![](https://vijaykarnataka.com/photo/86965329/photo-86965329.jpg)
ಹೊಸದಿಲ್ಲಿ: ಸೆಮಿಕಂಡಕ್ಟರ್ ಅಥವಾ ಚಿಪ್ಗಳ ಕೊರತೆಯಿಂದ ದೇಶದ ಅತಿ ದೊಡ್ಡ ಉತ್ಪಾದಕ ಮಾರುತಿ ಸುಜುಕಿಯಲ್ಲಿ ಸೆಪ್ಟೆಂಬರ್ ತಿಂಗಳಿನ ಉತ್ಪಾದನೆ ಎರಡು ಪಟ್ಟು ಇಳಿಕೆಯಾಗಿದೆ.
ದೇಶದಲ್ಲಿ ಅತೀ ಹೆಚ್ಚು ಕಾರುಗಳನ್ನು ಮಾರಾಟ ಮಾಡುವ ದೈತ್ಯ ಸಂಸ್ಥೆ 2021ರ ಸೆಪ್ಟೆಂಬರ್ನಲ್ಲಿ 81,278 ಕಾರುಗಳನ್ನು ಉತ್ಪಾದಿಸಿದ್ದರೆ, 2020ರ ಇದೇ ಅವಧಿಯಲ್ಲಿ 1,66,086 ಉತ್ಪಾದಿಸಿತ್ತು.
ಎಲೆಕ್ಟ್ರಾನಿಕ್ ಬಿಡಿಭಾಗಗಳ ಕೊರತೆಯಂದ 2021ರ ಸೆಪ್ಟೆಂಬರ್ನಲ್ಲಿ ಉತ್ಪಾದನೆ ಕುಂಠಿತವಾಗಿದೆ ಎಂದು ಕಂಪನಿಯು ಮಾರುಕಟ್ಟೆ ನಿಯಂತ್ರಕಕ್ಕೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಿದೆ.
ಆಲ್ಟೋ ಮತ್ತು ಎಸ್ - ಪ್ರೆಸ್ಸೊ ಮಾದರಿಯ ಸಣ್ಣ ಕಾರುಗಳ ಉತ್ಪಾದನೆ ಸೆಪ್ಟೆಂಬರ್ನಲ್ಲಿ 17,163ಕ್ಕೆ ಇಳಿದಿತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ 30,492 ಕಾರುಗಳು ಉತ್ಪಾದನೆಯಾಗಿತ್ತು. ಇದೇ ರೀತಿ ವ್ಯಾಗನ್ ಆರ್, ಸೆಲೆರಿಯೊ, ಸ್ವಿಫ್ಟ್, ಬ್ಯಾಲೆನೊ, ಡಿಸೈರ್ ಉತ್ಪಾದನೆ ಸೆಪ್ಟೆಂಬರ್ನಲ್ಲಿ 90,924 ರಿಂದ 29,272ಕ್ಕೆ ಇಳಿದಿತ್ತು. ಯುಟಿಲಿಟಿ ವಾಹನಗಳಾದ ಜಿಪ್ಸಿ, ಎರ್ಟಿಗಾ, ಎಸ್ - ಕ್ರಾಸ್, ವಿಟಾರಾ ಬ್ರೆಜಾ, ಎಕ್ಸ್ಎಲ್ 6 ಉತ್ಪಾದನೆ 26,648 ರಿಂದ 21,873ಕ್ಕೆ ತಗ್ಗಿದೆ ಎಂದು ಕಂಪನಿಯು ಮಾಹಿತಿ ನೀಡಿದೆ.
ಮಾರುತಿಯ ಲಘು ವಾಣಿಜ್ಯ ವಾಹನವಾದ ಸೂಪರ್ ಕ್ಯಾರಿ ಮಾದರಿಯ 3,496 ವಾಹನಗಳನ್ನು ಈ ವರ್ಷದ ಸೆಪ್ಟೆಂಬರ್ನಲ್ಲಿ ಉತ್ಪಾದನೆ ಮಾಡಲಾಗಿದೆ. ಇದೇ ಅವಧಿಯಲ್ಲಿ ಹಿಂದಿನ ವರ್ಷ 4,418 ವಾಹನಗಳನ್ನು ಕಂಪನಿ ತಯಾರಿಸಿತ್ತು. ಒಟ್ಟಾರೆ ಆಗಸ್ಟ್ನಲ್ಲಿಯೂ ವಾಹನ ಉತ್ಪಾದನೆ ಶೇ. 8ರಷ್ಟು ಇಳಿಕೆಯಾಗಿದೆ ಎಂದು ಕಂಪನಿ ಹೇಳಿದೆ. ಆಗಸ್ಟ್ನಲ್ಲಿ 1,13,937 ವಾಹನಗಳನ್ನು ಸಂಸ್ಥೆ ನಿರ್ಮಿಸಿತ್ತು.
ಸೆಮಿಕಂಡಕ್ಟರ್ ಚಿಪ್ ಕೊರತೆಯಿಂದ ಸೆಪ್ಟೆಂಬರ್ನಲ್ಲಿ ವಾಹನಗಳ ಉತ್ಪಾದನೆ ಶೇ. 40ಷ್ಟು ಮಾತ್ರ ಇರಲಿದೆ ಎಂದು ಆಗಸ್ಟ್ನಲ್ಲೇ ಕಂಪನಿ ಅಂದಾಜಿಸಿತ್ತು. ಆದರೆ ಅದಕ್ಕಿಂತ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಕಾರುಗಳನ್ನು ಕಂಪನಿ ಉತ್ಪಾದಿಸಿದೆ. ಗುರ್ಗಾಂವ್ನಲ್ಲಿರುವ ಉತ್ಪಾದನಾ ಘಟಕ ಹಾಗೂ ಹರ್ಯಾಣದ ಮನೆಸರ್ನಲ್ಲಿರುವ ಘಟಕಗಳು ವಾರ್ಷಿಕ 15 ಲಕ್ಷ ಕಾರುಗಳನ್ನು ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿದೆ. ಇನ್ನು ಗುಜರಾತ್ನಲ್ಲಿರುವ ಕಂಪನಿಯ ಘಟಕವು ವಾರ್ಷಿಕ 7.5 ಲಕ್ಷ ವಾಹನಗಳನ್ನು ತಯಾರಿಸುವ ಸಾಮರ್ಥ್ಯವನ್ನು ಹೊಂದಿದೆ.
ಮಾರುತಿ ಸುಜುಕಿ ಮಾತ್ರವಲ್ಲದೆ ದೇಶದ ಇತರ ಕಾರು ಉತ್ಪಾದಕರೂ ಚಿಪ್ಗಳ ತೀವ್ರ ಕೊರತೆಯನ್ನು ಎದುರಿಸುತ್ತಿವೆ. ಪರಿಣಾಮ ಉಳಿದ ಕಂಪನಿಗಳ ಕಾರುಗಳ ಉತ್ಪಾದನೆಯೂ ಇಳಿಕೆಯಾಗಿದೆ. ಇದರಿಂದ ಕಾರು ಮಾರಾಟದ ನೆಟ್ವರ್ಕ್ನಲ್ಲಿಯೇ ಭಾರಿ ವ್ಯತ್ಯಯವಾಗಿದೆ. ಹಬ್ಬದ ಋತುವಿನಲ್ಲೇ ಡೀಲರ್ಗಳಿಗೆ ಸರಿಯಾದ ಸಮಯಕ್ಕೆ ಕಾರುಗಳನ್ನು ತಲುಪಿಸಲು ಸಾಧ್ಯವಾಗುತ್ತಿಲ್ಲ. ಜತೆಗೆ ಕಾರುಗಳು ನಿಗದಿತ ಅವಧಿಯಲ್ಲಿ ಗ್ರಾಹಕರ ಕೈ ಸೇರುತ್ತಿಲ್ಲ.
ತೀವ್ರವಾಗಿರುವ ಹಿನ್ನೆಲೆಯಲ್ಲಿ ಭಾರತವು ಸೆಮಿಕಂಡಕ್ಟರ್ ಅಥವಾ ಚಿಪ್ಗಳ ಕೊರತೆಯನ್ನು ಬಗೆಹರಿಸಲು ತೈವಾನ್ ಜತೆಗೆ ಚಿಪ್ಗಳ ಉತ್ಪಾದನೆಗೆ ಬೃಹತ್ ಘಟಕ ಸ್ಥಾಪಿಸಲು ಒಪ್ಪಂದ ಮಾಡಿಕೊಳ್ಳುವ ಸಂಬಂಧ ಮಾತುಕತೆಯನ್ನೂ ನಡೆಸುತ್ತಿದೆ.