![](https://vijaykarnataka.com/photo/81783624/photo-81783624.jpg)
ಮುಂಬಯಿ: ದೇಶಾದ್ಯಂತ ಕೊರೊನಾ ಎರಡನೇ ಅಲೆ ಜೋರಾಗಿದ್ದು, ಬುಧವಾರ ಬೆಳಗ್ಗೆ ಅಂತ್ಯಗೊಂಡ ಕಳೆದ 24 ಗಂಟೆ ಅವಧಿಯಲ್ಲಿ 53,480 ಹೊಸ ಪ್ರಕರಣಗಳು ವರದಿಯಾಗಿವೆ. ಕಳೆದ ಮೂರ್ನಾಲ್ಕು ದಿನಗಳಿಂದ 60 ಸಾವಿರದ ಗಡಿ ದಾಟುತ್ತಿದ್ದ ದಿನವಹಿ ಪ್ರಕರಣಗಳಲ್ಲಿ ಬುಧವಾರ ಇಳಿಕೆ ಕಂಡುಬಂದಿದ್ದರೂ ಸಾವಿನಲ್ಲಿ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 354 ಸಾವು ವರದಿಯಾಗಿದ್ದು, ಇದು ಈ ವರ್ಷದಲ್ಲಿ ಸಂಭವಿಸಿದ ದಿನವಹಿ ಕೊರೊನಾ ಸೋಂಕಿತರ ಸಾವಿನ ಅತ್ಯಧಿಕ ಪ್ರಕರಣಗಳಾಗಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ 5.52 ಲಕ್ಷಕ್ಕೆ ಏರಿಕೆಯಾಗಿದ್ದು, ಚೇತರಿಕೆ ಪ್ರಮಾಣವು ಶೇ. 94.11ಕ್ಕೆ ಕುಸಿದಿದೆ.
ಎಂದಿನಂತೆ ಹೊಸ ಪ್ರಕರಣಗಳಲ್ಲಿ ಮಹಾರಾಷ್ಟ್ರದಲ್ಲಿಅತ್ಯಧಿಕ 27,918 ಕೇಸ್‌ಗಳು ವರದಿಯಾಗಿವೆ. ಅಲ್ಲಿ ಪರಿಸ್ಥಿತಿ ಬಿಗಡಾಯಿಸಿದ್ದರೂ ಸರಕಾರ ಸಂಪೂರ್ಣ ಇಲ್ಲ ಎಂದು ಸ್ಪಷ್ಟಪಡಿಸಿದೆ. ಆದರೆ ಗುರುವಾರದಿಂದ ಜಿಲ್ಲಾವಾರು ಕಠಿಣ ನಿರ್ಬಂಧಗಳು ಜಾರಿಗೆ ಬರಲಿವೆ ಎಂದಿದೆ. ಪಂಜಾಬ್, ತಮಿಳುನಾಡು, ಕರ್ನಾಟಕ, ಗುಜರಾತ್, ಕೇರಳ ಸೇರಿ ಹಲವು ರಾಜ್ಯಗಳಲ್ಲಿ ಕೊರೊನಾ ಹಾವಳಿ ಹೆಚ್ಚಿದೆ.
ಮಹಾರಾಷ್ಟ್ರದಲ್ಲಿ ಸಂಪೂರ್ಣ ಲಾಕ್‌ಡೌನ್‌ಗೆ ವರದಿ ಸಿದ್ಧಪಡಿಸುವಂತೆ ಸಿಎಂ ಅಧಿಕಾರಿಗಳಿಗೆ ಸೂಚನೆ ನೀಡಿದ್ದ ಬೆನ್ನಲ್ಲೇ ಸರಕಾರದ ಮಿತ್ರಪಕ್ಷಗಳಾದ ಎನ್‌ಸಿಪಿ ಮತ್ತು ಕಾಂಗ್ರೆಸ್‌ನಿಂದ ವಿರೋಧ ವ್ಯಕ್ತವಾಗಿತ್ತು. ಇದಾದ ಬಳಿಕ ಸರಕಾರ ಸೋಂಕು ನಿಯಂತ್ರಣಕ್ಕೆ ಜಿಲ್ಲಾವಾರು ಕಂಟೈನ್‌ಮೆಂಟ್ ಜೋನ್ ಹಾಗೂ ಸ್ಥಳೀಯ ಮಟ್ಟದಲ್ಲಿ ನಿರ್ಬಂಧಗಳನ್ನು ಜಾರಿಗೆ ತರಲು ಯೋಜನೆ ಸಿದ್ಧಗೊಳಿಸಿದೆ.
ಉದ್ಧವ್ ಪತ್ನಿ ಆಸ್ಪತ್ರೆಗೆಕೊರೊನಾ ಸೋಂಕಿನಿಂದ ಮಾರ್ಚ್ 22ರಿಂದ ಹೋಮ್ ಕ್ವಾರಂಟೈನ್‌ನಲ್ಲಿದ್ದ ಸಿಎಂ ಉದ್ಧವ್ ಠಾಕ್ರೆ ಅವರ ಪತ್ನಿ ರಶ್ಮಿ ಠಾಕ್ರೆ ಅವರು ಹೆಚ್ಚಿನ ಚಿಕಿತ್ಸೆಗೆಂದು ಎಚ್‌ಎನ್ ರಿಲಯನ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಮೂಲಗಳು ಹೇಳಿವೆ. ಮಾರ್ಚ್ 11ರಂದು ದಂಪತಿ ಕೊರೊನಾ ಲಸಿಕೆ ಪಡೆದಿದ್ದರು.
ರ‍್ಯಾಂಡಮ್ ಟೆಸ್ಟ್‌ದಿಲ್ಲಿ ಏರ್‌ಪೋರ್ಟ್‌ನಲ್ಲಿ ಪ್ರಯಾಣಿಕರನ್ನು ರ‍್ಯಾಂಡಮ್ ಆಗಿ ಕೊರೊನಾ ತಪಾಸಣೆಗೆ ಒಳಪಡಿಸಲಾಗುವುದು. ಸೋಂಕು ದೃಢಪಟ್ಟವರು ಕ್ವಾರಂಟೈನ್‌ಗೆ ಒಳಪಡುವುದು ಕಡ್ಡಾಯವಾಗಲಿದೆ ಎಂದು ಸರಕಾರ ಹೇಳಿದೆ. ಕಳೆದ 24 ಗಂಟೆಯಲ್ಲಿ ರಾಜಧಾನಿಯಲ್ಲಿ 995 ಹೊಸ ಪ್ರಕರಣಗಳು ವರದಿಯಾಗಿವೆ.
ಕೋವಿಶೀಲ್ಡ್ ಶೆಲ್ಫ್ ಲೈಫ್ 3 ತಿಂಗಳು ವಿಸ್ತರಣೆ
ಪುಣೆಯ ಸೀರಮ್ ಇನ್ಸ್‌ಟ್ಯೂಟ್ ಆಫ್ ಇಂಡಿಯಾದಲ್ಲಿಉತ್ಪಾದಿಸಲಾಗುತ್ತಿರುವ ಕೊರೊನಾ ನಿರೋಧಕ ಕೋವಿಶೀಲ್ಡ್ ಲಸಿಕೆಯ ಜೀವಿತ ಅವಧಿಯನ್ನು (ಶೆಲ್ಫ್ ಲೈಫ್) ಈಗಿನ ಆರು ತಿಂಗಳಿಂದ 9 ತಿಂಗಳಿಗೆ ವಿಸ್ತರಿಸುವುದಕ್ಕೆ ಭಾರತೀಯ ಔಷಧ ಮಹಾನಿಯಂತ್ರಕರು(ಡಿಜಿಸಿಐ) ಅನುಮತಿ ನೀಡಿದ್ದಾರೆ. ಮಹಾನಿಯಂತ್ರಕರಾದ ವಿ.ಜಿ. ಸೋಮಾನಿ ಅವರು ಸೀರಮ್ ಇನ್ಸ್‌ಟ್ಯೂಟ್‌ಗೆ ಪತ್ರ ಬರೆದಿದ್ದು, ಹೊಸದಾಗಿ ಉತ್ಪಾದನೆಯಾಗಿರುವ ಲಸಿಕೆಗಳ ಮೇಲೆ ಶೆಲ್ಫ್ ಲೈಫ್ 9 ತಿಂಗಳವರೆಗೆ ಇರಲಿದೆ ಎಂಬ ಲೇಬಲ್ ಬಳಸಲು ಅವಕಾಶ ನೀಡಲಾಗುತ್ತಿದೆ ಎಂದಿದ್ದಾರೆ.
ತಿರುಮಲದಲ್ಲಿ ಭಕ್ತರಿಗೆ ಮತ್ತೆ ನಿರ್ಬಂಧ
ಹೈದರಾಬಾದ್: ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತಿರುಮಲ ತಿರುಪತಿ ದೇವಸ್ಥಾನದಲ್ಲಿ ಭಕ್ತರ ಪ್ರವೇಶಕ್ಕೆ ಮತ್ತೆ ಕೆಲವು ನಿರ್ಬಂಧಗಳನ್ನು ವಿಧಿಸಲಾಗಿದೆ. 'ಸರ್ವ ದರ್ಶನ'ದ ದೈನಂದಿನ ಟೋಕನ್‌ಗಳ ವಿತರಣೆಯನ್ನು 22 ಸಾವಿರದಿಂದ 15 ಸಾವಿರಕ್ಕೆ ಇಳಿಸಲಾಗುತ್ತಿದೆ. ಪರಿಸ್ಥಿತಿಗೆ ಅನುಗುಣವಾಗಿ ಆನ್‌ಲೈನ್ ವಿಶೇಷ ದರ್ಶನ ಟಿಕೆಟ್‌ಗಳನ್ನೂ ಕಡಿತಗೊಳಿಸಲಾಗುವುದು ಎಂದು ಟಿಟಿಡಿ ತಿಳಿಸಿದೆ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವ ನಿಯಮ ಪಾಲಿಸದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ.
ಮಕ್ಕಳಿಗೆ ಪರಿಣಾಮಕಾರಿ ಎಂದ ಫೈಜರ್
ಬರ್ಲಿನ್: ತಾನು ಅಭಿವೃದ್ಧಿಪಡಿಸಿರುವ ಕೊರೊನಾ ನಿರೋಧಕ ಲಸಿಕೆ ಪಡೆಯುವ 12 ರಿಂದ 15 ವರ್ಷ ವಯೋಮಾನದ ಮಕ್ಕಳಲ್ಲಿಯೂ ರೋಗ ನಿರೋಧಕ ಶಕ್ತಿ ಬೆಳೆದು, ಸೋಂಕಿನಿಂದ ಶೇಕಡ 100ರಷ್ಟು ರಕ್ಷಣೆ ಸಿಗಲಿದೆ ಎಂದು ಬಯೋಎನ್‌ಟೆಕ್-ಫೈಜರ್ ಕಂಪನಿಗಳು ಹೇಳಿವೆ. ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ಸ್‌ನಲ್ಲಿ ಈ ವಯೋಮಾನದ 2,260 ಮಕ್ಕಳಿಗೆ ಲಸಿಕೆ ನೀಡಿ ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಲಸಿಕೆ ಶೇಕಡ 100ರಷ್ಟು ಪರಿಣಾಮಕಾರಿಯಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಈಗಾಗಲೇ ಅಮೆರಿಕ ಮತ್ತು ಐರೋಪ್ಯ ಒಕ್ಕೂಟವು 16 ವರ್ಷ ಮೇಲ್ಪಟ್ಟ ಎಲ್ಲರಿಗೂ ಈ ಲಸಿಕೆ ನೀಡಲು ಅನುಮತಿ ನೀಡಿದೆ.