ಮಹಾರಾಷ್ಟ್ರ ಬಳಿಕ ದಿಲ್ಲಿಯಲ್ಲೂ ಕೊರೊನಾ ಅಬ್ಬರ, ಒಂದೇ ದಿನ 800ಕ್ಕಿಂತ ಹೆಚ್ಚು ಕೇಸ್‌ ದೃಢ

ದಿಲ್ಲಿಯಲ್ಲಿ ಈ ವರ್ಷದಲ್ಲಿ ಇದೇ ಮೊದಲ ಬಾರಿಗೆ ಒಂದೇ ದಿನ 800ಕ್ಕೂ ಹೆಚ್ಚು ಕೊರೊನಾ ವೈರಸ್‌ ಪ್ರಕರಣಗಳು ವರದಿಯಾಗಿದ್ದು, ಶನಿವಾರ ಬೆಳಿಗ್ಗೆಗೆ ಅಂತ್ಯಗೊಂಡ 24 ಗಂಟೆಗಳ ಅವಧಿಯಲ್ಲಿ ನಗರದ 813 ಜನರಿಗೆ ಹೊಸದಾಗಿ ಕೊರೊನಾ ಸೋಂಕು ತಗುಲಿದೆ.

ಮಹಾರಾಷ್ಟ್ರ ಬಳಿಕ ದಿಲ್ಲಿಯಲ್ಲೂ ಕೊರೊನಾ ಅಬ್ಬರ, ಒಂದೇ ದಿನ 800ಕ್ಕಿಂತ ಹೆಚ್ಚು ಕೇಸ್‌ ದೃಢ
Linkup
ಹೊಸದಿಲ್ಲಿ: ಈಗಾಗಲೇ ಮಹಾರಾಷ್ಟ್ರದಲ್ಲಿ ಕೊರೊನಾ ಆರ್ಭಟಿಸುತ್ತಿದ್ದು, ಇದೀಗ ಉಳಿದ ಹಲವೆಡೆಯೂ ಕೋವಿಡ್‌-19 ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ದಿಲ್ಲಿಯಲ್ಲಿ ಈ ವರ್ಷದಲ್ಲಿ ಇದೇ ಮೊದಲ ಬಾರಿಗೆ ಒಂದೇ ದಿನ 800ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಶನಿವಾರ ಬೆಳಿಗ್ಗೆಗೆ ಅಂತ್ಯಗೊಂಡ 24 ಗಂಟೆಗಳ ಅವಧಿಯಲ್ಲಿ ನಗರದ 813 ಜನರಿಗೆ ಹೊಸದಾಗಿ ಕೊರೊನಾ ಸೋಂಕು ತಗುಲಿದೆ. ಶನಿವಾರ ದೇಶದಲ್ಲಿ ಒಂದೇ ದಿನ ಬರೋಬ್ಬರಿ 40,953 ಹೊಸ ಪ್ರಕರಣಗಳು ವರದಿಯಾಗಿದ್ದು, ಕಳೆದ ನಾಲ್ಕು ತಿಂಗಳಲ್ಲಿ ವರದಿಯಾದ ಗರಿಷ್ಠ ಸಂಖ್ಯೆ ಇದಾಗಿದೆ. ಇದರಲ್ಲಿ ಮಹಾರಾಷ್ಟ್ರವೊಂದರಲ್ಲೇ ಅರ್ಧಕ್ಕಿಂತ ಹೆಚ್ಚಿನ ಪ್ರಕರಣಗಳು ದೃಢಪಟ್ಟಿವೆ. ಇಲ್ಲಿ 25,681 ಹೊಸ ಪ್ರಕರಣಗಳು ವರದಿಯಾಗಿವೆ. ಇದೇ ವೇಳೆ 188 ಜನರು ದೇಶದಲ್ಲಿ ಸೋಂಕಿನಿಂದ ಅಸುನೀಗಿದ್ದಾರೆ. ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವಂತೆ ದೇಶದ ಹಲವು ಭಾಗಗಳಲ್ಲಿ ಈಗಾಗಲೇ ನಿರ್ಬಂಧಗಳನ್ನು ಹೇರಲಾಗಿದ್ದು, ಲಾಕ್‌ಡೌನ್‌, ಕರ್ಫ್ಯೂ ಮತ್ತೆ ಜಾರಿಯಾಗುತ್ತಿವೆ. ಭಾರತದಲ್ಲಿ ಸೆಪ್ಟೆಂಬರ್‌ ವೇಳೆ ಪ್ರತಿ ದಿನ ಅಂದಾಜು 1 ಲಕ್ಷ ಪ್ರಕರಣಗಳು ವರದಿಯಾಗುತ್ತಿದ್ದವು. ನಂತರ ನಿಧಾನಕ್ಕೆ ಕೇಸ್‌ಗಳ ಸಂಖ್ಯೆ ಇಳಿಕೆಯಾಗುತ್ತಾ ಬಂದಿತ್ತು. ಆದರೆ ಇದೀಗ ಕಳೆದ ಹಲವು ದಿನಗಳಿಂದ ಮತ್ತೆ ಕೋವಿಡ್‌ ಕೇಸ್‌ಗಳು ಏರಿಕೆಯಾಗುತ್ತಿವೆ. ಮಹಾರಾಷ್ಟ್ರ ಮಾತ್ರವಲ್ಲದೆ ಪಂಜಾಬ್‌, ಕರ್ನಾಟಕ, ಗುಜರಾತ್‌ ಮತ್ತು ಮಧ್ಯ ಪ್ರದೇಶದಲ್ಲೂ ಕೊರೊನಾ ಕೇಸ್‌ಗಳು ಏರಿಕೆ ಹಾದಿಯಲ್ಲಿವೆ. ದಿಲ್ಲಿಯಲ್ಲಿ ಕಳೆದ ಎರಡು ವಾರಗಳಿಂದ ನಿರಂತರವಾಗಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಪ್ರತಿ ದಿನ ನೀಡಲಾಗುತ್ತಿರುವ ಲಸಿಕೆಯ ಸಂಖ್ಯೆಯನ್ನು 40,000 ದಿಂದ 1,25,000ಕ್ಕೆ ಹೆಚ್ಚಳ ಮಾಡಲಾಗಿದೆ.