ನಗರದಲ್ಲಿ ಝೀರೋ ಟ್ರಾಫಿಕ್ ಬೇಡ: ಸಿಎಂ ಬೊಮ್ಮಾಯಿ ಮತ್ತೊಂದು ಮಹತ್ವದ ನಿರ್ಧಾರ

ಬೆಂಗಳೂರು ನಗರದಲ್ಲಿ ತಮಗೆ ಇನ್ನು ಮುಂದೆ ಝೀರೋ ಟ್ರಾಫಿಕ್ ಸೌಲಭ್ಯ ಕಲ್ಪಿಸುವುದು ಬೇಡ. ಸಿಗ್ನಲ್ ಮುಕ್ತ ಸಂಚಾರದ ವ್ಯವಸ್ಥೆ ಕಲ್ಪಿಸಿದರೆ ಸಾಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ನಗರದಲ್ಲಿ ಝೀರೋ ಟ್ರಾಫಿಕ್ ಬೇಡ: ಸಿಎಂ ಬೊಮ್ಮಾಯಿ ಮತ್ತೊಂದು ಮಹತ್ವದ ನಿರ್ಧಾರ
Linkup
ಬೆಂಗಳೂರು: ಸರ್ಕಾರಿ ಸಮಾರಂಭಗಳಲ್ಲಿ ಹಾರ-ತುರಾಯಿ ಸನ್ಮಾನ, ಜಿಲ್ಲೆಗಳಿಗೆ ಭೇಟಿ ನೀಡಿದಾಗ ಗಾರ್ಡ್ ಆಫ್ ಆನರ್ ನೀಡುವುದನ್ನು ಸ್ಥಗಿತಗೊಳಿಸುವಂತಹ ಮಹತ್ವದ ಕ್ರಮಗಳನ್ನು ಕೈಗೊಂಡಿದ್ದ ಮುಖ್ಯಮಂತ್ರಿ , ಸಾರ್ವಜನಿಕರಿಗೆ ಆಗುವ ಕಿರಿಕಿರಿಗಳನ್ನು ತಪ್ಪಿಸಲು ಮತ್ತೊಂದು ಪ್ರಮುಖ ಹೆಜ್ಜೆ ಇರಿಸಿದ್ದಾರೆ. ನಗರದಲ್ಲಿ ಮುಖ್ಯಮಂತ್ರಿಗಳು ಓಡಾಡುವಾಗ ಅವರ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಇದರಿಂದ ಸಿಗ್ನಲ್‌ಗಳಲ್ಲಿ ವಾಹನ ಸವಾರರು ಹತ್ತಾರು ನಿಮಿಷ ಸುಮ್ಮನೆ ಕಾಯುವಂತಾಗುತ್ತದೆ. ಇದು ಜನರ ಆಕ್ರೋಶಕ್ಕೆ ಕಾರಣವಾಗುತ್ತಿತ್ತು. ಈ ವ್ಯವಸ್ಥೆಗೆ ಮಂಗಳ ಹಾಡಲು ಸಿಎಂ ಬೊಮ್ಮಾಯಿ ನಿರ್ಧರಿಸಿದ್ದಾರೆ. ತಾವು ನಗರದೊಳಗೆ ಸಂಚಾರ ಮಾಡುವ ಸಂದರ್ಭದಲ್ಲಿ ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸುವುದು ಬೇಡ. ಸಿಗ್ನಲ್ ಮುಕ್ತ ಸಂಚಾರ ಇರಿಸಿದರೂ ಸಾಕು ಎಂದು ಸಿಎಂ ಸೂಚನೆ ನೀಡಿದ್ದಾರೆ. ಅಲ್ಲದೆ, ತಾವು ಓಡಾಡುವ ವೇಳೆ ಆಂಬುಲೆನ್ಸ್‌ಗಳ ಸುಗಮ ಓಡಾಟಕ್ಕೆ ಅವಕಾಶ ನೀಡುವಂತೆಯೂ ಆದೇಶಿಸಿದ್ದಾರೆ ಎನ್ನಲಾಗಿದೆ. ಗೃಹ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದ ಸಂದರ್ಭದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರೂ ತಮಗೆ ಬೆಂಗಳೂರು ನಗರದಲ್ಲಿ ಓಡಾಡಲು ಝೀರೋ ಟ್ರಾಫಿಕ್ ಹಾಗೂ ಸಿಗ್ನಲ್ ಮುಕ್ತ ಸಂಚಾರ ಕಲ್ಪಿಸುವುದು ಬೇಡ ಎನ್ನುವ ಮೂಲಕ ಮಾದರಿಯಾಗಿದ್ದರು. ಒಂದೇ ಬಾರಿ ಸರ್ಕಾರಿ ಕಚೇರಿ ಆವರಣಗಳಲ್ಲಿ ಮಾತ್ರವೇ ಮುಖ್ಯಮಂತ್ರಿ ಅವರಿಗೆ ಗೌರವ ರಕ್ಷೆ ನೀಡುವಂತೆ ಕೂಡ ರಾಜ್ಯ ಸರ್ಕಾರ ಸೂಚನೆ ನೀಡಿದೆ. ಸಿಎಂಗೆ ದಿನಕ್ಕೆ ಒಂದು ಬಾರಿ ಮಾತ್ರ ಗೌರವ ರಕ್ಷೆ ಕೊಡಲು ಸೂಚಿಸಲಾಗಿದೆ. ಗಣ್ಯರು ನಿರ್ಗಮಿಸುವಾಗ ಗೌರವ ರಕ್ಷೆ ನೀಡುವುದನ್ನು ರದ್ದುಗೊಳಿಸಲಾಗಿದೆ. ಇದು ರಾಜ್ಯಪಾಲರು, ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳ ಗೌರವ ರಕ್ಷೆಗೆ ಅನ್ವಯಿಸುವುದಿಲ್ಲ ಎಂದು ತಿಳಿಸಲಾಗಿದೆ.