ರಾಮಚಂದ್ರ ಮೂರ್ತಿ ಚಲ್ಲಹಳ್ಳಿ ಯಲಹಂಕ
ಬೆಂಗಳೂರು: ಯಲಹಂಕ ಉಪನಗರದಲ್ಲಿ ವೈಟ್ಟಾಪಿಂಗ್ ವಿಳಂಬವಾಗಿರುವುದರಿಂದ ಸ್ಥಳೀಯರು, ವ್ಯಾಪಾರಿಗಳು ಹೈರಾಣಾಗುವಂತಾಗಿದೆ.
ನವ ನಗರೋತ್ಥಾನ ಯೋಜನೆಯಡಿ ಯಲಹಂಕ ಉಪನಗರದಲ್ಲಿ ಸುಮಾರು 2 ಕಿ.ಮೀ ಉದ್ದದ ರಸ್ತೆಯನ್ನು 13 ಕೋಟಿ ರೂ. ವೆಚ್ಚದಲ್ಲಿ ವೈಟ್ಟಾಪಿಂಗ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಫೆಬ್ರವರಿ ತಿಂಗಳಲ್ಲಿ ಕಾಮಗಾರಿಗೆ ಚಾಲನೆ ಸಿಕ್ಕಿದೆ. ಚಂದ್ರಕೆಫೆಯಿಂದ ಜ್ಞಾನಜ್ಯೋತಿ ಕಾಲೇಜಿನವರೆಗೆ ಒಂದು ಹಂತದ ಕಾಮಗಾರಿ ಮುಗಿದಿದೆ. ಜ್ಞಾನಜ್ಯೋತಿ ಕಾಲೇಜಿನಿಂದ ಬೊಮ್ಮಸಂದ್ರ ಕ್ರಾಸ್ವರೆಗೆ ಎರಡನೆ ಹಂತದ ಕಾಮಗಾರಿ ಚಾಲ್ತಿಯಲ್ಲಿದೆ. ಬೊಮ್ಮಸಂದ್ರ ಕ್ರಾಸ್ನಿಂದ ಅರೋಮ ಬೇಕರಿಯವರೆಗೆ ಕಾಮಗಾರಿ ಇನ್ನಷ್ಟೇ ಆರಂಭವಾಗಬೇಕಿದೆ.
ಚಾಲ್ತಿಯಲ್ಲಿರುವ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿರುವುದು ಸಮಸ್ಯೆ ಸೃಷ್ಟಿಸಿದೆ. ಈ ಮಾರ್ಗದುದ್ದಕ್ಕೂ ಹಲವು ವಾಣಿಜ್ಯ ಮಳಿಗೆಗಳಿವೆ. ಅಗೆದು ತಿಂಗಳಾನುಗಟ್ಟಲೆ ಹಾಗೆಯೇ ಬಿಟ್ಟಿರುವುದರಿಂದ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ. ಮಣ್ಣು, ತ್ಯಾಜ್ಯವನ್ನು ತೆರವುಗೊಳಿಸದ ಕಾರಣ ಪಾದಚಾರಿಗಳು ಸಂಚಾರಕ್ಕೂ ಅಡ್ಡಿಯಾಗುತ್ತಿದೆ. ಇದರಿಂದಾಗಿ ಮಳಿಗೆಗಳಿಗೆ ಗ್ರಾಹಕರು ಬರುತ್ತಿಲ್ಲ. ಮೊದಲೇ ಕೊರೊನಾ ಸಂಕಷ್ಟದಿಂದಾಗಿ ವ್ಯಾಪಾರ ಕುಸಿತವಾಗಿದೆ. ಹೀಗಿರುವಾಗ ಆಮೆಗತಿಯ ರಸ್ತೆ ಕಾಮಗಾರಿ ಮತ್ತೊಂದು ಹೊಡೆತ ನೀಡಿದೆ ಎಂದು ವ್ಯಾಪಾರಿಗಳು ದೂರುತ್ತಿದ್ದಾರೆ.
ವೈಟ್ಟಾಪಿಂಗ್ ಕಾಮಗಾರಿಯಿಂದಾಗಿ ಬಸ್ ಸಂಚಾರದ ಮಾರ್ಗ ಬದಲಿಸಲಾಗಿದೆ. ಇದರಿಂದಾಗಿ ನಾಗರಿಕರು ಸುಮಾರು 2 ಕಿ.ಮೀ. ದೂರ ಹೋಗಿ ಬಸ್ ಹತ್ತಬೇಕು. ಕೆಲ ದಿನಗಳ ಮಟ್ಟಿಗೆ ಸಹಿಸಿಕೊಳ್ಳಬಹುದು. ತಿಂಗಳಾನುಗಟ್ಟಲೆ ಅವ್ಯವಸ್ಥೆ ಮುಂದುವರಿದರೆ ಹೇಗೆ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ.
ವಾಹನ ಪಾರ್ಕಿಂಗ್ ಸಮಸ್ಯೆ
ಮನೆ, ಮಳಿಗೆ ಪ್ರವೇಶಿಸುವ ರಸ್ತೆಯನ್ನು ಅಗೆದು ಹಾಕಲಾಗಿದೆ. ಇದರಿಂದಾಗಿ ಕೆಲವರಿಗೆ ಸ್ವಂತ ವಾಹನವನ್ನು ಹೊರತೆಗೆಯಲಾಗುತ್ತಿಲ್ಲ. ಕೆಲವರು ಬೇರೆ ರಸ್ತೆಗಳಲ್ಲಿ ವಾಹನ ಪಾರ್ಕಿಂಗ್ ಮಾಡಿದ್ದಾರೆ. ನಿತ್ಯವೂ ಅಲ್ಲಿಂದಲೇ ವಾಹನ ತೆಗೆದುಕೊಂಡು ಹೋಗಿ ವಾಪಸ್ ಅಲ್ಲಿಯೇ ಪಾರ್ಕ್ ಮಾಡುತ್ತಿದ್ದಾರೆ. ರಾತ್ರಿಯಿಡೀ ಬೇರೆಡೆ ಪಾರ್ಕಿಂಗ್ ಮಾಡುವುದರಿಂದ ವಾಹನ ಸುರಕ್ಷತೆಯ ಆತಂಕ ಕಾಡುತ್ತಿದೆ. ಸ್ವಂತ ಜಾಗವಿದ್ದರೂ ವಾಹನವನ್ನು ಪಾರ್ಕ್ ಮಾಡಲಾಗುತ್ತಿಲ್ಲ ಎಂಬ ಕೊರಗು ಸ್ಥಳೀಯರನ್ನು ಕಾಡುತ್ತಿದೆ.
ತೆರವು ಮಾಡುವಲ್ಲೂ ತಾರತಮ್ಯವೈಟ್ಟಾಪಿಂಗ್ ಕಾಮಗಾರಿಗಾಗಿ ಹಲವು ಕಾಂಪೌಂಡ್, ಮಳಿಗೆಗಳನ್ನು ತೆರವು ಮಾಡಲಾಗಿದೆ. ಆದರೆ, ಖಾಸಗಿ ಹೋಟೆಲ್ನವರ ಒತ್ತುವರಿ ಬಗ್ಗೆ ಪಾಲಿಕೆ ಅಧಿಕಾರಿಗಳು ಮೃದು ಧೋರಣೆ ತಳೆದಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ. ಹೋಟೆಲ್ ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿಕೊಂಡಿದೆ. ಗಿಡಗಳನ್ನು ಇಟ್ಟು ಸಂಚಾರಕ್ಕೆ ಅಡ್ಡಿಪಡಿಸುತ್ತಿದೆ. ಹೀಗಿದ್ದರೂ ಅಧಿಕಾರಿಗಳು ಮೌನ ವಹಿಸಿದ್ದಾರೆ ಎಂಬುದು ಸ್ಥಳೀಯರ ದೂರು.
ವೈಟ್ಟಾಪಿಂಗ್ ಕಾಮಗಾರಿಯಿಂದಾಗಿ ಮಳಿಗೆಗಳಿಗೆ ಗ್ರಾಹಕರೇ ಬರುತ್ತಿಲ್ಲ. ಮಾಲೀಕರಿಗೆ ನಾವು ಬಾಡಿಗೆ ಕೊಡಲೇಬೇಕು. ಹಲವಾರು ತಿಂಗಳಿನಿಂದ ನಷ್ಟ ಅನುಭವಿಸುತ್ತಿದ್ದೇವೆ.
ಜಸ್ವಂತ್, ಸ್ಥಳೀಯ ವ್ಯಾಪಾರಿ
ನನ್ನ ಕಾರನ್ನು ಮನೆ ಬಳಿ ನಿಲ್ಲಿಸಲಾಗುತ್ತಿಲ್ಲ. ಪಕ್ಕದ ರಸ್ತೆಯಲ್ಲಿ ಕಾರು ನಿಲ್ಲಿಸಿದ್ದೇನೆ. ಕಾರಿಗೆ ಯಾರಾದರೂ ಹಾನಿ ಮಾಡಿದರೆ ಎಂಬ ಆತಂಕ ಸದಾ ಕಾಡುತ್ತದೆ. ಶೀಘ್ರ ರಸ್ತೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು.
ರಾಜಗೋಪಾಲ್, ಸ್ಥಳೀಯ ನಿವಾಸಿ
ಜಲಮಂಡಳಿಯಿಂದ ಹಣ ಬಿಡುಗಡೆ ವಿಳಂಬ''ಆರಂಭದಲ್ಲಿ ರಸ್ತೆ ಮಾಡಲಷ್ಟೇ ಹಣ ಬಿಡುಗಡೆಯಾಗುತ್ತದೆ. ಒಳಚರಂಡಿ, ನೀರಿನ ಪೈಪ್ಲೈನ್ ನಿರ್ಮಾಣಕ್ಕೆ ಜಲಮಂಡಳಿ ಹಣ ಬಿಡುಗಡೆ ವಿಳಂಬವಾಯಿತು. ನಂತರ ಕೊರೊನಾ ಎರಡನೆ ಅಲೆಯಿಂದ ಕಾರ್ಮಿಕರ ಸಮಸ್ಯೆಯಾಯಿತು. ಇದೀಗ ಕೆಲಸ ಚುರುಕುಗೊಳಿಸಲಾಗಿದೆ. ಮುಂದಿನ ತಿಂಗಳು ಬೊಮ್ಮಸಂದ್ರ ಕ್ರಾಸ್ನಿಂದ ಅರೋಮ ಬೇಕರಿಯವರೆಗೆ ಕಾಮಗಾರಿ ಮುಂದುವರಿಸಲಾಗುವುದು,'' ಎಂದು ಯೋಜನಾ ವಿಭಾಗದ ಇಂಜಿನಿಯರ್ ತಿಳಿಸಿದರು.