ಬೆಂಗಳೂರು: ರಾಜಕೀಯ ಅಸ್ಥಿರತೆ ಎದುರಾದಾಗ ಆಳುವ ಅರಸನಿಗೆ ಸಾಂತ್ವನ, ಮಾರ್ಗದರ್ಶನ ಹೇಳುವುದು ಸಂತರ ಕರ್ತವ್ಯ. ಹೀಗಾಗಿಯೇ ಸಿಎಂ ಬಿ.ಎಸ್.ಯಡಿಯೂರಪ್ಪರಿಗೆ ಬೆಂಬಲ ಘೋಷಣೆ ಮಾಡಲಾಗಿದೆ..
ಬೆಂಗಳೂರಿನ ಅರಮನೆ ಮೈದಾನದಲ್ಲಿ ಭಾನುವಾರ ನಡೆದ ಸಮಾವೇಶದಲ್ಲಿ ರಾಜ್ಯದ ನಾನಾ ಕಡೆಯಿಂದ ಆಗಮಿಸಿದ್ದ ಪ್ರಸಕ್ತ ರಾಜಕೀಯದಲ್ಲಿನ ತಮ್ಮ ನಡೆ ಬಗ್ಗೆ ಟೀಕಿಸಿದವರಿಗೆ ಹೀಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಸಿಎಂ ಬದಲಾವಣೆ ಚರ್ಚೆ ವೇಳೆ ಬೆಂಬಲಿಸಿದ್ದ ಹಲವು ಶ್ರೀಗಳು ಟೀಕೆ-ಟಿಪ್ಪಣಿ ಎದುರಿಸಿದ್ದರು. ಈ ಹಿನ್ನೆಲೆಯಲ್ಲಿ 'ವರ್ತಮಾನ ಸಮಸ್ಯೆ ಮತ್ತು ಪರಿಹಾರ' ಕುರಿತು ಚರ್ಚೆ ನಡೆಸಲು ಅರಮನೆ ಮೈದಾನದಲ್ಲಿ ಶ್ರೀಗಳ ಸಮಾವೇಶ ನಡೆಸಲಾಯಿತು. ರಾಜಕೀಯ ಅಸ್ಥಿರತೆ, ಕೋವಿಡ್, ನೆರೆ ಹಾವಳಿಯಲ್ಲಿ ಮಠಗಳ ತ್ಯಾಗ-ಬಲಿದಾನ ಕುರಿತು ಚರ್ಚಿಸಲಾಯಿತು. ಸಭೆಯಲ್ಲಿ ಮಠಾಧೀಶರು 'ಸಿಎಂ ಆಯ್ಕೆ ಬಿಕ್ಕಟ್ಟು ವರ್ತಮಾನ ಸಮಸ್ಯೆಗಳಲ್ಲಿಒಂದಾಗಿರುವ ಕಾರಣ ಬಿಎಸ್‌ವೈ ಪರ ನಿಲ್ಲುವುದು ಹಾಗೂ ಮಠಾಧೀಶರ ಪರಿಷತ್' ರಚಿಸಿ ಕೋವಿಡ್, ನೆರೆ ಹಾವಳಿಗೆ ನೆರವಾಗಲು ತೀರ್ಮಾನ ಕೈಗೊಂಡರು.
''ನಾಯಕತ್ವ ಬಿಕ್ಕಟ್ಟು ಬಗೆಹರಿಸಲು ಕೇಂದ್ರಕ್ಕೆ ಮಠಾಧೀಶರು ಸಲಹೆ ನೀಡಿದ್ದಾರೆ. ಸಿಎಂ ಆಯ್ಕೆ ವಿಚಾರ ರಾಜ್ಯದ ಪರಿಸ್ಥಿತಿಯನ್ನು ದಿನೇದಿನೆ ಸಂದಿಗ್ಧತೆ ತಳ್ಳುತ್ತಿದೆ. ಗಹನವಾದ ಸಮಸ್ಯೆಯಾಗಿ ಬದಲಾಗಿದೆ. ಪ್ರಜೆಗಳ ಹಿತಕ್ಕಾಗಿ ಹೈಕಮಾಂಡ್ ಸ್ಪಷ್ಟತೆ ನೀಡುವುದು ಸೂಕ್ತ. ಈವರೆಗೆ ಸ್ಪಷ್ಟತೆ ಇಲ್ಲದ ಕಾರಣ ನಾವುಗಳು ಮಧ್ಯಸ್ಥಿಕೆ ವಹಿಸಬೇಕಾಗಿದೆ'' ಎಂದು ಶ್ರೀಗಳು ಹೇಳಿದ್ದಾರೆ.
ಸಾನಿಧ್ಯ ವಹಿಸಿದ್ದ ಚಿತ್ರದುರ್ಗ ಶಿವಮೂರ್ತಿ ಮುರುಘಾ ಶರಣರು ''ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಏರ್ಪಟ್ಟಿದೆ. ಇದೊಂದು ಸಾಮಾಜಿಕ ಪ್ರಶ್ನೆ. ಹೈಕಮಾಂಡ್ ಸೂಕ್ತ ಸಂದರ್ಭದಲ್ಲಿಸೂಕ್ತ ತೀರ್ಮಾನ ಕೈಗೊಂಡು ಅಸ್ಥಿರತೆ ಶಮನಗೊಳಿಸಲಿ'' ಎಂದರು. ಮಠಾಧೀಶರಿಗೆ ಸಮಗ್ರತೆಯ ಪಾಠ ಹೇಳಿದ ಅವರು ''ಸಾಮಾಜಿಕ, ಧಾರ್ಮಿಕ ಮತ್ತು ರಾಷ್ಟ್ರೀಯ ಸಮಗ್ರತೆ ಇರಲಿ. ವೀರಶೈವ-ಲಿಂಗಾಯತ ಮಠಗಳು ಸಮಗ್ರತೆ ತತ್ವ ಪಾಲಿಸಬೇಕು'' ಎಂದು ಸೂಚಿಸಿದರು.
ಉಜ್ಜಯಿನಿ ಪೀಠದ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯ ಶ್ರೀಗಳು '' ನಡೆಸುವ ಚಿಂತನೆ ಪ್ರಸ್ತುತ ಎನಿಸಿತ್ತು. ಕಲಿಯುಗದಲ್ಲಿ ಸಂಘಟನೆಯ, ಬಲವರ್ಧನೆಯ ಅಗತ್ಯ. ಧರ್ಮ ಸಂಸತ್ತು ರೂಪುಗೊಳ್ಳುವ ವಿಚಾರ ಸೂಕ್ತವಾಗಿದೆ. ಒಗ್ಗಟ್ಟಿನ ಮೂಲಕ ಸಮಾಜದ ಬಲವರ್ಧನೆ ಕೆಲಸ ನಡೆಯಲಿ'' ಎಂದು ಹೇಳಿದರು.
ಸಮಾವೇಶದಲ್ಲಿ ಧಾರವಾಡದ ಮುರುಘಾ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಚಿಕ್ಕತೊಟ್ಟಿಲಕೆರೆ ಅಟವಿ ಶಿವಲಿಂಗ ಸ್ವಾಮೀಜಿ, ಪುಷ್ಪಗಿರಿ ಸ್ವಾಮೀಜಿ, ಶಿವಗಂಗೆ ಸ್ವಾಮೀಜಿ, ಬ್ರಹ್ಮಾಂಡ ಗುರೂಜಿ ಸೇರಿದಂತೆ 300ಕ್ಕೂ ಶ್ರೀಗಳು ಉಪಸ್ಥಿತರಿದ್ದರು.
ದಿಂಗಾಲೇಶ್ವರ ಶ್ರೀಗಳ ಎಚ್ಚರಿಕೆ
''ರಾತ್ರಿ ಬೊಗಳುವ ನಾಯಿಯಂತೆ ಕೆಲವರು ಮಠಾಧೀಶರನ್ನು ಟೀಕಿಸುತ್ತಿದ್ದಾರೆ. ನೀರಲ್ಲಿಕೈಯಾಡಿಸಿದರೆ ನೀರು ತಿಳಿಯಾಗಲು ಸಾಧ್ಯವೆ? ಸರಕಾರದಲ್ಲಿಕೈಯಾಡಿಸುವುದನ್ನು ಬಿಡಿ'' ಎಂದು ದಿಂಗಾಲೇಶ್ವರ ಶ್ರೀಗಳು ಖಾರವಾಗಿ ಪ್ರತಿಕ್ರಿಯಿಸಿದರು.
''ಸ್ವಜಾತಿಯವರಿಂದಲೇ ಬಿಎಸ್‌ವೈಗೆ ತೊಂದರೆ ಇದೆ. ತೆಪ್ಪಗೆ ಇದ್ದರೆ ನೀರು ತಾನಾಗಿಯೇ ತಿಳಿಯಾಗುತ್ತದೆ,'' ಎಂದು ಈಗಿನ ರಾಜಕೀಯ ಸ್ಥಿತಿಗೆ ಹೋಲಿಸಿ ಮಾರ್ಮಿಕವಾಗಿ ನುಡಿದರು. ಲಿಂಗೈಕ್ಯ ಸಿದ್ಧಗಂಗಾ ಶ್ರೀಗಳು ಹಲವು ಬಾರಿ ಬಿಎಸ್‌ವೈ ಅವರಿಗೆ ಬೆಂಬಲ ಸೂಚಿಸಿದ್ದನ್ನು ತಿಳಿಸಿದರು.
''ಮಠಗಳು ಪಾಕೆಟ್ ಹಿಂದೆ ಬೀಳುವ ಪ್ರವೃತ್ತಿ ಹೊಂದಿಲ್ಲ. ಕಾಣಿಕೆ ಪಡೆಯುವುದು ಧರ್ಮ ಸಂಸ್ಕೃತಿ. ಕಾಣಿಕೆ, ಅನುದಾನ, ಇತರೆ ಸಂಪನ್ಮೂಲಗಳನ್ನು ಮಠಗಳ ಅಭಿವೃದ್ಧಿ, ದಾಸೋಹ, ಶಿಕ್ಷಣಕ್ಕೆ ಉಪಯೋಗಿಸಲಾಗುತ್ತದೆ. ಎಲ್ಲವೂ ಜನರ ಮುಂದಿದೆ. ಅನುದಾನವನ್ನು ಸ್ವಂತಕ್ಕೆ ಬಳಸಿಲ್ಲ'' ಎಂಬುದನ್ನು ಮಠಾಧೀಶರು ಸ್ಪಷ್ಟಪಡಿಸಿದರು.
ಪಕ್ಷ ಸ್ಥಾಪನೆ ಮಾತು ವಾಪಸ್
ಬಿಎಸ್‌ವೈ ಬೆಂಬಲಿಸುವ ಭರದಲ್ಲಿ ಮಠಾಧೀಶರಿಗೂ ಪ್ರಾದೇಶಿಕ ಪಕ್ಷ ಬೇಕೆಂಬುದನ್ನು ತಿಪಟೂರಿನ ರುದ್ರಮುನಿ ಶ್ರೀಗಳು ಆಗ್ರಹಿಸಿದರು. ರುದ್ರಮುನಿ ಶ್ರೀಗಳ ಮಾತಿಗೆ ಪ್ರಮುಖ ಮಠಾಧೀಶರಲ್ಲಿಅಸಮಾಧಾನ ಉಲ್ಬಣಿಸಿತು. ಪರಿಸ್ಥಿತಿ ಅರಿತ ಚಿತ್ರದುರ್ಗ ಮುರುಘಾ ಶರಣರು'ಪಕ್ಷ ಸ್ಥಾಪಿಸುವ ಮಾತನ್ನು ಗಂಭೀರ ಪರಿಗಣಿಸಬೇಡಿ' ಎಂದು ತಿಳಿಗೊಳಿಸಿದರು.
ಬಿಎಸ್ ಯಡಿಯೂರಪ್ಪ ಸೇವೆ ಪರಿಗಣಿಸಿ ಅವರಿಗೆ ಸ್ವಲ್ಪ ಮಾರ್ಜಿನ್ ನೀಡಿ. ವ್ಯವಸ್ಥೆ ಸರಿದೂಗಿಸಿದ ನಂತರ ಹೈಕಮಾಂಡ್ ತೀರ್ಮಾನಿಸಿದರೆ ಸೂಕ್ತ
- ಸರ್ಪಭೂಷಣ ಶ್ರೀಗಳು,