ವಾರದಲ್ಲಿ ನಾಲ್ಕೇ ದಿನ ಕೆಲಸ..! ಸೈಬರ್ ಸೆಕ್ಯುರಿಟಿ ಸಂಸ್ಥೆಯಿಂದ ಸಿಬ್ಬಂದಿಗೆ ಗಿಫ್ಟ್..!

ಟ್ಯಾಕ್‌ ಸೆಕ್ಯುರಿಟಿ ಆಂತರಿಕವಾಗಿ ನಡೆಸಿದ ಸಮೀಕ್ಷೆಯಲ್ಲಿ ಶೇ. 80 ಉದ್ಯೋಗಿಗಳೇ 4 ದಿನಗಳ ಕೆಲಸದ ಮಾದರಿಯನ್ನು ಇಷ್ಟಪಟ್ಟಿದ್ದಾರೆ. ವಾರಾಂತ್ಯದ 3 ದಿನಗಳನ್ನು ಖಾಸಗಿ ಹಾಗೂ ಕೌಟುಂಬಿಕ ಕಾರ್ಯಗಳಿಗೆ ಮೀಸಲಿಡಲು ಇಚ್ಚೆ ವ್ಯಕ್ತಪಡಿಸಿದ್ದಾರೆ.

ವಾರದಲ್ಲಿ ನಾಲ್ಕೇ ದಿನ ಕೆಲಸ..! ಸೈಬರ್ ಸೆಕ್ಯುರಿಟಿ ಸಂಸ್ಥೆಯಿಂದ ಸಿಬ್ಬಂದಿಗೆ ಗಿಫ್ಟ್..!
Linkup
: ವಾರಕ್ಕೆ ನಾಲ್ಕೇ ದಿನ , ಮೂರು ದಿನ ರಜೆ ಎಂಬುದು ಸುದೀರ್ಘ ಕಾಲದ ಚರ್ಚೆ. ಅಂತೆಯೇ ಕಡಿಮೆ ಅವಧಿಯ ಕೆಲಸದಲ್ಲಿ ಗರಿಷ್ಠ ಉತ್ಪಾದನೆ ಎಂಬ ಪರಿಕಲ್ಪನೆಗೆ ಐಟಿ ಕಂಪನಿಗಳು ಇಂಬು ನೀಡುತ್ತಲೇ ಬಂದಿದ್ದವು. ಏತನ್ಮಧ್ಯೆ, ಕೋವಿಡ್‌-19 ವೈರಸ್‌ ಹಾವಳಿ ಇಟ್ಟ ಬಳಿಕ ಈ ಯೋಚನೆಗೆ ಬ್ರೇಕ್‌ ಬಿದ್ದಿತ್ತಲ್ಲದೆ, 'ವರ್ಕ್ ಫ್ರಮ್‌ ಹೋಮ್‌' ಮಾದರಿ ಕಾಯಂ ಆಗಲಿದೆ ಎಂದೇ ನಂಬಲಾಗಿತ್ತು. ಇದೀಗ ಕೊರೊನೋತ್ತರ ಕಾಲದಲ್ಲಿ ಮತ್ತೆ ನಾಲ್ಕು ದಿನ ಕರ್ತವ್ಯದ ಪರಿಕಲ್ಪನೆಗೆ ಪುಷ್ಟಿ ದೊರಕಿದೆ. ಸೈಬರ್‌ ಸೆಕ್ಯುರಿಟಿ ಸಂಸ್ಥೆಯಾಗಿರುವ 'ಟ್ಯಾಕ್‌ ಸೆಕ್ಯುರಿಟಿ' ಈ ನಿಟ್ಟಿನಲ್ಲಿ ಮುಂದಡಿ ಇಟ್ಟಿದ್ದು, ಮುಂಬಯಿಯಲ್ಲಿರುವ ತನ್ನ ಕಚೇರಿ ಸಿಬ್ಬಂದಿಗೆ ವಾರದಲ್ಲಿ ನಾಲ್ಕು ದಿನ ಮಾತ್ರ ಕೆಲಸ ಎಂದು ಘೋಷಿಸಿದೆ. ಕಂಪನಿ ಪ್ರಕಾರ, ಮುಂದಿನ 7 ತಿಂಗಳ ಕಾಲ ಪ್ರಾಯೋಗಿಕವಾಗಿ ಶುಕ್ರವಾರದಿಂದಲೇ ಕಚೇರಿಗೆ ರಜೆ ನೀಡುವ ಮೂಲಕ ಹೆಚ್ಚಿನ ಉತ್ಪಾದನೆ ನಿರೀಕ್ಷೆ ಮಾಡಿದೆ. ಇದನ್ನವರು 'ಭವಿಷ್ಯದ ಕೆಲಸ' (ಫ್ಯೂಚರ್‌ ಆಫ್‌ ವರ್ಕ್) ಎಂದು ಕರೆದಿದ್ದಾರೆ. ಉದ್ಯೋಗಿಗಳ ಕೆಲಸ ಹಾಗೂ ಆರೋಗ್ಯದ ಸಮತೋಲನ ಕಾಪಾಡುವುದೇ ಇದರ ಉದ್ದೇಶ ಎಂದಿದೆ. ಎಲ್ಲರಿಗೂ ಸಮ್ಮತಿ: ಟ್ಯಾಕ್‌ ಸೆಕ್ಯುರಿಟಿ ಆಂತರಿಕವಾಗಿ ನಡೆಸಿದ ಸಮೀಕ್ಷೆಯಲ್ಲಿ ಶೇ. 80 ಉದ್ಯೋಗಿಗಳೇ 4 ದಿನಗಳ ಕೆಲಸದ ಮಾದರಿಯನ್ನು ಇಷ್ಟಪಟ್ಟಿದ್ದಾರೆ. ವಾರಾಂತ್ಯದ 3 ದಿನಗಳನ್ನು ಖಾಸಗಿ ಹಾಗೂ ಕೌಟುಂಬಿಕ ಕಾರ್ಯಗಳಿಗೆ ಮೀಸಲಿಡಲು ಇಚ್ಚೆ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಹೊಸ ಮಾದರಿಯಿಂದ ಉದ್ಯೋಗಿಗಳು ಸಂತುಷ್ಟಿಯಾಗಿ ಅಧಿಕ ಉತ್ಪಾದನೆ ದೊರೆತರೆ ಅದನ್ನೇ ಮುಂದುವರಿಸುವುದಾಗಿ ಸಂಸ್ಥೆ ಹೇಳಿದೆ. 'ನಮ್ಮ ಉದ್ಯೋಗಿಗಳ ಆರೋಗ್ಯ ಹಾಗೂ ಕಲ್ಯಾಣವೇ ನಮ್ಮ ಗುರಿಯಾಗಿದೆ. ನಮ್ಮ ಕಂಪನಿಯಲ್ಲಿ ಯುವ ಉದ್ಯೋಗಿಗಳು ಹೆಚ್ಚಿದ್ದು, ಕರ್ತವ್ಯ ಹಾಗೂ ವೈಯಕ್ತಿಕ ಜೀವನದ ನಡುವಿನ ಸಮತೋಲನಕ್ಕಾಗಿ ಮಾಡಲಾಗುವ ಸಂಭಾವ್ಯತೆಗಳ ಪ್ರಯೋಗಕ್ಕೆ ಒಡ್ಡಿಕೊಳ್ಳಲಿದ್ದೇವೆ' ಎಂದು ಟ್ಯಾಕ್‌ ಸೆಕ್ಯುರಿಟಿಯ ಸಿಇಒ ತ್ರಿಶ್ನೀತ್‌ ಅರೊರಾ ಹೇಳಿದ್ದಾರೆ. 'ನಾವು ಇರುವ ವ್ಯವಸ್ಥೆಯನ್ನೇ ಅಪ್ಪಿಕೊಳ್ಳುವ ಜೀವಿಗಳಾಗಿದ್ದು, 5 ದಿನಗಳ ಕರ್ತವ್ಯ ಪದ್ಧತಿಗೆ ಒಗ್ಗಿಕೊಂಡಿದ್ದೇವೆ. ಹೀಗಾಗಿ ನಾಲ್ಕು ದಿನಗಳ ಕೆಲಸದ ಮಾದರಿ ಇಷ್ಟವಾಗಲು ಒಂದಿಷ್ಟು ದಿನಗಳು ಬೇಕಾಗಬಹುದು' ಎಂದು ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಅಂತೆಯೇ ಈ ಮಾದರಿ ಖಂಡಿತಾ ಯಶಸ್ವಿಯಾಗಲಿದೆ ಎಂದು ಹೇಳಿದ್ದಾರೆ. ಈಗಾಗಲೇ ಬಹುತೇಕ ಐಟಿ ಕಂಪನಿಗಳಲ್ಲಿ ವಾರಕ್ಕೆ 5 ದಿನ ಕೆಲಸದ ನಿಯಮ ಜಾರಿಯಲ್ಲಿದೆ. ವಾರಾಂತ್ಯದ ಶನಿವಾರ ಹಾಗೂ ಭಾನುವಾರ ರಜೆ ಇರಲಿದೆ. ಇದೀಗ ಶುಕ್ರವಾರದಿಂದಲೇ ವಾರಾಂತ್ಯ ಆರಂಭ ಮಾಡುವ ಮೂಲಕ ಸೆಕ್ಯುರಿಟಿ ಸಂಸ್ಥೆ ಹೊಸ ಹೆಜ್ಜೆ ಇಟ್ಟಿದೆ. ಈ ಹೊಸ ವ್ಯವಸ್ಥೆಯಿಂದ ಉದ್ಯೋಗಿಗಳಿಗೆ ವಾರದಲ್ಲಿ 3 ದಿನಗಳ ಕಾಲ ಕುಟುಂಬದ ಜೊತೆ ಬೆರೆಯಲು ಹಾಗೂ ಖಾಸಗಿ ಕೆಲಸಗಳಿಗೆ ಸಮಯಾವಕಾಶ ಲಭ್ಯವಾಗುತ್ತೆ. ಜೊತೆಯಲ್ಲೇ ಅನ್ನೋದು ಸಹಜವಾಗಿಯೇ ಆಕರ್ಷಕವಾಗಿ ಕಾಣುತ್ತೆ..!