Chennai Rains: ಚೆನ್ನೈನಲ್ಲಿ ವರುಣನ ಆರ್ಭಟ, 2015ರ ಬಳಿಕದ ಅತ್ಯಧಿಕ ಮಳೆ ದಾಖಲು

ತಮಿಳುನಾಡಿನ ಚೆನ್ನೈ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶನಿವಾರ ರಾತ್ರಿಯಿಂದಲೂ ಭಾರಿ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ಇದರಿಂದ ಈ ಭಾಗದ ಅನೇಕ ಪ್ರಮುಖ ರಸ್ತೆಗಳು ಹಾಗೂ ತಗ್ಗಿನ ಪ್ರದೇಶಗಳು ಜಲಾವೃತವಾಗಿವೆ.

Chennai Rains: ಚೆನ್ನೈನಲ್ಲಿ ವರುಣನ ಆರ್ಭಟ, 2015ರ ಬಳಿಕದ ಅತ್ಯಧಿಕ ಮಳೆ ದಾಖಲು
Linkup
ಚೆನ್ನೈ: ಸಮುದ್ರದಲ್ಲಿ ಉಂಟಾದ ವಾಯುಭಾರ ಕುಸಿತದ ಪರಿಣಾಮ ಭಾರತದ ಅನೇಕ ಭಾಗಗಳಲ್ಲಿ ಗುಡುಗು ಸಿಡಿಲು ಸಹಿತ ಭಾರಿ ಮಳೆಯಾಗುತ್ತಿದೆ. ರಾಜಧಾನಿ ಚೆನ್ನೈನಲ್ಲಿ ಶನಿವಾರ ರಾತ್ರಿಯಿಡೀ ವರುಣ ಆರ್ಭಟಿಸಿದ್ದಾನೆ. ಇದು 2015ರ ಬಳಿಕ ಕಂಡ ಮಹಾ ಎಂದು ಖಾಸಗಿ ಹವಾಮಾನ ಸಂಸ್ಥೆಗಳು ಹೇಳಿವೆ. ಶನಿವಾರ ರಾತ್ರಿಯಿಂದ ಭಾನುವಾರ ಬೆಳಗಿನವರೆಗೂ ಎಡೆಬಿಡದೆ ಮಳೆರಾಯ ಅಬ್ಬರಿಸಿದ್ದಾನೆ. ಚೆನ್ನೈನ ಅನೇಕ ಭಾಗಗಳಲ್ಲಿ ರಸ್ತೆಗಳು ಜಲಾವೃತವಾಗಿವೆ. ಚೆನ್ನೈ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರಿ ಮಳೆಯಾಗಿದೆ. ಮುಂದಿನ ಕೆಲವು ದಿನಗಳವರೆಗೂ ಮಳೆಯ ಅಬ್ಬರ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಸೂಚನೆ ನೀಡಿದೆ. ಚೆನ್ನೈ, ಕೊರತೂರ್, ಪೆರಂಬೂರ್, ಅಣ್ಣಾ ಸಲೈ, ಟಿ ನಗರ, ಗ್ಯುಂಡಿ, ಅಡ್ಯಾರ್, ಪೆರುಂಗುಡಿ, ಒಎಂಆರ್‌ಗಳಲ್ಲಿ ಎಲ್ಲೆಡೆ ಮಳೆ ನೀರು ಹರಿದ ಪರಿಣಾಮ ಜನಸಾಮಾನ್ಯರು ಪರದಾಡುವಂತಾಗಿದೆ. ಭಾನುವಾರ ಬೆಳಗಿನ 8 ಗಂಟೆ ವೇಳೆಗೆ ನುಂಗಂಬಕ್ಕಂನಲ್ಲಿ 20.8 ಸೆಂ.ಮೀ ಮಳೆ ದಾಖಲಾಗಿದೆ. ಮೀನಕಂಬಕ್ಕಂ ಮತ್ತು ಎನ್ನೋರ್‌ನಲ್ಲಿ ಕ್ರಮವಾಗಿ 9.4 ಸೆಂಮೀ ಹಾಗೂ 8 ಸೆಂ.ಮೀ ಮಳೆ ಸುರಿದಿದೆ. 'ಚೆನ್ನೈನಲ್ಲಿ 2015ರಿಂದ ಸುರಿದ ಅತಿ ಹೆಚ್ಚಿನ ಮಳೆ ಇದು. ಮುಖ್ಯವಾಗಿ ಉತ್ತರ ಹಾಗೂ ಕೇಂದ್ರ ಚೆನ್ನೈ ಪ್ರದೇಶಗಳಲ್ಲಿ ಅತ್ಯಧಿಕ ಮಳೆಯಾಗಿದ್ದು, ಮತ್ತಷ್ಟು ದಟ್ಟ ಮೋಡಗಳು ಚಲಿಸುತ್ತಿವೆ' ಎಂದು ವೆದರ್ ಬ್ಲಾಗರ್ ಆರ್ ಪ್ರದೀಪ್ ಜಾನ್ ಅವರು ತಮಿಳುನಾಡು ವೆದರ್‌ಮ್ಯಾನ್ ಫೇಸ್‌ಬುಕ್ ಪುಟದಲ್ಲಿ ಬರೆದುಕೊಂಡಿದ್ದಾರೆ. ಭಾನುವಾರ ಬೆಳಿಗ್ಗೆ 7.30ರ ಬಳಿಕ ಚೆನ್ನೈನಲ್ಲಿ 207 ಮಿಮೀ ಮಳೆಯಾಗಿದೆ. ವಿಲ್ಲಿವಕ್ಕಂನಲ್ಲಿ 162 ಮಿಮೀ ಮತ್ತು ಪುಳಾಳ್‌ನಲ್ಲಿ 111 ಮಿಮೀ ಮಳೆ ದಾಖಲಾಗಿದೆ. ಮೈಲಾಪುರ್ 226 ಮಿಮೀ, ಅಂಬತ್ತೂರು, ಸಿವಪು ಸಾಂಬಹವಂನಲ್ಲಿ 205 ಮಿಮೀ ದಾಖಲಾಗಿದೆ. ಬೆಳಿಗ್ಗೆ 11 ಗಂಟೆ ವೇಳೆಗೆ ಪುಳಾಳ್ ಜಲಾಶಯದಿಂದ 500 ಕ್ಯೂಸೆಕ್ಸ್ ನೀರು ಹೊರಬಿಡುವುದಾಗಿ ತಿರುವಳ್ಳೂರ್ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಚೆನ್ನೈ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವರುಣನ ಆರ್ಭಟದಿಂದಾಗಿ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ. ಹೀಗಾಗಿ ನದಿ ತೀರದ ಕೆಳ ಪ್ರದೇಶಗಳಲ್ಲಿ ವಾಸಿಸುತ್ತಿರುವವರು ಮತ್ತು ಹೆಚ್ಚುವರಿ ಕಾಲುವೆಗಳ ಸಮೀಪದಲ್ಲಿರುವ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಲಾಗಿದೆ. ತಮಿಳುನಾಡು, ಪುದುಚೆರಿ ಮತ್ತು ಕಾರೈಕಲ್‌ನಲ್ಲಿ ಮುಂದಿನ ಐದು ದಿನಗಳವರೆಗೆ ವಿಪರೀತ ಮಳೆ ಆರ್ಭಟದ ಬಗ್ಗೆ ಐಎಂಡಿ ಎಚ್ಚರಿಕೆ ನೀಡಿದೆ. ಬಂಗಾಳ ಕೊಲ್ಲಿಯ ಆಗ್ನೇಯ ಭಾಗ ಮತ್ತು ಸಮೀಪದ ಸುಮಾತ್ರ ಕರಾವಳಿಯ ಹಿಂದೂ ಮಹಾಸಾಗರದ ಭಾಗದಲ್ಲಿನ ಸಮುದ್ರ ಮಟ್ಟಕ್ಕಿಂತ 3.1 ಕಿಮೀ ಎತ್ತರದವರೆಗೂ ಸನ್ನಿವೇಶ ರೂಪುಗೊಂಡಿದೆ. ಅದರ ಪ್ರಭಾವದಿಂದ ನವೆಂಬರ್ 9ರ ವೇಳೆಗೆ ಬಂಗಾಳ ಕೊಲ್ಲಿಯ ಆಗ್ನೇಯ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಯುಭಾರ ಕುಸಿತ ಉಂಟಾಗಬಹುದು. ಇದರಿಂದ ನವೆಂಬರ್ 9 ರಿಂದ 12ರವರೆಗೆ ವ್ಯಾಪಕ ಗಾಳಿ ಹಾಗೂ ಮಳೆ ಉಂಟಾಗಬಹುದು ಎಂದು ಐಎಂಡಿ ತಿಳಿಸಿದೆ.