ಹಕ್ಕಿ ಜ್ವರ ಆತಂಕ, ಮಹಾರಾಷ್ಟ್ರದಲ್ಲಿ 25,000 ಕೋಳಿಗಳನ್ನು ಕೊಲ್ಲಲು ಆದೇಶ

ಇತ್ತೀಚೆಗೆ ತೆಹ್ಸೀಲ್‌ನ ವೆಹ್ಲೋಳಿ ಗ್ರಾಮದ ಕೋಳಿ ಫಾರಂ ಒಂದರಲ್ಲಿ ಸುಮಾರು 100 ಕೋಳಿಗಳು ಅಚ್ಚರಿಯ ರೀತಿಯಲ್ಲಿ ಸಾವನ್ನಪ್ಪಿದ್ದವು. ಇದಾದ ನಂತರ ಇದೀಗ ಶಹಾಪುರದಲ್ಲಿ ಹಕ್ಕಿ ಜ್ವರ ಪ್ರಕರಣಗಳು ಪತ್ತೆಯಾಗಿದೆ.

ಹಕ್ಕಿ ಜ್ವರ ಆತಂಕ, ಮಹಾರಾಷ್ಟ್ರದಲ್ಲಿ 25,000 ಕೋಳಿಗಳನ್ನು ಕೊಲ್ಲಲು ಆದೇಶ
Linkup
ಮುಂಬಯಿ: ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಹಕ್ಕಿ ಜ್ವರದ ಪ್ರಕರಣಗಳು ಕಾಣಿಸಿಕೊಂಡಿದೆ. ಆದರೆ ಸದ್ಯಕ್ಕೆ ಆತಂಕ ಪಡುವ ಅಗತ್ಯವಿಲ್ಲ, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಸ್ಥಳೀಯ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಇತ್ತೀಚೆಗೆ ತೆಹ್ಸೀಲ್‌ನ ವೆಹ್ಲೋಳಿ ಗ್ರಾಮದ ಫಾರಂ ಒಂದರಲ್ಲಿ ಸುಮಾರು 100 ಕೋಳಿಗಳು ಅಚ್ಚರಿಯ ರೀತಿಯಲ್ಲಿ ಸಾವನ್ನಪ್ಪಿದ್ದವು. ಇದಾದ ನಂತರ ಶಹಾಪುರದಲ್ಲಿ ಪ್ರಕರಣಗಳು ಪತ್ತೆಯಾಗಿವೆ. ಸತ್ತ ಕೋಳಿಗಳಿಂದ ಸಂಗ್ರಹಿಸಿದ ಮಾದರಿಗಳನ್ನು ಪರೀಕ್ಷೆಗಾಗಿ ಪುಣೆ ಮೂಲದ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಫಲಿತಾಂಶ ಬಂದಾಗ ಹಕ್ಕಿಗಳು 'ಎಚ್5ಎನ್1 ಏವಿಯನ್ ಇನ್ಫ್ಲುಯೆಂಜಾ' ಸೋಂಕಿನಿಂದ ಸಾವನ್ನಪ್ಪಿರುವುದು ದೃಢಪಟ್ಟಿದೆ ಎಂದು ಥಾಣೆ ಜಿಲ್ಲಾ ಪರಿಷತ್ತಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಡಾ. ಭಾವ್‌ಸಾಹೇಬ್ ಡಾಂಗ್ಡೆ ಈ ಹಿಂದೆ ತಿಳಿಸಿದ್ದರು.

ಇಲ್ಲಿನ ಶಹಾಪುರ ಗ್ರಾಮದ ಬಹುತೇಕರಿಗೆ ಕೋಳಿ ಸಾಕಣೆಯೇ ಜೀವನಾಧಾರವಾಗಿದೆ. ಇದೀಗ ಅದೇ ಪ್ರದೇಶದ 1 ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಎಲ್ಲಾ ಬ್ರಾಯ್ಲರ್ ಕೋಳಿಗಳನ್ನು ಕೊಲ್ಲಲು ಅಧಿಕಾರಿಗಳು ಆದೇಶ ನೀಡಿದ್ದಾರೆ. ಸೋಂಕು ಹರಡುವುದನ್ನು ನಿರ್ಬಂಧಿಸಲು ಸುಮಾರು 25,000ಕ್ಕೂ ಹೆಚ್ಚು ಬ್ರಾಯ್ಲರ್ ಕೋಳಿಗಳನ್ನು ಕೊಲ್ಲುವಂತೆ ಥಾಣೆ ಜಿಲ್ಲಾಧಿಕಾರಿ ರಾಜೇಶ್ ನಾರ್ವೇಕರ್ ಅವರು ಶನಿವಾರ ಆದೇಶಿಸಿದ್ದಾರೆ. ಶಹಾಪುರ ಹೊರತುಪಡಿಸಿ ಜಿಲ್ಲೆಯ ಬೇರೆ ಯಾವುದೇ ಭಾಗಗಳಲ್ಲಿ ಹಕ್ಕಿ ಜ್ವರದ ಪ್ರಕರಣಗಳು ವರದಿಯಾಗಿಲ್ಲ ಎಂದು ಅವರು ಹೇಳಿದ್ದು, ಜನರು ಭಯಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದ್ದಾರೆ.