ಸಾಲದ ಹೊಡೆತದಿಂದ 'ರೆಕ್ಕೆ' ಕಳೆದುಕೊಂಡಿದ್ದ ಜೆಟ್ ಏರ್‌ವೇಸ್‌ಗೆ ಮರುಜೀವ: ಮರು ಕಾರ್ಯಾಚರಣೆಗೆ ಅನುಮತಿ

ಸಾಲದಿಂದ ದಿವಾಳಿಯಾಗಿ 2019ರಿಂದ ಸಂಪೂರ್ಣ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದ ಜೆಟ್ ಏರ್‌ವೇಸ್ ವಿಮಾನಯಾನ ಸಂಸ್ಥೆಯ ಪುನರುಜ್ಜೀವನಕ್ಕೆ ದಿವಾಳಿತನದ ಕೋರ್ಟ್ ಅನುಮೋದನೆ ನೀಡಿದೆ. ಇದರಿಂದ ಜೆಟ್ ಏರ್‌ವೇಸ್ ಮತ್ತೆ ಹಾರಾಟ ಆರಂಭಿಸಲಿದೆ.

ಸಾಲದ ಹೊಡೆತದಿಂದ 'ರೆಕ್ಕೆ' ಕಳೆದುಕೊಂಡಿದ್ದ ಜೆಟ್ ಏರ್‌ವೇಸ್‌ಗೆ ಮರುಜೀವ: ಮರು ಕಾರ್ಯಾಚರಣೆಗೆ ಅನುಮತಿ
Linkup
ಹೊಸದಿಲ್ಲಿ: ಸಾಲದ ಹೊರೆಯಲ್ಲಿ ಮುಳುಗಿದ್ದರಿಂದ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದ ಜೆಟ್ ಏರ್‌ವೇಸ್ ಸಂಸ್ಥೆ ಪುನರಾರಂಭಗೊಳ್ಳುವ ಸೂಚನೆ ದೊರಕಿದೆ. ರಾಷ್ಟ್ರೀಯ ಕಂಪೆನಿ ಕಾನೂನು ನ್ಯಾಯಮಂಡಳಿಯು () ಲಂಡನ್ ಮೂಲದ ಕಾಲ್ರೋಕ್ ಕ್ಯಾಪಿಟಲ್ ಮತ್ತು ಯುಎಇ ಮೂಲದ ಉದ್ಯಮಿ ಮುರಾರಿ ಲಾಲ್ ಜಲಾನ್ ಅವರ ಒಕ್ಕೂಟವು ಸಲ್ಲಿಸಿದ್ದ ಪುನಶ್ಚೇತನ ಯೋಜನೆಗೆ ಅನುಮೋದನೆ ನೀಡಿದೆ. ಪುನಶ್ಚೇತನ ಯೋಜನೆ ಭಾಗವಾಗಿ, ಸಾಲದಲ್ಲಿ ಸಿಲುಕಿರುವ ಜೆಟ್ ಏರ್‌ವೇಸ್‌ಗೆ ಸಂಚಾರದ ಮಾರ್ಗಗಳನ್ನು ಹಂಚಿಕೆ ಮಾಡಲು ನಾಗರಿಕ ವಿಮಾನಯಾನ ನಿರ್ದೇಶನಾಲಯ ಹಾಗೂ ವಿಮಾನಯಾನ ಸಚಿವಾಲಯಗಳಿಗೆ ಎನ್‌ಸಿಎಲ್‌ಟಿ 90 ದಿನಗಳ ಸಮಯ ನೀಡಿದೆ. ತನ್ನ ಕಾರ್ಯಾಚರಣೆ ಆರಂಭಿಸಲು ಸಂಬಂಧಿಸಿದ ಸರಕಾರಿ ಅನುಮೋದನೆಗಳಿಗಾಗಿ ಒಕ್ಕೂಟವು ಮನವಿಗಳನ್ನು ಸಲ್ಲಿಸಲಿದೆ. ಜೆಟ್ ಏರ್‌ವೇಸ್‌ನ ಸಂಚಾರ ಮಾರ್ಗಗಳ ಹಂಚಿಕೆ ಕುರಿತು ವಿಮಾನಯಾನ ನಿರ್ದೇಶನಾಲಯ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ. ಈ ಹಿಂದೆ ಬಳಸುತ್ತಿದ್ದ ಮಾರ್ಗಗಳನ್ನೇ ಮರಳಿ ಪಡೆಯಲಿದೆಯೇ ಎನ್ನುವುದು ಸ್ಪಷ್ಟವಾಗಿಲ್ಲ. ಅದರ ದೇಶೀ ಹಾಗೂ ಅಂತಾರಾಷ್ಟ್ರೀಯ ಮಾರ್ಗಗಳನ್ನು ನಿರ್ಧರಿಸಲು ಚರ್ಚೆಗಳು ನಡೆಯಲಿವೆ. ಜೆಟ್ ಏರ್‌ವೇಸ್ ಈ ಮೊದಲು 700 ಸಮಯದ ಸ್ಲಾಟ್‌ಗಳನ್ನು ಹೊಂದಿತ್ತು. ಮುಂಬಯಿ, ದಿಲ್ಲಿ ಸೇರಿದಂತೆ ವಿವಿಧ ನಿಲ್ದಾಣಗಳಿಂದ ಕಾರ್ಯಾಚರಣೆ ನಡೆಸುತ್ತಿತ್ತು. 2019ರ ಏಪ್ರಿಲ್‌ ತಿಂಗಳಲ್ಲಿ ಕಾರ್ಯಾಚರಣೆಗಳನ್ನು ಅಮಾನತುಗೊಳಿಸಿದ ಬಳಿಕ, ಜೆಟ್‌ ಏರ್‌ವೇಸ್‌ನ ಸ್ಲಾಟ್‌ಗಳನ್ನು ಇತರೆ ವಿಮಾನಯಾನ ಸಂಸ್ಥೆಗಳಿಗೆ ಹಂಚಿಕೆ ಮಾಡಲಾಗಿತ್ತು.