: ನಗರದಲ್ಲಿ ಸಮರ್ಪಕವಾಗಿ ಗುಂಡಿಗಳನ್ನು ಮುಚ್ಚಲು ಎಲ್ಲ ವಲಯಗಳ ಮುಖ್ಯ ಎಂಜಿನಿಯರ್‌ಗಳು, ಕಾರ್ಯ ನಿರ್ವಾಹಕ ಎಂಜಿನಿಯರ್‌ಗಳು, ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ಗಳು ಹಾಗೂ ವಾರ್ಡ್ ಎಂಜಿನಿಯರ್‌ಗಳನ್ನೊಳಗೊಂಡ ಟಾಸ್ಕ್ ಫೋರ್ಸ್ ರಚಿಸಿ ಮುಖ್ಯ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ನಾನಾ ಇಲಾಖೆಗಳ ಸಮನ್ವಯ ಕೊರತೆಯಿಂದಾಗಿ ರಸ್ತೆ ಮುಚ್ಚುವ ಕಾರ್ಯವನ್ನು ಸರಿಯಾಗಿ ಕೈಗೊಳ್ಳುತ್ತಿಲ್ಲ. ಮೇಲ್ವಿಚಾರಣೆ ಕೂಡ ಮಾಡದ ಹಿನ್ನೆಲೆಯಲ್ಲಿ ಟಾಸ್ಕ್‌ಫೋರ್ಸ್ ರಚನೆ ಮಾಡಲಾಗಿದೆ. ಪಾಲಿಕೆಯಿಂದ ಸ್ಥಾಪಿಸಿರುವ ಡಾಂಬರು ಮಿಶ್ರಣ ಘಟಕದಿಂದ ಬೇಡಿಕೆಗೆ ತಕ್ಕಷ್ಟು ಡಾಂಬರು ತರಿಸಿಕೊಂಡು ಆರ್ಟೀರಿಯಲ್, ಸಬ್ ಆರ್ಟೀರಿಯಲ್ ರಸ್ತೆಗಳು, ಹೈ ಡೆನ್ಸಿಟಿ ಕಾರಿಡಾರ್‌ಗಳು ಸೇರಿದಂತೆ ಎಲ್ಲ ವಾರ್ಡ್ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಗುತ್ತಿಗೆದಾರರಿಂದ ಮುಚ್ಚಿಸಿ, ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ತಾಕೀತು ಮಾಡಿದ್ದಾರೆ.
ವಲಯ ಮಟ್ಟದಲ್ಲಿನ ವಿಭಾಗೀಯ ಕಾರ್ಯ ನಿರ್ವಾಹಕ ಎಂಜಿನಿಯರ್‌ಗಳು ತಮ್ಮ ವ್ಯಾಪ್ತಿಗೆ ಒಳಪಡುವ ಎಲ್ಲ ರಸ್ತೆಗಳ ಪಟ್ಟಿ ಮಾಡಿ, ಗುಂಡಿಗಳನ್ನು ಗುರುತಿಸಬೇಕು. ಬಳಿಕ ಅಗತ್ಯವಿರುವಷ್ಟು ಡಾಂಬರು ಮಿಶ್ರಣಕ್ಕೆ ಬೇಡಿಕೆ ಸಲ್ಲಿಸಿ, ರಸ್ತೆ ಗುಂಡಿಗಳನ್ನು ಮುಚ್ಚಲು ಅಗತ್ಯ ಕ್ರಮ ಕೈಗೊಳ್ಳಬೇಕು. ರಸ್ತೆ ಮೂಲಸೌಕರ್ಯ, ಯೋಜನೆ ವಿಭಾಗದ ಇಇ, ಎಇಇಗಳು ಕೂಡ ಅಗತ್ಯ ಮಾಹಿತಿ ಒದಗಿಸಿ, ರಸ್ತೆ ಗುಂಡಿಗಳ ದುರಸ್ತಿಗೆ ಸಹಕರಿಸಬೇಕು ಎಂದು ಮುಖ್ಯ ಆಯುಕ್ತರು ಸೂಚಿಸಿದ್ದಾರೆ.
ರಸ್ತೆ ಮೂಲಸೌಕರ್ಯ, ಯೋಜನೆ(ಕೇಂದ್ರ) ವಿಭಾಗದ ಕಾರ್ಯ ನಿರ್ವಾಹಕ ಎಂಜಿನಿಯರ್‌ಗಳು (ಇಇ) ದೋಷ ಮುಕ್ತ ಅವಧಿಯಲ್ಲಿರುವ ರಸ್ತೆಗಳ ವಿವರವನ್ನು ಸಂಬಂಧಪಟ್ಟ ವಿಭಾಗದ ಇಇಗಳಿಗೆ ನೀಡಬೇಕು. ಈ ರಸ್ತೆಗಳಲ್ಲಿ ಗುಂಡಿ ಬಿದ್ದಿದ್ದರೆ, ಕೂಡಲೇ ದುರಸ್ತಿಪಡಿಸಲು ಕ್ರಮ ವಹಿಸುವಂತೆ ಸಂಬಂಧಪಟ್ಟ ವಿಭಾಗದ ಇಇಗಳು ರಸ್ತೆ ಮೂಲಸೌಕರ್ಯ ಹಾಗೂ ಯೋಜನೆ ವಿಭಾಗಕ್ಕೆ ಸೂಚಿಸಿ, ಗುಂಡಿ ಮುಚ್ಚಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕು.
ವಾರ್ಡ್ ಎಂಜಿನಿಯರ್‌ಗಳು ತಮ್ಮ ವ್ಯಾಪ್ತಿಯ ವಾರ್ಡ್ ರಸ್ತೆಗಳು, ರಸ್ತೆ ಮೂಲಸೌಕರ್ಯ, ಯೋಜನೆ ಅಥವಾ ಇತರೆ ವಿಭಾಗಗಳಿಂದ ಅಭಿವೃದ್ಧಿಪಡಿಸಿರುವ, ದೋಷಮುಕ್ತ ಅವಧಿಯಲ್ಲಿರುವ, ಕಾಮಗಾರಿ ಪ್ರಗತಿಯಲ್ಲಿರುವ ರಸ್ತೆಗಳ ಮಾಹಿತಿಯನ್ನು ಹೊಂದಿರಬೇಕು. ತಮ್ಮ ವಾರ್ಡ್ ವ್ಯಾಪ್ತಿಯ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಆಗಿಂದಾಗ್ಗೆ ಮುಚ್ಚಲು ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದ್ದಾರೆ.
ವಲಯ ಮಟ್ಟದ ಉಪ ವಿಭಾಗದ ಎಇಇಗಳು ಇತರೆ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ, ಅಗತ್ಯ ಮಾಹಿತಿಗಳನ್ನು ವಿಭಾಗದ ಇಇಗಳಿಗೆ ನೀಡಬೇಕು. ಹಾಗೆಯೇ, ತಮ್ಮ ವಾರ್ಡ್ ವ್ಯಾಪ್ತಿಯಲ್ಲಿ ರಸ್ತೆ ಗುಂಡಿ ಮುಚ್ಚುವ ಕಾರ್ಯದ ಮೇಲುಸ್ತುವಾರಿ ವಹಿಸಿಕೊಳ್ಳಬೇಕು. ಇಇಗಳು, ಟಿಇಸಿ ವಿಭಾಗದವರು ವಲಯಗಳ ಇಇಗಳ ಬೇಡಿಕೆ ಅನುಸಾರ ಯಾವುದೇ ವಿಳಂಬಕ್ಕೆ ಆಸ್ಪದ ನೀಡದೆ, ಡಾಂಬರು ಮಿಶ್ರಣವನ್ನು ಪೂರೈಸಬೇಕು. ಡಾಂಬರು ಮಿಶ್ರಣ ತಯಾರಿಕಾ ಘಟಕದಿಂದ ನಿತ್ಯ ವಲಯವಾರು ಸರಬರಾಜು ಮಾಡಿರುವ ಡಾಂಬರು ಪ್ರಮಾಣದ ಮಾಹಿತಿಯನ್ನು ಆಯಾ ವಲಯಗಳ ಸಿಇಗಳಿಗೆ ಸಲ್ಲಿಸಬೇಕು ಎಂದು ಆದೇಶಿಸಿದ್ದಾರೆ.
ಆಯಾ ವಲಯದ ಮುಖ್ಯ ಎಂಜಿನಿಯರ್‌ಗಳು ತಮ್ಮ ವ್ಯಾಪ್ತಿಯಲ್ಲಿನ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯದ ಸಂಪೂರ್ಣ ಮೇಲ್ವಿಚಾರಣೆ ವಹಿಸಬೇಕು. ನಾನಾ ವಿಭಾಗಗಳೊಂದಿಗೆ ಸಮನ್ವಯ ಕೊರತೆಯಾಗದಂತೆ ನಿಗಾವಹಿಸಿ ಅಗತ್ಯ ನೆರವು ನೀಡಬೇಕು. ನಿತ್ಯ ತಮ್ಮ ವಲಯ ವ್ಯಾಪ್ತಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಿರುವ ಬಗ್ಗೆ ವಿಭಾಗವಾರು ರಸ್ತೆಗಳ ವಿವರವನ್ನು ಕ್ರೋಢೀಕರಿಸಿ, ವಲಯ ಆಯುಕ್ತರಿಗೆ ಸಲ್ಲಿಸಬೇಕು. ಎಲ್ಲಾ ವಲಯಗಳಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಿರುವ ಕುರಿತಾದ ಮಾಹಿತಿಯನ್ನು ಪ್ರಧಾನ ಎಂಜಿನಿಯರ್ ಕಚೇರಿಯಿಂದ ಕ್ರೋಢೀಕರಿಸಿ, ಆಡಳಿತಾಧಿಕಾರಿ ಹಾಗೂ ಮುಖ್ಯ ಆಯುಕ್ತರಿಗೆ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.