![](https://vijaykarnataka.com/photo/87268421/photo-87268421.jpg)
: ಉದ್ದೇಶಿತ ಶಿವರಾಮ ಕಾರಂತ ಬಡಾವಣೆ ವ್ಯಾಪ್ತಿಯ ಸೋಮಶೆಟ್ಟಿಹಳ್ಳಿಯಲ್ಲಿ ಸೋಮವಾರ ಬೆಳ್ಳಂಬೆಳಗ್ಗೆಯೇ ಜೆಸಿಬಿಗಳು ಘರ್ಜಿಸಿದವು. ಸ್ಥಳೀಯರು ಹಾಗೂ ಶಾಸಕರ ತೀವ್ರ ವಿರೋಧದ ನಡುವೆಯೂ ಅನಧಿಕೃತವಾಗಿ ನಿರ್ಮಿಸಿದ್ದ ನಾಲ್ಕು ಆರ್ಸಿಸಿ ಕಟ್ಟಡಗಳು ಮತ್ತು ಮೂರು ಶೆಡ್ಗಳನ್ನು ಬಿಡಿಎ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿತು.
ಜೆಸಿಬಿಯೊಂದಿಗೆ ಬಿಡಿಎ ಅಧಿಕಾರಿಗಳು ಮನೆಗಳ ತೆರವಿಗೆ ಮುಂದಾಗುತ್ತಿದ್ದಂತೆಯೇ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಮನೆಗಳ ತೆರವು ಹಿನ್ನೆಲೆಯಲ್ಲಿ ಶಾಸಕ ಆರ್. ಮಂಜುನಾಥ್ ಸ್ಥಳಕ್ಕೆ ಭೇಟಿ ನೀಡಿದರು. ಈ ವೇಳೆ ಬಿಡಿಎ ಅಧಿಕಾರಿಗಳು ಹಾಗೂ ಶಾಸಕರ ನಡುವೆ ಮಾತಿನ ಚಕಮಕಿ ನಡೆಯಿತು.
ತೆರವು ಕಾರ್ಯಾಚರಣೆ ನಿಲ್ಲಿಸಿ ಮತ್ತಷ್ಟು ಸಮಯಾವಕಾಶ ನೀಡುವಂತೆ ನಿವಾಸಿಗಳು ಮನವಿ ಮಾಡಿದರು. ಆದರೆ ಬಿಡಿಎ ಅಧಿಕಾರಿಗಳು ಇದಕ್ಕೆ ಒಪ್ಪದ ಕಾರಣ ಸ್ಥಳದಲ್ಲಿ ಜಟಾಪಟಿ ನಡೆಯಿತು. ಬಿಡಿಎ ಅಧಿಕಾರಿಗಳ ಕ್ರಮ ಖಂಡಿಸಿ ನಿವಾಸಿಗಳ ಜತೆ ಶಾಸಕ ಮಂಜುನಾಥ್ ಪ್ರತಿಭಟನೆಗೆ ಮುಂದಾದರು. ಪೊಲೀಸರು ಪ್ರತಿಭಟನಾನಿರತ ನಿವಾಸಿಗಳು ಹಾಗೂ ಶಾಸಕರೂ ಸೇರಿದಂತೆ ಒಟ್ಟಾರೆ 30ಕ್ಕೂ ಹೆಚ್ಚು ಮಂದಿಯನ್ನು ಸೋಮಶೆಟ್ಟಿಹಳ್ಳಿಯಲ್ಲಿ ವಶಕ್ಕೆ ಪಡೆದು ತೆರವು ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದರು.
ಎರಡು ಮೂರು ಅಂತಸ್ತಿನ ಕಟ್ಟಡಗಳೂ ಸೇರಿದಂತೆ ಹಲವು ಕಟ್ಟಡಗಳನ್ನು ಜೆಸಿಬಿಗಳು ನೆಲಕ್ಕುರುಳಿಸಿದವು. ಸೋಲದೇವನಹಳ್ಳಿ ಠಾಣೆ ಪೊಲೀಸರ ನೇತೃತ್ವದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಹೆಚ್ಚುವರಿಯಾಗಿ ಬೇರೆ ಠಾಣೆಗಳಿಂದಲೂ ಪೊಲೀಸರನ್ನು ಕರೆಸಲಾಗಿತ್ತು. ಸುಮಾರು 500 ಕ್ಕೂ ಹೆಚ್ಚು ಪೊಲೀಸ್ ಸರ್ಪಗಾವಲಿನಲ್ಲಿ ತೆರವು ಕಾರ್ಯಾಚರಣೆ ನಡೆಯಿತು.
2018ರ ನಂತರ ಯಾವುದೇ ಹೊಸ ಕಟ್ಟಡಗಳನ್ನು ನಿರ್ಮಿಸಬಾರದು ಎಂದು ಸೂಚನೆ ನೀಡಲಾಗಿದೆ. 1798 ಮನೆಗಳನ್ನು ಗುರುತಿಸಿ ತೆರವುಗೊಳಿಸಲು ನೋಟಿಸ್ ನೀಡಲಾಗಿದೆ. ಆದರೆ ನಿವಾಸಿಗಳು ಕೋರ್ಟ್ನಿಂದ ತಡೆಯಾಜ್ಞೆ ತಂದಿರುವುದಾಗಿ ಹೇಳುತ್ತಿದ್ದಾರೆ.
ಸುಪ್ರೀಂ ಆದೇಶದಂತೆ ನೆಲಸಮ
''ಸುಪ್ರೀಂಕೋರ್ಟ್ ಆದೇಶದಂತೆ ಉಪಗ್ರಹ ನಕ್ಷೆ/ಡ್ರೋನ್ ಕ್ಯಾಮೆರಾದಿಂದ ಸೆರೆ ಹಿಡಿದ ಛಾಯಾಚಿತ್ರಗಳನ್ನು ಪರಿಶೀಲಿಸಿ ನ್ಯಾಯಾಲಯದ ಆದೇಶ ಉಲ್ಲಂಘಿಸಿ ನಿರ್ಮಿಸಿರುವ ಮತ್ತು ನಿರ್ಮಿಸುತ್ತಿರುವ ಕಟ್ಟಡಗಳನ್ನು ತೆರವುಗೊಳಿಸಲು ಕ್ರಮ ವಹಿಸಲಾಗುತ್ತಿದೆ. ಮೇಡಿ ಅಗ್ರಹಾರ, , ಲಕ್ಷ್ಮಿಪುರ ಸೇರಿದಂತೆ 17 ಗ್ರಾಮಗಳಲ್ಲಿ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಲಾಗುವುದು. ಈ ಸಂಬಂಧ ಯಾವ್ಯಾವ ಕಟ್ಟಡಗಳು ಅನಧಿಕೃತ ಎಂಬುದರ ಪಟ್ಟಿಯನ್ನು ಬಿಡಿಎ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ'' ಎಂದು ಬಿಡಿಎ ಹಿರಿಯ ಎಂಜಿನಿಯರ್ ಶಾಂತರಾಜಣ್ಣ ತಿಳಿಸಿದರು.
ಸುಪ್ರೀಂಕೋರ್ಟ್ ರಚಿಸಿರುವ ನ್ಯಾ. ಚಂದ್ರಶೇಖರ್ ಸಮಿತಿಗೆ ಅರ್ಜಿ ಸಲ್ಲಿಸಿದ್ದಲ್ಲಿ ಅವುಗಳನ್ನು ಹೊರತುಪಡಿಸಿ 2018ರ ಆ.3ರ ನಂತರ ನಿರ್ಮಿಸಲಾಗಿರುವ ಅನಧಿಕೃತ ಕಟ್ಟಡಗಳ ತೆರವು ಕಾರ್ಯಚರಣೆ ನಡೆಯುತ್ತಿದೆ.
ಎಚ್.ಡಿ.ಕೆ ವಾಗ್ದಾಳಿ
ಸರಕಾರ ಕೂಡಲೇ ಕಾರ್ಯಾಚರಣೆ ನಿಲ್ಲಿಸಿ ಮಾತುಕತೆ ಮೂಲಕ ಬಡ ಜನರಿಗೆ ನ್ಯಾಯ ಒದಗಿಸಲು ಮುಂದಾಗಬೇಕೆಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾಸನ ಜಿಲ್ಲೆಯ ಹಿರೀಸಾವೆಯಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಕಟ್ಟಡಗಳ ತೆರವು ಕಾರ್ಯಾಚರಣೆಗೆ ಸುಪ್ರೀಂಕೋರ್ಟ್ ಆದೇಶ ನೀಡಿದೆ ಎಂಬ ಸಬೂಬು ಸರಿಯಲ್ಲ. ಸರಕಾರ ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿದ್ದರಿಂದ ಈ ಘಟನೆ ಉಂಟಾಗಿದೆ. ಮುಖ್ಯಮಂತ್ರಿ ಕೂಡಲೇ ತೆರವು ಕಾರ್ಯಾಚರಣೆ ನಿಲ್ಲಿಸುವಂತೆ ಆದೇಶಿಸಿ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಲು ಮುಂದಾಗಬೇಕು,'' ಎಂದು ಆಗ್ರಹಿಸಿದರು.
ಶಾಸಕ ಎಸ್.ಆರ್. ವಿಶ್ವನಾಥ್ ಬಿಡಿಎ ಅಧ್ಯಕ್ಷರಾಗುವ ಮುಂಚೆ ಅಲ್ಲಿ ಬಡಾವಣೆ ನಿರ್ಮಾಣಕ್ಕೆ ತಡೆಒಡ್ಡಿದ್ದರು. ಇದೀಗ ಅಧ್ಯಕ್ಷರಾದ ಮೇಲೆ ಬಡವರಾದರೂ , ಯಾರಾದರೂ ಎಂದು ದುಡ್ಡು ಮಾಡೋಕೆ ಹೊರಟಿದ್ದಾರೆ ಎಂದು ಕುಮಾರಸ್ವಾಮಿ ಕಿಡಿಕಾರಿದರು.
ಬಿಡಿಎ ಅಧ್ಯಕ್ಷರು ಏನಂತಾರೆ?
ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಮೂವರು ಸದಸ್ಯರ ಸಮಿತಿಯ ನೇತೃತ್ವದಲ್ಲಿ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಲಾಗುತ್ತಿದೆ. ಅದೂ 2018ರ ಆಗಸ್ಟ್ ನಂತರ ನಿರ್ಮಿಸಿದ ಕಟ್ಟಡಗಳನ್ನು ಕೆಡವಲಾಗುವುದು. ಕಾನೂನಿಗೆ ವಿರುದ್ಧವಾಗಿರುವ ಮನೆಗಳನ್ನು ತೆರವುಗೊಳಿಸಲಾಗಿದೆ. 2017-18ರಲ್ಲಿ ನಾನು ಕೂಡ ಶಿವರಾಮ ಕಾರಂತ ಬಡಾವಣೆ ನಿರ್ಮಾಣದ ವಿರುದ್ಧ ಹೋರಾಟ ಮಾಡಿದ್ದೆ. ಆಗ ಸುಪ್ರೀಂಕೋರ್ಟ್ನ ಆದೇಶ ಇರಲಿಲ್ಲ. ಹಿಂದಿನ ಸರಕಾರಗಳೇ ಸುಪ್ರೀಂಕೋರ್ಟ್ಗೆ ಅಫಿಡವಿಟ್ ಕೊಟ್ಟು ಬಡಾವಣೆ ನಿರ್ಮಿಸುವುದಾಗಿ ಹೇಳಿವೆ. ಈ ಎಲ್ಲಾ ಪ್ರಕ್ರಿಯೆಗಳು ನಡೆದ ನಂತರ ನಾನು ಅಧ್ಯಕ್ಷನಾದೆ. ಬಡಾವಣೆ ನಿರ್ಮಾಣದ ಬಗ್ಗೆ ಕುಮಾರಸ್ವಾಮಿಯವರಿಗೆ ಆತಂಕವಿದೆ. ನಾನು ರೈತ ವಿರೋಧಿ ಕೆಲಸ ಮಾಡುವುದಿಲ್ಲ. ಸುಪ್ರೀಂಕೋರ್ಟ್ನ ಆದೇಶದಂತೆ ನಾವು ಕೆಲಸ ಮಾಡಿದ್ದೇವೆ. ಬಡಾವಣೆಯನ್ನು ಅತಿ ಶೀಘ್ರವಾಗಿ ನಿರ್ಮಿಸಲಾಗುವುದು. ಇದರ ಬಗ್ಗೆ ಯಾರಿಗೂ ಅನುಮಾನ ಬೇಡ. ರೈತರಿಗೂ ಸೂಕ್ತ ಪರಿಹಾರ ನೀಡಲಾಗುವುದು'' ಎಂದು ಬಿಡಿಎ ಅಧ್ಯಕ್ಷ ಎಸ್. ಆರ್. ವಿಶ್ವನಾಥ್ ತಿಳಿಸಿದ್ದಾರೆ.