ಸೋಂಕಿತ ಪರಾರಿ: ಬೆಂಗಳೂರಿನ ಖಾಸಗಿ ಹೋಟೆಲ್‌ ಆಡಳಿತ ಮಂಡಳಿಗೆ ಪೊಲೀಸರಿಂದ ನೋಟಿಸ್‌

ಕೊರೊನಾ ಬಂದ ಬಳಿಕ ಸಾರ್ವಜನಿಕವಾಗಿ ಓಡಾದೆ ಕ್ವಾರಂಟೈನ್‌ ಇರುವುದು ಪ್ರತಿಯೊಬ್ಬ ಸಾರ್ವಜನಿಕ ವ್ಯಕ್ತಿಯ ಕರ್ತವ್ಯವಾಗಿದೆ. ಆದರೆ ಹೋಟೆಲ್‌ನಲ್ಲಿದ್ದ ಸೋಂಕಿತನೊಬ್ಬ ಪರಾರಿಯಾಗಿದ್ದು ಕಳವಳ ಮೂಡಿಸಿದೆ. ಈ ಸಂಬಂಧ ಪೊಲೀಸರು ಹೋಟೆಲ್‌ನ ಆಡಳಿತ ಮಂಡಳಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಸೋಂಕಿತ ಪರಾರಿ: ಬೆಂಗಳೂರಿನ ಖಾಸಗಿ ಹೋಟೆಲ್‌ ಆಡಳಿತ ಮಂಡಳಿಗೆ ಪೊಲೀಸರಿಂದ ನೋಟಿಸ್‌
Linkup
: ಬಿಬಿಎಂಪಿ ಅಧಿಕಾರಿಗಳಿಗೆ ಮಾಹಿತಿ ನೀಡದೆ ಪರಾರಿಯಾಗಿರುವ ಸೋಂಕಿತ ಹಾಗೂ ಆತನನ್ನು ಕಳುಹಿಸಿಕೊಟ್ಟಿರುವ ಹೋಟೆಲ್‌ನ ಆಡಳಿತ ಮಂಡಳಿ ವಿರುದ್ಧ ದಾಖಲಾಗಿದ್ದ ಪ್ರಕರಣ ಸಂಬಂಧ ದಾಖಲೆಗಳ ಸಹಿತ ವಿಚಾರಣೆಗೆ ಹಾಜರಾಗುವಂತೆ ಹೈಗ್ರೌಂಡ್ಸ್‌ ಠಾಣೆ ಪೊಲೀಸರು ಹೋಟೆಲ್‌ ಆಡಳಿತ ಮಂಡಳಿಗೆ ನೋಟಿಸ್‌ ನೀಡಿದ್ದಾರೆ. ಬಿಬಿಎಂಪಿ ಆರೋಗ್ಯ ಅಧಿಕಾರಿ ಡಾ. ಎಂ.ನವೀನ್‌ ಕುಮಾರ್‌ ನೀಡಿದ ದೂರಿನ ಮೇರೆಗೆ ದಕ್ಷಿಣ ಆಫ್ರಿಕಾದಿಂದ ಬಂದಿದ್ದ ಸೋಂಕಿತ ಹಾಗೂ ಖಾಸಗಿ ಹೋಟೆಲ್‌ ಆಡಳಿತ ಮಂಡಳಿ ವಿರುದ್ಧ ಹೈಗ್ರೌಂಡ್ಸ್‌ ಠಾಣೆ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದರು. ದಕ್ಷಿಣ ಆಫ್ರಿಕಾ ಪ್ರಜೆ ನ.20ರಂದು ಬೆಂಗಳೂರಿಗೆ ಬಂದಿದ್ದರು. ವಿಮಾನ ನಿಲ್ದಾಣದಲ್ಲಿ ಅವರನ್ನು ಕೋವಿಡ್‌ ಪರೀಕ್ಷೆಗೊಳಪಡಿಸಿದಾಗ ಪಾಸಿಟಿವ್‌ ವರದಿ ಬಂದಿತ್ತು. ಬಳಿಕ ಅವರನ್ನು ಖಾಸಗಿ ಹೋಟೆಲ್‌ನ ಕೊಠಡಿಯೊಂದರಲ್ಲಿ 14 ದಿನಗಳ ಕಾಲ ಕ್ವಾರಂಟೈನ್‌ ಮಾಡಲಾಗಿತ್ತು. ಅವರನ್ನು ಕೊಠಡಿಯಿಂದ ಹೊರಗೆ ಕಳುಹಿಸದಂತೆ ಹೋಟೆಲ್‌ ಆಡಳಿತ, ಸಿಬ್ಬಂದಿಗೂ ತಿಳಿಸಲಾಗಿತ್ತು. ಆದರೂ, ನ.27ರಂದು ಕೊಠಡಿಯಿಂದ ಸೋಂಕಿತ ಮಹೇಂದ್ರ ಪರಾರಿಯಾಗಿದ್ದ. ಈ ಸಂಬಂಧ ಹೋಟೆಲ್‌ ಸಿಬ್ಬಂದಿಯನ್ನು ಪ್ರಶ್ನಿಸಿದಾಗ ಎಸ್‌.ಆರ್‌.ಲ್ಯಾಬೊರೇಟರಿ ನೀಡಿದ್ದ ನೆಗೆಟಿವ್‌ ವರದಿ ಆಧರಿಸಿ ಸೋಂಕಿತನನ್ನು ಕೊಠಡಿಯಿಂದ ಕಳುಹಿಸಲಾಗಿತ್ತು ಎಂದು ಹೇಳುತ್ತಿದ್ದಾರೆ. ಆದರೆ, ಇದಕ್ಕೆ ಪೂರಕ ದಾಖಲೆಗಳ ಸಮೇತ ವಿಚಾರಣೆಗೆ ಹಾಜರಾಗುವಂತೆ ಹೋಟೆಲ್‌ ಆಡಳಿತ ಮಂಡಳಿಗೆ ನೋಟಿಸ್‌ ನೀಡಲಾಗಿದೆ. ತಪ್ಪಿಸಿಕೊಂಡಿರುವ ಸೋಂಕಿತನ ಪತ್ತೆಗೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು. ವೈದ್ಯರಿಗೆ ಕೋವಿಡ್‌! ಬೆಂಗಳೂರು: ಕೋವಿಡ್‌ ವೈರಸ್‌ನ ರೂಪಾಂತರಿ ಓಮಿಕ್ರಾನ್‌ನಿಂದ ಚೇತರಿಸಿಕೊಳ್ಳುತ್ತಿದ್ದ ವೈದ್ಯನಿಗೆ ಮತ್ತೆ ಕೊರೊನಾ ಸೋಂಕು ತಗಲಿರುವುದು ದೃಢಪಟ್ಟಿದೆ. 14 ದಿನಗಳ ಕ್ವಾರಂಟೈನ್‌ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ನಡೆಸಿದ ಆರ್‌ಟಿ-ಪಿಸಿಆರ್‌ ಪರೀಕ್ಷೆಯ ಫಲಿತಾಂಶದಲ್ಲಿ ಪಾಸಿಟಿವ್‌ ವರದಿ ಬಂದಿದೆ. ದೇಶದಲ್ಲೇ ಮೊದಲ ಬಾರಿಗೆ ಇಬ್ಬರಿಗೆ ಓಮಿಕ್ರಾನ್‌ ಸೋಂಕು ಕಾಣಿಸಿಕೊಂಡಿತ್ತು. ಅವರಲ್ಲಿ ಈ ವೈದ್ಯರು ಕೂಡ ಒಬ್ಬರು. ಮತ್ತೊಬ್ಬರು ದಕ್ಷಿಣ ಆಫ್ರಿಕಾ ಮೂಲದವರಾಗಿದ್ದು, ಕ್ವಾರಂಟೈನ್‌ ನಿಯಮ ಉಲ್ಲಂಘಿಘಿಸಿ ದುಬೈಗೆ ತೆರಳಿದ್ದಾರೆ. ನಗರದ ಪ್ರತಿಷ್ಠಿತ ಆಸ್ಪತ್ರೆಯಲ್ಲಿಕಾರ್ಯನಿರ್ವಹಿಸುತ್ತಿದ್ದ 46 ವರ್ಷದ ಈ ವೈದ್ಯರಿಗೆ ಡಿ. 2ರಂದು ಓಮಿಕ್ರಾನ್‌ ಸೋಂಕು ತಗಲಿರುವುದು ದೃಢಪಟ್ಟಿತ್ತು. ಹೀಗಾಗಿ, ಬೌರಿಂಗ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ‘‘ವೈದ್ಯರು ಚೇತರಿಸಿಕೊಂಡಿದ್ದು, 14 ದಿನಗಳ ಕ್ವಾರಂಟೈನ್‌ ಅವಧಿ ಮುಗಿದಿದೆ. ಹಾಗಾಗಿ, ಆರ್‌ಟಿ-ಪಿಸಿಆರ್‌ ಪರೀಕ್ಷೆ ಮಾಡಲಾಗಿತ್ತು. ಇದರ ಫಲಿತಾಂಶವು ಪಾಸಿಟಿವ್‌ ಬಂದಿದೆ. ಆದ ಕಾರಣ, 72 ಗಂಟೆಗಳ ಬಳಿಕ ಮತ್ತೊಮ್ಮೆ ಪರೀಕ್ಷೆ ಮಾಡಲಾಗುವುದು. ಅದರ ವರದಿಯೊಂದಿಗೆ ತಜ್ಞರ ಅಭಿಪ್ರಾಯ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು. ಸಾಮಾನ್ಯವಾಗಿ ಸೋಂಕಿತ ವ್ಯಕ್ತಿಗಳಲ್ಲಿ 30 ದಿನಗಳವರೆಗೆ ವೈರಾಣುಗಳಿರುತ್ತವೆ. ಈ ಅವಧಿಯಲ್ಲಿ ಪರೀಕ್ಷೆ ಮಾಡಿದಾಗ ಪಾಸಿಟಿವ್‌ ವರದಿ ಬರುವುದು ಸಾಮಾನ್ಯ,’’ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದರು.