ಟಾರ್‌' ಪುನೀತ್‌ ರಾಜ್‌ಕುಮಾರ್ ಅನೌನ್ಸ್‌ ಮಾಡಿದ್ದರು. ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ, ಇಂಗ್ಲಿಷ್‌ ಸೇರಿ ಒಟ್ಟು 6 ಭಾಷೆಯಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ಈ ಹಿಂದೆ ಹೇಳಿಕೊಂಡಿತ್ತು. ಎರಡು ಪಾರ್ಟ್‌ಗಳಲ್ಲಿ ಚಿತ್ರ ತಯಾರಾಗಲಿದ್ದು ಮೊದಲ ಭಾಗಕ್ಕೆ 'VOL-1' ಎಂಬ ಅಡಿಬರಹ ಇದೆ.