
'ಕನ್ನಡಿಗರ ಮನೆ ಮಗ' ಕೊನೆಯುಸಿರೆಳೆದು ಮೂರು ದಿನ ಕಳೆದೇ ಬಿಟ್ಟಿವೆ. ಆದರೂ, ಅಪ್ಪು ಇಲ್ಲ ಎಂಬ ಕಠೋರ ಸತ್ಯವನ್ನು ಅರಗಿಸಿಕೊಳ್ಳಲು ಕನ್ನಡಿಗರು ಸಿದ್ಧರಿಲ್ಲ. ಅಪ್ಪು ಕಂಡ ಅದೆಷ್ಟೋ ಕನಸುಗಳು, ಕನಸಾಗಿಯೇ ಉಳಿದಿವೆ. ಆರಂಭಿಸಿದ ಯೋಜನೆಗಳು ಅರ್ಧಕ್ಕೆ ನಿಂತಿವೆ. ಅದರಲ್ಲಿ ಮಲೆ ಮಹದೇಶ್ವರ ಸ್ವಾಮಿಯ ಆಲ್ಬಂ ಸಾಂಗ್ ಕೂಡ ಒಂದು. ಹೌದು, ಮಲೆ ಮಹದೇಶ್ವರ ಸ್ವಾಮಿಯ ಕುರಿತು ಒಂದು ಆಲ್ಬಂ ಸಾಂಗ್ ಮಾಡುವ ಆಲೋಚನೆ ಅಪ್ಪುಗೆ ಇತ್ತು. ಅದಕ್ಕಾಗಿ ಅವರು ಗಾಯಕ ಅವರನ್ನು ಕೆಲ ದಿನಗಳ ಹಿಂದಷ್ಟೇ ಭೇಟಿಯಾಗಿದ್ದರು. ಈ ಬಗ್ಗೆ ನವೀನ್ ಪ್ರತಿಕ್ರಿಯಿಸಿದ್ದಾರೆ.
ಅಪ್ಪು ಸರ್ ಕೊನೆಯ ಭೇಟಿ...'ಮಲೆ ಮಹದೇಶ್ವರ ಸ್ವಾಮಿಯ ಕುರಿತ ಒಂದು ಆಲ್ಬಮ್ ಸಾಂಗ್ ಪಿಆರ್‌ಕೆ ಬ್ಯಾನರ್‌ನಲ್ಲಿ ಮಾಡಲು ಅಪ್ಪು ಸರ್ ಕೆಲ ತಿಂಗಳ ಹಿಂದೆ ಒಪ್ಪಿಕೊಂಡಿದ್ದರು. ಅದೇ ವಿಷಯವಾಗಿ ಮಾತನಾಡಲು ಕಳೆದ ಬುಧವಾರ (ಅ.27) ಸಂಜೆ ಅವರ ಮನೆಗೆ ಹೋಗಿದ್ದೆ. ಸುಮಾರು ಒಂದೂವರೆ ತಾಸು ಅವರೊಂದಿಗೆ ಮಾತನಾಡಿದ್ದೆ... ಅವರ ಸರಳತೆ, ಬೇರೆಯವರಿಗೆ ಕೊಡುತ್ತಿದ್ದ ಬೆಲೆ, ಹೇಳುತ್ತಿದ್ದ ಆತ್ಮವಿಶ್ವಾಸದ ಮಾತುಗಳ ಬಗ್ಗೆ ನಾನು ವಿಶೇಷವಾಗಿ ಹೇಳಬೇಕಾದ್ದಿಲ್ಲ.. ಅದು ಎಲ್ಲರಿಗೂ ಗೊತ್ತಿರುವಂತಹದ್ದೇ. ಸಂಪೂರ್ಣವಾಗಿ ಕಂಪೋಸಿಷನ್ ಮುಗಿದ ಹಾಡನ್ನು ಅವರಿಗೆ ಕೇಳಿಸಿದೆ.. ಹಾಡು ಕೇಳಿ ಅವರು ಥ್ರಿಲ್ ಆಗಿದ್ದು ಅವರ ಮಾತುಗಳಲ್ಲಿ ವ್ಯಕ್ತವಾಯಿತು' ಎಂದು ಹೇಳಿದ್ದಾರೆ ನವೀನ್.
ಸೋಮವಾರ ಭೇಟಿಯಾಗಬೇಕಿತ್ತು...'ಹಾಡನ್ನು ಹೇಗೆ ಶೂಟಿಂಗ್ ಮಾಡಬೇಕು, ಯಾವೆಲ್ಲ ಕ್ಯಾಮರಾ ಬಳಸಬೇಕು ಎಂಬುದನ್ನು ಪಿನ್ ಟು ಪಿನ್ ಹೇಳಿದರು. ಅದರ ಜೊತೆಗೆ ಐದಾರು ರೆಫ್ರರೆನ್ಸ್ ವಿಡಿಯೋಗಳನ್ನು ತೋರಿಸಿದರು. ಮಹದೇಶ್ವರ ಬೆಟ್ಟವನ್ನು ತೋರಿಸುವ ಅವರ ಕಲ್ಪನೆಯನ್ನು ನೋಡಿ ಬೆರಗಾಗಿದ್ದೆ. ಅಪ್ಪು ಸರ್ ಕಂಟೆಂಟ್‌ನಿಂದ ಹಿಡಿದು ಟೆಕ್ನಿಕಲಿಯಾಗಿಯೂ ಅವರು ಎಷ್ಟೊಂದು ತಿಳಿದುಕೊಂಡಿದ್ದರು ಎಂಬುದು ನೋಡಿ ಆಶ್ಚರ್ಯವಾಯಿತು. ಏಕೆಂದರೆ ಅವರು ಐದಾರು ಕ್ಯಾಮರಾಗಳ ಹೆಸರನ್ನು ಹೇಳಿ ಇಂತಹ ಶಾಟ್‌ಗೆ ಇಂತಹ ಕ್ಯಾಮರಾ ಬಳಸಬೇಕು ಎಂದು ವಿವರವಾಗಿ ಹೇಳಿದ್ದರು. ಇದೇ ವಿಷಯವಾಗಿ ಮಾತನಾಡಲು ಸೋಮವಾರ (ನ.1) ಬರಲು ಹೇಳಿದ್ದರು...' ಎಂದಿದ್ದಾರೆ ನವೀನ್.
ಬಹುಶಃ ಮುಂದಿನ ವಾರ ಮಲೆ ಮಹದೇಶ್ವರ ಹಾಡಿಗೆ ನಾವಿಬ್ಬರು ರಾಗವಾಗಬೇಕಿತ್ತು, ನೃತ್ಯಕ್ಕೆ ಹೆಜ್ಜೆ ಹಾಕಬೇಕಿತ್ತು. ಆದರೆ ಅವರು ಇನ್ನು ಯಾರಿಗೂ ಸಿಗದ ಹಾಗೆ ಬಹುದೂರ ಹೋಗಿಬಿಟ್ಟರು... ಅವರು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಅವರ ಎಂದಿಗೂ ಎಂದೆಂದಿಗೂ ಜನಮಾನಸದಲ್ಲಿ ಅಜರಾಮರ... ಅವರೊಂದಿಗೆ ಕೆಲವು ಸಮಯ ಕಳೆದಿದ್ದೆ ಎಂಬುದೇ ನನ್ನ ಸಾರ್ಥಕ ಗಳಿಕೆ... ಹೋಗಿ ಬನ್ನಿ ಸಾರ್... ಕ್ರೂರ ವಿಧಿಯೆ ನಿನಗೆ ಧಿಕ್ಕಾರ...' ಎಂದು ನವೀನ್ ಬೇಸರ ವ್ಯಕ್ತಪಡಿಸಿದ್ದಾರೆ.
ಅಕ್ಟೋಬರ್ 29ರ ಬೆಳಗ್ಗೆ ಪುನೀತ್‌ಗೆ ಹೃದಯಾಘಾತವಾಯ್ತು. ನಂತರ ಅವರನ್ನು ವಿಕ್ರಮ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಪ್ಪು ಬದುಕಿ ಬರಲಿಲ್ಲ. ಕಂಠೀರವ ಸ್ಟುಡಿಯೋದಲ್ಲಿರುವ ಡಾ. ರಾಜ್‌ಕುಮಾರ್ ಮತ್ತು ಪಾರ್ವತಮ್ಮ ರಾಜ್‌ಕುಮಾರ್ ಸಮಾಧಿ ಬಳಿಯೇ ಪುನೀತ್ ಅಂತ್ಯಕ್ರಿಯೆ ಮಾಡಲಾಗಿದೆ.